Thursday, 19th September 2024

ಸಂಚಲನ ಮೂಡಿಸಿದ 2.40 ಕೋಟಿ ಮೌಲ್ಯದ ಆದಾಯ ಪ್ರಮಾಣ ಪತ್ರ…!

ಮಿರ್ಜಾಪುರ: ಕೂಲಿ ಕಾರ್ಮಿಕರೊಬ್ಬರ ಮಗನಿಗೆ ತಹಶೀಲ್ದಾರ್​ ಕಚೇರಿ ವತಿಯಿಂದ 2.40 ಕೋಟಿ ರೂ.ಗಳ ಬೃಹತ್ ಆದಾಯ ಪ್ರಮಾಣ ಪತ್ರ ವಿತರಿಸಲಾಗಿದೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಕ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಕೂಲಿ ಕಾರ್ಮಿಕನ ಮಗ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್‌ ನಲ್ಲಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಮ ಲೆಕ್ಕಿಗರ ನಿರ್ಲಕ್ಷ್ಯದಿಂದ ಅಧಿಕ ಆದಾಯದ ಪ್ರಮಾಣ ಪತ್ರ ನೀಡಲಾಗಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್, ಆದಾಯ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ. ಮತ್ತೊಮ್ಮೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗೆ ಸೂಚನೆ ನೀಡಲಾಗಿದೆ.

ಕೂಲಿ ಕಾರ್ಮಿಕ ರಾಮದಾಸ್ ಅವರ ಪುತ್ರ ಬ್ರಿಜೇಶ್ ಕುಮಾರ್ ಆಗ್ರಾದಲ್ಲಿ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಹಜಿ ಗ್ರಾಮದ ಲೆಕ್ಕಾಧಿಕಾರಿ ಪತ್ರದಲ್ಲಿ ವಾರ್ಷಿಕ 2.40 ಕೋಟಿ ರೂ. ಆದಾಯ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿ, ಈ ಪ್ರಮಾಣಪತ್ರವನ್ನು ಪಡೆದಿದ್ದು, ವಿಷಯ ತಿಳಿದ ಮನೆಯವರು ಆತಂಕಗೊಂಡಿದ್ದರು. ಘಟನೆ ಬೆಳಕಿಗೆ ಬಂದ ನಂತರ ತಹಶೀಲ್ದಾರ್ ಅವರು ವಿದ್ಯಾರ್ಥಿಯ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದಾರೆ.

ಈ ಬಗ್ಗೆ ಅಕೌಂಟೆಂಟ್ ರಾಮರಾಜ್ ಪಾಲ್, ಆದಾಯ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗೆ ಎರಡನೇ ಆದಾಯ ಪ್ರಮಾಣ ಪತ್ರ ನೀಡಲಾಗುವುದು” ಎಂದರು.