ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿಶ್ವವಾಣಿ- ವಿಶ್ವೇಶ್ವರ ಭಟ್
ಡಿಜಿಟಲ್ ಮಾಧ್ಯಮದ ಪೈಪೋಟಿಯನ್ನು ಮೀರಿದ ಮುದ್ರಣ: ಹತ್ತು ಸಾವಿರಕ್ಕೂ ಅಧಿಕ ಪುಸ್ತಕ ಮಳಿಗೆ
ಫ್ರಾಂಕ್ ಫರ್ಟ್(ಜರ್ಮನಿ): ಎಲ್ಲಿ ನೋಡಿದರೂ ಅಂದವಾಗಿ ಜೋಡಿಸಿಟ್ಟ ಪುಸ್ತಕಗಳ ಮಳಿಗೆಗಳು, ಹೊಸ ಪುಸ್ತಕಗಳ ಘಮಲು, ಆಕರ್ಷಕ ಮುಖಪುಟ ಗಳ ಚಿತ್ತಾಕರ್ಷಕ ಪುಸ್ತಕಗಳು, ಇಂದಷ್ಟೇ ಬಿಡುಗಡೆಯಾದ ಪುಸ್ತಕಗಳ ಆಳೆತ್ತರದ ರಾಶಿ, ಎಲ್ಲ ಮಳಿಗೆಗಳ ಮುಂದೆಯೂ ಸಾಲುಗಟ್ಟಿ ನಿಂತ ಅಕ್ಷರ ಪ್ರೇಮಿಗಳು, ಸಾಮಾನ್ಯ ಎಲ್ಲ ಮಳಿಗೆಗಳಲ್ಲೂ ಪ್ರಕಾಶಕರು, ಮಾರಾಟಗಾರರು, ಮುದ್ರಕರ ವ್ಯವಹಾರ ಮಾತುಕತೆ, ಆಯಾ ದೇಶಗಳ ಪ್ರಸಿದ್ಧ ಲೇಖಕರ ಸುತ್ತುವರಿದ ಅವರ ಅಭಿಮಾನಿಗಳು, ಸೆಲಿಗಾಗಿ ಮುಗಿಬಿದ್ದ ಓದುಗರು, ಅಲ್ಲಲ್ಲಿ ಸಾಹಿತ್ಯ ಗೋಷ್ಠಿ, ಸಂವಾದ-ಚರ್ಚೆ, ಹೊಸ ವಿನ್ಯಾಸಗಳ ಪುಸ್ತಕಗಳ ಪ್ರದರ್ಶನ, ಮುದ್ರಣ ಸಾಧ್ಯತೆ ಅನಾವರಣಗೊಳಿಸುವ ವೈವಿಧ್ಯಮಯ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದ ಪುಸ್ತಕ ಪ್ರಿಯರು, ನೂರಕ್ಕೂ ಹೆಚ್ಚು ದೇಶಗಳ ಪುಸ್ತಕಗಳ ಮಳಿಗೆಗಳ ಮುಂದೆ ಆಯಾ ದೇಶದ ಅಕ್ಷರಪ್ರಿಯರ ಅಭಿಮಾನದ ಸಂಭ್ರಮ ಆಚರಣೆ, ಇಸ್ರೇಲ್ ಪರವಾಗಿ ನಿಂತ ಪುಸ್ತಕ ಮೇಳದ ಸಂಘಟಕರ ಧೋರಣೆ ಖಂಡಿಸಿ ಪ್ರತಿಭಟನೆ, ಸಂಘಟಕರ ನಿಲುವು ಬೆಂಬಲಿಸಿ ಜೈಕಾರ… ವಿಶ್ವದ ಅತಿದೊಡ್ಡ ಮತ್ತು ಅತಿ ಪುರಾತನ ಪುಸ್ತಕ ಮೇಳ ಅಥವಾ ಪುಸ್ತಕ ಜಾತ್ರೆ ಎಂದು ಕರೆಯಿಸಿಕೊಂಡ ಫ್ರಾಂಕ್ ಫರ್ಟ್ ಪುಸ್ತಕಮೇಳದ ಮೊದಲ ದಿನ ಇಲ್ಲಿನ ಅಕ್ಷರದ ಅಂಗಳದಲ್ಲಿ ಕಂಡ ಪರಿವಿಡಿ ಯಿದು.
೫೦೦ ವರ್ಷಗಳ ಇತಿಹಾಸವಿರುವ, ಆದರೆ ಜರ್ಮನ್ ಪಬ್ಲಿಷರ್ಸ್ ಅಂಡ್ ಬುಕ್ ಸೆಲ್ಲರ್ಸ್ ಅಸೋಸಿಯೇಷನ್‌ನ ಅಂಗಸಂಸ್ಥೆಯಾಗಿರುವ ‘ಫ್ರಾಂಕ್ ಫರ್ಟ್ ಬುಕ್ಮೆಸ್ಸೇ’ ಕಳೆದ ೭೫ ವರ್ಷ ಗಳಿಂದ ಸಂಘಟಿಸಿಕೊಂಡು ಬರುತ್ತಿರುವ ಈ ಪುಸ್ತಕ ಮೇಳದಲ್ಲಿ ಈ ಸಲ ೧೦ ಸಾವಿರಕ್ಕೂ ಅಧಿಕ ಪುಸ್ತಕ ಮಳಿಗೆ ಗಳು ಈ ವರ್ಷದ ಪುಸ್ತಕಮೇಳಕ್ಕೆ ಕಳಶಪ್ರಾಯವಾಗಿವೆ. ಐದು ದಿನಗಳ ಕಾಲ ನಡೆಯುವ ಈ ಪುಸ್ತಕಮೇಳದ ಮೊದಲ ಮೂರು ದಿನ ಪುಸ್ತಕ ವ್ಯಾಪಾರ, ವಹಿವಾಟು, ಒಡಂಬಡಿಕೆ, ಕೃತಿ ಸ್ವಾಮ್ಯ ಮಾರಾಟ, ಮಾರಾಟ ಹಕ್ಕು ವಿನಿಮಯ, ಪುಸ್ತಕಗಳ ವಿದೇಶಿ ಮಾರಾಟ ಪರವಾನಿಗಿ ಒಪ್ಪಂದ, ಲೇಖಕರು ಮತ್ತು ಪ್ರಕಾಶಕರ ಮುಖಾಮುಖಿ, ಪರಿಚಯಕ್ಕೆ ಮೀಸಲು. ಕೊನೆಯ ಎರಡು ದಿನ ಸಾರ್ವಜನಿಕರಿಗೆ ಪ್ರವೇಶ. ಅಹೀಗಾಗಿ ಮೊದಲ ಮೂರು ದಿನ ಪುಸ್ತಕ ಮಾರಾಟ ಇರುವುದಿಲ್ಲ. ಪುಸ್ತಕೋದ್ಯಮದಲ್ಲಿ ನಿರತರಾಗಿರುವವರಿಗೆ ತಮ್ಮ ವ್ಯವಹಾರ ಕುದುರಿಸಿಕೊಳ್ಳಲು ವೇದಿಕೆಯಾಗಿ ಈ ಪುಸ್ತಕಮೇಳ ಕಾರ್ಯ ನಿರ್ವಹಿಸುತ್ತದೆ.
ಹೀಗಾಗಿ ಜಗತ್ತಿನ ಪ್ರತಿಷ್ಠಿತ ಪ್ರಕಾಶಕರೆಲ್ಲರನ್ನೂ ಒಂದೇ ಸೂರಿನಡಿಯಲ್ಲಿ ನೋಡುವ ಏಕಮಾತ್ರ ತಾಣ ಇದಾಗಿದೆ. ಈ ಸಲ ಯುರೋಪ್ ಮತ್ತು ಅಮೆರಿಕದ ಜತೆಗೆ, ಭಾರತ, ಆಸ್ಟ್ರೇಲಿಯಾ, ಜಪಾನ್, ಸಿಂಗಾಪುರ, ಚೈನಾ, ದುಬೈ, ಸೌದಿ ಅರೇಬಿಯಾ, ಕತಾರ್, ಒಮಾನ್, ಆಫ್ರಿಕಾ ಮತ್ತು ಮಧ್ಯ ಏಷ್ಯಾ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಗಮನಾರ್ಹ.
ಎಪ್ಪತ್ತೈದು ವರ್ಷಗಳ ಹಿಂದೆ ಕೇವಲ ೨೦೫ ಜರ್ಮನ್ ಪ್ರಕಾಶಕರಿಂದ ಆರಂಭವಾದ ಈ ಪುಸ್ತಕಮೇಳ ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು
ವೃದ್ಧಿಸಿಕೊಳುತ್ತ, ಪುಸ್ತಕೋದ್ಯಮವನ್ನು ಉತ್ತೇಜಿಸುವ ಅತ್ಯಂತ ಮಹತ್ವದ ಘಟನೆಯಾಗಿ ಮಾರ್ಪಟ್ಟಿದೆ. ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಮುದ್ರಿತ ಪುಸ್ತಕಗಳ ಮಹತ್ವ ಕಮ್ಮಿಯಾಗಿಲ್ಲ ಎಂಬ ಸಂದೇಶವನ್ನು ಮನದಟ್ಟು ಮಾಡಿಕೊಡಲು ಈ
ವರ್ಷದ ಪುಸ್ತಕ ಮೇಳ ಆಶಯವನ್ನು ಹೊಂದಿದೆ. ಪುಸ್ತಕಮೇಳವನ್ನು ಉದ್ಘಾಟಿಸುತ್ತ ಮಾತಾಡಿದ ಮೇಳದ ನಿರ್ದೇಶಕ ಜೂರ್ಗನ್ ಬೂಸ್, ನ ದೃಶ್ಯ
ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದತ್ತ ತಮ್ಮ ಗಮನವನ್ನು ಹರಿಸಿದರೂ, ಮುದ್ರಿತ ಪುಸ್ತಕಗಳ ಮಹತ್ವವನ್ನು
ಕಡೆಗಣಿಸಲಾಗದು. ಹತ್ತು ವರ್ಷಗಳ ಹಿಂದೆಯೇ ಕಿಂಡಲ್ ಮತ್ತು ಎಲೆಕ್ಟ್ರಾನಿಕ್ ಪುಸ್ತಕಗಳು ಬಂದರೂ, ಮುದ್ರಿತ ಪುಸ್ತಕಗಳ ಓದಿನ ಖುಷಿಯನ್ನು ಕಸಿದುಕೊಳ್ಳಲು ಸಾಧ್ಯವಾಗಿಲ್ಲ. ಮುದ್ರಣ ತಂತ್ರಜ್ಞಾನ ದದ ಕ್ರಾಂತಿಯ ಫಲದಿಂದ ಮುದ್ರಿತ ಪುಸ್ತಕಗಳ ಓದಿನ ಸಂತೃಪ್ತಿಗೆ ಹೆಚ್ಚು ಹೆಚ್ಚು ಜನ
ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದರು.
ಇಂದು ಹೊಸ ಭಾಷೆಯಲ್ಲಿ ಬರೆಯುವ, ವಿಭಿನ್ನವಾಗಿ ಯೋಚಿಸುವ, ವಿಶಿಷ್ಟ ಶೈಲಿಯಲ್ಲಿ ಬರೆಯುವ ಹೊಸ ಪೀಳಿಗೆಯ ಲೇಖಕರು ಪುಸ್ತಕೋದ್ಯಮಕ್ಕೆ ಹೊಸ ಆಶಾಕಿರಣವಾಗಿ ಬಂದಿದ್ದಾರೆ. ಸ್ಲೊವೇನಿಯಾ, ಎಸ್ತೋನಿಯ, ಫಿನ್ಲ್ಯಾಂಡ್, ಡೆನ್ಮಾರ್ಕ, ಖಜಕಿಸ್ತಾನ್, ಅರ್ಮೇನಿಯ, ಜಾರ್ಜಿಯಾ, ಉಕ್ರೇನ್ ಸೇರಿದಂತೆ, ಸಣ್ಣ ಪುಟ್ಟ ದೇಶಗಳ ಹೊಸ ತಲೆಮಾರಿನ ಲೇಖಕರ ಪುಸ್ತಕ ಆಯಾ ಭಾಷೆಗಳಲ್ಲಿ ಅನುವಾದಗೊಂಡು ಪುಸ್ತಕ ಮಳಿಗೆಗಳಿಗೆ ಲಗ್ಗೆಯಿಡುತ್ತಿವೆ. ಫಿಜಿ, -ರೋ ಐಲ್ಯಾಂಡ್ ನಂಥ ಸಣ್ಣ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪುಸ್ತಕಮೇಳಗಳು, ಸಾಹಿತ್ಯ ಜಾತ್ರೆಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ವಿಶ್ವವಾಣಿ’ಯೊಂದಿಗೆ ಮಾತಾಡಿದ ಜೂರ್ಗನ್ ಬೂಸ್, ಕಂಪ್ಯೂಟರ್ ಮತ್ತು ಮೊಬೈಲ್ ಇಲ್ಲದ ಯುಗದಲ್ಲಿ
ಪುಸ್ತಕಗಳಿಗೆ ಪೈಪೋಟಿಯೇ ಇರಲಿಲ್ಲ. ಆಗ ಪ್ರಕಟವಾಗುತ್ತಿದ್ದ ಪುಸ್ತಕಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಪುಸ್ತಕಗಳು ಮುದ್ರಿತ ವಾಗುತ್ತಿದೆ. ಒಂದು ಪುಸ್ತಕವನ್ನು ಹತ್ತು- ಹಲವು ರೂಪಗಳಲ್ಲಿ ಪ್ರಕಟಿಸುವುದು ಸಾಧ್ಯವಾಗಿದೆ. ಪುಸ್ತಕ ಓದುವ ಡಿಜಿಟಲ್ ಮಾಧ್ಯಮಗಳಿಂದ ಓದುಗರು ಮುದ್ರಿತ ಪುಸ್ತಕದೆಡೆಗೆ ಹೊರಳುತ್ತಿ್ದ್ದಾರೆ. ಅದಕ್ಕೆ ಮುದ್ರಿತ ಪುಸ್ತಕಗಳ ಮಾರಾಟ ಹೆಚ್ಚಾಗಿರುವುದೇ ಸಾಕ್ಷಿ ಎಂದು ಹೇಳಿದರು.
ಈ ಸಲದ ಪುಸಕಮೇಳದಲ್ಲಿ ಲಿಟರರಿ ಏಜೆಂಟರುಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಮತ್ತು ಆರು ನೂರಕ್ಕೂ ಹೆಚ್ಚು
ಸಮಾಲೋಚನಾ ಕೋಣೆಗಳನ್ನು ಕಾಯ್ದಿರಿಸಿರುವುದು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು ಪ್ರಕಟಣೆಯಾಗುವುದರ
ಸೂಚನೆ. ಲಿಟರರಿ ಏಜೆಂಟರು ಪುಸ್ತಕೋದ್ಯಮದ ಮುಂಗಾರು ಮಳೆ (Early Showers) ಇದ್ದಂತೆ. ಅವರು ಪುಸ್ತಕೋದ್ಯಮದ ದಿಕ್ಸೂಚಿ ಇದ್ದಂತೆ’ ಎಂದು ಅವರು ಹೇಳಿದರು.
ಪ್ರತಿವರ್ಷವೂ ಪುಸ್ತಕಗಳ ಕಾಪಿರೈಟ್ ಮತ್ತು ಮಾರಾಟ ಪರವಾನಗಿ ಪುಸ್ತಕಮೇಳದ ಪ್ರಮುಖ ಬಿಂದು. ಆದರೆ ಈ ಸಲ ನೂರಕ್ಕೂ ಹೆಚ್ಚು ಜನಪ್ರಿಯ ಸಿನಿಮಾ ನಿರ್ಮಾಪಕರು, ಪ್ರಕಾಶಕರು ಮತ್ತು ಲೇಖಕರಿಂದ ಪುಸ್ತಕ ಆಧರಿತ ಸಿನಿಮಾ ನಿರ್ಮಾಣಕ್ಕಾಗಿ ಅನುಮತಿ ಪಡೆಯಲು ಆಗಮಿಸಿರುವುದು ವಿಶೇಷ ಎಂದು ಅವರು ಹೇಳಿದರು.
ಯುರೋಪಿನಲ್ಲಿ ಕಳೆದ ಐದು ವರ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಕೋವಿಡ್ ಮತ್ತು ಆನಂತರದ ದಿನಗಳಲ್ಲಿ ಮುದ್ರಿತ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಅಮೆರಿಕದಲ್ಲಿ ಆಡಿಯೋ ಪುಸ್ತಕವನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದ ಸ್ಪ್ಯಾನಿಷ್ ಭಾಷಾ ಪ್ರಕಾಶಕರು ಕಳೆದ ಒಂದು ವರ್ಷದಲ್ಲಿ ಇಪ್ಪತ್ತು ಸಾವಿರ ಬೇರೆ ಬೇರೆ ಶೀರ್ಷಿಕೆಗಳ ಆಡಿಯೋ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಫ್ರಾಂಕ್ ಫರ್ಟ್ ಪುಸ್ತಕಮೇಳ ಜಗತ್ತಿನ ಪುಸ್ತಕ ಓದುವ ಆಸಕ್ತಿಯನ್ನು ಅಳೆಯುವ, ಪುಸ್ತಕೋದ್ಯಮ ಸಾಗುತ್ತಿರುವ ದಿಕ್ಕನ್ನು ತೋರಿಸುವ ದಾರಿದೀಪವಾಗಿ ಮಾರ್ಪಟ್ಟಿದೆ ಎಂದು ಪುಸ್ತಕ ಮೇಳದ ಸಂಘಟಕರು ಅಭಿಪ್ರಾಯಪಟ್ಟರು.
ಜಾಗತಿಕ ಪುಸ್ತಕೋದ್ಯಮದ ಮಹತ್ವದ ತಿರುವು, ಬದಲಾವಣೆ ಮತ್ತು ಹೊಸ ಹೆಜ್ಜೆಯನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಫ್ರಾಂಕ್ ಫರ್ಟ್ ಪುಸ್ತಕಮೇಳದ ಮುಖ್ಯ ಉದ್ದೇಶಗಳಂದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನ್ನು ಮುದ್ರಣ ಮಾಧ್ಯಮದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಪ್ರತ್ಯೇಕ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ GI ಪುಸ್ತಕೋದ್ಯಮದ ಚಹರೆಯನ್ನೇ ಬದಲಿಸಲಿದೆ.
ಅನಾಮಧೇಯರಿಗೂ ಆದರ
ಫ್ರಾಂಕ್ ಫರ್ಟ್ ಪುಸ್ತಕಮೇಳದಲ್ಲಿ ಪ್ರತಿವರ್ಷ ಹಸ್ತಪ್ರತಿಗಳನ್ನು ಹಿಡಿದು ಸಾವಿರಾರು ಲೇಖಕರು ಬರುತ್ತಾರೆ. ಇವರಿಗೆ ಪುಸ್ತಕ ಪ್ರಕಟಿಸುವ ವಿಧಾನ, ಒಳಸುಳಿಗಳು ಗೊತ್ತಿರುವುದಿಲ್ಲ. ಇಂಥವರ ಪುಸ್ತಕಗಳನ್ನು ಪ್ರಕಟಣೆ ಮಾಡಲು ಯಾವ ಪ್ರಕಾಶಕರೂ ಮುಂದೆ ಬರುವುದಿಲ್ಲ. ಹ್ಯಾರಿ ಪಾಟರ್ ಬರೆದ ಜೆ.ಕೆ. ರೋಲಿಂಗ್ ಕೂಡ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ತಮ್ಮ ‘ಮಹತ್ವಾಕಾಂಕ್ಷಿ’ ಕೃತಿಯ ಹಸ್ತಪ್ರತಿಯನ್ನು ಹಿಡಿದು ಬಂದಿದ್ದರು. ಇವರಿಗೆ ಅವರವರ ದೇಶದಲ್ಲಿ ಯಾರೂ ಹೆಚ್ಚು ಕಿಮ್ಮತ್ತು ಕೊಡುವುದಿಲ್ಲ. ಆದರೆ ಈ ಪುಸ್ತಕಮೇಳದಲ್ಲಿ ಅಂಥ ಅನಾಮಧೇಯ ಲೇಖಕರಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಜೆ.ಕೆ. ರೋಲಿಂಗ್ ಥರದ ಒಂದಿಬ್ಬರು ಲೇಖಕರಾದರೂ ಈ ಮೇಳದಿಂದ ಜಗತ್ತಿಗೆ ಪರಿಚಯವಾಗಲಿ ಎಂಬುದು ಉದ್ದೇಶ.
ಪುಸ್ತಕ-ರಾಷ್ಟ್ರ ನಿರ್ಮಾಣ
ಈ ವರ್ಷದ ಪುಸ್ತಕಮೇಳದಲ್ಲಿ ಅಫ್ಘಾನಿಸ್ತಾನದಪುಸ್ತಕ ಮಳಿಗೆ ಸಾಹಿತ್ಯಾಸಕ್ತರ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಆಫ್ಘಾನ್ ಪುಸ್ತಕ ಮಳಿಗೆ
ಫ್ರಾಂಕ್ ಫರ್ಟ್ ಮೇಳವನ್ನು ಪ್ರವೇಶಿಸಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು ಐದು ಸಾವಿರ ಪುಸ್ತಕಗಳು ಅಫ್ಗಾನಿಸ್ತಾನದಲ್ಲಿ ಪ್ರಕಟ ವಾಗಿವೆ. ಆ ದೇಶದಲ್ಲಿ ತಾಲಿಬಾನ್ ಆಡಳಿತ ಕೊನೆಗೊಂಡ ಬಳಿಕ, ಪುಸ್ತಕೋದ್ಯಮ ನಿಧಾನವಾಗಿ ಚಿಗುರುತ್ತಿದೆ. ಪುಸ್ತಕಗಳಿಲ್ಲದೇ ಯಾವ ದೇಶವನ್ನೂ ಕಟ್ಟಲು ಸಾಧ್ಯವಿಲ್ಲ, ಪುಸ್ತಕಗಳಿಂದಲೇ ದೇಶವನ್ನು ಕಟ್ಟಬೇಕು’ ಎಂಬ ಆ ದೇಶದ ಮಳಿಗೆಯಲ್ಲಿ ಕಂಡ ಘೋಷವಾಕ್ಯ ಬದಲಾಗುತ್ತಿರುವ
ಸನ್ನಿವೇಶವನ್ನು ಮಾರ್ಮಿಕವಾಗಿ ಬಣ್ಣಿಸಿದೆ.