Friday, 22nd November 2024

ಜೆಡಿಎಸ್ ರಾಜ್ಯ ಹಂಗಾಮಿ ನೂತನ ಅಧ್ಯಕ್ಷರಾಗಿ ಹೆಚ್.ಡಿ.ಕುಮಾರಸ್ವಾಮಿ ನೇಮಕ

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದ್ದು ಹಂಗಾಮಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು, ಸದಸ್ಯರು, ಶಾಸಕರು ಒಳಗೊಂಡಂತೆ ಪಕ್ಷ ಸಂಘಟನೆಗೆ ಸಂಬಂಧಿಸಿ ದಂತೆ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಜೆಡಿಎಸ್ ರಾಜ್ಯ ಘಟಕ ವಿಸರ್ಜನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾಗಿದ್ದು ವಜಾಗೊಂಡ ಸಿ.ಎಂ.ಇಬ್ರಾಹಿಂ ಅಧಿಕಾರ ಕಳೆದುಕೊಂಡಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಹೆಚ್.ಡಿ.ದೇವೇಗೌಡರು ಮಾತನಾಡಿ , ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ರಾಜ್ಯ ಘಟಕವನ್ನು ವಿಸರ್ಜನೆ ಮಾಡಲಾಗಿದೆ. ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಹಾಗೂ ಮುಂದಿನ ಚುನಾವಣೆವರೆಗೂ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹಂಗಾಮಿ (ಅಡ್ ಹಾಕ್) ರಾಜ್ಯಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದರು.

ರಾಜ್ಯ ಘಟಕದ ಕಾರ್ಯದರ್ಶಿಯಾಗಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಾರ್ಯ ನಿರ್ವಹಿಸಲಿದ್ದಾರೆ. ಹೆಚ್.ಡಿ‌.ಕುಮಾರಸ್ವಾಮಿ ಅವರ ಜತೆ ಕಾರ್ಯನಿರ್ವಹಿಸಲು ಇನ್ನು ಮೂರು ದಿನದಲ್ಲಿ ಕೆಲವು ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ದೇವೇಗೌಡರು ತಿಳಿಸಿದರು.

ಸಿ.ಎಂ.ಇಬ್ರಾಹಿಂ ಅವರ ಬಗ್ಗೆ ಯಾವ ತೀರ್ಮಾನ ಮಾಡಲಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, ರಿಮೂವ್ ಮಾಡಲಾಗಿದೆ. ನೀವು ರಾಜ್ಯ ಘಟಕ ವಿಸರ್ಜನೆ ಮಾಡಲಾಗಿದೆ ಎಂದು ಭಾವಿಸಬಹುದು ಎಂದು ಹೇಳಿದರು.