Friday, 22nd November 2024

ವಂದೇ ಭಾರತ್​ ರೈಲುಗಳಲ್ಲಿ ಇಂದಿನಿಂದ ಮಿರಾಕಲ್​ ಸ್ವಚ್ಛತಾ ಪರಿಕಲ್ಪನೆ ಆರಂಭ

ನವದೆಹಲಿ: ಭಾರತೀಯ ರೈಲ್ವೆಯು ಇಂದಿನಿಂದ ರೈಲುಗಳ ತ್ವರಿತ ಶುಚಿಗೊಳಿಸುವಿಕೆಗಾಗಿ ’14 ನಿಮಿಷಗಳ ಮಿರಾಕಲ್​’ ಪರಿಕಲ್ಪನೆಯನ್ನು ಪರಿಚಯಿಸುತ್ತಿದೆ. ದೇಶಾದ್ಯಂತ 29 ವಂದೇ ಭಾರತ್ ರೈಲುಗಳಲ್ಲಿ ಅವುಗಳ ನಿಗದಿತ ನಿಲ್ದಾಣದಲ್ಲಿ ಈ ಕಾರ್ಯ ಆರಂಭವಾಗಲಿದೆ.

ಅಧಿಕೃತವಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿ ಕ್ಯಾಂಟ್ ರೈಲು ನಿಲ್ದಾಣ ದಲ್ಲಿ ಪ್ರಾರಂಭಿಸಲಿದ್ದಾರೆ.

ವಂದೇ ಭಾರತ್ ರೈಲುಗಳ ಸಮಯಪಾಲನೆ ಮತ್ತು ಟರ್ನ್‌ಅರೌಂಡ್ ಸಮಯವನ್ನು ಸುಧಾರಿಸುವ ಉದ್ದೇಶದಿಂದ 14 ನಿಮಿಷಗಳಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಮಾಧ್ಯಮದವರಿಗೆ ತಿಳಿಸಿದರು.

ಇದು ಒಂದು ವಿಶಿಷ್ಟ ಪರಿಕಲ್ಪನೆಯಾಗಿದೆ ಮತ್ತು ಭಾರತೀಯ ರೈಲ್ವೆಯಲ್ಲಿಯೇ ಮೊದಲ ಬಾರಿಗೆ ಎಂದು ಸಚಿವರು ಹೇಳಿದರು. ಮೊದಲು ಜಪಾನ್‌ನ ಒಸಾಕಾ, ಟೋಕಿಯೊದಂತಹ ವಿವಿಧ ನಿಲ್ದಾಣಗಳಲ್ಲಿ ‘7 ನಿಮಿಷಗಳ ಮಿರಾಕಲ್​’ ಪರಿಕಲ್ಪನೆ ಯಡಿಯಲ್ಲಿ ಸ್ವಚ್ಛತೆ ನಡೆಯುತ್ತಿತ್ತು. ಈಗ ಇದನ್ನೇ ಆಧರಿಸಿ ಭಾರತದಲ್ಲಿಯೂ ಆರಂಭವಾಗಲಿದೆ. ಅಲ್ಲಿ ಬುಲೆಟ್ ರೈಲುಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು ಮತ್ತು ಏಳು ನಿಮಿಷಗಳಲ್ಲಿ ಮತ್ತೊಂದು ಪ್ರಯಾಣಕ್ಕೆ ರೈಲುಗಳನ್ನು ಸಿದ್ಧಗೊಳಿಸಲಾಗುತ್ತದೆ.

ಈಗಾಗಲೇ ಈ ಚಟುವಟಿಕೆಯಲ್ಲಿ ತೊಡಗಿರುವ ಮುಂಚೂಣಿಯಲ್ಲಿರುವ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸದೆ ಸ್ವಚ್ಛತಾ ವ್ಯಕ್ತಿಗಳ ದಕ್ಷತೆ, ಕೌಶಲ್ಯ ಮತ್ತು ಕಾರ್ಯ ವೈಖರಿಯನ್ನು ಹೆಚ್ಚಿಸುವ ಮೂಲಕ ಸೇವೆಯನ್ನು ಸಾಧ್ಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದಕ್ಕೂ ಮುನ್ನ ರೈಲ್ವೆಯು ಒಂದೆರಡು ಡ್ರೈ-ರನ್‌ಗಳನ್ನು ನಡೆಸಿದೆ. ಅಲ್ಲಿ ಅಟೆಂಡೆಂಟ್‌ಗಳು ರೈಲನ್ನು ಮೊದಲು ಸುಮಾರು 28 ನಿಮಿಷಗಳಲ್ಲಿ ಸ್ವಚ್ಛಗೊಳಿಸಿದರು. ನಂತರ 18 ನಿಮಿಷಕ್ಕೆ ಸ್ವಚ್ಛತಾ ಸಮಯ ಇಳಿಯಿತು. ಈಗ ಯಾವುದೇ ಹೊಸ ತಂತ್ರಜ್ಞಾನವನ್ನು ಒಳಗೊಳ್ಳದೆ ಕೇವಲ 14 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ವಂದೇ ಭಾರತ್‌ನಿಂದ ಪ್ರಾರಂಭಿಸಿ, ನಾವು ಅದೇ ಪರಿಕಲ್ಪನೆಯನ್ನು ಇತರ ರೈಲುಗಳಲ್ಲಿ ನಿಧಾನವಾಗಿ ಮತ್ತು ಕ್ರಮೇಣ ಅನ್ವಯಿಸುತ್ತೇವೆ. ಇದು ಅವರ ಕಾರ್ಮಿಕರ ಸಮಯಪ್ರಜ್ಞೆಯನ್ನು ಸುಧಾರಿಸುವಲ್ಲಿ ಭಾರಿ ಪರಿಣಾಮ ಬೀರುತ್ತದೆ. ಭಾರತೀಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಹದಿನೈದು- ಸ್ವಚ್ಛತಾ ಡ್ರೈವ್ ಸ್ವಚ್ಛತಾ-ಹೈ-ಸೇವಾ ಅಭಿಯಾನವನ್ನು ಪ್ರಾರಂಭಿಸಿತು. ಇದರಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸಿಇಒ ಅವರು ನವದೆಹಲಿಯ ರೈಲ್ ಭವನದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರೈಲ್ವೆ ಅಧಿಕಾರಿಗಳಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು.