ಬೆಂಗಳೂರು: ನಗರದ ಹಲವು ಉದ್ಯಮಿಗಳ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಮ್ಮ ಪರಿಶೀಲನೆ ಮುಂದುವರೆಸಿದ್ದಾರೆ.
ನಗರದ ಸುಮಾರು ಹತ್ತಕ್ಕೂ ಅಧಿಕ ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಉದ್ಯಮಿಗಳು, ಜ್ಯುವೆಲರಿ ಶಾಪ್ ಮಾಲೀಕರ ಮನೆ ಮತ್ತು ಕಚೇರಿಗಳಲ್ಲಿ ಪರಿಶೀಲನೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸರ್ಜಾಪುರ ಬಳಿಯ ಮುಳ್ಳೂರು, ಆರ್.ಎಂ.ವಿ ಎಕ್ಸ್ಟೆನ್ಷನ್, ಬಿಇಎಲ್ ಸರ್ಕಲ್, ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಸದಾಶಿವನಗರ, ಮತ್ತಿಕೇರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಪರಿಶೀಲನೆ ಮುಂದುವರೆದಿದೆ.
ಆದಾಯ ತೆರಿಗೆ ವಂಚನೆ ಆರೋಪ ಕಂಡು ಬಂದ ಹಿನ್ನೆಲೆಯಲ್ಲಿ ಚಿನ್ನ ಗಿರವಿ ಮತ್ತು ಖರೀದಿ ಮಾಡುವ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ.
ಕಳೆದ ವಾರ ಕೂಡ ತೆರಿಗೆ ವಂಚನೆ ಆರೋಪದ ಮೇಲೆ ಜ್ಯುವೆಲರಿ ಉದ್ಯಮಿಗಳ ಮೇಲೆ ಐಟಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಕಳೆದ ಬಾರಿ ಸಿಕ್ಕ ದಾಖಲಾತಿಗಳ ಆಧರಿಸಿ ಸದ್ಯ ದಾಳಿ ಮಾಡಲಾಗಿದೆ. ಜೊತೆಗೆ, ಕೆಲ ಜ್ಯುವೆಲರಿ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಮತ್ತೊಮ್ಮೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಮಾರು 120 ಕಾರುಗಳಲ್ಲಿ ಐಟಿ ಅಧಿಕಾರಿಗಳು ಆಗಮಿಸಿ, ಬೆಂಗಳೂರಿನ ಹಲವೆಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.
ಬೆಂಗಳೂರಿನ 15 ಕ್ಕೂ ಹೆಚ್ಚು ಕಡೆ ಕಳೆದ ವಾರ ಅಕ್ಟೋಬರ್ 4 ರಂದು ಬೆಳಗ್ಗೆ ಐಟಿ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು.
ಸೆಪ್ಟಂಬರ್ 27 ರಂದು ನಗರದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಐಟಿ ದಾಳಿ ಮಾಡಿತ್ತು.