Sunday, 24th November 2024

ಪ್ಯಾಲೆಸ್ತೀನಿಯರ ಪರವಿದ್ದ ಮಹಾತ್ಮ ಗಾಂಧಿ

ವೀಕೆಂಡ್ ವಿತ್ ಮೋಹನ್

camohanbn@gmail.com

ಇಸ್ರೇಲ್ ತನ್ನ ಹುಟ್ಟಿನಿಂದಲೂ ಸುತ್ತಲಿನ ಮುಸ್ಲಿಂ ರಾಷ್ಟ್ರಗಳ ದಾಳಿಗಳನ್ನು ಎದುರಿಸಿಕೊಂಡು ಹೋರಾಟದ ಹಾದಿಯಲ್ಲಿ ಬೆಳೆದಿರುವ ದೇಶ. ೨ನೇ ಮಹಾಯುದ್ಧದ ವೇಳೆ ಸರ್ವಾಧಿಕಾರಿ ಹಿಟ್ಲರ್, ಯುರೋಪಿನ ವಿವಿಧ ದೇಶಗಳಲ್ಲಿ ವಾಸವಾಗಿದ್ದ ಸುಮಾರು ೬೦ ಲಕ್ಷ ಯೆಹೂದಿಗಳನ್ನು ಕೊಂದಿದ್ದ. ಗುಂಡು ಹಾರಿಸುವ, ವಿಷಾನಿಲದ ಚೇಂಬರ್‌ಗಳಲ್ಲಿ ಇರಿಸುವ ಮೂಲಕ ಅವರನ್ನು ಸಾಮೂಹಿಕವಾಗಿ ಹತ್ಯೆಮಾಡಲಾಗಿತ್ತು. ಈ ದಾಳಿಯ ನಂತರ ಯೆಹೂದಿಗಳು ತಮ್ಮ ಮೂಲನೆಲೆಯನ್ನು ತೊರೆಯಬೇಕಾಗಿ ಬಂತು. ಯೆಹೂದಿಗಳ ಮನವಿ ಸ್ವೀಕರಿಸಿದ ವಿಶ್ವಸಂಸ್ಥೆಯ ನಿರ್ಣಯದ ಅನ್ವಯ ೧೯೪೮ರಲ್ಲಿ ಇಸ್ರೇಲ್ ಎಂಬ ಪ್ರತ್ಯೇಕ ರಾಷ್ಟ್ರ ಸೃಷ್ಟಿಯಾಯಿತು.

ಇಸ್ರೇಲಿನ ಸುತ್ತ ಈಜಿಪ್ಟ್, ಜೋರ್ಡಾನ್, ಲೆಬನಾನ್, ಸಿರಿಯಾ, ಇರಾನ್‌ನಂಥ ಮುಸ್ಲಿಂ ರಾಷ್ಟ್ರಗಳಿದ್ದವು. ಅರಬ್ಬರ ನಡುವೆ ಯೆಹೂದಿಗಳಿಗೆ ಜಾಗ ನೀಡುವುದು ಮುಸ್ಲಿಂ ರಾಷ್ಟ್ರಗಳಿಗೆ ಇಷ್ಟವಿರಲಿಲ್ಲ. ಇಸ್ರೇಲ್ ದೇಶದ ಉಗಮದ ಪರವಾಗಿ ಜಗತ್ತಿನ ೩೬ ದೇಶಗಳು, ವಿರುದ್ಧವಾಗಿ ೧೩ ದೇಶಗಳು ಮತ ಚಲಾಯಿಸಿದ್ದವು.
ಹೀಗೆ ವಿರುದ್ಧವಾಗಿ ಮತ ಹಾಕಿದ್ದವರ ಪೈಕಿ ೧೨ ಮುಸ್ಲಿಂ ದೇಶಗಳಾಗಿದ್ದರೆ, ಮತ್ತೊಂದು ದೇಶ ಭಾರತ ವಾಗಿತ್ತು. ನೂರಾರು ವರ್ಷಗಳ ಹಿಂದೆ ಯೆಹೂದಿಗಳಿಗೆ ಜಗತ್ತಿನಲ್ಲಿ ಎಲ್ಲಿಯೂ ನೆಲೆ ಸಿಗದಿದ್ದ ಸಮಯದಲ್ಲಿ ಆಶ್ರಯ ನೀಡಿದ್ದ ಏಕೈಕ ದೇಶ ಭಾರತ; ಆದರೆ ಅವರ ನೂತನ ದೇಶದ ಉದಯದ ಸಂದರ್ಭದಲ್ಲಿ ಮಾತ್ರ ಅಂದಿನ ಕಾಂಗ್ರೆಸ್ ಪ್ರಧಾನಿ ನೆಹರು ಮುಸ್ಲಿಂ ರಾಷ್ಟ್ರಗಳ ಜತೆಗೂಡಿ ಇಸ್ರೇಲಿನ ವಿರುದ್ಧ ಮತ ಚಲಾಯಿ ಸಿದ್ದರು.

ಸ್ವಾತಂತ್ರ್ಯಪೂರ್ವದಲ್ಲಿ ೧೯೩೮ರಲ್ಲಿ, ಯೆಹೂದಿಗಳಿಗೆ ಪ್ರತ್ಯೇಕ ರಾಷ್ಟ್ರ ನಿರ್ಮಿಸಬೇಕೆಂಬ ಕೂಗು ಕೇಳಿ ಬಂದಾಗ ಮಹಾತ್ಮ ಗಾಂಧೀಜಿ, ‘ಯೆಹೂದಿಗಳ ಬಗೆಗಿನ ನನ್ನ ಸಹಾನುಭೂತಿಯು ನ್ಯಾಯದ ಅವಶ್ಯಕತೆ ಗಳಿಗೆ ನನ್ನನ್ನು ಕುರುಡಾಗಿಸುವುದಿಲ್ಲ. ಅರಬ್ಬರ ಮೇಲೆ ಯೆಹೂದಿಗಳನ್ನು ಹೇರುವುದು ತಪ್ಪು ಮತ್ತು ಅಮಾನವೀಯ’ ಎಂದಿದ್ದರು. ೧೯೪೭ರಲ್ಲಿ ಅಖಂಡ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿ ಮುಸಲ್ಮಾನರಿಗೆ ಪಾಕಿಸ್ತಾನವೆಂಬ ಮತ್ತೊಂದು ರಾಷ್ಟ್ರದ ಸೃಷ್ಟಿಯಾಗಬೇಕೆಂಬ ಬೇಡಿಕೆಗೆ ಒಪ್ಪಿದ್ದ ಕಾಂಗ್ರೆಸ್, ಯೆಹೂದಿಗಳಿಗೆ ಬೇಕಿದ್ದ ಪ್ರತ್ಯೇಕ ದೇಶದ ವಿಚಾರದಲ್ಲಿ ಮಾತ್ರ ಪ್ಯಾಲೆಸ್ತೀನ್ ವಿಭಜನೆಗೆ ಒಪ್ಪಿರಲಿಲ್ಲ.

ಮೊಹಮ್ಮದ್ ಅಲಿ ಜಿನ್ನಾನ ಮಾತಿಗೆ ಕಟ್ಟುಬಿದ್ದ ಕಾಂಗ್ರೆಸ್, ಮುಸ್ಲಿಂಲೀಗ್ ಪಕ್ಷದ ಬೇಡಿಕೆಗೆ ಒಪ್ಪಿ ಪಾಕಿಸ್ತಾನದ ರಚನೆಗೆ ಕಾರಣವಾಗಿತ್ತು. ಅದಾದ ಒಂದು ವರ್ಷದ ಅಂತರದಲ್ಲಿ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ರಾಷ್ಟ್ರ ರಚನೆಯ ಪರವಾಗಿ ಮಾತ್ರ ಮತ ಚಲಾಯಿಸಿರಲಿಲ್ಲ. ೧೯೫೦ರಲ್ಲಿ ಮೊದಲ ಬಾರಿಗೆ ಜಾಗತಿಕ ಒತ್ತಡದ ನಡುವೆ ಇಸ್ರೇಲನ್ನು ಪ್ರತ್ಯೇಕ ದೇಶವನ್ನಾಗಿ ಭಾರತ ಗುರುತಿಸಿತ್ತು. ಕಾಂಗ್ರೆಸ್ಸಿನ ಅವಧಿಯಲ್ಲಿ ಪ್ಯಾಲೆಸ್ತೀನಿಯರಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗು ತ್ತಿತ್ತು. ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಪ್ಯಾಲೆಸ್ತೀನಿನ ಪರವಾಗಿ ಭಾರತ ಹಲವು ಬಾರಿ ನಿಂತಿತ್ತು.

‘ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಷನ್’ ಅನ್ನು ೧೯೭೪ರಲ್ಲಿ ಪ್ಯಾಲೆಸ್ತೀನಿಯರ ಪ್ರತಿನಿಽಯಾಗಿ ಗುರುತಿಸಿದ ಜಗತ್ತಿನ ಮೊಟ್ಟಮೊದಲ ಮುಸ್ಲಿಮೇತರ ದೇಶ ಭಾರತ. ಕಾಂಗ್ರೆಸ್ ಪಕ್ಷದ ಮುಸಲ್ಮಾನರ ಓಲೈಕೆ ಇಂದು ನಿನ್ನೆಯದಲ್ಲ. ಮುಸಲ್ಮಾನರ ಮತಬ್ಯಾಂಕನ್ನು ಗಟ್ಟಿಯಾಗಿಸಿಕೊಳ್ಳಲು ಅದು ಅಂದಿನಿಂದಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಪರವಾಗಿ ನಿಲ್ಲುತ್ತಾ ಬಂದಿದೆ. ಮೊನ್ನೆ ಪ್ಯಾಲೆಸ್ತೀನಿನ ಹಮಾಸ್ ಉಗ್ರರು ಇಸ್ರೇಲ್‌ನ ನಾಗರಿಕರನ್ನು
ಗುರಿಯಾಗಿಸಿಕೊಂಡು ನೆಲಮಾರ್ಗದಲ್ಲಿ ಮಾತ್ರವಲ್ಲದೆ, ಪ್ಯಾರಾಶೂಟ್ ಮತ್ತು ದೋಣಿಗಳನ್ನು ಬಳಸಿ ವಾಯು ಮತ್ತು ಜಲಮಾರ್ಗಗಳ ಮೂಲಕವೂ ಒಮ್ಮೆಲೇ ದಾಳಿ ನಡೆಸಿದರು.

‘ಹಮಾಸ್’ ಒಂದು ಭಯೋತ್ಪಾದಕ ಸಂಘಟನೆ ಎಂಬುದು ಜಗತ್ತಿಗೇ ತಿಳಿದಿರುವಾಗ, ಹೀಗೆ ಅವರ ದಾಳಿಯಾದ ೨೪ ಗಂಟೆಯೊಳಗೆ ಕಾಂಗ್ರೆಸ್ ಪಕ್ಷ ತನ್ನ ಕೇಂದ್ರ ಸಮಿತಿ ಸಭೆಯಲ್ಲಿ ಪ್ಯಾಲೆಸ್ತೀನಿಯರಿಗೆ ಬೆಂಬಲ ಘೋಷಿಸಿ ಬಿಟ್ಟಿತು. ಹಮಾಸ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಯೆಹೂದಿಗಳ ಪರವಾಗಿ ಮಾತನಾಡದೆ, ಪ್ಯಾಲೆಸ್ತೀನಿಯರ ಪರವಾಗಿ ನಿರ್ಣಯ ಕೈಗೊಂಡಿತು. ಸದ್ಯದಲ್ಲೇ ನಡೆಯಲಿರುವ ಪಂಚರಾಜ್ಯಗಳ ಚುನಾವಣೆ ಮತ್ತು ೨೦೨೪ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿನ ಮುಸ್ಲಿಂ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ಸಲುವಾಗಿ, ದೇಶದ ಹಿತಾಸಕ್ತಿಯನ್ನು ಬದಿಗೊತ್ತಿ ಪ್ಯಾಲೆಸ್ತೀನಿಯರ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್ ಮುಸ್ಲಿಮರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.

ಮುಸ್ಲಿಮರ ಓಲೈಕೆಗೆಂದು ಯಾವ ಮಟ್ಟದ ಕೆಲಸಕ್ಕೂ ಸಿದ್ಧರಿರುವ ಕಾಂಗ್ರೆಸ್ಸಿಗರು, ಮತ್ತೊಮ್ಮೆ ತಮ್ಮ ಓಲೈಕೆ ರಾಜಕಾರಣವನ್ನು ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್ ಪಂದ್ಯಾವಳಿಯ ಪಂದ್ಯವು ಹೈದರಾಬಾದ್‌ನಲ್ಲಿ ನಡೆಯುವ ವೇಳೆ ಪಾಕಿಸ್ತಾನ ತಂಡಕ್ಕೆ ಸ್ಥಳೀಯರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಪಾಕಿಸ್ತಾನದ ಕ್ರಿಕೆಟಿಗರು ತಮ್ಮ ನೆಲದಲ್ಲಿ ಆಡಿದಷ್ಟೇ ಖುಷಿಯಲ್ಲಿದ್ದರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್ ಆಟಗಾರನೊಬ್ಬ, ‘ನನಗೆ ರಾವಲ್ಪಿಂಡಿಯಲ್ಲಿ ಆಡುತ್ತಿರುವಂತೆ ಭಾಸವಾಗುತ್ತಿತ್ತು’ ಎಂದು ಹೇಳಿದ್ದ. ಪಾಕ್ ಆಟಗಾರರು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ಸ್ಥಳೀಯರು ಪಾಕಿಸ್ತಾನಕ್ಕೆ ಜೈಕಾರ ಹಾಕಿ ಸ್ವಾಗತಿಸಿದ್ದರು.

ಮುಸಲ್ಮಾನರ ಅತಿಯಾದ ಓಲೈಕೆ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡ ವಿರುವುದಕ್ಕೆ ಇದಕ್ಕಿಂತಲೂ ಸಾಕ್ಷ್ಯಬೇಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಮತ್ತೊಮ್ಮೆ ಪ್ರತ್ಯೇಕ ಸ್ಥಾನ ಮಾನ ನೀಡುವುದಾಗಿ ಚಿದಂಬರಂ ಹೇಳಿಕೆ ನೀಡಿದ್ದಾರೆ. ಭಯೋತ್ಪಾದಕ ಕೃತ್ಯಗಳು ನಡೆದಾಗಲೂ ಒಂದು ಸಮುದಾಯವನ್ನು ಓಲೈಸುವ, ಅಂಥ ಉಗ್ರ ಸಂಘಟನೆಗಳ ಬೆಂಬಲಕ್ಕೆ ನಿಲ್ಲುವ ಮೂಲಕ ಇಡೀ ಸಮುದಾಯವನ್ನೇ ಇಂಥ ಸಂಘಟನೆಗಳ ಜತೆಗೆ ಜೋಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿರುವುದು ಭಾರತದ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ.

೧೯೭೧ರ ಪಾಕಿಸ್ತಾನ ಯುದ್ಧದ ವೇಳೆ ಬೇಹುಗಾರಿಕಾ ವಿಷಯದಲ್ಲಿ ಭಾರತಕ್ಕೆ ಇಸ್ರೇಲ್ ನೆರವಾಗಿತ್ತು. ಪಾಕ್ ಮೆರೆಯಬಹುದಾಗಿದ್ದ ಹಲವು ತಂತ್ರಗಾರಿಕೆ ಗಳನ್ನು ಇಸ್ರೇಲ್ ಬೇಹುಗಾರಿಕಾ ಸಂಸ್ಥೆ ‘ಮೊಸಾದ್’ ಭಾರತದೊಂದಿಗೆ ಹಂಚಿಕೊಂಡಿತ್ತು, ೧೯೯೯ರ ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ಇಸ್ರೇಲ್ ಶಸಾಸಗಳನ್ನು ಪೂರೈಸಿತ್ತು. ಈ ಯುದ್ಧದ ವೇಳೆ ಭಾರತ-ಪಾಕ್ ಗಡಿರೇಖೆಯನ್ನು ಮೀರಿ ಭಾರತೀಯ ಯುದ್ಧವಿಮಾನಗಳು ದಾಳಿ ನಡೆಸುವುದು ಸಾಧ್ಯ ವಿರಲಿಲ್ಲ. ಆಗ ಭಾರತೀಯ ಗಡಿಯಲ್ಲಿದ್ದುಕೊಂಡೇ ಪಾಕ್ ಸೈನಿಕರ ಮೇಲೆ ದಾಳಿ ನಡೆಸುವಂತಾಗಲು ‘ಮಿರಾಜ್-೨೦೦೦’ ಯುದ್ಧವಿಮಾನಗಳಿಗೆ ಲೇಸರ್ ಕ್ಷಿಪಣಿಗಳನ್ನು ಪೂರೈಕೆ ಮಾಡಿತ್ತು ಇಸ್ರೇಲ್. ಭಾರತಕ್ಕೆ ಇಸ್ರೇಲ್ ನೀಡಲು ಒಪ್ಪಿದ್ದ ಶಸಾಸಗಳನ್ನು ನಿಧಾನವಾಗಿ ಪೂರೈಸುವಂತೆ ಅಮೆರಿಕ ಒತ್ತಡ ಹೇರಿದ್ದರೂ, ಇಸ್ರೇಲ್ ಸೂಕ್ತ ಸಮಯದಲ್ಲಿ ಪೂರೈಸಿ ಭಾರತದ ಪರ ನಿಂತಿತ್ತು.

೧೯೯೮ರ ಭಾರತದ ಪೋಖ್ರಾನ್ ಅಣುಬಾಂಬ್ ಪರೀಕ್ಷೆಯನ್ನು ಪಾಶ್ಚಾತ್ಯ ದೇಶಗಳು ವಿರೋಧಿಸಿದ್ದರೂ ಇಸ್ರೇಲ್ ಬೆಂಬಲಿಸಿತ್ತು. ಸ್ರೇಲ್ ಮತ್ತೊಬ್ಬರ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಹೋಗುವುದಿಲ್ಲ. ೧೯೪೮ರಲ್ಲಿ ತನ್ನ ಮೇಲೆರಗಿದ ಸುತ್ತಲಿನ ಮುಸ್ಲಿಂ ರಾಷ್ಟ್ರಗಳ ವಿರುದ್ಧ ಸೆಣಸಿತ್ತು. ೧೯೬೭ರಲ್ಲಿ ಮತ್ತೊಮ್ಮೆ ಈಜಿಪ್ಟ್, ಜೋರ್ಡಾನ್, ಸಿರಿಯಾ, ಲೆಬನಾನ್ ಯುದ್ಧಕ್ಕೆ ಬಂದಾಗ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಯಿಂದಾಗಿ ಆರೇ ದಿನಗಳಲ್ಲಿ ಯುದ್ಧ ಮುಗಿದಿತ್ತು. ೧೯೭೧ರ ಮ್ಯುನಿಕ್ ಒಲಿಂಪಿಕ್ಸ್‌ನಲ್ಲಿ ಇಸ್ರೇಲಿ ಆಟಗಾರರನ್ನು ಅಹರಿಸಿ ಕೊಂದ ಉಗ್ರರ ವಿರುದ್ಧ ೨೦ ವರ್ಷ ವಿವಿಧ ದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಇಸ್ರೇಲ್ ಎಲ್ಲರನ್ನೂ ಕೊಂದು ಸೇಡು ತೀರಿಸಿಕೊಂಡಿತ್ತು.

ಪ್ಯಾಲೆಸ್ತೀನಿ ಉಗ್ರರು ಇಸ್ರೇಲ್ ಮೇಲೆ ಈ ಮಟ್ಟದ ದಾಳಿ ನಡೆಸಿರುವುದು ಇದೇ ಮೊದಲಲ್ಲ. ೧೯೬೯ರಲ್ಲಿ ಜೋರ್ಡಾನ್‌ನಲ್ಲಿದ್ದ ಪ್ಯಾಲೆಸ್ತೀನಿಯರು ತಮಗೆ ಪ್ರತ್ಯೇಕ ರಾಷ್ಟ್ರ ಬೇಕೆಂದು ಆಗ್ರಹಿಸಿದಾಗ, ೬ ದಿನಗಳ ಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಅರಬ್ಬರು ಅವರೊಂದಿಗೆ ಕೈಜೋಡಿಸಿದರು. ಆಗ ಹುಟ್ಟಿಕೊಂಡ ಪ್ಯಾಲೆಸ್ತೀನಿ ನಾಯಕನೇ ಯಾಸಿರ್ ಅರಾಫತ್. ಜೋರ್ಡಾನ್‌ನ ಜತೆಯಾದ ಇಸ್ರೇಲ್, ಪ್ಯಾಲೆಸ್ತೀನಿಯರ ವಿರುದ್ಧ ಯುದ್ಧಕ್ಕೆ ನಿಂತಿತು. ಆದರೆ ಇಸ್ರೇಲ್‌ಗೆ ಹಿನ್ನಡೆಯಾಯಿತು, ಅರಾಫತ್ ಪ್ಯಾಲೆಸ್ತೀನಿಯರ ಪ್ರಮುಖ ನಾಯಕನಾದ.

ಜೋರ್ಡಾನ್ ನ ಅಧ್ಯಕ್ಷ ಹುಸೇನ್ ಮಾತನ್ನು ಆತನ ಸೈನ್ಯವೇ ಕೇಳಲಿಲ್ಲ. ಆಗ ಪಾಕಿಸ್ತಾನದ ಮಿಲಿಟರಿ ನಾಯಕ ಜಿಯಾ ಉಲ್ ಹಕ್ ತನ್ನ ಸೈನ್ಯದೊಂದಿಗೆ ಬಂದು ಸುಮಾರು ೨೫,೦೦೦ ಪ್ಯಾಲೆಸ್ತೀನಿ ಮುಸ್ಲಿಮರ ಮಾರಣಹೋಮ ನಡೆಸಿದ. ಅರಾಫತ್ ಜೋರ್ಡಾನ್ ಬಿಟ್ಟು ಪ್ಯಾಲೆಸ್ತೀನಿಗೆ ಓಡಿಹೋದ. ಮುಸ್ಲಿಮರ ಪರವಾಗಿರುವ ಪಾಕಿಸ್ತಾನವೇ ಅಂದು ಹೀಗೆ ಪ್ಯಾಲೆಸ್ತೀನಿ ಮುಸ್ಲಿಮರನ್ನು ಕೊಂದುಹಾಕಿತ್ತು; ಇಂದು ಭಾರತದಲ್ಲಿದ್ದು ಕೊಂಡು ಪ್ಯಾಲೆಸ್ತೀನಿಯರ ಪರ ನಿಲ್ಲುವವರು ಈ ಮಾರಣಹೋಮದ ಬಗ್ಗೆ ತುಟಿಬಿಚ್ಚುವುದಿಲ್ಲ.

ಭಾರತವು ಇಸ್ರೇಲ್‌ನ ಬಹುದೊಡ್ಡ ಶಸಾಸ ಖರೀದಿದಾರ ಮಾತ್ರವಲ್ಲದೆ, ಕೃಷಿಯಲ್ಲಿ ಇಸ್ರೇಲ್ ಅಳವಡಿಸಿಕೊಂಡಿರುವ ಆಧುನಿಕ ತಂತ್ರಜ್ಞಾನವನ್ನು ನಮ್ಮಲ್ಲಿಗೆ ತರುವಲ್ಲಿ ಯಶಸ್ವಿ ಯಾಗಿದೆ. ೨೦೧೫ರಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಮೊಟ್ಟ ಮೊದಲ ಬಾರಿಗೆ ಇಸ್ರೇಲ್‌ಗೆ ಭೇಟಿಯಿತ್ತಿದ್ದರು.
ನಂತರ ಪ್ರಧಾನಿ ಮೋದಿಯವರು ೨೦೧೭ರಿಂದ ನಿರಂತರವಾಗಿ ಇಸ್ರೇಲ್‌ಗೆ ಭೇಟಿ ನೀಡುತ್ತಿದ್ದಾರೆ. ನೂರಾರು ವರ್ಷಗಳ ಹಿಂದೆ ಯೆಹೂದಿಗಳಿಗೆ  ಭಾರತೀಯರು ನೀಡಿದ್ದ ಆಶ್ರಯವನ್ನು ನೆನೆದು ಇಸ್ರೇಲ್ ಸದಾ ಭಾರತದ ಪರವಾಗಿ ನಿಲ್ಲುತ್ತಿದೆ.

೧೯೭೧ರ ಪಾಕ್ ಯುದ್ಧದ ವೇಳೆ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧವಿಲ್ಲದಿದ್ದರೂ ನಮಗೆ ನೆರವಾದ ದೇಶ ಇಸ್ರೇಲ್. ಇಂದು ತನ್ನ ಮೇಲೆ ಪ್ಯಾಲೆಸ್ತೀನಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ಯಾಲೆಸ್ತೀನಿಯರ ಮೇಲೆ ಎರಗಿದೆ. ಆದರೆ ಭಾರತದ ಮಿತ್ರ ಇಸ್ರೇಲ್‌ನ ಪರವಾಗಿ ನಿಲ್ಲುವ ಬದಲು ಮತಬ್ಯಾಂಕಿನ ಏಕೈಕ ಕಾರಣಕ್ಕಾಗಿ ಪ್ಯಾಲೆಸ್ತೀನಿ ಉಗ್ರರ ಪರವಾಗಿ ಕಾಂಗ್ರೆಸ್ ನಿಂತಿದೆ. ಸಂಸತ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ
ಅಫ್ಜಲ್ ಗುರುವಿನ ನೇಣುಶಿಕ್ಷೆ ತಪ್ಪಿಸಲು ರಾತ್ರೋರಾತ್ರಿ ತನ್ನ ಪ್ರತಿನಿಽಗಳನ್ನು ನ್ಯಾಯಾಲಯಕ್ಕೆ ಕಳುಹಿಸುತ್ತದೆ. ಪಿಎಫ್ ಐ ಉಗ್ರ ಸಂಘಟನೆಯ ಕಾರ್ಯಕರ್ತ ರನ್ನು ಸೋದರರೆನ್ನುತ್ತದೆ, ಖಲಿಸ್ತಾನಿ ಉಗ್ರರ, ಕಾಶ್ಮೀರದಲ್ಲಿ ಕಲ್ಲುತೂರುವವರ, ದೇಶವನ್ನು ತುಂಡುಮಾಡುವ ‘ಟುಕ್ಡೆ ಟುಕ್ಡೆ’ ಗ್ಯಾಂಗಿನ ಪರವಾಗಿ ನಿಲ್ಲುತ್ತದೆ. ಈಗ ಅದು ಹಮಾಸ್ ಉಗ್ರರ ಪರವಾಗಿ ನಿಲ್ಲುವ ಮೂಲಕ ಮತ್ತೊಮ್ಮೆ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಓಲೈಕೆ ಮುಂದುವರಿಸಿ, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟುಮಾಡಿದೆ.