ಮುಂಬೈ: ಹಿಟ್ ಆಯಂಡ್ ರನ್ ಕೇಸ್( 2018) ಗೆ ಸಂಬಂಧಿಸಿದಂತೆ ಹಿರಿಯ ನಟ ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ನಟನ ಮೇಲಿತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಹಿರಿಯ ನಟನ ಉಸಿರಾಟದಲ್ಲಿ ಆಲ್ಕೋಹಾಲ್ ವಾಸನೆ ಗಮನಿಸಿದ ವೈದ್ಯರ ಸಾಕ್ಷ್ಯವನ್ನು ಆಧರಿಸಿ ಈ ಶಿಕ್ಷೆ ವಿಧಿಸಲಾಗಿದೆ. 2018ರಲ್ಲಿ ಅಪಘಾತ ನಡೆದ ಸಂದರ್ಭ ಆಲ್ಕೋಹಾಲ್ ಪರೀಕ್ಷೆಗೆ ರಕ್ತದ ಮಾದರಿ ನೀಡದೇ, ಪೊಲೀಸ್ ತನಿಖೆಗೆ ಸಹಕಾರ ನೀಡಿರಲಿಲ್ಲ.
2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ ಅವರ ಗಾಡಿ ಅಪಘಾತಕ್ಕೊಳಗಾಗಿತ್ತು. ನಟನ ಕಾರು ಮತ್ತು ಆಟೋರಿಕ್ಷಾ ನಡುವೆ ಡಿಕ್ಕಿ ಸಂಭವಿಸಿತ್ತು. ಪರಿಣಾಮ, ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಸ್ಥಳದಿಂದ ಪರಾರಿಯಾಗಲು ಸಹ ಪ್ರಯತ್ನಿಸಿದ್ದರು. ಜೆನಿತಾ ಗಾಂಧಿ (21) ಹಾಗೂ ಗೌರವ್ ಚುಗ್ (22) ಎಂಬಿಬ್ಬರು ಪ್ರಯಾಣಿಕರು ನಟನ ಕಾರನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಬಾಜಿಗರ್, ಕಯಾಮತ್ ಸೆ ಕಯಾಮತ್ ತಕ್, ಕಹೋ ನಾ ಪ್ಯಾರ್ ಹೈ ಮತ್ತು ಮಿಷನ್ ಮಂಗಲ್ನಂತಹ ಸೂಪರ್ ಹಿಟ್ ಸಿನಿಮಾ ಸೇರಿದಂತೆ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ದಲೀಪ್ ತಾಹಿಲ್, ತಮ್ಮ ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ.