Friday, 22nd November 2024

ಲಾರ್ಡ್ಸ್ ಮೈದಾನ ಎಂಬ ಕ್ರಿಕೆಟ್ ಕಾಶಿ

ವಿದೇಶವಾಸಿ

dhyapaa@gmail.com

ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಜಯಿಸಿದ್ದು ಈಗ ಇತಿಹಾಸ. ಆದರೆ ಅಂದು ಭಾರತ ತಂಡ ಗೆದ್ದು, ಎತ್ತಿ ಹಿಡಿದು ಬೀಗಿದ ಕಪ್ ಇಂದು ಭಾರತದ ಬಳಿ ಇಲ್ಲ!

ಅದನ್ನು ನೋಡಬೇಕೆಂದರೆ ನೀವು ಲಂಡನ್‌ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ವಸ್ತುಸಂಗ್ರಹಾಲಯಕ್ಕೆ ಹೋಗಬೇಕು. ‘ಇದೇನಪ್ಪ, ಬ್ರಿಟಿಷರು ಅದನ್ನೂ ಕೊಳ್ಳೆ ಹೊಡೆದರಾ. ಕೊಹಿನೂರಂತೂ ಆಯಿತು, ಈಗ ಕಪ್ ಕೂಡ ಬಿಡಲಿಲ್ಲವೇ?’ ಎಂದು ಕೇಳಬೇಡಿ. ಸಾಮಾನ್ಯವಾಗಿ ಯಾರೇ ಆದರೂ, ಆಟದ ಸರಣಿ ಗೆದ್ದರೆ ಅವರಿಗೆ
ಒಂದು ಕಪ್ ಅಥವಾ ಟ್ರೋಫಿ ನೀಡಲಾಗುತ್ತದೆ. ವೈಯಕ್ತಿಕವಾಗಿ ನೀಡುವ ಮೆಡಲ್, ಬಹುಮಾನ, ಉಡುಗೊರೆ ಅಥವಾ ಟ್ರೋಫಿ ಹೊರತುಪಡಿಸಿ, ತಂಡಕ್ಕೆ ನೀಡುವ ಟ್ರೋಫಿ, ಬಹುಮಾನದ ಮೊತ್ತ ಆಟಗಾರನಿಗೆ ಸೇರುವು ದಿಲ್ಲ.

ಅದೇನಿದ್ದರೂ ಆತ ಆಡುವ ಸಂಸ್ಥೆಯ ಸ್ವತ್ತು. ನಿರ್ದಿಷ್ಟ ಸರಣಿಯಲ್ಲಿ ಒಬ್ಬ ಆಟಗಾರ ಎಷ್ಟೇ ಉತ್ತಮವಾಗಿ ಆಡಿದರೂ, ಎಷ್ಟೇ ದಾಖಲೆ ಬರೆದರೂ, ಕೊನೆಯಲ್ಲಿ ತಂಡಕ್ಕೆ ಎಂದು ನೀಡುವುದನ್ನು ಆಟಗಾರರಾಗಲೀ, ತಂಡದ ನಾಯಕನಾಗಲೀ ತನ್ನ ಮನೆಗೆ ಒಯ್ಯುವಂತಿಲ್ಲ. ಅದನ್ನು ಸಂಸ್ಥೆಗೆ ನೀಡಬೇಕು. ತಂಡಕ್ಕೆ ಎಂದು ನೀಡಿದ ಪದಕ, ಪಾರಿತೋಷಕ, ಟ್ರೋಫಿ ಇರಬೇಕಾದ ಸರಿಯಾದ ಸ್ಥಳ ಎಂದರೆ ಸಂಸ್ಥೆಯ ಕಚೇರಿ. ಆ ನಿಟ್ಟಿನಲ್ಲಿ ೧೯೮೩ರಲ್ಲಿ ಭಾರತ ಗೆದ್ದ ಕ್ರಿಕೆಟ್ ವಿಶ್ವಕಪ್ ಬಿಸಿಸಿಐ ಕಚೇರಿಯಲ್ಲಿರಬೇಕಿತ್ತು.

ಆದರೆ, ಆ ಐತಿಹಾಸಿಕ ವಿಜಯದೊಂದಿಗೆ ಭಾರತದ ಕಪ್ ಬಿಸಿಸಿಐ ಕಚೇರಿ ಅಲ್ಲ, ಭಾರತದಲ್ಲಿಯೇ ಇಲ್ಲ. ಇಲ್ಲಿರುವುದು ಕಪ್‌ನ ಪ್ರತಿರೂಪ. ಹಾಗಾದರೆ ಭಾರತ ಕಪ್ ಗೆದ್ದು ತಂದದ್ದು, ಮುಂಬೈನ ರಸ್ತೆಯಲ್ಲಿ ಕಪ್ ಹಿಡಿದು ಮೆರವಣಿಗೆ ಮಾಡಿದ್ದೆಲ್ಲ ಸುಳ್ಳೇ? ಖಂಡಿತ ಅಲ್ಲ. ಹಾಗಾದರೆ ಆ ಕಪ್ ಪುನಃ ಇಂಗ್ಲೆಂಡ್ ಸೇರಿದ್ದು ಹೇಗೆ? ಇದರಲ್ಲಿ ಯಾರನ್ನೂ ನಿಂದಿಸುವಂತಿಲ್ಲ. ಕ್ರಿಕೆಟ್ ವರ್ಲ್ಡ್‌ಕಪ್ ನಡೆದುಬಂದ ರೀತಿಯೇ ಹಾಗೆ. ಒಮ್ಮೆ ತಂಡ ಜಯಿಸಿದ ನಂತರ ಅದನ್ನು ತಂಡಕ್ಕೆ ನೀಡಲಾಗುತ್ತದೆ.

ಗೆದ್ದ ತಂಡ ಅದನ್ನು ತನ್ನ ದೇಶಕ್ಕೂ ಕೊಂಡುಹೋಗಬಹುದು. ನಂತರ ಅದನ್ನು ಐಸಿಸಿಗೆ ಹಿಂದಿರುಗಿಸಬೇಕಾಗುತ್ತದೆ. ವಿಜಯಿ ತಂಡಕ್ಕೆ ಥೇಟ್ ಮೂಲಕಪ್‌ ನಂಥದ್ದೇ ಪ್ರತಿರೂಪ ನೀಡಲಾಗುತ್ತದೆ. ಮೂಲಕಪ್ ಐಸಿಸಿ ಬಳಿ ಇರುತ್ತದೆ. ಈ ವಿಷಯದಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮಾತ್ರ ಹೊರತು. ೧೯೭೫ರಿಂದ ೧೯೮೩ರವರೆಗೆ, ಪ್ರುಡೆನ್ಶಿಯಲ್ ವರ್ಲ್ಡ್‌ಕಪ್ ಆಗಿತ್ತು. ೮೭, ೯೨ ಮತ್ತು ೯೬ರವರೆಗೆ ಬೇರೆ ಪ್ರಾಯೋಜಕರಾಗಿದ್ದ ಕಾರಣ ಬೇರೆಯದ್ದೇ ಕಪ್ ನೀಡಲಾಗುತ್ತಿತ್ತು. ೧೯೯೯ ರಲ್ಲಿ ಐಸಿಸಿ, ‘ವಿಶ್ವಕಪ್ ಒಂದೇ ಇರಬೇಕು, ಪ್ರತಿಬಾರಿ ಗೆದ್ದವರ ಹೆಸರನ್ನು ಅದೇ ಕಪ್‌ನ ಕೆಳಗೆ ನಮೂದಿಸಬೇಕು, ಗೆದ್ದ ದೇಶಕ್ಕೆ ಪ್ರತಿರೂಪದ ಕಪ್ ನೀಡಬೇಕು’ ಎಂಬ ನಿರ್ಣಯ ಕೈಗೊಂಡಿತು.

ಹಾಗಾಗಿ ಭಾರತದ ಕಪ್ ಭಾರತದಲ್ಲಿಲ್ಲ. ೧೯೮೩ರಲ್ಲಿ ಭಾರತ ಕಪ್ ಗೆದ್ದದ್ದು ಎಂಸಿಸಿ ಸ್ವಾಧೀನದಲ್ಲಿರುವ ಲಾರ್ಡ್ಸ್ ಮೈದಾನದಲ್ಲಿ. ಹಾಗಾಗಿ ಇಂದಿಗೂ ಒರಿಜಿನಲ್ ಕಪ್ ಅಲ್ಲಿಯೇ ಇದೆ. ಪ್ರತಿಷ್ಠಿತ ಆಷಸ್‌ನ ಮೂಲಕಪ್ ಕೂಡ ಲಾರ್ಡ್ಸ್ ನಲ್ಲಿಯೇ ಇದೆ. ಕ್ರಿಕೆಟ್ ಮತ್ತು ಲಾರ್ಡ್ಸ್ ಮೈದಾನಕ್ಕೆ ಅವಿನಾಭಾವ
ಸಂಬಂಧ. ಅದು ಕ್ರಿಕೆಟ್‌ನ ತವರು. ಕ್ರಿಕೆಟಿಗರಿಗಂತೂ ಲಾರ್ಡ್ಸ್ ಪವಿತ್ರ ಸ್ಥಳ. ಹೇಗೆ ನಟನಾದವ ಜೀವನದಲ್ಲಿ ಒಮ್ಮೆಯಾದರೂ ಹಾಲಿವುಡ್ ಕಾಣಬೇಕೆಂದು ಬಯಸುತ್ತಾನೋ, ಹೇಗೆ ಒಬ್ಬ ಹಿಂದೂ ಸಾಯುವುದರೊಳಗೆ ಕಾಶಿಗೆ ಹೋಗಿ ಗಂಗೆಯನ್ನು ಮುಟ್ಟಬೇಕೆಂದು ಬಯಸುತ್ತಾನೋ, ಹಾಗೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟ ಪ್ರತಿಯೊಬ್ಬನೂ ಜೀವನದಲ್ಲಿ ಒಮ್ಮೆಯಾದರೂ ಲಾರ್ಡ್ಸ್‌ನ ಹುಲ್ಲುಹಾಸನ್ನು ಸ್ಪರ್ಶಿಸಬೇಕು ಎಂದು ಬಯಸುತ್ತಾನೆ.

ಇಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣಗಳ ಪಟ್ಟಿಯಲ್ಲಿ, ಸುಮಾರು ೧.೨೫ ಲಕ್ಷ ಜನ ಕುಳಿತು ನೋಡಬಹುದಾದ ಗುಜರಾತ್‌ನ ಅಹಮದಾಬಾದ್
ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ೧ ಲಕ್ಷ ಸಾಮರ್ಥ್ಯದ ಆಸ್ಟ್ರೇಲಿಯಾದ ಮೆಲ್‌ಬಾರ್ನ್, ೭೦,೦೦೦ ಸಾಮ
ರ್ಥ್ಯದ ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಇವೆ. ಛತ್ತೀಸಘಡದ ರಾಯಪುರದಲ್ಲಿರುವ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಲಾರ್ಡ್ಸ್‌ನ
ದುಪ್ಪಟ್ಟು ಜನ ಹಿಡಿಯುತ್ತಾರೆ. ಅದೆಲ್ಲ ಬಿಡಿ, ಭಾರತದ ಜೋಧಪುರ, ಪುಣೆ, ಕಟಕ್, ನಾಗಪುರ, ರಾಂಚಿ, ಸೈ-ಯಿಯಂಥ ಕ್ರೀಡಾಂಗಣಗಳೂ ಲಾರ್ಡ್ಸ್‌ಗಿಂತ
ದೊಡ್ಡದಾಗಿವೆ. ಆದರೂ ೩೧,೦೦೦ ಜನ ಕುಳಿತು ನೋಡುವ ಸಾಮರ್ಥ್ಯ ಹೊಂದಿದ ಲಾರ್ಡ್ಸ್‌ಗೆ ಇಷ್ಟೊಂದು ಮಹತ್ವ ಯಾಕೆ? ಕಾರಣ ಲಾರ್ಡ್ಸ್ ಮೈದಾನದ ಹಿಂದಿರುವ ಕತೆ, ಇತಿಹಾಸ.

ಕೆಲವೊಮ್ಮೆ ಸಂಖ್ಯೆಗಿಂತ ಭಾರಕ್ಕೆ ಹೆಚ್ಚು ಬೆಲೆ ಇರುತ್ತದೆ. ಒಂದು ಸ್ಥಳಕ್ಕೆ ಘನತೆ ಬರುವುದು, ಅದು ಹೆಸರುವಾಸಿಯಾಗುವುದು ಅದರ ಇತಿಹಾಸದಿಂದ
ಅಥವಾ ವ್ಯವಹಾರದಿಂದ. ಅಲ್ಲಿಯ ಆಗು-ಹೋಗು ಸ್ಥಳಕ್ಕೊಂದು ಪಾವಿತ್ರ್ಯವನ್ನೂ, ಹೆಸರನ್ನೂ ತಂದು ಕೊಡುತ್ತದೆ. ಸುಮ್ಮನೆ ಯಾವುದೂ ಪ್ರಸಿದ್ಧಿಗೆ ಬರುವು
ದಿಲ್ಲ. ಲಾರ್ಡ್ಸ್ ಹಿಂದಿನ ಕತೆಯೂ ಅಷ್ಟೇ ರೋಚಕ ವಾಗಿದೆ.

ಲಾರ್ಡ್ಸ್ ಮೈದಾನಕ್ಕೆ ಆ ಹೆಸರು ಬಂದಿರುವುದು ಥಾಮಸ್ ಲಾರ್ಡ್ ಎಂಬ ಮಹಾನುಭಾವನಿಂದ. ೧೭೫೫ರಲ್ಲಿ ಜನಿಸಿದ ಲಾರ್ಡ್ ಒಬ್ಬ ಕಾರ್ಮಿಕನ ಮಗ.
ಬಾಲ್ಯವನ್ನೆಲ್ಲ ಹುಟ್ಟೂರು ಯಾರ್ಕ್‌ಶೈರ್‌ನಲ್ಲಿ ಕಳೆದು, ಉದ್ಯೋಗ ಹುಡುಕಿಕೊಂಡು ಲಂಡನ್‌ಗೆ ಬಂದ. ವೈಟ್ ಕಾಂಡುಯೆಟ್ ಕ್ಲಬ್‌ನಲ್ಲಿ ಸಾಮಾನ್ಯ ಅಟೆಂಡರ್
ಕೆಲಸಕ್ಕೆ ಸೇರಿಕೊಂಡ. ಅಲ್ಲಿಯೇ ಬ್ಯಾಟಿಂಗ್ ತರಬೇತಿ ಗಾಗಿ ಬರುತ್ತಿದ್ದವರಿಗೆ ಬೌಲಿಂಗ್ ಮಾಡುತ್ತಿದ್ದ.

ಮುಂದೊಂದು ದಿನ ಆತನಿಗೆ ಮಿಡಲ್‌ಸೆಕ್ಸ್ ಮತ್ತು ಎಂಸಿಸಿ ತಂಡಕ್ಕೆ ಆಡುವ ಅವಕಾಶವೂ ಒದಗಿತು. ೧೭೮೭ ರಿಂದ ೧೮೦೨ರವರೆಗೆ, ನಂತರ ೧೮೧೫ರಲ್ಲಿ ಪುನಃ ೧ ವರ್ಷ, ಒಟ್ಟೂ ೧೬ ವರ್ಷ ಕ್ರಿಕೆಟ್ ಆಡಿದ. ಲಾರ್ಡ್ ಮಹಾನ್ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಳ್ಳಲಿಲ್ಲ. ಆತ ಆಡಿದ್ದು ೬೦ ಪ್ರಥಮ ದರ್ಜೆಯ ಪಂದ್ಯಗಳು. ಗಳಿಸಿದ ರನ್, ೯೦೦ಕ್ಕೆ ೧ ಕಡಿಮೆಯೇ. ಒಂದೇ ಒಂದು ಶತಕ ಹೊಡೆಯಲಿಲ್ಲ. ಬ್ಯಾಟಿಂಗ್ ಸರಾಸರಿ ತೆಗೆದರೆ ೧೦ಕ್ಕಿಂತ ಕಡಿಮೆ. ಬೌಲರ್ ಆಗಿದ್ದರೂ, ಪಡೆದ ವಿಕೆಟ್ ೧೫೦ಕ್ಕೂ ಕಮ್ಮಿ. ಆತ ಆಡಿದ್ದೆಲ್ಲ ದುರ್ಬಲ ತಂಡಗಳ ವಿರುದ್ಧವೇ ಎಂಬ ಮಾತೂ ಇದೆ.

ಒಂದೇ ಒಂದು ಟೆಸ್ಟ್ ಪಂದ್ಯ ಆಡಲಿಲ್ಲ. ಆಗ ಏಕದಿನದ ಪಂದ್ಯವಾಗಲಿ, ಟಿ-೨೦ ಪಂದ್ಯವಾಗಲಿ ಇರದಿದ್ದರಿಂದ ಅದನ್ನು ಆಡುವ ಪ್ರಶ್ನೆಯೇ ಇಲ್ಲ. ಲಾರ್ಡ್ ಮಗ, ಥಾಮಸ್ ಲಾರ್ಡ್ ಜ್ಯೂನಿಯರ್ ಕೂಡ ಕ್ರಿಕೆಟ್ ಆಡಿದನಾದರೂ, ಅಪ್ಪನ ಒಂದು ಅಂಶದಷ್ಟೂ ಸಾಧಿಸಲು ಆಗಲಿಲ್ಲ. ಮಗ ಆಡಿದ ೫ ಪಂದ್ಯದಲ್ಲಿ ಗಳಿಸಿದ್ದು ೧೮ ರನ್, ಪಡೆದದ್ದು ೧ ವಿಕೆಟ್. ಆತ ಒಮ್ಮೆಯೂ ಎರಡಂಕಿ ದಾಟಲಿಲ್ಲ. ಹಾಗಿದ್ದರೂ ಮೈದಾನಕ್ಕೆ ಲಾರ್ಡ್‌ನ ಹೆಸರು ಇರಬೇಕೆಂದರೆ ಹೇಗೆ? ಥಾಮಸ್ ಲಾರ್ಡ್ ಬರೀ ಆಟಗಾರನಾಗಿದ್ದರೆ ಇಷ್ಟು ಹೆಸರು ಗಳಿಸುತ್ತಿರಲಿಲ್ಲ. ಆತ ಮಾಡಿದ ಮಹಾನ್ ಕೆಲಸ ಎಂದರೆ ಮೈದಾನ ನಿರ್ಮಿಸಿದ್ದು.

ಅದೂ ಒಂದಲ್ಲ, ಮೂರು. ಈಗಿರುವ ಲಾರ್ಡ್ಸ್ ಮೈದಾನ ಆತ ನಿರ್ಮಿಸಿದ ೩ನೇ ಮೈದಾನ. ಅದಕ್ಕೆ ಕಾರಣ ಅವನ ಚಟವಲ್ಲ, ಛಲ! ಲಾರ್ಡ್ ವೈಟ್ ಕಾಂಡುಯಟ್ ಕ್ಲಬ್ ನಲ್ಲಿದ್ದಾಗ ಜಾರ್ಜ್ ಫಿಂಚ್ ಮತ್ತು ಚಾರ್ಲ್ಸ್ ಲೆನಾಕ್ಸ್ ಹೆಸರಿನ ಇಬ್ಬರು ಅದೇ ಕ್ಲಬ್‌ನಲ್ಲಿ ಆಡುತ್ತಿದ್ದರು. ಇಬ್ಬರೂ ರಾಜ ಮನೆತನದ ಸಂಬಂಧ ಇಟ್ಟುಕೊಂಡ ಪ್ರಭಾವಿಗಳಾಗಿದ್ದರು. ಅವರಿಗೆ ತಾವು ಆಡುವ ಮೈದಾನ ಬೀದಿಬದಿಯಲ್ಲಿರದೆ ಸ್ವಲ್ಪ ಖಾಸಗಿಯಾಗಿರಬೇಕು ಎನಿಸಿತು. ಅವರು ಲಾರ್ಡ್‌ನನ್ನು ಒಂದು ಖಾಸಗಿ ಮೈದಾನ ನಿರ್ಮಿಸುವಂತೆ ಕೇಳಿಕೊಂಡರು.

ಹಣಕಾಸಿನ ವಿಷಯದಲ್ಲಿ ಲಾರ್ಡ್‌ಗೆ ನಷ್ಟವಾಗದಂತೆ ಆತನ ಬೆನ್ನಿಗೆ ನಿಲ್ಲುವುದಾಗಿ ಭರವಸೆ ನೀಡಿದರು. ಅಂದಿನಿಂದ ಲಾರ್ಡ್ ಹೊಸ ಕಾರ್ಯಕ್ಕೆ ಕೈಹಾಕಿದ.
೧೭೮೭ರಲ್ಲಿ ಈಗಿನ ಡಾರ್ಸೆಟ್ ಸ್ಕ್ವೇರ್ ಬಳಿ ೭ ಎಕರೆ ಜಾಗ ಕರಾರಿಗೆ ಪಡೆದ. ಹಗಲು ರಾತ್ರಿಯೆನ್ನದೆ ಕ್ರಿಕೆಟ್ ಆಡಲು ಬೇಕಾದ ಮೈದಾನ, ಪಿಚ್, ಗಡಿ ಎಲ್ಲವನ್ನೂ ನಿರ್ಮಿಸಿದ. ಅದು ಲಾರ್ಡ್ ನಿರ್ಮಿಸಿದ ಮೊದಲ ಮೈದಾನ. ಅದೇ ವರ್ಷ ಎಂಸಿಸಿ ಸ್ಥಾಪನೆಯಾಯಿತು. ವೈಟ್ ಕಾಂಡುಯೆಟ್ ಎಂಸಿಸಿಯಲ್ಲಿ ವಿಲೀನ
ವಾಯಿತು. ೧೮೧೦ಕ್ಕೆ ಆ ಜಾಗದ ಕರಾರು ಮುಗಿಯಿತು. ಬಾಡಿಗೆಯ ವಿಷಯದಲ್ಲಿ ಒಪ್ಪಂದವಾಗದ ಕಾರಣ ಬೇರೆ ಸ್ಥಳ ಹುಡುಕಬೇಕಾಯಿತು.

ಲಿಸನ್ ಗ್ರೋವ್ ಬಳಿ ೮೦ ವರ್ಷದ ಕರಾರು ಮಾಡಿಕೊಂಡು ಲಾರ್ಡ್ಸ್ ಮಿಡಲ್ ಗ್ರೌಂಡ್ ನಿರ್ಮಿಸಿದ ಲಾರ್ಡ್. ೩ ವರ್ಷದ ಬಳಿಕ ಸರಕಾರ ರೀಜೆಂಟ್ ಕಾಲುವೆ ತೋಡುವುದಾಗಿ ಘೋಷಿಸಿತು. ಆ ಕಾಲುವೆ ಮೈದಾನದ ಮಧ್ಯಭಾಗದಿಂದ ಹಾದು ಹೋಗುತ್ತಿದ್ದುದರಿಂದ ಜಾಗ ತೆರವುಗೊಳಿಸುವುದು ಅನಿವಾರ್ಯ
ವಾಯಿತು. ಜಾಗದ ಮಾಲೀಕರು ಸಣ್ಣ ಗುಡ್ಡದ ಮೇಲಿರುವ ಕೊಳವನ್ನು ಬದಲಿಯಾಗಿ ನೀಡುವುದಾಗಿ ಹೇಳಿದರು. ಅದನ್ನೇ ಮೈದಾನವನ್ನಾಗಿ ಮಾರ್ಪಡಿಸಲು
ಪಣತೊಟ್ಟ ಲಾರ್ಡ್ ಕೊಳಕ್ಕೆ ಮಣ್ಣು ತುಂಬಿಸಲು ಆರಂಭಿಸಿದ್ದ. ಲಾರ್ಡ್ ರಾತ್ರೋರಾತ್ರಿ ಮಿಡಲ್ ಗ್ರೌಂಡ್‌ನಿಂದ ಟ- ಹೊತ್ತು ತಂದಿದ್ದ. ಮೊದಲು ಆತನ ಸಹಾಯಕ್ಕೆ ನಿಂತವರು ಈಗ ಅವ ನೊಂದಿಗೆ ಇರಲಿಲ್ಲ. ಎಲ್ಲವನ್ನೂ ಒಬ್ಬನೇ ಮಾಡಬೇಕಾ ಗಿತ್ತು.

ಆದರೂ ವರ್ಷದ ಅವಧಿಯಲ್ಲಿ ಅದನ್ನು ಮುಗಿಸಿ ಈಗಿನ ಲಾರ್ಡ್ಸ್ ಮೈದಾನ ತಯಾರಿಸಿದ್ದ. ಅಷ್ಟರಲ್ಲಿ ಆತನಲ್ಲಿದ್ದ ಹಣವೆಲ್ಲ ಖರ್ಚಾಗಿ, ಸಾಲ ಮಾಡಿ,
ದಿವಾಳಿಯ ಅಂಚಿನಲ್ಲಿದ್ದ. ಮೈದಾನದ ಒಂದು ಭಾಗದಲ್ಲಿ ಮನೆ ಕಟ್ಟಿ ಮಾರಬೇಕೆಂದು ನಿರ್ಧರಿ ಸಿದ್ದ. ಹಾಗೇನಾದರೂ ಆಗಿದ್ದರೆ ಇಂದು ಲಾರ್ಡ್ಸ್ ಮೈದಾನವೇ ಇರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಎಂಸಿಸಿ ತಂಡದಲ್ಲಿ ಆಡುತ್ತಿದ್ದ, ಉತ್ತಮ ಬ್ಯಾಟ್ಸ್‌ಮನ್, ಬ್ಯಾಂಕ್ ಆಫ್ ಇಂಗ್ಲೆಂಡ್ ನಿರ್ದೇಶಕನೂ ಆಗಿದ್ದ ವಿಲಿಯಮ್ ವಾರ್ಡ್, ೫,೦೦೦ ಪೌಂಡ್ ನೀಡಿ ಮೈದಾನವನ್ನು ಖರೀದಿಸಿದ. ಆದರೆ ಆತ ಮೈದಾನದ ಹೆಸರು ಬದಲಾಯಿಸದೇ, ಲಾರ್ಡ್‌ನ ಹೆಸರನ್ನೇ ಉಳಿಸಿಕೊಂಡ. ಸುಮಾರು ೨೦೦ ವರ್ಷಗಳ ಹಿಂದೆ, ಒಂದು ಜೀವಿತಾವಧಿಯಲ್ಲಿ ಮೂರು ಕ್ರಿಕೆಟ್ ಮೈದಾನ ನಿರ್ಮಿಸುವುದು ಎಂದರೆ ಹುಡುಗಾಟವೇ? ಆ ಕಾರಣಕ್ಕಾದರೂ ಲಾರ್ಡ್‌ನನ್ನು ನೆನೆಸಬೇಕು.

ಒಂದು ಕಡೆ ಲಾರ್ಡ್‌ನ ಕತೆಯಾದರೆ ಇನ್ನೊಂದು ಕಡೆ ಎಂಸಿಸಿ ಕೂಡ ಶತಮಾನಗಳಿಂದ ತನ್ನ ಘನತೆಯನ್ನು ಕಾಪಿಟ್ಟುಕೊಂಡಿದೆ. ಕ್ರಿಕೆಟ್‌ಗೆ ಸಂಬಂಧಿಸಿದ ಬಹುತೇಕ ನೀತಿ, ನಿಯಮ, ನಿಯಂತ್ರಣ, ನಿರ್ಬಂಧಗಳು ನಿರ್ಣಯವಾಗುವುದು ಎಂಸಿಸಿಯಲ್ಲಿ. ೨ ವಿಕೆಟ್ ನಡುವಿನ ಅಂತರ, ಪಿಚ್‌ನಿಂದ ಬೌಂಡರಿಯ ದೂರ
ದಿಂದ ಹಿಡಿದು, ಚೆಂಡಿನ ಗಾತ್ರ, ಬಣ್ಣದವರೆಗೆ, ಎಲ್ಲವೂ ಎಂಸಿಸಿ ನಿರ್ಣಯ. ಅದನ್ನು ಇಂದಿಗೂ ಕ್ರಿಕೆಟ್ ಆಟದ ಪಾಲಕ ಸಂಸ್ಥೆ ಎಂದೇ ಗುರುತಿಸಲಾಗುತ್ತದೆ. ಎಂಸಿಸಿಯ ಅನುಮತಿ ಇಲ್ಲದೆ ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಅಂಥ ಎಂಸಿಸಿ ಮುಕ್ಕಾಂ ಆಗಿ ಇರುವುದು ಇದೇ ಲಾರ್ಡ್ಸ್‌ನಲ್ಲಿ.

ಲಾರ್ಡ್ಸ್ ಮೈದಾನದ ವಿಶೇಷತೆ ಎಂದರೆ, ವಿಶ್ವ ಮಹಾಯುದ್ಧದ ಸಂದರ್ಭದಲ್ಲೂ ಈ ಮೈದಾನದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ೨ನೇ ಮಹಾಯುದ್ಧದ
ವೇಳೆ ಬಾಂಬ್ ದಾಳಿಯಿಂದ ಪೆವಿಲಿಯನ್‌ನ ಒಂದು ಭಾಗಕ್ಕೆ ಸ್ವಲ್ಪ ಹಾನಿಯಾದರೂ ಆಟ ನಿಂತಿರಲಿಲ್ಲ. ಲಾರ್ಡ್ಸ್‌ನಲ್ಲಿ ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳಿಗೂ
ಆಸ್ಪದವಿದೆ. ಈ ಮೈದಾನದಲ್ಲಿ ಟೆನಿಸ್, ಬೇಸ್‌ಬಾಲ್, ಬಿಲ್ಲುಗಾರಿಕೆ ಇತ್ಯಾದಿಗಳಿಗೂ ಅವಕಾಶವಿದೆ. ಲಾರ್ಡ್ಸ್ ಮೈದಾನವಾಗಲಿ, ಪೆವಿಲಿಯನ್ ಆಗಲಿ ಎಲ್ಲವೂ
ಹಲವು ವಿಶೇಷತೆಯಿಂದ ಕೂಡಿವೆ. ಡ್ರೆಸಿಂಗ್ ರೂಮ್, ಅಲ್ಲಿರುವ ಫಲಕದಲ್ಲಿ ಶತಕ ಬಾರಿಸಿದವರ ಹೆಸರು, ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್, ಪಂದ್ಯದಲ್ಲಿ ೧೦
ವಿಕೆಟ್ ಪಡೆದ ಬೌಲರ್‌ಗಳ ಹೆಸರು, ಕಾರಿಡಾರ್‌ನಲ್ಲಿ ಕಾಣಿಸಿಕೊಳ್ಳುವ ಮಹಾನ್ ಆಟಗಾರರ ಚಿತ್ರಗಳು, ಅದರೊಂದಿಗೆ ಪಕ್ಕದಲ್ಲಿರುವ ಲಾರ್ಡ್ಸ್ ವಸ್ತು
ಸಂಗ್ರಹಾಲಯದಲ್ಲಿರುವ ವಸ್ತುಗಳು, ಪ್ರತಿಯೊಂದೂ ಕ್ರಿಕೆಟ್‌ನ ಒಂದೊಂದು ಕತೆ ಹೇಳುತ್ತವೆ.

ಅದಕ್ಕಾಗಿಯೇ ಲಾರ್ಡ್ಸ್ ಮೆಟ್ಟಿಲು ತುಳಿಯುವುದು ಕೇವಲ ಕ್ರಿಕೆಟ್ ಆಟಗಾರನಿಗಷ್ಟೇ ಅಲ್ಲ, ಕ್ರಿಕೆಟ್ ಪ್ರೇಮಿಯ ಕನಸೂ ಹೌದು. ನಿಮಗೆ ತಿಳಿದಿರಲಿ, ಎಂಸಿಸಿ ಕ್ಲಬ್ ಸದಸ್ಯತ್ವ ಪಡೆಯಬೇಕೆಂದರೆ ೨೭ ವರ್ಷ ಕಾಯಬೇಕು! ಉಳಿದಂತೆ, ಶತಮಾನಗಳಿಂದಲೂ ಉಳಿಸಿಕೊಂಡು ಬಂದ ಆಯತಾಕಾರದ ಮೈದಾನ, ೩೧,೦೦೦ ಶ್ವೇತವರ್ಣದ ಆಸನ, ಮಾಧ್ಯಮ ಗ್ಯಾಲರಿ, ಒಂದು ಪೌಂಡ್‌ಗೆ ಸಿಗುವ ಕ್ರಿಕೆಟ್ ಸ್ಕೋರ್‌ಕಾರ್ಡ್ ಇತ್ಯಾದಿ ಖುಷಿ ಕೊಟ್ಟೀತು. ನಾನಂತೂ ಕ್ರಿಕೆಟ್ ತವರಿನ ಹುಲ್ಲಿನ ಮೇಲೆ ಕೈ ಆಡಿಸಿ ಆಸೆ ಪೂರೈಸಿಕೊಂಡು ಬಂದಿದ್ದೇನೆ. ನೀವು ಯಾವಾಗ ಹೋಗುತ್ತೀರಿ ಹೇಳಿ.