ತುಮಕೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (ಎಸ್.ಇ.ಪಿ) ಜಾರಿ ಗೊಳಿಸಬೇಕು ಎಂದು ಎಐಎಸ್ಎಫ್ ರಾಜ್ಯಾಧ್ಯಕ್ಷೆ ವೀಣಾನಾಯಕ್ ಒತ್ತಾಯಿಸಿದರು.
ನಗರದ ರೇವಣ್ಣ ಭವನದಲ್ಲಿ ಎಐಎಸ್ಎಫ್ ಸಂಘಟನೆಯ ವಿದ್ಯಾರ್ಥಿಗಳ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಿರುವ ಸರಕಾರ ಎಸ್.ಇ.ಪಿಯ ಅಧ್ಯಕ್ಷರನ್ನಾಗಿ ರಾಜ್ಯದವರನ್ನು ನೇಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಅಮ್ಜದ್ ಮಾತನಾಡಿ ನಮ್ಮನ್ನು ಆಳುವ ಸರ್ಕಾರಗಳು ಸಾರ್ವತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಹಿಂತೆಗೆದುಕೊಳ್ಳುವ ಮೂಲಕ ಬಂಡವಾಳಶಾಹಿ ಶಾಸಗಿ ಶಿಕ್ಷಣಕ್ಕೆ ಬೆಂಬಲವಾಗಿ ನಿಂತಿವೆ. ಇಂದು ಉನ್ನತ ಶಿಕ್ಷಣ ಕೇವಲ ಉಳ್ಳವರ ಪಾಲಾಗುತ್ತಿದೆ. ಶ್ರೀಮಂತರಿಗೆ ಮಾತ್ರವೇ ಉತ್ತಮ ಶಿಕ್ಷಣ ಕೈಗೆಟಕುವ ಮತ್ತು ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಳಪೆ ಮಟ್ಟದ ಅಸಮಾನ ಶೈಕ್ಷಣಿಕ ವ್ಯವಸ್ಥೆ ದೇಶದಲ್ಲಿ ಇಂದು ಜಾರಿಯಾಗಿರುವುದು ನಮ್ಮ ಕಣ್ಣ ಮುಂದಿದೆ ಎಂದರು.
ಎಐಟಿಯುಸಿ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಮಾತನಾಡಿ ಎಲ್.ಕೆ.ಜಿ ಯಿಂದ ಪಿ.ಜಿವರೆಗೂ ಸಂಪೂರ್ಣ ಉಚಿತ ಹಾಗೂ ವೈಜ್ಞಾನಿಕ ಶಿಕ್ಷಣಕ್ಕಾಗಿ ಉದ್ಯೋಗಾಧಾರಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ, ವಿದ್ಯಾರ್ಥಿ ವೇತನ ನೀಡುವಲ್ಲಿ ವಿಳಂಭ, ಶುಲ್ಕಗಳ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ವಿದ್ಯಾರ್ಥಿಗಳ ಮುಂದಿವೆ, ಕಟ್ಟಡ ನಿರ್ಮಾಣ ಕಾರ್ಯಾದಲ್ಲಿ ತೊಡಗಿರುವ ಕಾರ್ಮಿಕರ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸವಲತ್ತುಗಳು ದೊರೆಯುತ್ತಿಲ್ಲ, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ನೀಡುವ ವಿದ್ಯಾರ್ಥಿ ವೇತನದ ಸಹಾಯ ಧನ ಇದುವರೆಗೂ ಬಿಡುಗಡೆಯಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಉಸ್ತುವಾರಿ ಡಾ.ಎ ಜ್ಯೋತಿ, ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಐಎಸ್ಎಫ್ ಜಿಲ್ಲಾ ಉಸ್ತುವಾರಿ ಗೋವಿಂದರಾಜು, ಎಐಎಸ್ಎಫ್ಐ ಜಿಲ್ಲಾ ಸಂಚಾಲಕ ಚಂದ್ರಶೇಖರ್ಗೌಡ ಮಾತನಾಡಿದರು. ಗೋವಿಂದರಾಜು (ಬಾಬು), ದೊಡ್ಡ ತಿಮ್ಮಯ್ಯ, ರುದ್ರಪ್ಪ, ಬೋಜರಾಜು, ಅಭಿಲಾಷ್, ದೀಪಿಕ, ಚಂದ್ರಶೇಖರ್ಗೌಡ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎಐಎಸ್ಎಫ್ ಜಿಲ್ಲಾ ಸಂಚಾಲಕ ಭಾರ್ಗವ್ ಸ್ವಾಗತಿಸಿ, ರಾಜ್ಯ ಸಹಕಾರ್ಯದರ್ಶಿ ತೇಜಸ್ವಿನಿ ವಂದಿಸಿದರು.