Thursday, 12th December 2024

ಮನೆ ಮಂತ್ರಾಲಯವಾದಾಗ ಮಾತ್ರ ಮನಸ್ಸು ದೇವಾಲಯವಾಗಲು ಸಾಧ್ಯ

ಶಿಶಿರ ಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ನಿಮಗೆ ಅತ್ಯಂತ ಪ್ರೀತಿಯ ಸ್ಥಳ, ತುಂಬಾ ಇಷ್ಟವಾದ ಪರ ಊರು ಯಾವುದು? ಜೋಗ, ಹಂಪಿ, ಶಿಮ್ಲಾ, ಕುಲು, ಮನಾಲಿ, ಊಟಿ ? ಅಥವಾ ಸ್ವಿಜರ್ಲ್ಯಾಂಡ್, ಅಮೆರಿಕಾ, ಸಿಂಗಾಪುರ್ ಅಥವಾ ಇನ್ಯಾವುದೋ ದೇಶದ ಒಂದು ನಗರ, ಊರು? ಅಲ್ಲಿ, ಆ ಊರಿನಲ್ಲಿ ಇಷ್ಟವಾದ ಸ್ಪಾಟ್ ಯಾವುದು? ಒಬ್ಬೊಬ್ಬೊರದ್ದು ಒಂದೊಂದು ಉತ್ತರ. ಆ ಇಷ್ಟವಾಗುವ ಊರಿನಲ್ಲಿ – ಇಷ್ಟವಾದ ಜಾಗದಲ್ಲಿ ಹೋಗಿ ನಿಂತಾಗ ನಾವು ಒಮ್ಮೆ ಜಗತ್ತನ್ನೇ ಮರೆಯುತ್ತೇವೆ.

ಹೋಗಿ ಬಂದ ನಂತರ ಕೂಡ ಆ ಜಾಗ ಆಗೀಗ ನೆನಪಾಗುತ್ತಿರುತ್ತದೆ. ಹೀಗೆ ಪ್ರವಾಸಕ್ಕೆ ಹೋದಾಗ ಅದೆಷ್ಟೋ ಬಾರಿ ನಮಗೆ
ಸಹಜವಾಗಿ ಅನಿಸುವುದಿದೆ, ಇಲ್ಲೇ ನಮ್ಮ ಮನೆ ಇದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು ಎಂದು. ಇದೊಂದು ತೀರಾ ಕ್ಷಣಿಕ ವಿಚಾರ; ಆ ಕ್ಷಣ ಒಮ್ಮೆ ಹಾಗೆ ಅನಿಸಿಬಿಡುತ್ತದೆ. ಒಂದು ವೇಳೆ ಅದೇ ಊರಿನಲ್ಲಿ ಒಂದು ವಾರಕ್ಕಿಂತ ಹೆಚ್ಚಿಗೆ ಇದ್ದೀರೆಂದಿಟ್ಟುಕೊಳ್ಳಿ,
ಮೆಲ್ಲಗೆ ಬೇಸರ ಬರಲು ಶುರುವಾಗುತ್ತದೆ. ಯಾಕೋ ನಮ್ಮ ಊರೇ ಚೆಂದ ಎಂದೆನಿಸಲು ಶುರುವಾಗುತ್ತದೆ. ಅಲ್ಲಿ, ಗೆಸ್ಟ್ ಹೌಸ್ ‌ನಲ್ಲಿ ಎಷ್ಟೇ ಸೌಕರ್ಯ, ರುಚಿಯಾದ ಆಹಾರ ಇದ್ದರೂ ನಮ್ಮ ಮನೆ ನೆನಪಾಗುತ್ತದೆ.

ಮನುಷ್ಯನಿರಲಿ, ಪ್ರಾಣಿಗಳಿರಲಿ ಎಲ್ಲವಕ್ಕೂ ಮನೆ ಎನ್ನುವುದೊಂದಿದೆ. ಮನುಷ್ಯನ ಮನೆ ಗೋಡೆಗಳ ಮಧ್ಯೆ. ಹಕ್ಕಿಯ ಮನೆ ಅದರ ಗೂಡು. ಇಲಿಗೆ ಬಿಲ. ಹುಲಿಗೆ ಹತ್ತರಿಂದ ಎಪ್ಪತ್ತು ಚದರ ಕಿಲೋಮೀಟರ್ ಕಾಡು. ಬೀದಿ ನಾಯಿಗೆ ಬೀದಿಯೇ ಮನೆ. ಪ್ರತಿಯೊಂದು ಜೀವಿಯ ಮನೆಗೂ ಒಂದು ಗಡಿ. ಆ ಗಡಿಯ ಒಳಗೆ ಬೇರೆ ಜೀವಿ ಆಕ್ರಮಿಸುವಂತಿಲ್ಲ – ಒಳ ನುಸುಳುವಂತಿಲ್ಲ. ಎಲ್ಲ ಪ್ರಾಣಿಗಳು ಈ ತನ್ನದೆನ್ನುವ ಆಯ್ದ ಒಳಕ್ಕೆ ಇನ್ನೊಂದು ಜೀವಿ ಹೊಕ್ಕ ಕೂಡಲೇ ಪ್ರತಿರೋಧ ತೋರ್ಪಡಿಸುತ್ತವೆ ಇಲ್ಲವೇ ಯುದ್ಧಕ್ಕೇ ಇಳಿದು ಬಿಡುತ್ತವೆ.

ಪ್ರತಿಯೊಂದು ಜೀವಿ ಈ ಲ್ಯಾಂಡ್ ಡಿಸ್ಪ್ಯೂಟ್ ಕಾರಣದಿಂದ ಹೋರಾಟ ನಡೆಸುತ್ತಲೇ ಬದುಕುತ್ತಿರುತ್ತದೆ – ಮನುಷ್ಯನೂ ಇದಕ್ಕೆ ಹೊರತಲ್ಲ. ಒಡೆತನ ಮತ್ತು ತನ್ನ ಸ್ವತ್ತು ಎನ್ನುವ ಭಾವ ಇರದ ಜೀವಿಯೇ ಇಲ್ಲ. ಈ ತನ್ನದು, ತನ್ನ ಸ್ವತ್ತು ಎನ್ನುವ ವಿಚಾರ ಜಗತ್ತಿನ ನವಿರಾದ ಸಮತೋಲನಕ್ಕೆ ಕಾರಣ ಕೂಡ ಹೌದು. ಜೀವಿ ಭೂಮಿಯ ಮೇಲೆ ಹುಟ್ಟಿದ ದಿನವೇ ಈ ತನ್ನದು, ತನ್ನ ಮನೆ ಎನ್ನುವ ವಿಚಾರ ಕೂಡ ಹುಟ್ಟಿರುತ್ತದೆ. ಮನುಷ್ಯ ತನ್ನದು ಎನ್ನುವ ವಿಚಾರದಿಂದ ಎಷ್ಟೇ ಪ್ರಯತ್ನಪಟ್ಟರೂ, ಅಧ್ಯಾತ್ಮ ಓದಿದರೂ ವಿಮುಖನಾಗಲು ಸಾಧ್ಯವಾಗದೆ ಇರುವುದಕ್ಕೆ ಈ ಲಕ್ಷಾಂತರ ವರ್ಷ ವಂಶವಾಹಿನಿಯಾಗಿ ಹರಿದು ಬಂದ ವಿಚಾರವೇ ಕಾರಣ.

ನಾವೆಲ್ಲಾ ಬೇರೆ ಬೇರೆ – ನಮ್ಮೆಲ್ಲರ ಇಷ್ಟ ಬೇರೆ ಬೇರೆ ಆದರೆ ಒಂದೇ ಒಂದು ಸಾಮಾನ್ಯವಾದ ವಿಚಾರ ಎಂದರೆ ನಮ್ಮೆಲ್ಲರಿಗೂ
ನಮ್ಮ ಮನೆ ಎಂದರೆ ಇಷ್ಟ. ನಮಗೆಲ್ಲರಿಗೆ ಎಲ್ಲೇ ಹೋದರೂ ಕೊನೆಗೆ ಇಷ್ಟವಾಗುವುದು ನಮ್ಮ ಮನೆ. ಅತೀ ಸುಂದರ ಪ್ರವಾಸಿ
ತಾಣಕ್ಕೆ ಹೋಗಿ ಅದೆಷ್ಟೋ ಮೋಜು ಮಸ್ತಿ ಮಾಡಿಕೊಂಡು ಬಂದರೂ ನಮ್ಮ ಮನೆ ಹೊಕ್ಕ ತಕ್ಷಣ ಹುಟ್ಟುವ ಒಂದು
ಸಮಾಧಾನ ಇನ್ನೆಲ್ಲಿಯೂ ಹುಟ್ಟುವುದಿಲ್ಲ. ಈ ತನ್ನ ಮನೆಯೆನ್ನುವ ವಿಚಾರ ಬಹಳ ಶಕ್ತಿಯುತ. ಅದೆಷ್ಟೆಂದರೆ ಮನೆಯಲ್ಲಿ
ಅದೆಷ್ಟೇ ಗೌಜಿ, ಗಲಾಟೆ, ವಾಸನೆ, ಗಲೀಜು, ಚಳಿ, ಸೆಖೆ ಇರಲಿ – ಅದೆಲ್ಲವೂ ನಮ್ಮ ಮನೆಯೆಂಬ ಕಾರಣಕ್ಕೆ ನಮಗೆ ಸಹ್ಯ.
ಆದರೆ ಹೀಗೆ ಸಹಿಸುತ್ತ – ಸಹಿಸುತ್ತ ನಾವು ನಮಗರಿವಿಲ್ಲದಂತೆ ಮನೆಯ ಜೊತೆ ಕ್ರಮೇಣ ರಾಜಿ ಮಾಡಿಕೊಂಡು ಬಿಡುತ್ತೇವೆ.

ನಮ್ಮ ಮನೆ ಎಂಬ ಒಂದೇ ಕಾರಣಕ್ಕೆ ಮನೆಯಲ್ಲಿ ವಸ್ತುಗಳು ಅದೆಷ್ಟೇ ಚೆಲ್ಲಾಪಿಲ್ಲಿಯಾಗಿದ್ದರೂ ಅದೆಲ್ಲ ಸಹ್ಯವೆನಿಸಲು
ಶುರುವಾಗುತ್ತದೆ. ಈ ರೀತಿ ಸಹನೆಯನ್ನು ನಾವು ನಮಗೆ ಅರಿವಿಲ್ಲದಂತೆ ಹಿಗ್ಗಿಸಿಕೊಳ್ಳುತ್ತ ಹೋಗುತ್ತೇವೆ. ಕ್ರಮೇಣ ಮನೆಯೆಡೆಗಿನ ಪ್ರೀತಿ ಒಂದು ಅಣುವಷ್ಟು ಕೂಡ ಕಡಿಮೆಯಾಗದಿದ್ದರೂ ಮನೆಯಲ್ಲಿ ಕಿರಿ ಕಿರಿ ಎನಿಸಲು ಶುರುವಾಗುತ್ತದೆ. ಒಂದು ರೀತಿಯ ಅಸಹನೆ ಅವ್ಯಕ್ತವಾಗಿ ಕಾಡಲು ಶುರುವಾಗುತ್ತದೆ.

House is what we make. ಮನೆ ಕಟ್ಟಿಕೊಂಡದ್ದಿರಬಹುದು, ಪಡೆದುಕೊಂಡದ್ದಿರಬಹುದು, ಬಾಡಿಗೆಯದಿರಬಹುದು, ಗುಡಿಸಲಿರಬಹುದು, ಬಂಗಲೆಯಿರಬಹುದು, ಚಿಕ್ಕದಿರಬಹುದು, ದೊಡ್ಡದಿರಬಹುದು – ಎಲ್ಲ ಮನೆಯೂ ಕೊನೆಯಲ್ಲಿ ಮನೆಯೇ. ಈಗ ಮನೆಯೆಂದರೆ ಏನು ಎನ್ನುವ ಸಹಜವೆನ್ನುವ ಪ್ರಶ್ನೆಯನ್ನು ಒಮ್ಮೆ ಕೇಳಿಕೊಳ್ಳೋಣ. ಅಡಿಪಾಯ, ಗೋಡೆ, ಕಿಟಕಿ ಬಾಗಿಲುಗಳು ಇವಷ್ಟೇ ಮನೆಯೇ? ಅಲ್ಲವಲ್ಲ – ಗೋಡೆ ಮನೆಯ ಸರಹದ್ದು – ಅದೊಂದೇ ಮನೆಯಲ್ಲವಲ್ಲ. ಮಾಡು, ತಾರಸಿ ಮನೆಯ ಮುಚ್ಚಳಿಕೆ – ಅದೇ ಮನೆಯಲ್ಲ. ಹಾಗಾದರೆ ಸೋಫಾ, ಕುರ್ಚಿ, ಮೇಜು, ಟಿವಿ, ಕಂಪ್ಯೂಟರ್, ಹಾಸಿಗೆ? ಅವೆಲ್ಲ ವಸ್ತುಗಳಾದವು.

ಹಾಗಾದರೆ ಅಸಲಿಗೆ ಮನೆಯೆಂದರೆ ಏನು? ಒಂದು ಆಯ – ಆ ಆಯದೊಳಗಿನ ನಮ್ಮದೆನ್ನುವ, ನಾವು ಸ್ವಾಧೀನ ಪಡಿಸಿಕೊಂಡ
ವಸ್ತುಗಳೆಲ್ಲ ಸೇರಿ ಮನೆಯಾಗುತ್ತದೆ ಅಲ್ಲವೇ? ಮನೆಯೆಂದರೆ ಒಂದು ಸಮಗ್ರ. ಮನೆಯೆಂದರೆ ಅದೊಂದು ಸ್ಪೇಸ್ – ಆ ಸ್ಪೇಸ್
ನಲ್ಲಿರುವ ಎಲ್ಲ ವಸ್ತುಗಳು – ಎಲ್ಲ ಹರಗಣಗಳೂ ಸೇರಿ ನಮ್ಮ ಮನೆಯಾಗುತ್ತದೆ.

ಕೆಲವರ ಮನೆಗೆ ಹೋದರೆ ಅದೇನೋ ಒಂದು ಸುಂದರ ಅನುಭಾವ. ಅಲ್ಲೊಂದು ಸುಂದರ ವೈಬ್ರೆಷನ್. ಇನ್ನು ಕೆಲವರ
ಮನೆ ಹೊಕ್ಕ ತಕ್ಷಣ ಮನಸ್ಸಿಗೆ ಏನೋ ಒಂದು ರಗಳೆ. ನೀವು ಅದಕ್ಕೆ ವಾಸ್ತು ಎಂದು ಕರೆದರೂ ಸರಿಯೇ. ಅದೇಕೆ ಹೀಗೆ ಎಂದು
ಯಾವತ್ತಾದರೂ ಪ್ರಶ್ನಿಸಿಕೊಂಡಿದ್ದೀರಾ? ಕೆಲವರ ಮನೆ ತೀರಾ ಅಚ್ಚುಕಟ್ಟು. ಇನ್ನು ಕೆಲವರ ಮನೆಯೆಂದರೆ ಅದೊಂದು
ರೀತಿಯ ಸಾಮಾನು ತುಂಬಿಡುವ ಗೋದಾಮು. ಬಹುಷಃ ಮನುಷ್ಯನಷ್ಟು ತನ್ನ ಗೂಡನ್ನು – ಮನೆಯನ್ನು ಪ್ರೀತಿಸುವ ಪ್ರಾಣಿ ಇನ್ನೊಂದಿಲ್ಲ. ಆದರೆ ತನ್ನ ಆವಾಸ ಸ್ಥಾನವನ್ನು ಬೇಕಾಬಿಟ್ಟಿ ಇಟ್ಟುಕೊಳ್ಳುವ, ನಿರ್ಲಕ್ಷಿಸುವ ಒಂದು ದೊಡ್ಡ ಗುಂಪೇ ನಮ್ಮ ನಡುವೆ ಇದೆ. ಕೆಲವರ ಮನೆಯಲ್ಲಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ.

ಒಮ್ಮೆಯಂತೂ ನನ್ನ ಸ್ನೇಹಿತರೊಬ್ಬರ ಮನೆಗೆ ಮೊದಲ ಬಾರಿ ಹೋಗಿದ್ದೆ. ಎಲ್ಲೆಂದರಲ್ಲಿ ವಸ್ತುಗಳು, ಮಕ್ಕಳ ಆಟಿಕೆ ಸಾಮಾನು ಗಳು, ಬಟ್ಟೆ, ಮೊಬೈಲ್ ಚಾರ್ಜರ್ ಹೀಗೆ ನೂರಾರು ಸಾಮಾನು ಬಿದ್ದಿದ್ದವು. ಮನೆಯ ಬಾಗಿಲಿಂದ ಹೊರಟು ಕುಂಟಾ ಬಿಲ್ಲೆ ಆಟವಾಡಿದಂತೆ ದಾಟುತ್ತ – ಹಾರುತ್ತ ಕುರ್ಚಿಯ ಮೇಲೆ ಹೋಗಿ ಕೂರುವಾಗ ಸುಸ್ತಾಗಿ ಹೋಯಿತು. ಕುರ್ಚಿಯ ಮೇಲೆ ಕೂತ ಮೇಲೆ ಬೆನ್ನಿಗೆ ಏನೋ ಒಂದು ತಂಪಾದ ಅನುಭವ – ಸರಿದು ನೋಡಿದರೆ ಒದ್ದ ಅಂಡರ್ವೆರ್ !

ಮನೆಯನ್ನು ನಾವು ಹೇಗೆ ಎಷ್ಟು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತೇವೆ ಎನ್ನುವುದು ನಾನಾ ಕಾರಣಗಳಿಂದ ಮುಖ್ಯವಾಗುತ್ತದೆ. ನಮ್ಮ ಮನೆ ನಮ್ಮಿಷ್ಟ ಎನ್ನುವುದು ನಿಜ. ನಮಗೆ ಬೇಕಾದಂತೆ ಮನೆಯನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮನೆಯನ್ನು ಇಟ್ಟುಕೊಂಡ ರೀತಿ ಮತ್ತು ಶಿಸ್ತಿಗೂ ಮತ್ತು ಮನೆಯಲ್ಲಿರುವ
ಮನಸ್ಸುಗಳ ಸ್ಥಿತಿಗೂ ನೇರ ಸಂಬಂಧವಿರುವ ಕಾರಣ ಮನೆಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎನ್ನುವುದು ಬಹಳ
ಮುಖ್ಯವಾಗುತ್ತದೆ. ಮನೆಯೇ ಮಂತ್ರಾಲಯ – ಮನಸೇ ದೇವಾಲಯ ಎನ್ನುವಾಗ ಅಲ್ಲಿ ಕೂಡ ಸುಪ್ತವಾಗಿರುವ ವಿಚಾರವಾದ, ಮನೆಗೆ ಮತ್ತು ಮನಸ್ಸಿಗೆ ಇರುವ ಸಂಬಂಧವನ್ನು ಗ್ರಹಿಸಲೇ ಬೇಕು. ಮನೆ ಕಟ್ಟಿಕೊಳ್ಳುವುದಕ್ಕಿಂತ ಮನೆ ಇಟ್ಟುಕೂಳ್ಳುವುದು ಮುಖ್ಯವಾಗುತ್ತದೆ.

Cluttered house leads to a cluttered minds. ಹರಡಿದ ಮನೆ ಅಲ್ಲಿನ ಮನಸ್ಸುಗಳನ್ನು ಹರಡುತ್ತದೆ ಎನ್ನುವುದು ಇಲ್ಲಿ ತಿಳಿಯಬೇಕಾದ ಸೂಕ್ಷ್ಮ. ನಾವು ಮನೆಯನ್ನು ಎಷ್ಟು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಮನೆ ಯಲ್ಲಿನ ಅನುಭವ ನಿರ್ಧರಿತವಾಗುತ್ತದೆ. ಬಹುಪಾಲು ಸಾಂಸಾರಿಕ ಸಮಸ್ಯೆಗಳಿಗೆ ನೇರ ಕಾರಣ ನಾವು ಮನೆಯನ್ನು ಇಟ್ಟು ಕೊಳ್ಳುವ ರೀತಿ. ಜೀವನದ ಅತೀ ಮುಖ್ಯ ಅಂಗವಾದ ವಾಸ ಸ್ಥಾನದ ಶಿಸ್ತು ನಮ್ಮ ಮಾನಸಿಕ ಶಾಂತಿ ಮತ್ತು ಯಶಸ್ಸನ್ನು
ನಿರ್ಧರಿಸುತ್ತದೆ. ಮನಸ್ಸನ್ನು ವ್ಯವಸ್ಥಿತವಾಗಿ ಒರ್ಗನೈಜ್ ಮಾಡಿಕೊಳ್ಳಬೇಕೆಂದರೆ – ಸುಂದರವಾಗಿಟ್ಟು ಕೊಳ್ಳಬೇಕೆಂದರೆ
ಮೊದಲು ನಮ್ಮ ರೂಮ್ ಅನ್ನು, ಮನೆಯನ್ನು organize ಮಾಡಿಕೊಳ್ಳಬೇಕು. ಎಲ್ಲ ಮನಶಾಸ್ತ್ರಜ್ಞರು ಒಪ್ಪುವ ವಿಚಾರ
ಇದು. ಸುಪ್ರಸಿದ್ಧ ಮನಶಾಸ್ತ್ರಜ್ಞ ಕೆನಡಾದ ಜೋರ್ಡನ್ ಪೀಟರ್ಸನ್ ತನ್ನ ಬಳಿ ಮಾನಸಿಕ ಸಮಸ್ಯೆ ಹೊತ್ತು ಬರುವ
ಪ್ರತಿಯೊಬ್ಬರಿಗೂ ಮೊದಲು ಅವರ ಮನೆಯನ್ನು ವಿವರಿಸಲು ಹೇಳುತ್ತಾರೆ.

ಮಾನಸಿಕ ಸಮಸ್ಯೆ ಯಾವುದೇ ಇರಬಹುದು, ಅವರ ಮೊದಲ ಪ್ರೆಸ್ಕ್ರಿಪ್ಷನ್ ರೋಗಿ ತನ್ನ ರೂಮ್ ಅನ್ನು ಮತ್ತು ಮನೆಯನ್ನು ಶಿಸ್ತಿನಿಂದ ಸಂಯೋಜಿಸುವುದು. ಮನೆಯನ್ನು ಸರಿಯಾಗಿ ಜೋಡಿಸಿದ ಫೋಟೋ ತೋರಿಸಿದ ಮೇಲೆಯೇ ಮುಂದಿನ ಮಾತುಕತೆ. ಅವರೇ ಹೇಳುವ ಪ್ರಕಾರ ಮನೆಯನ್ನು ನಾವು ಸರಿಯಾಗಿ ಜೋಡಿಸುತ್ತ ಹೋದಂತೆಲ್ಲ ಮನಸ್ಸು ಕೂಡ ಸರಿಯಾಗುತ್ತ ಹೋಗು ತ್ತದೆ. ನಮ್ಮ ಮನಸ್ಸು ಮತ್ತು ಮೂಡ್‌ಗೆ ನೇರವಾಗಿ ಈ ನಮ್ಮ ಸುತ್ತಲಿನ ಎಲ್ಲ ವಸ್ತುಗಳೂ ಕಾರಣವಾಗಿರುತ್ತವೆ. ನಮ್ಮ ರೂಮ್, ನಾವು ಕೆಲಸ ಮಾಡಲು ಕೂರುವ ಮೇಜು, ಮಲಗುವ ಹಾಸಿಗೆ, ಸ್ನಾನಗ್ರಹ, ಅಡುಗೆ ಮನೆ, ದೇವರ ಮನೆ ಇವೆಲ್ಲ ಶಿಸ್ತುಬದ್ಧ ವಾಗಿದ್ದರೆ ಅದೆಲ್ಲದರ ಜೊತೆ ಬಹು ಸಮಯ ವ್ಯವಹರಿಸುವ ನಮ್ಮ ಮನಸ್ಸು ಕೂಡ ಅಷ್ಟೇ ವ್ಯವಸ್ಥಿತವಾಗುತ್ತ ಹೋಗುತ್ತದೆ.

ನಮ್ಮ ಸುತ್ತಲಿನ ವಸ್ತುಗಳನ್ನು ಸರಿಯಾಗಿ, ಶಿಸ್ತಿನಿಂದ ಇಟ್ಟುಕೂಳ್ಳುವುದರ ಮೂಲಕ ನಮ್ಮ ಆ ವಸ್ತುಗಳ ಜತೆಗಿನ ಅನುಭವ ಕೂಡ ಶಿಸ್ತುಗೊಳ್ಳುತ್ತ ಹೋಗುತ್ತದೆ. ಈ ಮೂಲಕ ಮಾನಸಿಕವಾಗಿ ನಾವು ನಮಗರಿವಿಲ್ಲದಂತೆಯೇ ಶಾಂತಿಯನ್ನು ಹೊಂದು ತ್ತೇವೆ. ನಾವು ಏನನ್ನು ಅನುಭವಿಸುತ್ತೇವೆಯೋ ಅದೇ ನಾವಾಗುತ್ತೇವೆ. ಆ ಕಾರಣದಿಂದ ನಮ್ಮ ಅನುಭವಗಳನ್ನು ಹಸನಾಗಿಸುವ ಶಿಸ್ತನ್ನು ರೂಪಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಈ ಮನೆಯನ್ನು ಶಿಸ್ತಿನಿಂದ ಇಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ – ಆದರೆ ಒಮ್ಮೆ ವ್ಯವಸ್ಥಿತವಾಗಿಸಿಕೊಂಡರೆ
ಮತ್ತು ರೂಢಿಸಿಕೊಂಡರೆ ಅದೊಂದು ಸುಸ್ತಾಗಿಸುವ ಕೆಲಸ ಎಂದೆನಿಸುವುದಿಲ್ಲ. ಹೇಗೆ ಮನೆಯನ್ನು ಶಿಸ್ತಾಗಿರಿಸಿಕೊಳ್ಳುವುದು ಎನ್ನುವುದೇ ಹಲವರ ಪ್ರಶ್ನೆ. ಆ ನಿಟ್ಟಿನಲ್ಲಿ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವು ಒಮ್ಮೆಲೇ ಇಡೀ
ಮನೆಯನ್ನು ಶಿಸ್ತುಗೊಳಿಸುತ್ತೇನೆ ಎಂದು ಹೊರಟರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಹಾಗೆ ಹೊರಟಾಗ
ಹೆಚ್ಚಾಗಿ ಮನೆ ಇನ್ನಷ್ಟು ಚೆಲ್ಲಾಪಿಲ್ಲಿಯಾಗುವ ಸಾಧ್ಯತೆಯೇ ಹೆಚ್ಚು.

ಇದನ್ನು ಹಂತಹಂತವಾಗಿ ಮೊದಲು ಸಾಧಿಸಬೇಕಾಗುತ್ತದೆ. ಅದೊಂದು ಚಿಕ್ಕ ಪ್ರೊಜೆಕ್ಟ್‌. ಶಿಸ್ತುಗೊಳಿಸುವ ಮೊದಲ ಹಂತದಲ್ಲಿ ನೀವು ಅತಿಯಾಗಿ ಬಳಸುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಚಿಕ್ಕ ಜಾಗವನ್ನು ಮೊದಲು ಸರಿಪಡಿಸಿಕೊಳ್ಳಿ. ಬೇಡದ ವಸ್ತುಗಳನ್ನು ಮರು ವಿಚಾರ ಮಾಡದೇ ಎಸೆದುಬಿಡಿ. ಮುಂದೊಂದು ದಿನ ಬೇಕಾಗಬಹುದು ಎನ್ನುವ ವಸ್ತು ಹೆಚ್ಚಾಗಿ ಯಾವತ್ತೂ ಬೇಕಾಗುವುದೇ ಇಲ್ಲ. ನಿಮ್ಮ ಮೇಜಿರಲಿ ಅಥವಾ ಕೊಣೆಯಿರಲಿ – ಹೆಚ್ಚು ಜಾಗ ಖಾಲಿ ಇದ್ದಷ್ಟು ಆ ಜಾಗ ಮನಸ್ಸಿಗೆ ಹತ್ತಿರವಾಗುತ್ತದೆ ಮತ್ತು ಇಷ್ಟವಾಗುತ್ತದೆ. ಹೀಗೆ ಸಂಯೋಜಿಸುವಾಗ ವಸ್ತುವನ್ನು ನಿಮ್ಮ ಕೈಗೆತ್ತಿಕೊಳ್ಳಿ – ಅದು ನಿಮಗೆ ಸಂತೋಷವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ಒಂದು ಕ್ಷಣ ಕಣ್ಣು ಮುಚ್ಚಿ ವಿಚಾರ ಮಾಡಿ. ಸಂತೋಷ ಕೊಡುತ್ತಿದ್ದರೆ ಮಾತ್ರ ಇಟ್ಟುಕೊಳ್ಳಿ – ಇಲ್ಲದಿದ್ದರೆ ಎರಡು ಮನಸ್ಸು ಬೇಡ, ಸೀದಾ ಎಸೆದು ಬಿಡಿ. ನೀವು ಇಟ್ಟುಕೊಳ್ಳುವ ವಸ್ತು ನಿಮ್ಮ ಜೀವನದಲ್ಲಿ ಒಂದು ವ್ಯಾಲ್ಯೂ ಹೊಂದಿರಬೇಕು. ಇದೊಂದು ವ್ಯವಹಾರಿಕ ಪ್ರಶ್ನೋತ್ತರ.

ಹಳೆಯ ಬಾಕ್ಸ್’ಗಳು, ಬಾಕ್ಸ್’‌‌ಗಳು, ಪ್ಲಾಸ್ಟಿಕ್ ಬ್ಯಾಗ್ ಗಳು, ರದ್ದಿ ಪೇಪರ್ ಗಳು, ಬರೆಯದ ಪೆನ್ನುಗಳು, ಬಳಸದ ಮೊಬೈಲ್ ಚಾರ್ಜ್‌ಗಳು ಇವೆಲ್ಲ ನಿಮ್ಮ ಅಮೂಲ್ಯ ಜಾಗವಾದ ಮನೆಯಲ್ಲಿ ಇರಲು ಯೋಗ್ಯವೇ ಎಂದು ಪ್ರಶ್ನಿಸಿಕೊಳ್ಳಿ. ಮುಂದಿನ ಒಂದು ತಿಂಗಳು ಒಂದು ವಸ್ತುವನ್ನು ನೀವು ಬಳಸುವುದಿಲ್ಲ ಎಂದೆನಿಸಿದರೆ ಆ ವಸ್ತು ಬೇಡವೆಂದೇ ಅರ್ಥ. ಕೆಲವು ಸೀಸನ್ ವಸ್ತುಗಳಾದ ಛತ್ರಿ, ರೈನ್ ಕೋಟ್, ಸ್ವೆಟರ್ ಮೊದಲಾದವುಗಳನ್ನು ಶಿಸ್ತಾಗಿ ಮಡಚಿ ಅಟ್ಟಕ್ಕೇರಿಸಿ. ಅದಕ್ಕಿಂತ ಮೊದಲು ಅಟ್ಟದಲ್ಲಿರುವ ಹೆಳೆಯ ಒಡೆದ ಹೆಲ್ಮೆಟ್, ಟಿವಿ ಕವರ್, ವಯರ್, ಹಳೆಯ ಬ್ಯಾಟರಿ ಸೆಲ್‌ಗಳು, ಧೂಳು ಇವನ್ನೆಲ್ಲ ಮನೆಯಿಂದಾಚೆ ಅಟ್ಟಿಬಿಡಿ.

ಬೇಡದ ವಿಚಾರ ಮತ್ತು ಬೇಡದ ವಸ್ತು ಎರಡೂ ಒಂದೇ. ಹೀಗೆ ಎಸೆಯುವಾಗ ಕೆಲವೊಂದು ವಸ್ತುಗಳು ಅವಶ್ಯಕತೆಯಿಲ್ಲದಿ ದ್ದರೂ ಹಲವು ಭಾವನಾತ್ಮಕ ಕಾರಣದಿಂದ ಎಸೆಯಲು ಮನಸ್ಸು ಬರುವುದಿಲ್ಲ. ಮಕ್ಕಳು ಚಿಕ್ಕಂದಿನಲ್ಲಿರು ವಾಗ ಬಳಸಿದ ಬಟ್ಟೆಗಳು, ಬಿಡಿಸಿದ ಚಿತ್ರಗಳು, ಪ್ರೀತಿಯಿಂದ ಕೊಟ್ಟ ಗಿಫ್ಟುಗಳು ಇವೆಲ್ಲ ವಸ್ತುಗಳನ್ನು ಎಸೆಯುವುದು ಅಷ್ಟು ಸುಲಭವಲ್ಲ.

ಇಂತಹ ಸಮಯದಲ್ಲಿ ಒಂದೋ ಎರಡೋ ವಸ್ತುಗಳನ್ನು ಇಟ್ಟುಕೊಂಡು ಉಳಿದವುಗಳಿಗೆ ಕಸದ ಬುಟ್ಟಿಯ ದಾರಿ ತೋರಿಸು ವುದು ಉತ್ತಮ. ವ್ಯರ್ಥ ವಸ್ತುಗಳು ಮನೆಯಿಂದ ಸಾಗಿಹಾಕಿದಂತೆಲ್ಲ ಮನಸ್ಸು ಹಗುರವಾಗುವುದನ್ನು ಗ್ರಹಿಸಿ. ಮನೆಯಲ್ಲಿ ಪ್ರತಿಯೊಂದು ವಸ್ತುವಿಗೆ ಅದರದೇ ಆದ ಒಂದು ಜಾಗವನ್ನು ನಿರ್ಧರಿಸಿ. ಆ ವಸ್ತು ಅದೇ ಜಾಗದಲ್ಲಿರ ಬೇಕು – ಅದೇ ಅದರ ಮನೆ. ನೀವು ಯೂಟ್ಯೂಬ್ ನಲ್ಲಿ declutter house’ ಎಂದು ಹುಡುಕಿದರೆ ಸಾವಿರಾರು ವಿಡಿಯೋಗಳು ಎದುರಿಗೆ ಬಂದು ನಿಲ್ಲುತ್ತವೆ. ಸುಮ್ಮನೆ ಒಂದಿಷ್ಟು ವಿಡಿಯೋಗಳನ್ನು ನೋಡಿ. “Marie Kondo ಎಂದು ಹುಡುಕಿದರೆ ಹತ್ತಾರು ವಿಧಾನಗಳು, ಅದರಲ್ಲಿಯೂ ಬಟ್ಟೆಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ವಿಡಿಯೋ ಸಿಗುತ್ತದೆ. ಆಕೆ ಮನೆ ಶಿಸ್ತುಗೊಳಿಸುವ ವಿಷಯದ ಮೇಲೆ ಪುಸ್ತಕ ಬರೆದ, ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸುಪ್ರಸಿದ್ಧ ಜಪಾನೀ ಮಹಿಳೆ. ಆಕೆಯ ಮನೆ ಸಂಯೋಜಿಸುವ ಪದ್ಧತಿ KonMari Method ಎಂದೇ ಅಮೆರಿಕಾದಲ್ಲಿ ಜನಜನಿತ. ನಿಮಗೆ ಸರಿಹೊಂದುವ ಯಾವುದಾದರೂ ಒಂದು ರೀತಿಯನ್ನು ಆಯ್ದು ಕೊಂಡು ಪಾಲಿಸಿ.

ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಒಮ್ಮೆ ನೀಟ್ ಮಾಡಿಕೊಂಡ ಮನೆಯನ್ನು ಹಾಗೆಯೇ ಶಿಸ್ತಿನಿಂದ ಇಟ್ಟುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ನೇರ ಕಾರಣ Over Possession (ಅವಶ್ಯಕತೆಗಿಂತ ಹೆಚ್ಚಿಗೆ ವಸ್ತುಗಳನ್ನು ಹೊಂದಿರುವುದು) ಮತ್ತು Hyper Consumerism (ಕೊಳ್ಳುಬಾಕತನ). ಮನುಷ್ಯನ ಮನಸ್ಸನ್ನು ಇಲಿಯ ಮನಸ್ಸಿಗೆ ಹಲವಾರು ಕಡೆ ಹೋಲಿಸಲಾಗುತ್ತದೆ. ಇಲಿ ಹೇಗೆ ಬೇಳೆ ಕಾಳುಗಳನ್ನು ಶೇಖರಿಸುತ್ತದೆಯೋ ಹಾಗೆಯೇ ನಾವು ಬಹುತೇಕರು. ಇದನ್ನು Hoarding Disorder ಎಂದು
ಕರೆಯಲಾಗುತ್ತದೆ. ಡಿಸಾರ್ಡರ್ ಎಂದಾಕ್ಷಣ ಹುಚ್ಚು ಎಂದು ಪರಿಭಾವಿಸಬೇಕಿಲ್ಲ. ಈ ಸಿಕ್ಕಸಿಕ್ಕದ್ದನ್ನೆಲ್ಲ ಶೇಖರಿಸುವ ಗುಣ
ತೀರಾ ಸಾಮಾನ್ಯ. ಕೆಲವರ ಮನೆಯಲ್ಲಿ ಕನಿಷ್ಠ ಹತ್ತಿಪ್ಪತ್ತು ಸಾವಿರ ಸಾಮಾನು ಗಳಿರುತ್ತವೆ.

ಹಳೆಯ ಸಾಮಾನುಗಳು, ಹಳೆಯ ಪಾತ್ರೆ, ತುಕ್ಕು ಹಿಡಿದು ಬಳಸದ ಹೋಳಿಗೆ ಮಷಿನ್, ಬಾರ ಕಿತ್ತುಹೋದ ಚಪ್ಪಲಿಗಳು, ನೂರೆಂಟು ವಯರ್‌ಗಳು, ಹಳೆಯ ಪತ್ರಗಳು ಹೀಗೆ ಪಟ್ಟಿ ದೊಡ್ಡದು.. ಅದೆಷ್ಟೋ ವಸ್ತುಗಳು ಸುತರಾಂ ಜೀವಮಾನವಿಡೀ ಬಳಸದೇ ಇರುವ ವಸ್ತುಗಳೇ. ಆದರೂ ಅದನ್ನು ನಾವು ಎಸೆದಿರುವುದಿಲ್ಲ. ಮುಂದೊಮ್ಮೆ ಬಳಸುವ ಸಾಧ್ಯತೆಯೇ ಇಲ್ಲದ ವಸ್ತುವನ್ನು ಕೂಡ ಎಸೆಯದೇ ಹಾಗೆಯೇ ಇಟ್ಟುಕೊಂಡಿರುತ್ತೇವೆ. ಇನ್ನು Hyper Consumerism- ಕೊಳ್ಳುಬಾಕತನ. ಇದನ್ನು ಕೆಲವು ಮನಶಾಸ್ತ್ರಜ್ಞರಂತೂ ಒಂದು ರೋಗವೆಂದೇ ಕರೆಯುತ್ತಾರೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರೋಗ ಸ್ವಲ್ಪ ಜಾಸ್ತಿಯೇ. ಕಾರಣ ಇಲ್ಲೆಲ್ಲ ಸಾಮಾನ್ಯ ಮನುಷ್ಯನ ಖರೀದಿಸುವ ತಾಕತ್ತು ಜಾಸ್ತಿ.
ಸಿಕ್ಕಿದ್ದನ್ನೆಲ್ಲ ಖರೀದಿಸಿ ಮನೆಗೆ ತರುವುದು ಈ ರೋಗದ ಲಕ್ಷಣ. ಅಂಗಡಿಯಲ್ಲಿ ಕಂಡಾಕ್ಷಣ, ಖರೀದಿಸಲು ಹಣವಿರುವ ಏಕೈಕ
ಕಾರಣದಿಂದ ಹಿಂದೆ ಮುಂದೆ ನೋಡದೆ ಎತ್ತಿಕೊಂಡು ಬರುವುದು. ಈಗೀಗ ನಮ್ಮ ದೇಶ ಸೇರಿದಂತೆ ಹಲವು ಅಭಿವೃದ್ಧಿ
ಹೊಂದುತ್ತಿರುವ ದೇಶಗಳಲ್ಲಿ ಕೂಡ ಜನರಲ್ಲಿ ಈ ರೋಗ ಲಕ್ಷಣಗಳು ತೀವ್ರವಾಗಿ ಹರಡುತ್ತಿದೆ. ಈಗಂತೂ ವಸ್ತುಗಳನ್ನು
ಖರೀದಿಸಲು ಅಂಗಡಿಗೆ ಕೂಡ ಹೋಗಬೇಕೆಂದಿಲ್ಲ. ಸುಮ್ಮನೆ ಆನ್‌ಲೈನ್‌ನಲ್ಲೇ ಏನು ಬೇಕೋ ಅದನ್ನು ಖರೀದಿಸುವ ಸಾಧ್ಯತೆ ಯಿರುವುದರಿಂದ ವಸ್ತು ಬೇಕೋ ಬೇಡವೋ ಎನ್ನುವ ವಿಚಾರ ಕೂಡ ಸರಿಯಾಗಿ ಮಾಡದೇ ಖರೀದಿಸಿಬಿಡುತ್ತೇವೆ.
ಅದರಲ್ಲಿಯೂ ನೀವು ಕೊಳ್ಳುಬಾಕತನಕ್ಕೆ ಒಳಗಾದವರಾದರೆ ಬೇಕೋ ಬೇಡವೋ ಎಂದು ವಿಚಾರ ಮಾಡಿದಾಗಲೆಲ್ಲಬೇಕು
ಎಂದೇ ಅನಿಸುತ್ತಾ ಹೋಗುತ್ತದೆ. ನೂರೆಂಟು ಆಫರ್‌ಗಳು ಬೇಡದಿದ್ದರೂ ಖರೀದಿಸಲು ಪ್ರೇರೇಪಿಸುತ್ತವೆ.

ಒಂದು ವಸ್ತುವನ್ನು ಖರೀದಿಸುವ ಮೊದಲು ನೀವು ಎಸೆಯುವ ಮೊದಲು ಕೇಳಿಕೊಳ್ಳುವ ಪ್ರಶ್ನೆಯನ್ನೇ ಕೇಳಿಕೊಳ್ಳಬೇಕು.
ಮನೆಯಲ್ಲಿ ಆ ವಸ್ತುವನ್ನು ಎಲ್ಲಿಡಬೇಕೆಂದು ಮೊದಲೇ ವಿಚಾರ ಮಾಡಿ ಆಮೇಲೆ ಖರೀದಿಸಬೇಕು. ಮನೆಗೆ ತರುವ ಪ್ರತಿ ಯೊಂದು ವಸ್ತುವೂ ನಿಮ್ಮಿಷ್ಟದ ಜಾಗವನ್ನು ತುಂಬುತ್ತದೆ ಎಂದೇ ಅರ್ಥ. ಒಂದು ವಸ್ತು ನಿಮ್ಮ ಜೀವನದ ಭಾಗವಾಗುವುದಕ್ಕೆ ಒಪ್ಪಿಕೊಳ್ಳುವ ಮೊದಲು ಅದರ ಅವಶ್ಯಕತೆಯನ್ನು ಹತ್ತು ಬಾರಿ ಪ್ರಶ್ನಿಸಿಕೊಳ್ಳಬೇಕು.

ಮನೆಯೆನ್ನುವುದು ಜೀವನದ ಅತೀ ಮುಖ್ಯ ಭಾಗ – ಅಲ್ಲಿ ಸಲ್ಲದ ವಸ್ತುಗಳಿಗೆ ಜಾಗವಿಲ್ಲ ಎನ್ನುವ ವಿಚಾರ ಸದಾ ಅಂಗಡಿಗೆ ಹೋದಾಗ, ಆನ್‌ಲೈನ್‌ನಲ್ಲಿ ಜಾಲಾಡುವಾಗ ನೆನಪಾಗುತ್ತಲಿರಬೇಕು. ಜೀವನದ ಸಾರ್ಥಕತೆ ನಾವು ಎಷ್ಟು ವಸ್ತುಗಳನ್ನು ಖರೀದಿಸಿದ್ದೇವೆ, ಗಳಿಸಿದ್ದೇವೆ ಎನ್ನುವುದರ ಮೇಲೆ ನಿರ್ಧರಿತವಾಗುವುದಿಲ್ಲ. ಮನೆ ವಾಸ ಸ್ಥಾನವೇ ಹೊರತು ಗೋದಾಮೂ ಅಲ್ಲ, ವಸ್ತು ಸಂಗ್ರಹಾಲಯವೂ ಅಲ್ಲ. ಸುಮ್ಮನೆ ಹೋಂ ಸ್ವೀಟ್ ಹೋಂ, ಹ್ಯಾಪಿ ಹೋಮ್ ಎಂದು ಬೋರ್ಡ್ ಹಾಕಿಕೊಳ್ಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನಿಮ್ಮ ಮನೆ ಹಿತವಾಗಿರಬೇಕೆಂದರೆ ಒಂದು ಗಟ್ಟಿ ಮನಸ್ಸು ಮಾಡಲೇಬೇಕು. ಒಮ್ಮೆ ಬೇಡದ ವಸ್ತುಗಳನ್ನು ಎಸೆದ ನಂತರ ಮನೆಯನ್ನು ಚೆಂದವಾಗಿಟ್ಟುಕೊಳ್ಳುವುದು ಒಂದು ನಿರಂತರ ತಪಸ್ಸಿನಂತೆ.

ಆ ತಪಸ್ಸಿನಿಂದ ಮಾತ್ರ ಮನೆ ಮಂತ್ರಾಲಯವಾಗುತ್ತದೆ – ಅಲ್ಲಿನ ಮನಸ್ಸುಗಳು ದೇವಾಲಯವಾಗುತ್ತವೆ. Have a good life ahead.