ಪಾಟ್ನಾ: ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ರೈಲು ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ನಾಲ್ವರು ಪ್ರಯಾಣಿ ಕರು ಮೃತಪಟ್ಟಿದ್ದು, ಹಳಿ ತಪ್ಪಿದ ಪರಿಣಾಮ 70 ಮಂದಿ ಗಾಯಗೊಂಡಿದ್ದಾರೆ.
ದೆಹಲಿ – ಕಾಮಾಖ್ಯ ಈಶಾನ್ಯ ಎಕ್ಸ್ಪ್ರೆಸ್ನ ಆರು ಬೋಗಿಗಳು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಕ್ಸರ್ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ ದುರ್ಘಟನೆ ಸಂಭವಿಸಿದೆ. 23 ಬೋಗಿಗಳನ್ನು ಹೊಂದಿರುವ ರೈಲು ಬೆಳಗ್ಗೆ 7:40ಕ್ಕೆ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ನಿಂದ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ ಎರಡು ಎಸಿ III ಶ್ರೇಣಿಯ ಕೋಚ್ಗಳು ಹಳಿ ತಪ್ಪಿ ಪಕ್ಕಕ್ಕೆ ಉರುಳಿಬಿದ್ದಿವೆ, ಆದರೆ ಇತರ ನಾಲ್ಕು ಬೋಗಿಗಳು ಟ್ರ್ಯಾಕ್ಗಳನ್ನು ಬಿಟ್ಟು ಬೇರೆ ಕಡೆ ಜಿಗಿದಿವೆ ಎಂಬುದನ್ನು ಸೆರೆಯಾದ ಕೆಲವು ದೃಶ್ಯಗಳು ತೋರಿಸುತ್ತಿವೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಬಕ್ಸರ್ ಪೊಲೀಸ್ ವರಿಷ್ಠಾಧಿ ಕಾರಿ ಮನೀಶ್ ಕುಮಾರ್ ತಿಳಿಸಿದ್ದಾರೆ. ಕನಿಷ್ಠ 50 ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ತಕ್ಷಣವೇ ಪರಿಹಾರ ಕಾರ್ಯ ಆರಂಭಿಸಲಾಗಿದೆ. ಆಂಬ್ಯುಲೆನ್ಸ್ಗಳು ಮತ್ತು ವೈದ್ಯರ ತಂಡಗಳು ಸ್ಥಳಕ್ಕೆ ಧಾವಿಸಿವೆ. ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹೆಚ್ಚಿನ ಪರಿಹಾರ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ಕಾಶಿ ಪಾಟ್ನಾ ಜನ ಶತಾಬ್ದಿ ಎಕ್ಸ್ಪ್ರೆಸ್ (15125) ಮತ್ತು ಪಾಟ್ನಾ ಕಾಶಿ ಜನ ಶತಾಬ್ದಿ ಎಕ್ಸ್ಪ್ರೆಸ್ (15126) ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ.
ಪರ್ಯಾಯ ಮಾರ್ಗ: ಪುಣೆ-ದಾನಪುರ್ ಎಸ್ಎಫ್ ಎಕ್ಸ್ಪ್ರೆಸ್ (12149), ಪಾಟ್ಲಿಪುತ್ರ ಎಸ್ಎಫ್ ಎಕ್ಸ್ಪ್ರೆಸ್ (12141), ದಿಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ (12424), ವಿಕ್ರಮಶಿಲಾ ಎಕ್ಸ್ಪ್ರೆಸ್ (12368), ಕಾಮಾಖ್ಯ ಎಕ್ಸ್ಪ್ರೆಸ್ (15623), ಗುವಾಹಟಿ 3) , ರಾಜೇಂದ್ರ ನಗರ ಟರ್ಮಿನಲ್ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ (12310), ಭಾಗಲ್ಪುರ್ ಗರೀಬ್ ರಥ ಎಕ್ಸ್ಪ್ರೆಸ್ (22406), Anvt Rdp ಎಕ್ಸ್ಪ್ರೆಸ್ (22488) ರೈಲುಗಳ ಮಾರ್ಗ ಬದಲಾವಣೆ ಮಾಡಲಾ ಗಿದ್ದು, ಈ ಎಲ್ಲ ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೆ ತಿಳಿಸಿದೆ.
ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರೈಲ್ವೆ ಇಲಾಖೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದೆ.