ಮುಂಬೈ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್‌ನ ಅಂಗಸಂಸ್ಥೆ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ 922 ಕೋಟಿ ರೂ. ಜಿಎಸ್‌ಟಿ ನೋಟಿಸ್ ಬಂದಿರುವುದಾಗಿ ವರದಿಯಾಗಿದೆ.
ಮರು ವಿಮೆ ಮತ್ತು ಸಹ ವಿಮೆಯಂತಹ ಸೇವೆಗಳಿಂದ ಸಂಸ್ಥೆಯು ಪಡೆಯುವ ಆದಾಯದ ಮೇಲೆ ಕ್ರಮವಾಗಿ 478.84 ಕೋಟಿ ರೂಪಾಯಿ, 359.70 ಕೋಟಿ ರೂಪಾಯಿ, 78.66 ಕೋಟಿ ರೂಪಾಯಿ ಮತ್ತು 5.38 ಕೋಟಿ ರೂ. ಜಿಎಸ್‌ಟಿ ಕೋರಿ ಡಿಜಿಜಿಐ ಕಂಪನಿಗೆ ನಾಲ್ಕು ನೋಟಿಸ್‌ಗಳನ್ನು ಕಳುಹಿಸಿದೆ.
ಸೆಪ್ಟೆಂಬರ್ 30 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ವರದಿಯಲ್ಲಿ ಆಡಿಟರ್‌ಗಳು ಈ ಮೊತ್ತವನ್ನು ಅನಿಶ್ಚಿತ ಆದಾಯ ವಾಗಿ ತೋರಿಸಬೇಕಾಗುತ್ತದೆ. ಆದರೆ ರಿಲಯನ್ಸ್ ಈ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ. ಅಷ್ಟು ಮಾತ್ರ ವಲ್ಲದೆ ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯು ರಿಲಯನ್ಸ್ ಕ್ಯಾಪಿಟಲ್‌ನ ಒಟ್ಟು ಮೌಲ್ಯದ ಸುಮಾರು ಶೇಕಡ 70 ರಷ್ಟಿದೆ. ಇದು ಸಾಲ ಪರಿಹಾರ ಪ್ರಕ್ರಿಯೆಯಲ್ಲಿದೆ.
ಈ ರಿ- ಇನ್ಶುರೆನ್ಸ್ ಕಮಿಷನ್ ಅನ್ನು ಕಂಪನಿಯು ತನ್ನ ಸಂಸ್ಥೆಯ ಆದಾಯದ ಲೆಕ್ಕಾಚಾರದಲ್ಲಿ ಸೇರ್ಪಡೆ ಮಾಡುತ್ತದೆ. ಹಾಗಿರುವಾಗ ಅದಕ್ಕಾಗಿ ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ ಎಂದು ಡಿಜಿಜಿಐ ಹೇಳಿದೆ. ಇನ್ನು ಸಹ- ವಿಮೆ ವಹಿವಾಟಿನಲ್ಲಿ ಸಹ-ವಿಮಾ ಪ್ರೀಮಿಯಂ ಮೇಲೆ ಜಿಎಸ್‌ಟಿ ಅನ್ವಯವಾಗುವ ಕಾರಣ ಕಂಪನಿಗೆ 359.70 ಕೋಟಿ ರೂಪಾಯಿ ಮೌಲ್ಯದ ಎರಡನೇ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ.