Saturday, 23rd November 2024

ಒಡಿಶಾದಲ್ಲೂ ಜಾತಿ ಸಮೀಕ್ಷೆ ನಡೆಸಿ: ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯ

ಭುವನೇಶ್ವರ: ಬಿಹಾರ ಸರ್ಕಾರದ ಮಾದರಿಯಲ್ಲೇ ರಾಜ್ಯದಲ್ಲೂ ಜಾತಿ ಸಮೀಕ್ಷೆ ನಡೆಸಬೇಕೆಂದು ಒಡಿಶಾದ ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.

‘ನಾಗರಿಕರ ಸಾಮಾಜಿಕ-ಆರ್ಥಿಕ ಚಿತ್ರಣ ಪಡೆಯಲು ಜಾತಿ ಸಮೀಕ್ಷೆ ನಡೆಸುವುದು ಅಗತ್ಯವಾಗಿದೆ. ಜಾತಿ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಒತ್ತಡ ಹಾಕಿದ್ದೇವೆ. ಆದರೆ, ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಶರತ್ ಪಟ್ನಾಯಕ್‌ ಹೇಳಿದರು.

‘ಇತ್ತೀಚೆಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬೇಕೋ ಬೇಡವೋ ಎಂಬಂತೆ ಜಾತಿ ಸಮೀಕ್ಷೆ ನಡೆಸಿದ್ದು, ಅದರ ವರದಿಯನ್ನು ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗದ ಜನಸಂಖ್ಯೆ ಶೇ 43ರಷ್ಟಿದೆ ಎಂದು ಅದು ಹೇಳುತ್ತದೆ. ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸದ ಕಾರಣ ಈ ವರದಿಯನ್ನು ನಂಬಲು ಸಾಧ್ಯವಿಲ್ಲ’ ಎಂದರು.

‘ಜಾತಿ ಸಮೀಕ್ಷೆ ನಿರ್ಣಯ ಅಂಗೀಕರಿಸಲು ಸರ್ಕಾರ ಒಂದು ದಿನದ ವಿಶೇಷ ಅಧಿವೇಶನ ಕರೆಯಬೇಕು. ಎಲ್ಲ ಜಾತಿಗಳ ಅಭಿವೃದ್ಧಿಗೆ ಯೋಜನೆ ಮತ್ತು ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಜಾತಿ ಸಮೀಕ್ಷೆ ಸಹಕಾರಿ ಯಾಗಿದೆ’ ಎಂದು ಹೇಳಿದರು.

ಜಾತಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಆಸಕ್ತಿ ಇಲ್ಲದಂತೆ ತೋರುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸ ಲಾಗುತ್ತದೆ.