Friday, 22nd November 2024

ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲು ತೂರಾಟ: ಓರ್ವನ ಬಂಧನ

ಮೈಸೂರು: ಶಾರದಾದೇವಿ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಿಡಿಗೇಡಿಯೊಬ್ಬ ಕಲ್ಲು ತೂರಾಟ ನಡೆಸಿದ್ದು, ತಕ್ಷಣ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಹೂಟಗಳ್ಳಿಯ ನಿವಾಸಿ ಸತ್ಯಮೂರ್ತಿ(48) ಬಂಧಿತ ಆರೋಪಿ. ಬೈಕ್‌ನಲ್ಲಿ ಸಿಎಂ ಮನೆ ಬಳಿ ಬಂದ ಸತ್ಯಮೂರ್ತಿ, ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಕಲ್ಲುಗಳನ್ನು ಏಕಾಏಕಿ ಸಿಎಂ ಮನೆ ಮೇಲೆ ಎಸೆದಿದ್ದಾನೆ.

ಇದರಿಂದ ಕಿಟಕಿಯ ಗಾಜುಗಳು ಪುಡಿಯಾಗಿವೆ. ತಕ್ಷಣ ಮನೆಯ ಒಳ ಆವರಣದಲ್ಲಿದ್ದ ಪೊಲೀಸರು ಹೊರ ಬಂದು ತಡೆಯಲು ಯತ್ನಸಿದಾಗ ಅವರ ಮೇಲೂ ಕಲ್ಲೆಸೆದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಸಿಎಂ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇರೆಗೆ ಸರಸ್ವತಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಹೂಟಗಳ್ಳಿ ಮತಗಟ್ಟೆಗೆ ಮತದಾನಕ್ಕೆ ತೆರಳಿದ್ದ ಸತ್ಯಮೂರ್ತಿ, ಮತಯಂತ್ರ ವನ್ನು ಒಡೆದು ಹಾಕಿದ್ದ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಾಚ್ಯವಾಗಿ ನಿಂದಿಸಿ ಪೋಸ್ಟ್ ಮಾಡಿದ್ದ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯಮಂತ್ರಿಯವರು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೂ ಬಂದು ಗಲಾಟೆ ಮಾಡಬಹುದು ಎಂದು ವಿಜಯನಗರ ಠಾಣೆ ಪೊಲೀಸರು, ಕಾರ್ಯಕ್ರಮ ಮುಗಿಯುವವರೆಗೂ ಆತನನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದರು.