Saturday, 14th December 2024

ದಿನೇದಿನೆ ವಿಸ್ತಾರವಾಗುತ್ತಿದೆ ಮೋದಿ ಜಾಗತಿಕ ಬಳಗ

ಅಕ್ಷರ್‌ ನಾಮಾ

ಎಂ.ಜೆ.ಅಕ್ಬರ್‌

ಇತಿಹಾಸ ಬಹಳ ಕಠಿಣ. ಯಾವುದೋ ಒಂದು ಚಿಂತನೆ/ ಕೆಲಸವನ್ನು ‘ಐತಿಹಾಸಿಕ’ ಎನ್ನುವುದಕ್ಕೂ ಮುನ್ನ ಅದು ಕನಿಷ್ಠಪಕ್ಷ ಕೆಲ ದೂರವನ್ನಾದರೂ ಕ್ರಮಿಸಿ ರಬೇಕು ಎಂದು ಇತಿಹಾಸ ಬಯಸುತ್ತದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆದ ಜಿ-೨೦ ಶೃಂಗ ಅಪ್ಪಟ ರಾಜತಾಂತ್ರಿಕ ಕ್ರಾಂತಿಯಂತಿತ್ತು. ಆದರೆ ಅಲ್ಲಿ ಬಿಡುಗಡೆ ಯಾದ ಜಂಟಿ ಹೇಳಿಕೆಯಲ್ಲಿನ ಉಕ್ರೇನ್ ಯುದ್ಧ ಸಂಬಂಽತ ಪ್ಯಾರಾದಿಂದ ಉಕ್ರೇನ್-ರಷ್ಯಾ ನಡುವೆ ಕದನವಿರಾಮ ಏರ್ಪಡಲಿದೆಯೇ ಎಂಬುದು ಖಚಿತವಾ ಗುವು ದಕ್ಕೆ ಕೆಲಕಾಲ ಹಿಡಿಯುತ್ತದೆ.

ಸದ್ಯಕ್ಕೆ ಉಕ್ರೇನ್-ರಷ್ಯಾ ನಡುವೆ ನಿರೀಕ್ಷಿಸಬಹುದಾದ ಒಳ್ಳೆಯ ಬೆಳವಣಿಗೆಯೆಂದರೆ ಕದನ ವಿರಾಮವಷ್ಟೆ. ಇನ್ನು, ಪ್ರಧಾನಿ ಮೋದಿ ಆಸಕ್ತಿಯಿಂದ ಜಿ-೨೦ ಸಮೂಹಕ್ಕೆ ಸೇರ್ಪಡೆ ಮಾಡಿಸುವಲ್ಲಿ ಯಶಸ್ವಿಯಾಗಿರುವ ಆಫ್ರಿಕನ್ ಒಕ್ಕೂಟವು ಒಂದಷ್ಟು ತೂಕ ಗಳಿಸಿಕೊಳ್ಳಬೇಕೆಂದರೆ ಆಫ್ರಿಕನ್ ದೇಶಗಳು ಆರ್ಥಿಕವಾಗಿ ಸ್ವಲ್ಪವಾ ದರೂ ಬಲವಾಗ ಬೇಕು. ಆಗ ಮಾತ್ರ ಜಿ-೨೦ಗೆ ಅವು ಸೇರಿದ್ದಕ್ಕೂ ಅರ್ಥ ಬರುತ್ತದೆ. ಈ ಎರಡೂ ವಿಷಯದಲ್ಲೂ ಮೋದಿ ಒಂದು ಸುದೀರ್ಘ ರಾಜತಾಂತ್ರಿಕ ಪ್ರಯಾಣಕ್ಕೆ ಮುಖ್ಯವಾದ ಮುನ್ನುಡಿ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಹಾದಿಯಲ್ಲಿ ಆ ಪಯಣ ಯಶಸ್ವಿ ಯಾಗಬೇಕೆಂದರೆ ಸ್ವತಃ ಮೋದಿ ಮತ್ತು ಇನ್ನಿತರ ಪ್ರಮುಖ ರಾಜತಾಂತ್ರಿಕರು ಸಾಕಷ್ಟು ಬೆವರು ಹರಿಸಬೇಕಿದೆ. ಈ ಶೃಂಗದಲ್ಲಿ ಮೋದಿ ಸಾಽಸಿದ ೩ನೇ ಯಶಸ್ಸೆಂದರೆ ಇಂಡಿಯಾ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ). ಭಾರತವನ್ನು ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮೂಲಕ ಇಟಲಿ, ಸ್ಪೇನ್, ಯುರೋಪ್‌ಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆ ಯಿದು. ಇದನ್ನು ‘ಐತಿಹಾಸಿಕ’ ಎನ್ನಲೇಬೇಕು. ಏಕೆಂದರೆ ಇದರ ಕಲ್ಪನೆಯೇ ಅದ್ಭುತವಾಗಿದೆ. ಮುಂದೆ ಇದು ಸಾಕಾರಗೊಂಡು ಕಾರ್ಯಾರಂಭಿಸಿದರೆ ಜಾಗತಿಕ ವ್ಯಾಪಾರ ಮತ್ತು ವ್ಯೂಹಾತ್ಮಕ ವ್ಯವಹಾರಗಳಲ್ಲಿ ‘ಗೇಮ್ ಚೇಂಜರ್’ ಆಗಲಿದೆ. ಈ ಕಾರಿಡಾರ್ ಮಹತ್ವವನ್ನು ಇನ್ನೊಂದು ಎತ್ತರಕ್ಕೊಯ್ಯುವ ಶಕ್ತಿಯಿರುವುದು ಸೌದಿ ಅರೇಬಿಯಾ ಮತ್ತು ಹೈ- ನಡುವಿನ ಸಂಪರ್ಕಕ್ಕೆ.

ಇಸ್ರೇಲ್‌ನ ಬಂದರು ನಗರಿ ಹೈ-ದಲ್ಲಿ ಮೆಡಿಟರೇನಿಯನ್ ಸಮುದ್ರದ ೩ ಪ್ರಮುಖ ಬಂದರುಗಳಿವೆ. ಅವು ನೈಸರ್ಗಿಕ ಆಳ ಸಮುದ್ರದ ಬಂದರುಗಳು. ಐಎಂಇಇಸಿ ಭಾಗವಾಗಲಿರುವ ಸೌದಿ ಮತ್ತು ಹೈ- ನಡುವಿನ ಸಂಪರ್ಕ ಈ ಭಾಗದಲ್ಲಿ ನಡೆಯುವ ವ್ಯಾಪಾರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
ಪುರಾತನ ಭಾರತದಲ್ಲಿ ‘ಸಂಬಾರ ಮಾರ್ಗ’ (ಸ್ಪೈಸ್ ರೂಟ್) ಎಂಬುದೊಂದಿತ್ತು. ಅದು ಕೇರಳದಿಂದ ಶುರುವಾಗಿ ಗುಜರಾತ್ ಮೂಲಕ ಸಾಗಿ, ಕೆಂಪುಸಮುದ್ರ ದಾಟಿ, ಕ್ಯಾರವಾನ್‌ಗಳಲ್ಲಿ ನೈಲ್ ನದಿಯವರೆಗೆ ಹೋಗಿ, ಅಲ್ಲಿಂದ ದೋಣಿಗಳಲ್ಲಿ ಅಲೆಕ್ಸಾಂಡ್ರಿಯಾಕ್ಕೆ ತಲುಪುತ್ತಿತ್ತು. ಅಲ್ಲಿ ವೆನಿಸ್ ಮತ್ತು ಜೆನೋವಾದಿಂದ
ಬಂದ ಹಡಗುಗಳು ಭಾರತದ ಈ ಅಮೂಲ್ಯ ಆಹಾರ ಪದಾರ್ಥಗಳನ್ನು ಯುರೋಪ್‌ಗೊಯ್ಯಲು ಕಾಯುತ್ತಿರುತ್ತಿದ್ದವು.

ಈಗಿನ ಆಧುನಿಕ ಕಾರಿಡಾರ್‌ನಲ್ಲಿ ವಾಣಿಜ್ಯ ಸರಕುಗಳು ಯುಎಇ ಮೂಲಕ ಸಾಗಿ, ನಂತರ ಸೌದಿಯ ರಸ್ತೆ ಅಥವಾ ರೈಲುಗಳಲ್ಲಿ ಹೈ-ಕ್ಕೆ ತಲುಪಿ ಅಲ್ಲಿಂದ ಯುರೋಪ್‌ಗೆ ತೆರಳು ತ್ತವೆ. ಇದು ಕೊಲ್ಲಿ ರಾಷ್ಟ್ರಗಳನ್ನು ಮಧ್ಯದಲ್ಲಿರಿಸಿಕೊಂಡು ನಡೆಸುವ ಬಹುದೊಡ್ಡ ವ್ಯಾಪಾರ. ದಕ್ಷಿಣ ಏಷ್ಯಾ ಮತ್ತು ಯುರೋಪ್‌ಗೆ ಕೊಲ್ಲಿ ರಾಷ್ಟ್ರಗಳು ವ್ಯಾಪಾರದ ಸೇತುವೆ ಯಾಗಲಿವೆ. ಭವಿಷ್ಯದಲ್ಲಿ ಇದರ ಮೂಲಕ ಬೆಳೆಯುವ ಕೆಂಪು ಸಮುದ್ರದ ಆರ್ಥಿಕತೆಯು ಜಗತ್ತಿಗೇ ದೊಡ್ಡ ಆಸ್ತಿಯಾಗಿ
ಪರಿಣಮಿಸಲಿದೆ ಎನ್ನಲಾಗುತ್ತದೆ.

ಈ ಕಾರಿಡಾರ್‌ನ ಕಲ್ಪನೆಯು ಇಂಥದೇ ಇನ್ನೊಂದು ರಾಜತಾಂತ್ರಿಕ ಕ್ರಾಂತಿಯಾದ ‘ಅಬ್ರಹಾಂ ಅಕಾರ್ಡ್’ ಒಪ್ಪಂದವನ್ನು ನೆನಪಿಸುತ್ತದೆ. ಇಸ್ರೇಲ್, ಯುಎಇ, ಬಹ್ರೈನ್ ನಡುವೆ ೨೦೨೦ರ ಸೆಪ್ಟೆಂಬರ್ ೧೫ರಂದು ಏರ್ಪಟ್ಟ ಈ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ವಾಷಿಂಗ್ನ್‌ ನಲ್ಲಿ ಸಹಿ ಬಿದ್ದಿತ್ತು. ಅದು
ತ್ರಿಪಕ್ಷೀಯ ಒಪ್ಪಂದವಷ್ಟೇ ಆಗಬಾರದು ಎಂಬ ಮಹತ್ವಾಕಾಂಕ್ಷೆ ಅದಕ್ಕೆ ಸಹಿ ಹಾಕಿದ ಎಲ್ಲರಿಗೂ ಇತ್ತು. ಹಾಗಂತ ಅದು ದುಬೈಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿಸುವುದಕ್ಕಾಗಲೀ, ಅಲ್ಲಿ ಕೋಶರ್ ರೆಸ್ಟೋರೆಂಟ್‌ಗಳನ್ನು ದುಪ್ಪಟ್ಟುಗೊಳಿಸುವುದಕ್ಕಾಗಲೀ, ಯುಎಇ ಕಂಪನಿಗೆ ಜೆರುಸಲೇಂನಲ್ಲಿ ಫುಟ್‌ಬಾಲ್ ತಂಡ
ಕೊಳ್ಳಲು ಅವಕಾಶ ಮಾಡಿಕೊಡುವುದಕ್ಕಾಗಲೀ ರೂಪುಗೊಂಡ ಒಪ್ಪಂದವಾಗಿರಲಿಲ್ಲ.

ಆದರೆ ಸಂದರ್ಭವಶಾತ್ ಈ ಎಲ್ಲ ಬೆಳವಣಿಗೆಗಳೂ ಅಬ್ರಹಾಂ ಒಪ್ಪಂದದಿಂದಾಗಿ ಸಾಧ್ಯವಾದವು. ಇದು ಏರ್ಪಟ್ಟಿದ್ದು ಐತಿಹಾಸಿಕ-ಭೌಗೋಳಿಕ ಅಡೆತಡೆಗಳನ್ನು
ಮೀರಿ ಈ ೩ ದೇಶಗಳ ನಡುವೆ ಆರ್ಥಿಕ ಸಹಕಾರ ಏರ್ಪಡಬೇಕು, ಮುಖ್ಯವಾಗಿ ಈ ದೇಶಗಳ ಮನಸ್ಸುಗಳು ಒಂದಾಗಬೇಕೆಂಬ ಉದ್ದೇಶದಿಂದ. ಅದಕ್ಕೆ ಅಬ್ರಹಾಂ ಒಪ್ಪಂದ ಎಂದು ಹೆಸರಿಟ್ಟಿದ್ದು ಜುಡಾಯಿಸಂ, ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ಈ ೩ ಅಬ್ರಹಾಮಿಕ್ ನಂಬಿಕೆಗಳ ಪ್ರವರ್ತಕನಾದ ಪ್ರವಾದಿಗೆ ಗೌರವ
ಸಲ್ಲಿಸುವುದಕ್ಕಾಗಿ. ಒಪ್ಪಂದಕ್ಕೆ ‘ಅಕಾರ್ಡ್’ ಎಂದಿದ್ದು ೧೯೭೯ರಲ್ಲಿ ಅನ್ವರ್ ಸಾದತ್ ಮತ್ತು ಮೆನಾಶೆಮ್ ಬೆಗಿನ್ ಅವರು ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕ್ಯಾಂಪ್ ಡೇವಿಟ್ ಒಪ್ಪಂದದ ನೆನಪಿಗಾಗಿ. ಹೆಚ್ಚುಕಮ್ಮಿ ೫ ದಶಕಗಳಿಂದ ಕ್ಯಾಂಪ್ ಡೇವಿಡ್ ಒಪ್ಪಂದವು ಅರಬ್ ರಾಷ್ಟ್ರಗಳು
ಮತ್ತು ಇಸ್ರೇಲ್ ನಡುವೆ ೪ನೇ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವುದನ್ನು ತಡೆಯುತ್ತಾ ಬಂದಿದೆ.

ಕ್ಯಾಂಪ್ ಡೇವಿಡ್ ಒಪ್ಪಂದದ ಕೊರತೆಯೇನೆಂದರೆ, ಅದು ಯುದ್ಧ ತಡೆಯುವಲ್ಲಿ ಯಶಸ್ವಿಯಾಗಿದ್ದರೂ, ಈ ದೇಶಗಳ ನಡುವೆ ಸುಸ್ಥಿರ-ಸುದೀರ್ಘ ವಾದ ಶಾಂತಿ ಹಾಗೂ ಸೌಹಾರ್ದದ ಬೀಜ ಬಿತ್ತುವಲ್ಲಿ ಸೋತಿದೆ. ಅಬ್ರಹಾಂ ಒಪ್ಪಂದಕ್ಕೆ ಕೇವಲ ೨ ಆಯ್ಕೆಗಳಿವೆ: ಒಂದೋ ಅದು ಬೆಳೆಯಬೇಕು, ಇಲ್ಲಾ ಒಣಗಬೇಕು. ಅಸ್ಥಿರ ವಾತಾವರಣದಲ್ಲಿ ಆ ಒಪ್ಪಂದ ಉಳಿಯಲಾಗದು. ಹಾಗಂತ ಈಗದನ್ನು ವಿಸ್ತರಿಸುವುದೆಂದರೆ ದೂರದ, ಆದರೆ ಗಡಿ ಹಂಚಿಕೊಂಡಿರುವ ಮೊರಾಕ್ಕೋವನ್ನು ಅದಕ್ಕೆ ಸೇರಿಸುವುದಲ್ಲ. ಏಕೆಂದರೆ ಮೊರಾಕ್ಕೋಗೆ ಪಶ್ಚಿಮ ಸಹಾರಾದಲ್ಲಿ ತನ್ನ ವಾದಕ್ಕೆ ಅಮೆರಿಕ ಗೌರವಿಸಬೇಕು ಎಂಬ ಆಸೆಯಷ್ಟೇ ಇದೆ.

ಇನ್ನು, ಸೌದಿ ಅರೇಬಿಯಾವನ್ನು ಸೇರಿಸಿಕೊಂಡರೆ ಆ ಒಪ್ಪಂದಕ್ಕೆ ಸ್ಥಿರತೆ, ಹೆಚ್ಚಿನ ಶಕ್ತಿ ಬರುತ್ತದೆ. ಆದರೆ ಇಸ್ರೇಲನ್ನು ಪ್ಯಾಲೆಸ್ತೀನ್ ಜತೆಗೇ ಇರಿಸಿ
ನೋಡುವ ಸೌದಿಯ ರಾಜಕೀಯ ನಿಲುವು ಆ ಒಪ್ಪಂದದ ಮೂಲಾಶಯಕ್ಕೆ ಪೂರಕವಾಗಿಲ್ಲ. ಸೌದಿಯನ್ನೇನಾದರೂ ಈ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಹೊರಟರೆ ಇಡೀ ಒಪ್ಪಂದವೇ ಮುರಿದುಬೀಳುವ ಸಾಧ್ಯತೆಯಿದೆ. ಇದನ್ನು ಸೌದಿಯ ರಾಜತಾಂತ್ರಿಕರು ಅರ್ಥ ಮಾಡಿಕೊಂಡಿದ್ದಾರೆ. ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳ ನಡುವೆ ಒಪ್ಪಂದವೇರ್ಪಟ್ಟರೆ ಕೆಂಪುಸಮುದ್ರದ ಆರ್ಥಿಕತೆ ಬೆಳೆಯುತ್ತದೆ ಎಂಬುದು ಅವರಿಗೆ ಗೊತ್ತಿದ್ದರೂ ಅಬ್ರಹಾಂ ಒಪ್ಪಂದದ ಮೂಲಕ ಅದು ಸಾಧ್ಯವಿಲ್ಲ. ಈ ವಿಷಯ ದಲ್ಲಿ ರಿಯಾಧ್‌ಗೆ ರಕ್ಷಣಾ ಸಹಕಾರದ ಖಾತ್ರಿ ನೀಡುವ ಮೂಲಕ ಮುಂದುವರಿಯಲು ಅಮೆರಿಕ ಪ್ರಚೋದಿಸುತ್ತಿದೆ. ಆದರೆ ಪ್ಯಾಲೆಸ್ತೀನ್ ಗೊಂದಲಕ್ಕೆ ಅದು ಪರಿಹಾರವಾಗುವುದಿಲ್ಲ.

ಒಟ್ಟಿನಲ್ಲಿ ಇದೆಲ್ಲ ಬಹಳ ಸಂಕೀರ್ಣವಾಗಿದೆ. ಮನುಷ್ಯ ಶತಮಾನಗಳಿಂದ ಕೇಳುತ್ತಿರುವ ಪ್ರಶ್ನೆಗೆ ಹಳೆಯ ದೊಂದು ಸೂಫಿ ಉತ್ತರವಿದೆ: ನೀವೊಂದು ವಿಷವರ್ತುಲದಲ್ಲಿ ಸಿಲುಕಿದರೆ ಏನು ಮಾಡಬೇಕು? ಅದರ ಸುತ್ತ ಇನ್ನೂ ದೊಡ್ಡ ವರ್ತುಲ ರಚಿಸಬೇಕು! ಮೋದಿ ಮಾಡಿದ್ದೂ ಅದನ್ನೇ. ಬಹಳ ನಾಜೂಕಾಗಿ, ಅಷ್ಟೇ ಬುದ್ಧಿವಂತಿಕೆಯಿಂದ ಅವರು ಸಹಕಾರದ ವರ್ತುಲವನ್ನು ವಿಸ್ತರಿಸಿ ಅಪಾಯಕಾರಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆ ದೇಶಗಳ ನಡುವಿನ ಭೂರಾಜಕೀಯ/ ಐತಿಹಾಸಿಕ ದ್ವೇಷವೇನೇ ಇರಲಿ, ವ್ಯಾಪಾರಕ್ಕೆ ಸಂಬಂಽಸಿ ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಮಗೆ ಸಹಕಾರ ನೀಡಿದರೆ ಸಾಕೆಂಬ ಚಾಣಾಕ್ಷ ನಿಲುವು ಮೋದಿಯವರದ್ದು.

ಹೀಗಾಗಿ ಭಾರತ-ಯುರೋಪ್ ಕಾರಿಡಾರ್ ಒಪ್ಪಂದದಲ್ಲಿ ಮಧ್ಯಪ್ರಾಚ್ಯದ ಸೇರ್ಪಡೆಯೂ ಸಾಧ್ಯವಾಗಿದೆ. ಈ ಒಪ್ಪಂದ ಏನೇನೋ ಅಸಾಧ್ಯವಾದುದನ್ನೆಲ್ಲ ಸಾಽಸುತ್ತೇನೆ ಎನ್ನುವುದಿಲ್ಲ ಅಥವಾ ಇದು ನಾಮ್‌ಕೆವಾಸ್ತೆ ಒಪ್ಪಂದ ಎಂದೂ ಹೇಳುತ್ತಿಲ್ಲ. ಅವರೆಡರ ನಡುವಿನ ಆರ್ಥಿಕ ಸಾಧ್ಯತೆಗಳ ಸಾಕಾರಕ್ಕೆ ಮಾತ್ರ ಸಮಸ್ಯೆಯಿಲ್ಲ. ಈ ಒಪ್ಪಂದಕ್ಕಿರುವ ಶಕ್ತಿಯೆಂದರೆ, ಇದು ಮೋದಿಯವರ ವಿದೇಶಾಂಗ ನೀತಿಯ ಮೂಲತತ್ವಕ್ಕೆ ಪೂರಕವಾಗಿದೆ. ದೆಹಲಿ ಜಿ-೨೦ ಶೃಂಗದ ಘೋಷವಾಕ್ಯವೂ ‘ವಸುಧೈವ ಕುಟುಂಬಕಂ’ ಎಂಬುದೇ ಆಗಿತ್ತು.

ಅದೇ ವೇಳೆ, ಮೋದಿಯವರ ಇನ್ನೊಂದು ಸಿದ್ಧಾಂತವೂ ಈ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದೆ. ‘ನೆರೆರಾಷ್ಟ್ರ ಯಾವುದೆಂಬುದನ್ನು ೨ ದೇಶಗಳ ನಡುವಿನ ಅಂತರದಿಂದ ಗುರುತಿಸ ಬಾರದು, ಬದಲಿಗೆ ಅದನ್ನು ಎಷ್ಟು ಸುಲಭವಾಗಿ ಸಂಪರ್ಕಿಸಬಹುದು ಎಂಬುದರಿಂದ ನಿರ್ಧರಿಸಬೇಕು’ ಎಂಬುದು ಮೋದಿ
ನಿಲುವು. ೨೦೧೪ ಮತ್ತು ೨೦೧೫ರಲ್ಲಿ ಅವರು ಢಾಕಾ ಮತ್ತು ಇಸ್ಲಾಮಾಬಾದ್ ಎರಡಕ್ಕೂ ಸ್ನೇಹಹಸ್ತ ಚಾಚಿದ್ದರು. ಆದರೆ ಪ್ರತಿಕ್ರಿಯಿಸಿದ್ದು ಒಬ್ಬರಷ್ಟೇ. ಪರಿಣಾಮ, ಬಾಂಗ್ಲಾ ಜತೆಗಿನ ಭಾರತದ ಸಂಬಂಧ ವರ್ಷದಿಂದ ವರ್ಷಕ್ಕೆ ಅರಳುತ್ತಿದೆ. ಆದರೆ ಪಾಕಿಸ್ತಾನ ಮಾತ್ರ ದುರಹಂಕಾರ, ದೂರದೃಷ್ಟಿಯ ಕೊರತೆ,
ದ್ವೇಷದಿಂದಿಂದಾಗಿ ಈಗಲೂ ದೂರದಲ್ಲೇ ಉಳಿದಿದೆ. ಹೀಗಾಗಿ ಇವತ್ತಿಗೂ ಅದನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ. ೨೦೧೭ರ ಬಳಿಕ ಮೋದಿ ನಾಯಕತ್ವದಲ್ಲಿ ಭಾರತ ಎಷ್ಟು ಅಭಿವೃದ್ಧಿಯಾಗಿದೆ, ಪಾಕಿಸ್ತಾನ ಎಷ್ಟು ಅವಸಾನ ಕಂಡಿದೆ ಎಂಬುದನ್ನು ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಬಣ್ಣಿಸಿದ್ದಾರೆ.

ಆದರೆ ಸ್ವತಃ ಅಧಿಕಾರ ವಿದ್ದಾಗ ಭಾರತದೊಂದಿಗೆ ಸೇರಿ ಅಭಿವೃದ್ಧಿಯತ್ತ ಸಾಗುವ ಅವಕಾಶವನ್ನು ದೂರ ತಳ್ಳಿದ್ದರ ಬಗ್ಗೆ ಅವರೂ ಆತ್ಮಾವಲೋಕನ
ಮಾಡಿಕೊಳ್ಳಬೇಕು. ಇಂದು ಭಾರತ ಮತ್ತು ಬಾಂಗ್ಲಾ ನೆರೆರಾಷ್ಟ್ರ ಗಳು. ಇವುಗಳ ನಡುವಿನ ಗಡಿಯಲ್ಲಿನ ಸಂಚಾರ ಕೇಂದ್ರ, ವಿಮಾನ ನಿಲ್ದಾಣಗಳು ಸೌಹಾರ್ದದ ತಾಣಗಳಾಗಿವೆ. ಅದೇ ವೇಳೆ, ಭೌಗೋಳಿಕವಾಗಿ ಪಾಕಿಸ್ತಾನವು ಭಾರತದ ಪಕ್ಕದಲ್ಲಿದ್ದರೂ ನೆರೆರಾಷ್ಟ್ರವಾಗಿ ಉಳಿದಿಲ್ಲ. ಪಂಜಾಬ್‌ನ ಅಟ್ಟಾರಿ ಗಡಿಯು
ಹಗಲಲ್ಲಿ ಉಭಯ ದೇಶಗಳ ಜನರ ಪ್ರಯಾಣಕ್ಕೆ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಸೂರ್ಯಾಸ್ತದ ವೇಳೆ ಎರಡೂ ದೇಶದ ಸೈನಿಕರು ರೊಚ್ಚಿಗೆದ್ದು ತೋರಿಸುವ ಸಮರ ಕಲೆಗೆ ಪ್ರಸಿದ್ಧವಾಗಿದೆ.

ಈ ದೃಷ್ಟಿಯಿಂದ ನೋಡಿದರೆ ಕೊಲ್ಲಿ ರಾಷ್ಟ್ರಗಳು ಮತ್ತು ಭಾರತ ಈಗ ನಿಜವಾದ ನೆರೆರಾಷ್ಟ್ರಗಳು. ಇವುಗಳ ನಡುವೆ ವಾರಕ್ಕೆ ಕನಿಷ್ಠ ಸಾವಿರ ವಿಮಾನಗಳು ಹಾರುತ್ತವೆ. ಈ ದೇಶಗಳ ಸರಕಾರ, ಉದ್ದಿಮೆಗಳು ಮತ್ತು ಜನರ ನಡುವೆ ಬೇರೆ ಬೇರೆ ಹಂತದಲ್ಲಿ ಬಹುಮುಖಿ ಸಹಕಾರಗಳು ಚಾಲ್ತಿಯಲ್ಲಿವೆ. ಮೋದಿ ಬಂದ
ಮೇಲೆ ಈ ಸ್ನೇಹಕ್ಕೆ ಸಾಕಷ್ಟು ಬಂಡವಾಳ ಹೂಡಿದ್ದಾರೆ. ಯುಎಇಗೆ ಕಳೆದ ೩೬ ವರ್ಷಗಳಲ್ಲಿ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ಅವರ ಪೂರ್ವವರ್ತಿಗಳು ಬೇರೆಡೆಗೆ ತೆರಳುವುದರಲ್ಲೇ ವ್ಯಸ್ತರಾಗಿದ್ದರು. ಅದಕ್ಕೆ ವ್ಯತಿರಿಕ್ತವಾಗಿ ಮೋದಿ ಕೈಗೊಂಡ ಪ್ರಯಾಣ ಫಲ ನೀಡಿತು. ಉತ್ಪಾದನಾ ಕೇಂದ್ರವಾಗಿ, ಹೂಡಿಕೆಯ ತಾಣವಾಗಿ ಬೆಳೆಯುತ್ತಿರುವ ಭಾರತವಿಂದು ೨ ಖಂಡಗಳ ನಡುವಿನ ಸಮೃದ್ಧಿಯ ಪೂರ್ವ ಕಾರಿಡಾರ್ ಆಗಿ ಬೆಳೆದಿದೆ.

ಪರಿಣಾಮ, ಈ ದೇಶಗಳ ಜನರ ನಡುವಿನ ಸಂಬಂಧಗಳೂ ಸುಧಾರಿಸಿವೆ. ಘರ್ಷಣೆಯನ್ನು ಬದಿಗಿಟ್ಟು ಆರ್ಥಿಕ ಬೆಳವಣಿಗೆಗೆ ಹಂಬಲಿಸಿದ್ದರ ಫಲವಿದು. ಇದು
ನಿಜವಾಗಿಯೂ ‘ಐತಿಹಾಸಿಕ’ ಎನ್ನಬಹುದಾದ ಸಂಗತಿ.

ಬರವಣಿಗೆ ವರ್ಸಸ್ ಕಿರುಚಾಟ 

‘ಇಂಡಿಯ’ ಒಕ್ಕೂಟದವರು ೧೪ ಟಿವಿ ನ್ಯೂಸ್ ಚಾನಲ್‌ಗಳ ಆಂಕರ್‌ಗಳನ್ನು ಬಹಿಷ್ಕರಿಸಲು ಇತ್ತೀಚೆಗೆ ನಿರ್ಧರಿಸಿದ ಸಭೆಗೆ ಶರದ್ ಪವಾರ್ ಅಧ್ಯಕ್ಷರಾಗಿದ್ದರು. ಆ ಪಟ್ಟಿಯಲ್ಲಿ ಮುದ್ರಣ ಮಾಧ್ಯಮದ ಒಬ್ಬ ಪತ್ರಕರ್ತನೂ ಇಲ್ಲ. ರಾಜಕಾರಣಿಗಳ ಸಿಟ್ಟಿಗೆ ಗುರಿಯಾಗುವ ಯೋಗ್ಯತೆ ದೇಶದ ಒಬ್ಬ ಪ್ರಿಂಟ್ ಜರ್ನಲಿಸ್ಟ್‌ಗೂ
ಇಲ್ಲವೇ? ಅಥವಾ ಮುದ್ರಣ ಮಾಧ್ಯಮ ಸಮತೋಲನ ಕಾಪಾಡಿಕೊಳ್ಳುತ್ತದೆ, ಅಲ್ಲಿ ಸುದ್ದಿಗಷ್ಟೇ ಬೆಲೆ ನೀಡಲಾಗುತ್ತದೆ ಇತ್ಯಾದಿ ಮೌಲ್ಯಗಳಿಗೆ ಸಲ್ಲಿಸಿದ ಗೌರವವೇ ಇದು? ಆದರೆ, ಗದ್ದಲದ ಯುಗ ಶುರುವಾಗುವುದಕ್ಕೂ ಮುನ್ನ ಮುದ್ರಣ ಮಾಧ್ಯಮದ ಪತ್ರಕರ್ತರು, ಸಂಪಾದಕರು, ಅಂಕಣಕಾರರು ನಿಯತವಾಗಿ ಸರಕಾರದ ಶತ್ರುಗಳ ಪಟ್ಟಿಯಲ್ಲಿರುತ್ತಿದ್ದರು.

ಬಹುಶಃ ಈಗ ‘ಇಂಡಿಯ’ ಒಕ್ಕೂಟದವರು ಮುದ್ರಣ ಮಾಧ್ಯಮ ನಿಷ್ಪ್ರಯೋಜಕವಾಗಿದೆ ಎಂದು ಪರೋಕ್ಷ ಸಂದೇಶ ನೀಡಿರಬಹುದು. ಈಗೇನಿದ್ದರೂ ಟಿವಿ ಆಂಕರ್‌ಗಳ ಯುಗ. ರಾಜಕಾರಣಿಗಳಿಗೆ ಅವರನ್ನೆದುರಿಸುವುದೇ ಕಷ್ಟ. ಏಕೆಂದರೆ ಅವರು ಕೂಗಾಡುತ್ತಾರೆ, ಸಾರ್ವಜನಿಕ ಚರ್ಚೆಯ ದಿಕ್ಕು ನಿರ್ಧರಿಸುತ್ತಾರೆ. ಅವರ ಮಾತಿನಲ್ಲಿ ಹುರುಳಿರಬೇಕು ಎಂದೇನಿಲ್ಲ. ಕೆಲವರು ಅರ್ಥಬದ್ಧವಾಗಿ ಮಾತಾಡಲು ಯತ್ನಿಸಿದರೂ, ಟಿವಿ ಚರ್ಚೆಯ ಪ್ರಮುಖ ಲಕ್ಷಣವೇ ಗದ್ದಲ. ‘ಗೊಂದಲಪುರ’ ಎಂಬ ದೇಗುಲದ ಪ್ರಧಾನ ಅರ್ಚಕರೆಂದರೆ ಇದೇ ಆಂಕರ್‌ಗಳು. ಅವರು ಬಹಿಷ್ಕಾರಕ್ಕೆ ಯೋಗ್ಯರಾಗಿದ್ದಾರೆ ಬಿಡಿ. ತಾತ್ಪರ್ಯವೆಂದರೆ, ಅರಚಾಟದ ಮುಂದೆ ಬರವಣಿಗೆ ಸೋತು ಮಕಾಡೆ ಮಲಗಿದೆ. ಮುದ್ರಣ ಮಾಧ್ಯಮದ ಆತ್ಮ ಚಿರಶಾಂತಿಗೆ ಹೋಗದಿರಲಿ.

ದೊಡ ವರಿಗಿರುವ ತಿದ್ದುವ ಸುಖ

ಜಗತ್ತಿನಾದ್ಯಂತದ ಪ್ರಜಾಪ್ರಭುತ್ವವಾದಿಗಳೇ, ಎದ್ದೇಳಿ. ಈಗಾಗಲೇ ಅವಸಾನದಂಚಿನಲ್ಲಿರುವ ಆತ್ಮಗೌರವದ ಹೊರತು ಕಳೆದುಕೊಳ್ಳಲು ನಿಮ್ಮಲ್ಲೇನೂ ಉಳಿದಿಲ್ಲ. ಹಳೆಯ ಮಾಸ್ಟರ್‌ಗಳಿಂದ ಸೆನ್ಸಾರ್‌ಶಿಪ್ ಅಂದರೇನೆಂದು ಕಲಿಯಿರಿ. ಶಾಂತವಾಗಿರಿ, ಆದರೆ ಲಜ್ಜೆಗೆಟ್ಟವರಾಗಬೇಡಿ. ರಸಭರಿತ ಕ್ಯಾರೆಟ್ ಬಳಸಿ. ಕೈಯಲ್ಲೊಂದು ಸಪೂರ, ಉಕ್ಕಿನ ತುದಿಯ ಕೋಲು ಹಿಡಿಯಿರಿ. ರಾಜಪ್ರಭುತ್ವಕ್ಕೆ ನಿಷ್ಠವಾದ ನಿಜವಾದ ಬ್ರಿಟಿಷ್ ಆಡಳಿತವರ್ಗ ಇನ್ನೂ ನಿಮಗೆ ಕಲಿಸುವುದು ಬಹಳಷ್ಟಿದೆ. ಎಲ್ಲರಿಗೂ ಗೊತ್ತಿದ್ದ ಸತ್ಯವನ್ನೇ ಲಂಡನ್ನಿನ ಹಿರಿಯ ಪತ್ರಕರ್ತರು ಈಗ ಮತ್ತೊಮ್ಮೆ ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಹೇಳುತ್ತಿದ್ದಾರೆ. ಬ್ರಿಟನ್ನಿನ ರಾಜಪ್ರಭುತ್ವದ ಬಗ್ಗೆ ಬರೆದ ಪ್ರತಿಯೊಂದು ವಿಷಯವನ್ನೂ ಒಂದಲ್ಲಾ ಒಂದು ರೀತಿ ಸೆನ್ಸಾರ್ ಮಾಡಿಯೇ ಪ್ರಕಟಿಸಲಾಗುತ್ತಿದೆಯಂತೆ. ರಾಜರು, ರಾಣಿಯರು ಮತ್ತು ಅವರ ಉತ್ತರಾಽಕಾರಿಗಳ ಗೌರವ ಉಳಿಸುವುದೆಂದರೆ ಹೀಗೆಯೇ. ಏನು ಬರೆಯಬೇಕೆಂಬುದನ್ನು ಅವರೇ ಹೇಳಬೇಕು.

ನಿಷ್ಠೆಗೆ ಅಲ್ಲಿ ಬಹುಮಾನಗಳಿವೆ. ನಿಷ್ಠರಾಗಿರದಿದ್ದರೆ ಸೌಕರ್ಯಗಳು ಮಾಯ. ರಾಜನೇ ಎಲ್ಲಕ್ಕಿಂತ ದೊಡ್ಡ ವನು. ಹಿಂದಿನ ಕಾಲದಲ್ಲಿ ರಾಜನಿಗೆ ನಿಷ್ಠೆ ತೋರದಿದ್ದರೆ ತಲೆ ಹೋಗುತ್ತಿತ್ತು. ಈಗ ಕೆಲಸ ಹೋಗುತ್ತಿದೆ. ಕಾಲ ಸ್ವಲ್ಪ ಸುಧಾರಿಸಿದೆ. ಹೀಗೆ ಬ್ರಿಟಿಷ್ ರಾಜಪ್ರಭುತ್ವದ ವಿಷಯದಲ್ಲಿ ಜಾರಿಯಲ್ಲಿರುವ ಸೆನ್ಸಾರ್‌ಶಿಪ್ ಅನ್ನು ಇಂಗ್ಲಿಷ್‌ನಲ್ಲಿ ‘mಛ್ಟಿmಛಿಠ್ಠಿಜಿಠಿqs ಛಿbಜಿಠಿ’  ಎನ್ನುತ್ತಾರೆ. ಹಾಗಂದರೇನು? ತಿಳಿದುಕೊಳ್ಳಿ ನೋಡೋಣ! ಆಮೆನ್.

(ಲೇಖಕರು ಹಿರಿಯ ಪತ್ರಕರ್ತರು, ರಾಜ್ಯಸಭೆ ಸದಸ್ಯರು)