Sunday, 24th November 2024

ಹಳಿ ತಪ್ಪಿದ ವಿದ್ಯುತ್ ಚಾಲಿತ ರೈಲು

ಚೆನ್ನೈ (ತಮಿಳುನಾಡು): ರಾಜ್ಯದ ಚೆನ್ನೈನ ಅವಡಿ ರೈಲು ನಿಲ್ದಾಣದ ಬಳಿ ವಿದ್ಯುತ್ ಚಾಲಿತ ಹಳಿ ತಪ್ಪಿದೆ.

ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲ್ವೆ ಹಳಿ ಬಿರುಕು ಬಿಟ್ಟಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ತಿರುವಳ್ಳೂರಿನಿಂದ ಪುರಟ್ಚಿ ತಲೈವರ್​ ಡಾ. ಎಂಜಿಆರ್​ ಸೆಂಟ್ರಲ್​ ರೈಲು ನಿಲ್ದಾಣದವರೆಗೆ ರೈಲ್ವೆ ಹಳಿಯ (ಟ್ರ್ಯಾಕ್​) ನಿರ್ವಹಣಾ ಕಾರ್ಯ ನಡೆಯುತ್ತಿದೆ. ಈ ವೇಳೆ, ಬೆಳಗ್ಗೆ ತಿರುವಳ್ಳೂರಿನಿಂದ ತಿರುಟ್ಟಣಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್​ ರೈಲು ಅಣ್ಣನೂರಿನಿಂದ ಅವಡಿ ತಲುಪಿದ ಬಳಿಕ ಅವಘಡ ಸಂಭವಿಸಿದೆ. ಈ ರೈಲಿನಲ್ಲಿ 4 ಬೋಗಿಗಳು ಹಳಿ ತಪ್ಪಿವೆ.

ರಜಾದಿನವಾದ ಕಾರಣ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಿಂದಾಗಿ ಅವಡಿ -ಚೆನ್ನೈ ಮಾರ್ಗವಾಗಿ ತೆರಳುವ ರೈಲುಗಳು, ವಂದೇ ಭಾರತ್​ ಸೇರಿದಂತೆ ಇತರ ಎಲೆಕ್ಟ್ರಿಕ್​ ರೈಲುಗಳು, ಒಟ್ಟಾರೆಯಾಗಿ ರೈಲು ಸೇವೆಗಳ ಸಂಚಾರಕ್ಕೆ ತೊಂದರೆಯಾಗಿದೆ.

ಸದ್ಯ ರೈಲು ಭೋಗಿಗಳ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಕೈಗೊಂಡಿದೆ.