Monday, 25th November 2024

ಲಕ್ಕಿ ಡ್ರಾ ಮೂಲಕ ನೂತನ ಪ್ರಧಾನ ಅರ್ಚಕರ ಆಯ್ಕೆ

ಶಬರಿಮಲೆ: ಮುವಾಟ್ಟುಪುಳ ಎನನಲ್ಲೂರು ಪುತಿಲ್ಲಾತ್ ಮನ ಪಿ.ಎನ್.ಮಹೇಶ್ ನಂಬೂತಿರಿ ಅವರು ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ನೂತನ ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿದ್ದಾರೆ.

ಮಾಲಿಕಪ್ಪುರಂ ಮುಖ್ಯ ಅರ್ಚಕರಾಗಿ ತ್ರಿಶೂರ್ ವಡಕೆಕಾಡ್ ಪೂಂಗಟ್ ಮನದ ಪಿ.ಜಿ.ಮುರಳಿ ಆಯ್ಕೆಯಾದರು. ಲಕ್ಕಿ ಡ್ರಾ ಮೂಲಕ ನೂತನ ಪ್ರಧಾನ ಅರ್ಚಕರ ಆಯ್ಕೆ ನಡೆಯಿತು.

ದೇವಾಲಯದ ಆವರಣವಾದ ಶಬರಿಮಲೆ ಸನ್ನಿಧಾನಂನಲ್ಲಿ ಪ್ರಧಾನ ಅರ್ಚಕರ ಆಯ್ಕೆಗೆ ಚೀಟಿ ಎತ್ತುವ ಕಾರ್ಯಕ್ರಮ ನಡೆಯಿತು. ಪ್ರಧಾನ ಅರ್ಚಕರ ಆಯ್ಕೆಯ ಡ್ರಾಗೆ ಒಟ್ಟು 17 ಅರ್ಚಕರು ಶಾರ್ಟ್​ ಲಿಸ್ಟ್​ ಆಗಿದ್ದರು. ಮೊದಲಿಗೆ ಶಬರಿಮಲೆ ಪ್ರಧಾನ ಅರ್ಚಕರ ಆಯ್ಕೆಯ ಡ್ರಾ ನಡೆಯಿತು. ಆ ಡ್ರಾದಲ್ಲಿ ಮಹೇಶ್ ನಂಬೂತಿರಿ ಅವರ ಹೆಸರು ಮೊದಲು ಬಂದಿದೆ. ಮಹೇಶ್ ನಂಬೂತಿರಿ ಪ್ರಸ್ತುತ ಪರಮೆಕ್ಕಾವು ಸಹಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಆಯ್ಕೆಯಾದ ಖುಷಿಯಲ್ಲಿ ಪ್ರತಿಕ್ರಿಯಿಸಿದ ಮಹೇಶ್ ನಂಬೂತಿರಿ, “ಪಾರಮೆಕ್ಕಾವ್‌ ದೇವಸ್ಥಾನದಲ್ಲಿ ಅರ್ಚಕನಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪನ ಸೇವೆ ಮಾಡುವ ಭಾಗ್ಯ ದೊರಕಿದೆ. ಹೊಸ ನೇಮಕಾತಿ ಆಗಿರುವುದು ಗುರುಗಳ ಆಶೀರ್ವಾದ” ಎಂದು ಹೇಳಿದರು.

ಶಬರಿಮಲೆ ದೇವಸ್ಥಾನದ ಪ್ರಧಾನ ಅರ್ಚಕರ ಹುದ್ದೆಗೆ ಮಹೇಶ್​ ನಂಬೂತಿರಿ ಅರ್ಜಿ ಸಲ್ಲಿಸಿರುವುದು ಇದು 11ನೇ ಬಾರಿ. ಪಂದಳಂ ಅರಮನೆಯ ಮಕ್ಕಳು, ವೈದೇ ವರ್ಮಾ ಮತ್ತು ನಿರುಪಮಾ ಜಿ.ವರ್ಮಾ ಲಾಟ್ ಆರಿಸಿದರು.

ಶಬರಿಮಲೆಯಲ್ಲಿ ಎರಡು ತಿಂಗಳ ಅವಧಿಯ ಮಂಡಲ-ಮಕರ ವಿಳಕ್ಕು ತೀರ್ಥಯಾತ್ರೆಯ ಋತು ನವೆಂಬರ್ 16 ರಿಂದ ಪ್ರಾರಂಭವಾಗಲಿದೆ.