ವಿದೇಶವಾಸಿ
dhyapaa@gmail.com
ಕಳೆದ ವಾರದ ಅಂಕಣದಲ್ಲಿ ಟಾಕಾ ಏರ್ ಲೈನ್ಸ್ನ ವಿಮಾನವೊಂದು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ಘಟನೆ ಹೇಳಿದ್ದೆ. ಕೊನೆಯಲ್ಲಿ, ಆ ವಿಮಾನ ನಡೆಸಿದ ಪೈಲಟ್ ಕ್ಯಾಪ್ಟನ್ ಕಾರ್ಲೋಸ್ ದರ್ದಾನೊಗೆ ಒಂದೇ ಕಣ್ಣು ಎಂದು ಹೇಳಿದ್ದೆ. ಇದನ್ನು ಓದಿದ ಕೆಲವರು, ‘ಒಂದು ಕಣ್ಣಿರುವವರು ಕಾರು, ಲಾರಿಯಂಥ ವಾಹನ
ನಡೆಸುವುದೇ ಕಷ್ಟವಾಗಿರುವಾಗ, ಅಂಥವನೊಬ್ಬ ವಿಮಾನ ಹಾರಿಸುತ್ತಾನೆಂದರೆ ಹೇಗೆ? ಅಷ್ಟಕ್ಕೂ ಅಂಥವರಿಗೆ ಪರವಾನಗಿ ಸಿಗುತ್ತಾ?’ ಎಂಬ ಪ್ರಶ್ನೆಯನ್ನು ನನಗೆ ಕೇಳಿದ್ದುಂಟು. ಇದು ನಿಜಕ್ಕೂ ಕೇಳಲೇಬೇಕಾದ ಪ್ರಶ್ನೆಯೇ.
ಕಾರ್ಲೋಸ್ನ ಕಥೆ ಕೇಳಿದಾಗ ಅವನ ಮೊಮ್ಮಗಳೇ ಇದನ್ನು ನಂಬಿರಲಿಲ್ಲ. ಈ ವಿಷಯದಲ್ಲಿ ನನಗೆ ತಿಳಿದಷ್ಟನ್ನು ಹೇಳುತ್ತೇನೆ. ಏಕೆಂದರೆ ಘಟನೆ ನಡೆದದ್ದು ಅಮೆರಿಕದಲ್ಲಿ, ಅದೂ ಹೆಚ್ಚು ಕಮ್ಮಿ ಮೂರುವರೆ ದಶಕದ ಹಿಂದೆ, ಪೈಲಟ್ ಸೆಲ್ವಡೊರ್ ದೇಶದ ಪ್ರಜೆ! ಕ್ಯಾಪ್ಟನ್ ಕಾರ್ಲೋಸ್ನ ಜೀವನಗಾಥೆ ಮತ್ತು
ಉತ್ತರ ಇಲ್ಲಿದೆ. ಕಾರ್ಲೋಸ್ ಹುಟ್ಟಿದ್ದೇ ಪೈಲಟ್ಗಳ ಪರಿವಾರ ದಲ್ಲಿ. ಆತನ ಮುತ್ತಜ್ಜ, ಅಜ್ಜ, ಅಪ್ಪ ಎಲ್ಲರೂ ಪೈಲಟ್ ಆಗಿದ್ದವರು, ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಿಸಿದವರು. ಈಗ ಅವನ ಒಬ್ಬ ಮಗ ಮತ್ತು ಮಗಳೂ ಅದೇ ಕೆಲಸ ಮಾಡುತ್ತಿದ್ದಾರೆ. ಈ ಪರಿವಾರಕ್ಕೆ ವಿಮಾನ ಹಾರಿಸುವುದು ಕುಲಕಸುಬಿ
ನಂತೆ. ಕಾರ್ಲೋಸ್ಗೆ ಅದು ರಕ್ತಗತವಾಗಿ ಬಂದದ್ದು. ಆದರೆ ಯಾರೂ ಅವನಷ್ಟು ಖ್ಯಾತರಲ್ಲ.
ಉಳಿದವರಿಗೆ ಅಂಥ ಸಂದರ್ಭವೂ ಒದಗಿಬರಲಿಲ್ಲ. ಒಮ್ಮೆ ಬಂದಿದ್ದರೂ ಅವರು ಅಂಥ ವೇಳೆ ಹೇಗೆ ವರ್ತಿಸುತ್ತಿದ್ದರು, ಸಂಕಷ್ಟದ ಸಮಯವನ್ನು ಕಾರ್ಲೋಸ್ ನಷ್ಟೇ ಸಮರ್ಥವಾಗಿ ನಿಭಾಯಿಸುತ್ತಿದ್ದರಾ? ಗೊತ್ತಿಲ್ಲ. ಆದರೆ ಕಾರ್ಲೋಸ್ ಮಾತ್ರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದ, ಅದರಿಂದ ಬಚಾವಾಗಿಯೂ ಬಂದಿದ್ದ. ಅದೂ ಒಂದಲ್ಲ, ಎರಡಲ್ಲ, ೩ ಸಲ! ಅದಕ್ಕಾಗಿಯೇ ಇಂದಿಗೂ ಸೆಲ್ವಡೊರ್ನ ಜನರಿಗೆ ಆತ ರಾಷ್ಟ್ರೀಯ ಖಜಾನೆ. ನಮ್ಮಲ್ಲಿ ಕೆಲವು ತಾತಂದಿರು, ಅಪ್ಪಂದಿರು ಕಾರು, ಬೈಕು ನಡೆಸುವಾಗ ಮೊಮ್ಮಕ್ಕಳನ್ನು, ಮಕ್ಕಳನ್ನು ತೊಡೆಮೇಲೆ ಕೂರಿಸಿಕೊಳ್ಳುವುದುಂಟು. ಆಗಾಗ ಅವರು ಮಕ್ಕಳ ಕೈಯಲ್ಲಿ ಸ್ಟೇರಿಂಗ್ ಕೊಡುವುದೂ ಇದೆ. ಕಾರ್ಲೋಸ್ ಮಗುವಾಗಿದ್ದಾಗಲೂ ಅವನ ಅಜ್ಜ, ಅಪ್ಪ ಅವನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳು ತ್ತಿದ್ದರು.
ಆಗಾಗ ಅವನ ಕೈಗೂ ಯೋಕ್ (ಇದನ್ನು ಕಂಟ್ರೋಲ್ ವೀಲ್, ಕಂಟ್ರೋಲ್ ಕಾಲಂ ಎಂದೂ ಕರೆಯುತ್ತಾರೆ. ಇದು ವಿಮಾನದ ಸ್ಟೇರಿಂಗ್!) ಕೊಡುತ್ತಿದ್ದರು. ಅಂದ ಹಾಗೆ ಇವೆಲ್ಲ ಸಣ್ಣ ವಿಮಾನ, ಗ್ಲೈಡರ್, ಸರಕು ಸಾಗಣೆ ವಿಮಾನ ಗಳಾಗಿರುತ್ತಿದ್ದವೇ ವಿನಾ ಪ್ರಯಾಣಿಕರ ವಿಮಾನ ವಲ್ಲ. ಸುಮಾರು ೫ ದಶಕದ ಹಿಂದೆ ನಿಯಮಗಳೂ ಅಷ್ಟೊಂದು ಕಠಿಣವಾಗಿರಲಿಲ್ಲ. ಆದರೂ ವಿಮಾನ ವಿಮಾನವೇ ತಾನೇ? ಕಾರ್ಲೋಸ್ಗೆ ಇದು ವರವಾಯಿತು. ಉಳಿದ ಮಕ್ಕಳಂತೆ ಆತ ಸಣ್ಣ ಪುಟ್ಟ ಆಟಿಕೆಗಳೊಂದಿಗೆ ಆಡಲೇ ಇಲ್ಲ. ಆತನ ಆಟ, ಪಾಠ, ಪ್ರಯೋಗ ಏನಿದ್ದರೂ ವಿಮಾನದೊಂದಿಗೆ, ವಿಮಾನದಲ್ಲಿ. ತಾನು ಮುಂದೇನಾಗಬೇಕೆಂಬುದನ್ನು
ಆತ ಆಗಲೇ ನಿರ್ಧರಿಸಿದ್ದ. ವಿಮಾನ ಹಾರಿಸುವುದರ ಹೊರತಾಗಿ ಆತನ ತಲೆಯಲ್ಲಿ ಬೇರೇನೂ ಸುಳಿಯುತ್ತಿಲಿಲ್ಲ.
ಎಲ್ಲರಿಗೂ ಮನೆಯೇ ಮೊದಲ ಪಾಠಶಾಲೆ ಯಾದರೆ ಆತನಿಗೆ ವಿಮಾನವೇ ಮೊದಲ ಪ್ರಯೋಗ ಶಾಲೆ. ಈ ವಿಷಯದಲ್ಲಿ (ಮುಂದೆಯೂ) ಆತ ಅದೃಷ್ಟವಂತನೇ. ಕಾರ್ಲೋಸ್ ತನ್ನ ಜೀವನದಲ್ಲಿ ಮೊದಲು ಪಡೆದ ಪರವಾನಗಿಯೇ ವಿಮಾನ ನಡೆಸಲು. ಆತ ಕಾರು ಬೈಕಿನ ಲೈಸನ್ಸ್ ಪಡೆದದ್ದು ನಂತರವೇ. ವಿಮಾನ ಚಾಲನಾ ಪರವಾನಗಿ ಪಡೆದಾಗ ಆತನಿಗಿನ್ನೂ ೧೬ ವರ್ಷ, ಆತ ಇನ್ನೂ ಪ್ರೌಢಶಾಲಾ ವಿದ್ಯಾರ್ಥಿ. ನಿಮಗೆ ತಿಳಿದಿರಬಹುದು, ವಿಮಾನ ಚಾಲಕರ ಅನುಭವ ಅಳೆಯುವುದು ಅವರ ವಯಸ್ಸಿನಿಂದಲ್ಲ, ಅವರಿಗೆ ಎಷ್ಟು ಗಂಟೆ ವಿಮಾನ ಹಾರಿಸಿ ಅನುಭವವಿದೆ ಎನ್ನುವುದರ ಮೇಲೆ.
ಇದನ್ನು ‘ಫ್ಕೈಯಿಂಗ್ ಅವರ್ಸ್’ ಎನ್ನುತ್ತಾರೆ. ಪ್ರೌಢಶಿಕ್ಷಣ ಮುಗಿಸುವ ಹೊತ್ತಿಗೆ ಕಾರ್ಲೋಸ್ ಯಾರ ಸಹಾಯವಿಲ್ಲದೆ ವಿಮಾನ ಹಾರಿಸುತ್ತಿದ್ದ, ೩೫೦ ಹೆಚ್ಚು ಗಂಟೆಗಳಷ್ಟು ಹಾರಾಟದ ಅನುಭವ ವನ್ನು ಜೋಳಿಗೆಗೆ ಸೇರಿಸಿಕೊಂಡಿದ್ದ. ಈ ನಡುವೆ ಕಾರ್ಲೋಸ್ ತನ್ನ ಜೀವನದ ಮೊದಲ ಪರೀಕ್ಷೆ ಎದುರಿಸಿದ್ದ.
ಆಗಲೇ ಆತ ಸಣ್ಣ ಸಂಸ್ಥೆಯೊಂದರಲ್ಲಿ ಪೈಲಟ್ ಕೆಲಸಕ್ಕೆ ಸೇರಿಕೊಂಡಿದ್ದ. ಸಂಸ್ಥೆಯು ಕೃಷಿ ಸಂಬಂಧಿತ ವಸ್ತುಗಳನ್ನು ರಾಜಧಾನಿಯಿಂದ ಬೇರೆ ಹಳ್ಳಿಗಳಿಗೆ ಪೂರೈಸುತ್ತಿತ್ತು. ಎಂದಿನಂತೆ ಅಂದೂ ಅವನ್ನು ತುಂಬಿಕೊಂಡು ಹೊರಟ ಕಾರ್ಲೋಸ್ ತನ್ನ ತಾಣ ತಲುಪುವುದರಲ್ಲಿದ್ದ. ಅಷ್ಟರಲ್ಲಿ ಆತನಿಗೆ ವಿಮಾನದ ಲ್ಯಾಂಡಿಗ್ ಗೇರ್ನಲ್ಲಿ ತೊಂದರೆ ಉಂಟಾದದ್ದು ತಿಳಿಯಿತು. ಆತ ಧೃತಿಗೆಡಲಿಲ್ಲ. ಆ ಪರಿಸ್ಥಿತಿಯಲ್ಲಿ, ತನ್ನಷ್ಟೇ ವಯಸ್ಸಿನ (೧೬-೧೭ ವರ್ಷ ಹಳೆಯದಾದ!) ವಿಮಾನವನ್ನು ಸರಿಯಾಗಿ ಭೂಮಿಗಿಳಿಸುವುದು ಅಸಾಧ್ಯ ಎಂದರಿತ ಆತ ವಿಮಾನವನ್ನು ಆದಷ್ಟು ಭೂಮಿಗೆ ಹತ್ತಿರ ತಂದು, ತಾನು ವಿತರಿಸಬೇಕಿದ್ದ ವಸ್ತುಗಳನ್ನೆಲ್ಲ ಒಂದೊಂದಾಗಿ ಕೆಳಗೆಸೆದಿದ್ದ. ನಂತರವೂ ಆತ ವಿಮಾನವನ್ನು ಕ್ರ್ಯಾಶ್ ಲ್ಯಾಂಡಿಗ್ (ಆಪತ್ಕಾಲದಲ್ಲಿ ವಿಮಾನ ಇಳಿಸುವಿಕೆ) ಮಾಡಲಿಲ್ಲ. ಕಾರಣ,
ಹೊರಡುವ ಮುನ್ನ ವಿಮಾನದಲ್ಲಿ ಭರ್ತಿ ಇಂಧನ ತುಂಬಿಸಲಾಗಿತ್ತು. ಅಷ್ಟು ಇಂಧನವಿರುವಾಗ ಅಸಹಜ ರೀತಿಯಲ್ಲಿ ಭೂಸ್ಪರ್ಶ ಮಾಡಿದರೆ ಅವಘಡಗಳಾಗು ವುದೇ ಹೆಚ್ಚು. ಅದನ್ನರಿತ ಆತ ವಿಮಾನವನ್ನು ೬ ತಾಸು ಗಾಳಿಯಲ್ಲಿಯೇ ಸುತ್ತಿಸಿ, ಇಂಧನ ಮುಗಿಯುತ್ತಿದೆ ಎನ್ನುವಾಗ ಹುಲ್ಲುಗಾವಲಿನಲ್ಲಿ ಇಳಿಸಿದ್ದ.
ಆತನ ಸಮಯಪ್ರಜ್ಞೆ ಎಲ್ಲವನ್ನೂ ಉಳಿಸಿತ್ತು. ತಲುಪಿಸಬೇಕಾದ ವಸ್ತುಗಳನ್ನೂ ತಲುಪಿಸಿ, ವಿಮಾನಕ್ಕೂ ಹಾನಿಯುಂಟಾಗದಂತೆ, ತಾನೂ ಬಚಾವಾಗಿ ಬಂದ ಕಾರ್ಲೋಸ್ ಅಂದು ಹೀರೋ ಆಗಿದ್ದ. ಮೊದಲ ಬಾರಿಗೆ ಆತನ ಕುರಿತು ರಾಷ್ಟ್ರವ್ಯಾಪಿ ಚರ್ಚೆಯಾಯಿತು. ಆಗಿನ್ನೂ ಆತನಿಗೆ ೧೮ ವರ್ಷ! ಬೇರೆಯವರಿಂದ ತನ್ನ ಮಗನ ಸಾಹಸಗಾಥೆ ಕೇಳಿ ಕಾರ್ಲೋಸ್ನ ತಂದೆಯ ಎದೆ ಹಿಗ್ಗಿತ್ತು. ಅಲ್ಲಿಯವರೆಗೂ ಸಣ್ಣ, ಖಾಸಗಿ ವಿಮಾನಗಳನ್ನು ಹಾರಿಸುತ್ತಿದ್ದ ಕಾರ್ಲೋಸ್ನನ್ನು ಆತನ ತಂದೆ ವಾಣಿಜ್ಯ ವಿಮಾನ ನಡೆಸುವ ಪರವಾನಗಿ ಪಡೆಯಲು ಅಮೆರಿಕದ ಫ್ಲೋರಿಡಾಕ್ಕೆ ಕಳುಹಿಸಿದರು.
ಅಗಾಧ ಆಸಕ್ತಿ, ಉತ್ಸಾಹ, ಪರಿಶ್ರಮದಿಂದ ೫ ತಿಂಗಳಿಗೇ ಕಲಿಕೆ ಮುಗಿಸಿದ್ದ ಕಾರ್ಲೋಸ್ ೧೯ನೇ ವರ್ಷಕ್ಕೇ ವಾಣಿಜ್ಯ, ಪ್ರಯಾಣಿಕರ ವಿಮಾನ ಹಾರಿ
ಸಲು ಸಿದ್ಧನಾಗಿದ್ದ. ಅಷ್ಟಕ್ಕೂ ಅವನಿಗೆ ಬೇಕಾದದ್ದು ಅಧಿಕೃತವಾಗಿ ವಿಮಾನ ಹಾರಿಸಲು ಬೇಕಾದ ಪರವಾನಗಿ ಎಂಬ ಕಾಗದದ ತುಂಡು. ಎಲ್ಲಕ್ಕೂ ಮಿಗಿಲಾಗಿ
ಇರಬೇಕಾದ ವಿದ್ಯೆ, ಜ್ಞಾನ ಅವನಲ್ಲಿ ಆಗಲೇ ಹೆಮ್ಮರವಾಗಿತ್ತು.
ಹಿಂತಿರುಗಿ ಬಂದ ಕಾರ್ಲೋಸ್ ಸರಕು ಸಾಗಣೆ ಸಂಸ್ಥೆಯಲ್ಲಿ ಪೈಲಟ್ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಹೆಚ್ಚೇನೂ ಕೆಲಸವಿರುತ್ತಿರಲಿಲ್ಲ. ವಾರಕ್ಕೆ ೨-೩ ದಿನ
ಬಿಡುವು. ಒಂದೆರಡು ದಿನವೂ ಖಾಲಿ ಕೂರದ ಜಾಯಮಾನದ ಅವನು ತಾನು ಮೊದಲು ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಸಂಪರ್ಕಿಸಿದ. ಬಿಡುವಿದ್ದಾಗ ಅಲ್ಪಾವಧಿ ಕೆಲಸ ಮಾಡಲು ಆ ಸಂಸ್ಥೆಯ ವರೂ ಒಪ್ಪಿದರು. ಆಗಾಗ ಆತ ಆ ಸಂಸ್ಥೆಯ ಏರ್ ಟ್ಯಾಕ್ಸಿ ನಡೆಸುತ್ತಿದ್ದ. ಇಂತಿಪ್ಪ ಕಾಲದಲ್ಲಿ ಒಮ್ಮೆ ರಾಜಧಾನಿಯಿಂದ ಸುಮಾರು ೨೫ ನಿಮಿಷದ ದೂರದಲ್ಲಿರುವ ಹೈಡ್ರೋಲಿಕ್ ಡೋಮ್ ನಿರ್ಮಾಣದ ಸ್ಥಳಕ್ಕೆ ಹೋಗಿ, ಪ್ರಮುಖ ಅಧಿಕಾರಿಯೊಬ್ಬರನ್ನು ಅಲ್ಲಿ ಬಿಟ್ಟು ಬರಬೇಕಾಗಿತ್ತು. ಇಟಲಿ ಪ್ರಜೆಯಾದ ಅಧಿಕಾರಿಯ ಜತೆಯಲ್ಲಿ ಆತನ ಪತ್ನಿ, ೬ ವರ್ಷದ ಮಗಳೂ ಇದ್ದಳು.
ಅವರು ಸ್ಥಳ ತಲುಪಿದಾಗ ಅಧಿಕಾರಿಯನ್ನು ಕರೆದುಕೊಂಡು ಹೋಗಲು ಸ್ಥಳದಲ್ಲಿ ಯಾರೂ ಬಂದಿರಲಿಲ್ಲ. ಅವರ ಕಚೇರಿ, ಮನೆ ಇರುವ ಸ್ಥಳಕ್ಕೂ ವಿಮಾನ ಇಳಿದ ಸ್ಥಳಕ್ಕೂ ಸ್ವಲ್ಪ ದೂರವಿದ್ದ ಕಾರಣ ಮುಂದಿನ ಪ್ರಯಾಣ ಸುಲಭವಾಗಿರಲಿಲ್ಲ. ವಿಮಾನವನ್ನು ತಮ್ಮ ಕಚೇರಿಯ ಸ್ಥಳದೆಡೆಗೆ ಹಾರಿಸುವಂತೆ ಅಧಿಕಾರಿ ಕೇಳಿಕೊಂಡರು. ಕಚೇರಿಯ ಮೇಲೆ ವಿಮಾನದ ಹಾರಾಟ ಕಂಡಾಗ ಅಲ್ಲಿರುವವರಿಗೆ ತಮ್ಮ ಅಧಿಕಾರಿ ಬಂದಿದ್ದಾರೆ, ಅವರನ್ನು ಕರೆದುಕೊಂಡು ಬರಲು
ಯಾರಾದರೂ ಹೋಗಬೇಕು ಎಂದು ತಿಳಿಸುವುದು ಅದರ ಉದ್ದೇಶವಾಗಿತ್ತು. ಪುನಃ ಹಾರುವುದಕ್ಕೂ ಮೊದಲು ಅಧಿಕಾರಿಯ ಮಗು ಮೂತ್ರ ವಿಸರ್ಜನೆ
ಮಾಡಬೇಕಿತ್ತು. ಕಾರ್ಲೋಸ್ ಬಾಗಿಲು ತೆಗೆದು ಕೆಳಗೆ ಇಳಿದು ನಿಂತಿದ್ದನಷ್ಟೇ. ಆತನ ಹಿಂದಿನಿಂದ ಬಂದ ಒಂದು ಗುಂಡು ಆತನ ಎಡ ಕಿವಿಯ ಬದಿಯಿಂದ ಕೆನ್ನೆಯೊಳಕ್ಕೆ ನುಗ್ಗಿ ಕಣ್ಣಿನ ಹತ್ತಿರ ದಿಂದ ಹೊರಚಿಮ್ಮಿತು.
ಕೂಡಲೇ ವಿಮಾನದೊಳಕ್ಕೆ ಸೇರಿಕೊಂಡ ಕ್ಯಾಪ್ಟನ್ ಇಂಜಿನ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ. ಗ್ರಹಚಾರ ಕೆಟ್ಟರೆ ಎಲ್ಲ ಒಟ್ಟೊಟ್ಟಿಗೇ ಬರುತ್ತದ ಎಂಬಂತೆ ವಿಮಾನ ಸ್ಟಾರ್ಟ್ ಆಗಲಿಲ್ಲ. ಕೆಲವು ಸಲ ಯತ್ನಿಸಿದ ನಂತರ ಸ್ಟಾರ್ಟ್ ಆಯಿತು. ಅಷ್ಟರಲ್ಲಿ ನಾಲ್ಕೈದು ಗುಂಡುಗಳು ವಿಮಾನವನ್ನು ತಾಗಿದ್ದವು. ಅವೆಲ್ಲ
ಲಗೇಜ್ ಕಂಪಾರ್ಟ್ಮೆಂಟ್ ಭಾಗಕ್ಕೆ ತಾಗಿದ್ದರಿಂದ ಯಾವ ನಷ್ಟವಾಗಲಿಲ್ಲ. ಆ ವೇಳೆ ಯಾರು, ಏಕೆ, ಎಲ್ಲಿಂದ ಗುಂಡು ಹಾರಿಸುತ್ತಿದ್ದಾರೆ ಎಂದು ಯಾರಿಗೂ ಅರ್ಥವಾಗಲಿಲ್ಲ. ಆದರೂ ಅವರ ಕಣ್ಣಿಗೆ ಬೀಳದೇ ಪಾರಾಗುವುದು ಅವಶ್ಯವಾಗಿತ್ತು. ಆದ್ದರಿಂದ ಸಾಧ್ಯವಾದಷ್ಟೂ ಕೆಳಗೆ, ಮರಗಳ ನಡುವೆ ವಿಮಾನ ಹಾರಿಸಿದ ಕಾರ್ಲೋಸ್. ಸ್ವಲ್ಪ ದೂರ ಹೋದ ನಂತರ ತನ್ನ ಅಂಗಿ ರಕ್ತದಿಂದ ತೋಯ್ದು ಕೆಂಪಾಗಿದ್ದನ್ನು ಗಮನಿಸಿದ.
ಕೆನ್ನೆಯ ಭಾಗ ಛಿದ್ರವಾಗಿತ್ತು. ಯಾವುದಾದರೂ ಬಟ್ಟೆ ಕೊಡುವಂತೆ ದಂಪತಿಯನ್ನು ಕೇಳಿದ. ಅವರಂತೂ ಭಯಗ್ರಸ್ತರಾಗಿದ್ದರು. ಅಂತೂ ಅವರಿಂದ ಒಂದು
ಬಟ್ಟೆ ಪಡೆದು, ಕೆನ್ನೆಗೆ ಅದುಮಿಟ್ಟುಕೊಂಡು ತಿರುಗಿ ರಾಜಧಾನಿಯತ್ತ ಹೊರಟ. ಆತನ ಸ್ಥಿತಿ ನೋಡಿದ ಅಧಿಕಾರಿ ಗಾಬರಿಗೊಂಡಿದ್ದ. ಆತನ ಪತ್ನಿ ಹೆದರಿ
ಮಗುವಿನೊಂದಿಗೆ ಸೀಟಿನಡಿ ಬಗ್ಗಿ ಕುಳಿತಿದ್ದಳು. ಅವರಲ್ಲಿ ಧೈರ್ಯ ತುಂಬಿ, ೨೫-೩೦ ನಿಮಿಷದಲ್ಲಿ ನಿಲ್ದಾಣ ತಲುಪಿದ. ಅಧಿಕಾರಿಯ ಕುಟುಂಬದವ
ರನ್ನು ಸುರಕ್ಷಿತವಾಗಿ ಇಳಿಸಿ, ತಾನು ಅಂಬುಲೆನ್ ನಲ್ಲಿ ಮಲಗುವ ಹೊತ್ತಿಗೆ ಆತ ಅರೆ ಪ್ರಜ್ಞಾವಸ್ಥೆಯಲ್ಲಿದ್ದ. ಅಷ್ಟಕ್ಕೂ ಗುಂಡು ಹಾರಿಸಿದ್ದು ಯಾರು ಗೊತ್ತಾ? ಆಗಷ್ಟೇ ಸೆಲ್ವಡೊರ್ ದೇಶದಲ್ಲಿ ಅಂತರ್ಯುದ್ಧ ಆರಂಭವಾಗಿತ್ತು. ಆ ಯುದ್ಧದಲ್ಲಿ ಅವರು ಮೊದಲು ಹಾರಿಸಿದ ಗುಂಡೇ ಅದು!
ಈ ಘಟನೆ ನಡೆಯುವಾಗ ಕಾರ್ಲೋಸ್ಗೆ ೨೩ ವರ್ಷ! ಆಸ್ಪತ್ರೆಗೆ ಸೇರಿ, ಚಿಕಿತ್ಸೆ ಪಡೆದ ೩ನೇ ದಿನಕ್ಕೇ ಕೆಲಸಕ್ಕೆ ಹಾಜರಾಗಿದ್ದ ಕಾರ್ಲೋಸ್. ಆದರೆ ಆತ ಎಡಗಣ್ಣನ್ನು ಕಳೆದುಕೊಂಡಿದ್ದ. ತಾನು ಇನ್ನು ಮುಂದೆ ವಿಮಾನ ಹಾರಿಸಬಹುದಾ? ತಿಳಿಯುವುದು ಹೇಗೆ? ಘಟನೆ ನಡೆದು ೩ ದಿನವಾಗಿತ್ತಷ್ಟೇ, ಅದೇ ಸಂಸ್ಥೆಯ ಏರ್ ಟ್ಯಾಕ್ಸಿಯಲ್ಲಿ ಮಿತ್ರನೊಂದಿಗೆ ಆತ ಬಾನಿಗೆ ಜಿಗಿದಿದ್ದ. ತಾನು ಮುಂಚೆ ಮಾಡುತ್ತಿದ್ದ ಎಲ್ಲಾ ಕಸರತ್ತುಗಳನ್ನೂ ಮಾಡಿಯೇ ಆತ ಕೆಳಗಿಳಿದಿದ್ದ. ಆತನ ಮೇಲೆ ಅಷ್ಟು ಭರವಸೆಯನ್ನು ಆ ಸಂಸ್ಥೆಯೂ ಇಟ್ಟಿತ್ತು. ಆದರೆ ನಿಜವಾದ ಸವಾಲು ಪರವಾನಗಿ ನವೀಕರಣದ್ದಾಗಿತ್ತು.
ಒಂದು ಕಣ್ಣಿಲ್ಲದ ವನಿಗೆ ವಿಮಾನ ನಡೆಸಲು ಪರವಾನಗಿ ಸಿಗಬಹುದಾ ಅಥವಾ ಇದ್ದ ಪರವಾನಗಿ ಉಳಿಸಿಕೊಳ್ಳಬಹುದಾ? ಆತ ಮೊದಲು ಮಾಡಿದ ಕೆಲಸ, ತಪಾಸಣೆಗೊಳಗಾಗಿ ವೈದ್ಯರಿಂದ ಶಿಫಾರಸು ಪಡೆದು ಮುಂದಿನ ಪರೀಕ್ಷೆಗೆ ಅವಕಾಶ ಒದಗಿಸಿಕೊಡುವಂತೆ ಕೇಳಿಕೊಂಡದ್ದು. ಅದಕ್ಕೆ ಸಮ್ಮತಿಸಿದ ನಂತರ ತಜ್ಞವೈದ್ಯರ ಮತ್ತು ಪೈಲಟ್ಗಳ ಸಮ್ಮುಖ ಆತ ೩ ಬಾರಿ ಪರೀಕ್ಷೆ ಎದುರಿಸಿದ. ಯಾವ ಪರೀಕ್ಷೆಯಲ್ಲೂ ಆತನನ್ನು ತೆಗೆದು ಹಾಕುವಂತಿರಲಿಲ್ಲ. ಒಂದೇ ವಿಷಯವೆಂದರೆ ಆತನಿಗೆ ಒಂದು ಕಣ್ಣಿರಲಿಲ್ಲ. ಉಳಿದಂತೆ ಎರಡು ಕಣ್ಣಿರುವವರಿಗಿಂತ ಆತ ಯಾವುದಕ್ಕೂ ಕಮ್ಮಿ ಇರಲಿಲ್ಲ. ಘಟನೆ ನಡೆದ ೩ ತಿಂಗಳೊಳಗೆ ಪುನಃ ವಿಮಾನ ಹಾರಿಸುವ ಪರವಾನಗಿ ಪಡೆದಿದ್ದ. ಆದರೆ ಸಂಸ್ಥೆಯವರು ಅವನಿಗೆ ಪೈಲಟ್ ಅಲ್ಲ, ಕೋ ಪೈಲಟ್ (ಸಹಾಯಕ) ಆಗಿ ಕೆಲಸ ಮಾಡಲು
ಸೂಚಿಸಿದ್ದರು. ಅದಕ್ಕಾತ ಒಪ್ಪಿದ್ದ.
ಅದಾಗಿ ೩ ವರ್ಷದ ನಂತರ, ನಿರಂತರ ಕಾರ್ಯ ಕ್ಷಮತೆ ತೋರಿ, ೨೭ನೇ ವರ್ಷಕ್ಕೆ ಪುನಃ ಪ್ರಮುಖ ಪೈಲಟ್ ಹುದ್ದೆ ಪಡೆದ. ಆಗ ಆತ ಟಾಕಾ ಸಂಸ್ಥೆಯ
ಲ್ಲಿದ್ದ. ಬೋಯಿಂಗ್ ವಿಮಾನ ಹಾರಿಸಲು ತರಬೇತಿ ಪಡೆದ, ಸಶಕ್ತನಾಗಿ ಕೆಲಸ ಮಾಡುತ್ತಿದ್ದ. ಅದಾಗಿ ೨ ವರ್ಷದ ನಂತರದ ಘಟನೆಯೇ ಕಳೆದ ವಾರದ
ಅಂಕಣದಲ್ಲಿ ಬರೆದದ್ದು. ಇಲ್ಲಿ ಗಮನಿಸಬೇಕಾದ್ದೆಂ ದರೆ ಕಾರ್ಲೋಸ್ಗೆ ಕೆಲಸಲ್ಲಿದ್ದ ಶ್ರದ್ಧೆ, ಭರವಸೆ, ಪ್ರೀತಿ. ಅದೇ ಅವನನ್ನು ಕಾಪಾಡಿತಾ? ಗೊತ್ತಿಲ್ಲ. ಆತ ಕೆಲಸವನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನಾ? ಇಲ್ಲ ಎನ್ನುವುದಕ್ಕೆ ಪುರಾವೆ ಸಾಲದು. ಏಕೆ ಗೊತ್ತಾ? ೬೨ನೇ ವಯಸ್ಸಿನಲ್ಲಿರುವ ಆತ ಈಗಲೂ
ವಿಮಾನ ಹಾರಿಸುತ್ತಾನೆ. ಕೇವಲ ಹಾರಿಸುವುದಲ್ಲ, ಅದರಲ್ಲಿ ಕಸರತ್ತು (ಏರೋಬ್ಯಾಟಿಕ್ಸ್) ಮಾಡುತ್ತಾನೆ, ಮಾಡುವುದನ್ನೂ ಕಲಿಸುತ್ತಾನೆ. ಆತ ವಿಮಾನವೇರಿ
ಆಕಾಶಕ್ಕೆ ನೆಗೆದರೆ ಯಾವ ಮಾಯಗಾರನಿಗೂ ಕಮ್ಮಿ ಇಲ್ಲ. ಆದ್ದರಿಂದಲೇ ಆತ ಆ ದೇಶದ ಕಣ್ಮಣಿ.
ವಿಮಾನ ಚಾಲನೆಯ ನೈಜ ತರಬೇತಿ ನೀಡಬೇಕಾ ದದ್ದು ಭೂಮಿಯ ಮೇಲಲ್ಲ, ಆಕಾಶದ ಮಧ್ಯದಲ್ಲಿ ಎಂದು ಬಲವಾಗಿ ನಂಬಿದವ ಆತ. ಆ ಕಾಲದಲ್ಲಿ ಜಿಪಿಎಸ್ ಇರಲಿಲ್ಲ, ನೇವಿಗೇಶನ್ ಗಳು ಸುಮಾರಾಗಿ ಸಹಕರಿಸುತ್ತಿದ್ದವಾದರೂ ನೂರಕ್ಕೆ ನೂರರಷ್ಟು ಅವನ್ನು ನಂಬುವಂತಿರಲಿಲ್ಲ. ಆದ್ದರಿಂದ ಪೈಲಟ್ಗಳು ಜತೆಯಲ್ಲೇ ನಕಾಶೆಯನ್ನಿಟ್ಟುಕೊಳ್ಳುತ್ತಿದ್ದರು. ಆ ಕಾಲದಲ್ಲಿ ಹೆಚ್ಚಿನ ಅಪಘಾತಗಳಾಗುತ್ತಿದ್ದುದು ಮಾನವ ಪೈಲಟ್ಗಳಿಂದ. ಈಗ ತಂತ್ರ ಜ್ಞಾನ ಮುಂದುವರಿದಿದೆ. ಆಟೊ ಪೈಲಟ್ ಮೋಡ್ ಗೆ ಹಾಕಿ ಕುಳಿತರೆ, ಟೀ, ಕಾಫಿ ಕುಡಿಯುವುದು ಬಿಟ್ಟು ತಾಸುಗಟ್ಟಲೆ ಪೈಲಟ್ಗೆ ಹೇಳಿಕೊಳ್ಳುವಂಥ ದೊಡ್ಡ ಕೆಲಸವಿರುವುದಿಲ್ಲ. ಆದರೆ ಈ ದಿನಗಳಲ್ಲಿ ತಂತ್ರಜ್ಞಾನದ ನ್ಯೂನತೆಯಿಂದ ವಿಮಾನ ಅಪಘಾತಗಳು ಆಗುವುದು ಹೆಚ್ಚು. ತಂತ್ರಜ್ಞಾನ ಕೈಕೊಟ್ಟರೆ ಏನು ಮಾಡಬೇಕೆಂಬ ಮಾಹಿತಿ ಪೈಲಟ್ಗಳಿಗೂ ಇರುವು ದಿಲ್ಲ. ಎಷ್ಟೋ ಸಲ ಚಾಲಕರ ಸಮಯಪ್ರಜ್ಞೆಯಿಂದ ಅವಘಡಗಳು ತಪ್ಪಿದ ಅಥವಾ ತೀವ್ರತೆ ಕಮ್ಮಿಯಾದ ಉದಾಹರಣೆಗಳಿವೆ. ಆದ್ದರಿಂದ ಚಾಲಕರಿಗೆ ಪರವಾನಗಿಯೊಂದಿಗೆ ಚತುರಮತಿಯೂ ಅವಶ್ಯಕ. ೩ ಅನಾಹುತಗಳನ್ನು ತಪ್ಪಿಸಿದ ಕ್ಯಾಪ್ಟನ್ ಕಾರ್ಲೋಸ್ ದರ್ದಾನೊ ಇದಕ್ಕೆ ಅತ್ಯುತ್ತಮ ಉದಾಹರಣೆ.