Sunday, 24th November 2024

ಕೊಲೆಗಳನ್ನು ವೈಭವೀಕರಿಸಿ ಸ್ವಸ್ಥ ಸಮಾಜವನ್ನು ಕಟ್ಟಬಹುದೇ ?

ಡಾ.ಶಿವಕುಮಾರ್

ಚಾಮುಂಡಿ ಮಹಿಷಾಸುರನನ್ನು ಕೊಂದಳು,ವಾಮನ ಬಲಿಚಕ್ರವರ್ತಿಯನ್ನು ಕೊಂದನು, ರಾಮ ರಾವಣನನ್ನು ಕೊಂದನು, ಕೃಷ್ಣ ಕಂಸನನ್ನು ಕೊಂದನು – ಹೀಗೆ ವರ್ಷ ಪೂರ ನಾವು ನಮ್ಮ ಹಬ್ಬಗಳಲ್ಲಿ ಕೊಲ್ಲುವ ಕಥೆ ಗಳನ್ನು ಹಾಡುತ್ತಾ- ಸ್ಮರಿಸುತ್ತ ಬರುತ್ತಿದ್ದೇವೆ.ಬಲ್ಲವರು ದಯಾಮಾಡಿ ಹೇಳಿ : ಎಂದೋ ಯಾವ ಕಾರಣಕ್ಕೋ ನಡೆದ ಕೊಲೆಗಳನ್ನು ಮತ್ತೆ ಮತ್ತೆ ಹೇಳುವುದು ವೈಭವೀಕರಿಸುವುದು ಸ್ವಸ್ಥ ಸಮಾಜದ ಲಕ್ಷಣವೇ ? ಏನೂ ಅರಿಯದ ಮುಗ್ಧ ಮಕ್ಕಳಿಗೆ ಇದು ಯಾವ ಸಂದೇಶ ಕೊಡುತ್ತದೆ? ಕೊಲೆ-ಸುಲಿಗೆಗಳಿಂದ ಮುಕ್ತವಾದ ಸಮಾಜವನ್ನು ಕಟ್ಟಬೇಕೆಂಬುದು ನಮ್ಮೆಲ್ಲರ ಆಶಯ. ಹಾಗು ನಮ್ಮ ದೇಶದ ಕಾನೂನಿನ ಆಶಯವಾಗಿದೆ. ಹಾಗಿರುವಾಗ ” ದುಷ್ಟ ಶಿಕ್ಷಣೆ-ಶಿಷ್ಟ ರಕ್ಷಣೆಯ” ಹೆಸರಿನಲ್ಲಿ ಹಿಂದೆ ನಡೆದಂತಹ ಕೊಲೆ – ರಕ್ತಪಾತಗಳನ್ನು ಮತ್ತೆ ಮತ್ತೆ ವೈಭವೀಕರಿಸಿ ಅವುಗಳನ್ನು ಹಬ್ಬದಂತೆ ಆಚರಿಸುವುದು ಎಷ್ಟು ಸರಿ ?

ಸಾಮಾನ್ಯವಾಗಿ ಕೋಪ-ತಾಪಗಳನ್ನು ದೌರ್ಬಲ್ಯ ಎನ್ನಲಾಗುತ್ತದೆ. ಹಾಗೆ ಕೋಪ- ತಾಪಗಳಿಗೆ ಒಳಗಾಗಿ ಕೊಲ್ಲುವವರನ್ನು ದುರ್ಬಲರು- ಹೇಡಿಗಳು ಎಂದು ಕರೆಯಲಾಗುತ್ತದೆ. ಆದರೆ ನಾವಿಲ್ಲಿ ಕೊಂದವರನ್ನು ವೀರರೆಂದು, ಮಹಾನುಭಾವರೆಂದು, ದೇವರೆಂದು ವೈಭವೀಕರಿಸುತ್ತಿದ್ದೇವೆ. ಕೊಲ್ಲುವವರು ದೇವರು ಹೇಗಾಗುತ್ತಾರೆ ? “ನೀನು ಸದುದ್ದೇಶಕ್ಕಾಗಿ ಕೊಂದಿರುವೆ, ಹಾಗಾಗಿ ನಿನಗೆ ಯಾವ ಶಿಕ್ಷೆಯನ್ನೂ ವಿಧಿಸುವು ದಿಲ್ಲ”ಎಂದು ನ್ಯಾಯಾಲಯಗಳು ಇಂದು ಯಾರಿಗಾದರೂ ತೀರ್ಪು ಕೊಡಲು ಸಾಧ್ಯವೇ ? ಆದರೆ ದೇವರುಗಳ ವಿಚಾರದಲ್ಲಿ ನಾವು ಹಾಗೆ ತೀರ್ಪು ಕೊಟ್ಟಿದ್ದೇವೆ, ಇದು ಸರಿಯೇ ? ಯಾರು ಮಾಡಿದರೂ ಕೊಲೆ-ಕೊಲೆಯೇ ಅಲ್ಲವೇ ? ಕೊಲೆಗಳನ್ನು ಸಮರ್ಥಿಸುವುದು – ವೈಭವೀಕರಿಸುವುದು ಹೊಸತಲೆಮಾರಿನ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಾವು ಯೋಚಿಸಬೇಕಲ್ಲವೇ ?

ನಮ್ಮ ಭಾರತ ದೇಶದಲ್ಲಿ ದುಷ್ಟರೆಂದು ಭಾವಿಸಿದವರನ್ನು ಕೊಂದ ದೇವರುಗಳ ಚರಿತ್ರೆ ಇರುವಂತೆ ಯೇ, ದುಷ್ಟರನ್ನು ಪರಿವರ್ತಿಸಿದ ಮಹಾಮಾನವರ ಚರಿತ್ರೆಗಳೂ ಇವೆ. ಬುದ್ಧ, ಮಹಾವೀರ, ಬಸವಣ್ಣ, ಅಲ್ಲಮಪ್ರಭು, ವಿವೇಕಾನಂದ ಮುಂತಾದ ದೊಡ್ಡ ದೊಡ್ಡ ಅಹಿಂಸಾವಾದಿಗಳ ಪರಂಪರೆಯೇ ನಮ್ಮಲ್ಲಿದೆ.ಈ ಮಹನೀಯರು ತಮ್ಮ ಜೀವಿತದ ಅವಧಿಯಲ್ಲಿ ಎಷ್ಟೊಂದು ಜನ ಹಾದಿ ತಪ್ಪಿದವ ರನ್ನು, ದುಷ್ಟರೆಂದು ಹೆಸರಾದವರನ್ನು ಸರಿದಾರಿಗೆ ತಂದಿದ್ದಾರೆ, ಪರಿವರ್ತಿಸಿದ್ದಾರೆ.

ತಮ್ಮ ಅಪಾರ ವಾದ ಕರುಣೆ – ಶೀಲ ಹಾಗೂ ಮೈತ್ರಿಭಾವದಿಂದ ಸುಂದರವೂ- ಆರೋಗ್ಯಕರವೂ ಆದ ಸಮಾಜವನ್ನು ಕಟ್ಟಿದ್ದಾರೆ. ವೈರದಿಂದ ವೈರದಿಂದ ಶಾಂತ ವಾಗುವುದಿಲ್ಲ, ಪ್ರೀತಿ ಕರುಣೆಗಳಿಂದ, ಕ್ಷಮಾಗುಣ ದಿಂದ ಮಾತ್ರ ವೈರ ಶಾಂತವಾಗುತ್ತದೆ ಎಂದು ಮತ್ತೆ ಮತ್ತೆ ಹೇಳಿ ಹೋಗಿದ್ದಾರೆ. ದಯೆಯೇ ಬೇಕು ಸಕಲ ಜೀವಿಗಳೆಲ್ಲರಲ್ಲಿ ಎಂದು ಮತ್ತೆ ಮತ್ತೆ ಸಾರಿದ್ದಾರೆ. ಇದು ನಮಗೆ ಮಾದರಿಯಾಗಬೇಕಲ್ಲವೇ ? ಇಂತಹವರನ್ನು, ಇಂತಹವರ ವಿಚಾರಗಳನ್ನು ನಾವು ಸದಾ ಹೇಳಿ ಹೊಸತಲೆಮಾರಿನ ಮಕ್ಕಳನ್ನು ದಯಾಳುಗಳನ್ನಾಗಿ ಕರುಣಾಮಯಿಗಳನ್ನಾಗಿ ತಯಾರು ಮಾಡಬೇಕಲ್ಲವೇ ? ಹೀಗೆ ಮಾಡುವುದರಿಂದ ಕೊಲೆ ಸುಲಿಗೆ ಗಳಿಂದ ಮುಕ್ತವಾದ ಸುಂದರ ಸಮಾಜವನ್ನು ಕಟ್ಟಬಹುದಲ್ಲವೇ? ಕೋಪ-ತಾಪಗಳಿಂದ ಮುಕ್ತರಾದ ಪ್ರಬುದ್ಧ ಜನರನ್ನು ನಾವು ಸೃಷ್ಟಿಸಬಹುದಲ್ಲವೇ?.

ಕೊಲ್ಲುವುದು ಧರ್ಮವಲ್ಲ, ಕೊಲ್ಲುವವರು ದೇವರಲ್ಲ, ಕೊಲೆಯನ್ನು ಸಂಭ್ರಮಿಸುವುದು ಸಂಸ್ಕೃತಿಯಲ್ಲ.