Sunday, 24th November 2024

ಪುಸ್ತಕ ಮೇಳದಲ್ಲೂ ಪ್ರತಿಧ್ವನಿಸಿದ ಇಸ್ರೇಲ್ ಸಂಘರ್ಷ

ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿಶ್ವವಾಣಿ- ವಿಶ್ವೇಶ್ವರ ಭಟ್

ಸಾಹಿತ್ಯಗೋಷ್ಠಿಗಳನ್ನು ಆಕ್ರಮಿಸಿದ ‘ಯುದ್ದ ’: ಮಳಿಗೆಗಳಲ್ಲೂ ಪರ ವಿರೋಧಿ ಪೋಸ್ಟರ್‌ಗಳು

ವಿಶ್ವೇಶ್ವರ ಭಟ್ ಫ್ರಾಂಕ್ ಫರ್ಟ್ (ಜರ್ಮನಿ): ವ್ಯವಾಹಾರ-ವಹಿವಾಟಿನಲ್ಲಿ ಈ ಸಲದ ಫ್ರಾಂಕ್ ಫರ್ಟ್ ಪುಸ್ತಕ ಮೇಳ ಮಾರಾಟ, ಕಳೆದ ಬಾರಿಯ ಮೇಳವನ್ನು ಮೀರಿಸಿ ಮೊದಲ ಮೂರು ದಿನ ಭಾರಿ ಯಶಸ್ಸನ್ನು ಕಂಡಿದ್ದರೂ, ಸಾಹಿತ್ಯಗೋಷ್ಠಿ ಮತ್ತು ಸಾಹಿತಿಗಳ ಸಂವಾದದಲ್ಲಿ ಇಸ್ರೇಲ್ – ಹಮಾಸ್ ಸಂಘರ್ಷವೇ ಪ್ರಧಾನ ವಿಷಯವಾಗಿ ಚರ್ಚೆ ಯಾಗಿದ್ದು ಕಂಡು ಬಂದಿತು. ಸಾಮಾನ್ಯವಾಗಿ ಎಲ್ಲ ಸಾಹಿತ್ಯಗೋಷ್ಠಿಗಳಲ್ಲೂ ಈ ಸಂಘರ್ಷದ ಪರ-ವಿರೋಧಿ ಅನಿಸಿಕೆಗಳು ನಿಜವಾದ ಸಾಹಿತ್ಯ ಗೋಷ್ಠಿಯ ವಿಷಯಕ್ಕಿಂತ ಹೆಚ್ಚು ಚರ್ಚೆಗೆ ಒಳಪಟ್ಟಿದ್ದು ಕಂಡುಬಂದಿತು.

ಕಳೆದ ವರ್ಷದ ಪುಸ್ತಕಮೇಳ ಕೋವಿಡ್ ನಂತರ ನಡೆದ ಪೂರ್ಣ ಪ್ರಮಾಣದ್ದಾಗಿತ್ತು. ಅಲ್ಲಿ ಕಾಣಿಸಿಕೊಂಡ ಚಟುವಟಿಕೆಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ವಹಿವಾಟು, ಪುಸ್ತಕ ಮಾರಾಟ ಒಪ್ಪಂದ, ಕೃತಿ ಸ್ವಾಮ್ಯ ಮಾರಾಟ, ಲಿಟರರಿ ಏಜೆಂಟರುಗಳ ಉತ್ಸಾಹ ಕಳೆಗಟ್ಟಿ ಪುಸ್ತಕೋದ್ಯಮ ಅಭಿವೃದ್ಧಿಗೆ ವಿಶೇಷ ಉತ್ಸಾಹ, ನೈತಿಕ ಬಲವನ್ನು ತುಂಬಿದರೂ, ಸಾಹಿತ್ಯಗೋಷ್ಠಿಗಳಲ್ಲಿ ಪುಸ್ತಕ-ಲೇಖಕ-ವಸ್ತು- ವಿಷಯಕ್ಕಿಂತ ಹೆಚ್ಚಾಗಿ ಇಸ್ರೇಲ್ – ಹಮಾಸ್
ಸಂಘರ್ಷವೇ ಪ್ರಮುಖ ಚರ್ಚೆಯಾಗಿ ಮಾರ್ಪಟ್ಟಿತು. ಪುಸ್ತಕ ಮೇಳದಲ್ಲಿ ಭಾಗವಹಿಸಿದ ಕೆಲವು ಮಳಿಗೆಗಳಲ್ಲಿ ಇಸ್ರೇಲ್ ಮತ್ತು ಪ್ಯಾಲಸ್ತೈನ್ ಪರ- ವಿರೋಽ ಪೋಸ್ಟರುಗಳು ಅಲ್ಲಲ್ಲಿ ಕಾಣಿಸಿಕೊಂಡು ಪುಸ್ತಕಮೇಳದ ಆಶಯಕ್ಕೆ ಭಂಗ ತರುವ ಪ್ರಯತ್ನವಾಗಿ ಕಂಡು ಬಂದವು.

ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸಿದ ವಿಷಯ ಪರಿಣತರಿಗೆ, ಲೇಖಕರಿಗೆ, ಚಿಂತಕರಿಗೆ ಭಾಗವಹಿಸಿದ್ದ ಪುಸ್ತಕಪ್ರೇಮಿಗಳು ಇಸ್ರೇಲ-ಹಮಾಸ್ ಸಂಘರ್ಷದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮುಜುಗರವನ್ನುಂಟು ಮಾಡಿದ ಪ್ರಸಂಗಗಳೂ ಜರುಗಿದವು. ಸ್ಲೊವೇನಿಯಾ, ಲಾಟ್ವಿಯಾದ ಸಾಹಿತಿಗಳು ಗೋಷ್ಠಿಯ ಆರಂಭದ, ‘ಇದು ಸಾಹಿತ್ಯಗೋಷ್ಠಿ, ದಯವಿಟ್ಟು ಇಸ್ರೇಲ್ -ಹಮಾಸ್ ಕದನದ ಬಗ್ಗೆ ಪ್ರಶ್ನೆ ಕೇಳಬೇಡಿ’ ಎಂದು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರೂ, ಕೊನೆಯಲ್ಲಿ ಆ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪರದಾಡಬೇಕಾಯಿತು.

ಪ್ರಕಾಶಕರು ಮತ್ತು ಲೇಖಕರ ಮಧ್ಯೆ ವ್ಯವಹಾರ ಕುದುರಿಸಲು ನೆರವಾಗುವ ಲಿಟರರಿ ಏಜೆಂಟರುಗಳ ‘ಮುಚ್ಚಿದ ಕೋಣೆ’ಯ ಮಾತುಕತೆಗೆ ನೆರವಾಗುವ ಬೃಹತ್ ಸಭಾಂಗಣದಲ್ಲಿ ಕಳೆದ ಮೂರೂ ದಿನಗಳಿಂದ ಎಲ್ಲಿಲ್ಲದ ಚಟುವಟಿಕೆ ಕಂಡು ಬಂದವು. ಐನೂರಕ್ಕೂ ಹೆಚ್ಚಿನ ಕೋಣೆಗಳು ದಿನದ ಆರಂಭ ದಿಂದಲೇ ಭರ್ತಿಯಾಗಿರುತ್ತಿದ್ದವು. ಈ ಮಾತುಕತೆಗೆ ನೆರವಾಗುವ ಪರಿಚಾರಕರು ಸ್ವಲ್ಪವೂ ಬಿಡುವಿಲ್ಲದೇ ಓಡಾಡುಡುತ್ತ, ಪರದಾಡುತ್ತಿದ್ದುದು ಸಹ ಕಂಡು ಬಂದಿತು.

ಪುಸ್ತಕ ಮೇಳ ಆರಂಭವಾಗುವ ಆರು ತಿಂಗಳ ಮೊದಲೇ, ತಮಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು, ಸಮಾವೇಶದಲ್ಲಿ ತಮಗಾಗಿ ಪ್ರತ್ಯೇಕ ಸಭಾಂಗಣ
ಮತ್ತು ಕೋಣೆಯನ್ನು ಮೀಸಲಿಡಬೇಕು ಎಂದು ಲಿಟರರಿ ಏಜೆಂಟರುಗಳು ಆಗ್ರಹಪಡಿಸಿದ್ದರು. ಆದರೂ ಈ ಸಲ ಹೊಸ ಪುಸ್ತಕಗಳ ಬಗ್ಗೆ ಪ್ರಕಾಶಕರಿಗೆ ಪ್ರಸ್ತುತಿ ನೀಡಲು ಸಮಯದ ಅಭಾವದ ಬಗ್ಗೆ ಲೇಖಕರು ಮತ್ತು ಪ್ರಕಾಶಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಲ ಸುಮಾರು ಎಂಟು ಸಾವಿರ ಹೊಸ ಪುಸ್ತಕಗಳ ಕುರಿತು ಪ್ರಕಾಶಕರು ಮತ್ತು ಲೇಖಕರ ಮಧ್ಯೆ ಒಡಂಬಡಿಕೆ ಆಗಿರಬಹುದು. ಮುಂದಿನ ಮೂರು- ನಾಲ್ಕು ತಿಂಗಳ ಅವಧಿಯಲ್ಲಿ ಈ ಕೃತಿಗಳು ಮಾರುಕಟ್ಟೆಗೆ ಬರಬಹುದು. ಫ್ರಾಂಕ್ ಫರ್ಟ್ ಪುಸ್ತಕಮೇಳದ ಬಹುದೊಡ್ಡ ಆಕರ್ಷಣೆಯೇ ಇದು. ‘ಇದು ಇಡೀ ಪುಸ್ತಕೋದ್ಯಮಕ್ಕೆ ಹೊಸ ಆಯಾಮ ನೀಡಿ, ಅಗತ್ಯ ಬಲವನ್ನು ತುಂಬಲಿದೆ. ಪುಸ್ತಕ ಅನುವಾದಕ್ಕೆ ಪೂರಕವಾಗುವ ಹಕ್ಕುಗಳ ಮಾರಾಟ, ಕೃತಿ ಸ್ವಾಮ್ಯ ಕುರಿತ ಚರ್ಚೆ, ಸಮಾ ಲೋಚನಾ ಕೊಠಡಿಗಳು ದಿನವಿಡೀ ಭರ್ತಿ ಯಾಗಿದ್ದು ಸಹ ಮೇಳದ ಯಶಸ್ಸಿಗೆ ಸಾಕ್ಷಿ’ ಎಂದು ಲಿಟರರಿ ಏಜೆಂಟರುಗಳ ಸಂಘದ ವಕ್ತಾರರು ತಿಳಿಸಿದರು.

ಬರ್ಲಿನ್ ಮೂಲದ ಪ್ಯಾಲಸ್ತೈನ್ ಲೇಖಕಿ ಅದಾನಯಾ ಶಿಬಲಿ ಈ ವರ್ಷದ ಮೇಳದಲ್ಲಿ ಇಸ್ರೇಲ್ -ಹಮಾಸ್ ಸಂಘರ್ಷದ ಕಾರಣದಿಂದ ಗಮನ ಸೆಳೆದರು. ಈ ಬಾರಿಯ ಮೇಳದಲ್ಲಿ ಮೊದಲ ದಿನವೇ ಅದಾನಿಯಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು. ಆದರೆ ಮೇಳದ ಸಂಘಟಕರು ಅದನ್ನು ಹಠಾತ್ ರದ್ದುಪಡಿಸಿ, ಇನ್ನೂ ನಿಗದಿಪಡಿಸದ ದಿನಾಂಕಕ್ಕೆ ಮುಂದೂಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದಾನಿಯಾ ಬರೆದ ‘ಮೈನರ್
ಡೀಟೇಲ’ ಕಾದಂಬರಿ ೨೦೨೦ ರಲ್ಲಿಯೇ ಪ್ರಕಟವಾಗಿದ್ದು, ಮುಂದಿನ ಬಾಷರ್ ಬೂಕರ್ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲೂ ಜಾಗ ಪಡೆದಿದೆ.

ಇಸ್ರೇಲನ್ನು ಕಿಲ್ಲಿಂಗ್ ಮಷೀನ್ ಎಂದು ಬಣ್ಣಿಸಿರುವ ಈ ಕಾದಂಬರಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇಸ್ರೇಲ್-ಹಮಾಸ್ ಕದನ ನಡೆಯದಿದ್ದರೆ
ಅದಾನಿಯಾ ಸುತ್ತ ವಿವಾದ ಹುಟ್ಟಿಕೊಳ್ಳುತ್ತಿರಲಿಲ್ಲವೇನೋ. ಸಾಹಿತ್ಯಾಸಕ್ತರಲ್ಲಿ ಅದಾನಿಯಾ ಪರ-ವಿರೋಧಿ ಗುಂಪುಗಳು ಸಮಸಮವಾಗಿ ಹಂಚಿ
ಹೋಗಿವೆ. ‘ಇಸ್ರೇಲನ್ನು ಅವಮಾನಿಸುವ ಕೃತಿ ಬರೆದವಳಿಗೆ ಸನ್ಮಾನ ಮಾಡುವುದನ್ನು ಉಗ್ರವಾಗಿ ಖಂಡಿಸುತ್ತೇವೆ’ ಎಂದು ಒಂದು ಗುಂಪು ಆರಂಭ ದಲ್ಲಿಯೇ ಹೇಳಿಕೆ ನೀಡಿದ್ದು ಇಡೀ ಸಮಾವೇಶದ ಚರ್ಚೆ ಬೇರೆಡೆಗೆ ಹೊರಳುವುದಕ್ಕೆ ಕಾರಣವಾಯಿತು. ಇದರ ಜತೆಗೆ ಕೆಲವು ಸಾಹಿತಿಗಳು, ಫ್ರಾಂಕ್ ಫರ್ಟ್ ಪುಸ್ತಕಮೇ ಳದ ಸಂಘಟಕರು ಇಸ್ರೇಲ್ ಪರ ನಿಲುವು ತಾಳಿದ್ದಾರೆ ಎಂದು ಆರಂಭದಲ್ಲಿಯೇ ಸಂದೇಹ ವ್ಯಕ್ತಪಡಿಸಿದ್ದರು.

ಒಂದು ವೇಳೆ ಪ್ಯಾಲಸ್ತೈನ್ ಲೇಖಕಿಯನ್ನು ಪುಸ್ತಕಮೇಳದಲ್ಲಿ ಸನ್ಮಾನಿಸಿದ್ದರೆ ಅಹಿತಕರ ಘಟನೆಗೆ ಕಾರಣವಾಗಬಹುದು ಎಂದು ಅಂಜಿದ ಸಂಘಟಕರು
ಕೊನೆ ಕ್ಷಣದಲ್ಲಿ ಆ ಕಾರ್ಯಕ್ರಮವನ್ನೇ ರದ್ದುಪಡಿಸಿದರು. ಸಂಘಟಕರ ಈ ಕ್ರಮವನ್ನು ಅರಬ್ ದೇಶಗಳ ಪುಸ್ತಕ ವ್ಯಾಪಾರಿಗಳು, ಪುಸ್ತಕೋದ್ಯಮದ
ಸಂಘಟನೆಗಳು ಖಂಡಿಸಿ ಮೇಳವನ್ನು ಬಹಿಷ್ಕರಿಸಿವೆ. ಈ ಗೊಂದಲದ ಪರಿಣಾಮವನ್ನು ಅರಿತ ಇಸ್ರೇಲ್‌ನ ಅರ್ಧಕ್ಕರ್ಧ ಪ್ರಕಾಶಕರು, ಪ್ರದರ್ಶಕರು ಕೊನೆ ಕ್ಷಣದಲ್ಲಿ ಮೇಳದಲ್ಲಿ ಭಾಗವಹಿಸದಿರುವ ನಿರ್ಧಾರವನ್ನು ತೆಗೆದುಕೊಂಡರು.

ಈ ಮಧ್ಯೆ ಅದಾನಿಯಾ ಸನ್ಮಾನ ಕಾರ್ಯಕ್ರಮವನ್ನು ಏಕಾಏಕಿ ಮುಂದೂಡಿದ ಸಂಘಟಕರ ನಿರ್ಧಾರವನ್ನು ಖಂಡಿಸಿ, ಮೇಳದಲ್ಲಿ ಭಾಗವಹಿಸಿದ್ದ ಆರು ನೂರಕ್ಕೂ ಹೆಚ್ಚು ಸಾಹಿತಿಗಳು ಸಂಘಟಕರಿಗೆ ಮನವಿಪತ್ರ ಸಲ್ಲಿಸಿದರು. ‘ಇಂಥ ಘಟನೆಗಳು ಸಾಹಿತ್ಯದ ಆಶಯವನ್ನೇ ಹಾಳು ಮಾಡುತ್ತವೆ, ಅದಾನಿ ಯಾಗೆ ಮೇಳ ಮುಗಿಯುವ ಮುನ್ನ ಸನ್ಮಾನ ಮಾಡಬೇಕು’ ಎಂದು ಆಗ್ರಹಿಸುವ ಮೂಲಕ ಒತ್ತಡ ಹೇರಿzರೆ. ಸುಮಾರು ೧೨೦೦ ಲೇಖಕರು, ‘ಆಕೆಗೆ ಪ್ರಶಸ್ತಿ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಸುಳ್ಳು ಬರೆಯುವವರು ಸಾಹಿತಿಗಳಲ್ಲ. ಇಂಥವರನ್ನು ಪುಸ್ತಕ ಮೇಳದಿಂದ ನಿಷೇಧಿಸಬೇಕು’ ಎಂದು ಪ್ರತಿ ಹೇಳಿಕೆ ನೀಡಿದ್ದರಿಂದ ಇಡೀ ವಾತಾವರಣ ವಿವಾದಮಯವಾಗಿದೆ.

ಮಳಿಗೆಗಳಲ್ಲಿ ಜನಸಾಗರ

ಕಳೆದ ಮೂರು ದಿನಗಳಿಂದ ಪುಸ್ತಕ ವಹಿವಾಟು, ವ್ಯವಹಾರ, ಹಂಚಿಕೆ-ಮಾರಾಟ ಒಪ್ಪಂದಕ್ಕೆ ಸೀಮಿತವಾಗಿದ್ದ ಪುಸ್ತಕ ಮೇಳ ಶನಿವಾರದಿಂದ ಸಾರ್ವ ಜನಿಕರಿಗೆ ಮುಕ್ತಾವಾಗಿದ್ದು, ಮೊದಲನೆಯ ದಿನವೇ ಅಧಿಕ ಸಂಖ್ಯೆಯ ಪುಸ್ತಕ ಪ್ರೇಮಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಎಲ್ಲ ಪುಸ್ತಕ ಮಳಿಗೆಗಳ ಮುಂದೆಯೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎಲ್ಲ ದೇಶಗಳ ಪುಸ್ತಕ ಮಳಿಗೆಗಳಲ್ಲಿ ಆಯಾ ದೇಶದ ಅಕ್ಷರಪ್ರೇಮಿಗಳಿಂದ ತುಂಬಿ ಹೋಗಿದ್ದು ಸಾಮಾನ್ಯವಾಗಿತ್ತು. ಅದರಲ್ಲೂ ಪ್ರತಿಷ್ಠಿತ ಪ್ರಕಾಶಕರ ಮಳಿಗೆಗಳಲ್ಲಿ ಕಾಲಿಡಲೂ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯ ಜರ್ಮನ್ ಭಾಷೆಯ ಎಲ್ಲ ಮಳಿಗೆಗಳು ಭರ್ತಿಯಾಗಿ, ಅಕ್ಷರಪ್ರೇಮಿಗಳನ್ನು ನಿಭಾಯಿಸಲು ಸಂಘಟಕರು ಪರದಾಡುವಂತಾಯಿತು. ‘ಬೇರೆಲ್ಲೂ ಸಿಗದ, ಅಪರೂಪದ ಪುಸ್ತಕ’ ಎಂದು ಫಲಕ ಹಾಕಿಕೊಂಡ ಪುಸ್ತಕ ಮಳಿಗೆಯಲ್ಲಿ ಅಕ್ಷರಶಃ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಎಲ್ಲಿಯೂ ನೂಕುನುಗ್ಗಾಟ ಆಗದೇ ಶಿಸ್ತು ಕಾಪಾಡಿಕೊಂಡಿದ್ದು ವಿಶೇಷ.

ಸಾಹಿತಿಗಳ ಚಿತ್ರವಿರುವ ಸಾಕ್ಸ್
ಈ ಬಾರಿಯ ಪುಸ್ತಕ ಮೇಳದಲ್ಲಿ ಪುಸ್ತಕಗಳಂತೆ ಪೆನ್ನು, ಪೇಪರ್, ಡೈರಿ, ಲಕೋಟೆ, ಬುಕ್ ಮಾರ್ಕ್ಸ ಸೇರಿ ವಿಧವಿಧದ ಸ್ಟೇಷನರಿ ವಸ್ತುಗಳ ಮಾರಾಟ ಭರ್ಜರಿಯಾಗಿತ್ತು. ರಾತ್ರಿ ವೇಳೆ ಪುಸ್ತಕವನ್ನು ಓದಲು ನೆರವಾಗುವ ಜೇಬಿನಲ್ಲಿ ಇಟ್ಟುಕೊಳ್ಳಬಹುದಾದ ಲೈಟುಗಳು, ಟೇಬಲ್ ಲ್ಯಾಂಪ್‌ಗಳು, ಬೆಳಕು ಸೂಸುವ ಬುಕ್ ಮಾರ್ಕ್‌ಗಳು ಹೆಚ್ಚು ಮಾರಾಟ ವಾದವು. ಪುಸ್ತಕಗಳ ಕುರಿತು ತಮಾಷೆಯ ಸಾಲುಗಳು ಬರೆದಿರುವ ಟೀ-ಶರ್ಟ್, ಸ್ಟಿಕರು ಗಳು, ಫೋಟೋ ಫ್ರೇಮುಗಳು ಆಕರ್ಷಿಸಿದವು. ಖ್ಯಾತನಾಮ ಸಾಹಿತಿಗಳ ಚಿತ್ರಗಳನ್ನು ಒಳಗೊಂಡ ಸಾಕ್ಸ್(ಕಾಲುಚೀಲ), ಕರವಸ್ತ್ರ, ಬೆಡ್ ಶೀಟ್, ಚಾದರಗಳು ಸಹ ಮೇಳದಲ್ಲಿ ಖಾಲಿಯಾದವು. ಟೇಬಲ್ ಮೇಲೆ ಪೇರ್ಪ ವೇಟ್ ಆಗಿ ಬಳಸಿಕೊಳ್ಳಬಹುದಾದ, ಮುದ್ರಣ ಪಿತಾಮಹ ಗುಟೆನ್ ಬರ್ಗ್ ನ ಕಿರಿದಾದ ಪ್ರತಿಮೆ ಆಕರ್ಷಿಸಿತು.

ಹೆಚ್ಚಿದ ಪುಸ್ತಕ ವಹಿವಾಟು

ಮೊದಲ ಮೂರು ದಿನ ಈ ಬಾರಿಯ ಬುಕ್ ಟ್ರೇಡ್‌ನಲ್ಲಿ ೧೩೦ ದೇಶಗಳಿಂದ ಒಂದು ಲಕ್ಷದ ಐದು ಸಾವಿರ ಮಂದಿ ಭಾಗವಹಿಸಿದ್ದು ಇದು ಈ ಹಿಂದಿನ ಐದು ವರ್ಷಗಳ ದಾಖಲೆಯನ್ನು ಮುರಿದಿದೆ. ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಇದು ಹೊಡೆದು ಹಾಕಿದೆ. ಕಳೆದ ವರ್ಷಕ್ಕಿಂತ ಶೇ.ಇಪ್ಪತ್ತರಷ್ಟು ವಹಿವಾಟು ಹೆಚ್ಚಾಗಿದೆ ಎಂದು ಪುಸ್ತಕಮೇಳದ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಬಾರಿ ನಾಲ್ಕು ಸಾವಿರ ಪ್ರದರ್ಶಕರು ಸಹ ಭಾಗವಹಿಸಿದ್ದು ಪುಸ್ತಕೋದ್ಯಮದಲ್ಲಿ ತೊಡಗಿರುವವರ ಸಂತಸವನ್ನು ಹೆಚ್ಚಿಸಿದೆ. ಅಂತಾರಾಷ್ಟ್ರೀಯ ವಿದ್ಯಮಾನ,
ಬಿಕ್ಕಟ್ಟು, ವಿವಾದಗಳ ಮಧ್ಯೆಯೂ ಪುಸ್ತಕ ಮೇಳ ಭಾರಿ ಯಶಸ್ಸನ್ನು ಕಂಡಿದೆ ಎಂದು ಮೇಳದ ನಿರ್ದೇಶಕರು ಘೋಷಿಸಿzರೆ. ಪುಸ್ತಕೋದ್ಯಮದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ವಿಷಯ ಈ ಬಾರಿ ಪ್ರಧಾನವಾಗಿ ಚರ್ಚಿತವಾಯಿತು. ಎಐ ಅನ್ನು
ಪುಸ್ತಕೋದ್ಯಮಕ್ಕೆ ಹೊಸ ಆಶಾಕಿರಣವಾಗಿ ಪರಿಣಮಿಸಲಿದೆ ಎಂದು ಉದ್ಯಮದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

ಪುಸ್ತಕೋದ್ಯಮಕ್ಕೆ ಜಾಬ್ಸ್ -ಮಸ್ಕ್ ಬೇಕು
ಲೇಖಕರನ್ನು ಸೆಲೆಬ್ರಿಟಿಗಳಂತೆ ಬಿಂಬಿಸದೇ ಪುಸ್ತಕೋದ್ಯಮ ಬೆಳೆಯುವುದಿಲ್ಲ. ಒಂದು ಸಿನಿಮಾ ಬಿಡುಗಡೆ ಆಗುವಾಗ ನಾಯಕ-ನಾಯಕಿಯನ್ನು ಹೇಗೆ
ಬಿಂಬಿಸುತ್ತಾರೋ ಆ ಮಾದರಿಯಲ್ಲಿ ಲೇಖಕರನ್ನೂ ಬಿಂಬಿಸಬೇಕು ಎಂಬ ಅಭಿಪ್ರಾಯ, ‘ಪುಸ್ತಕೋದ್ಯಮದ ಹೊಸ ಸಾಧ್ಯತೆ’ ಎಂಬ ಗೋಷ್ಠಿಯಲ್ಲಿ ಮೂಡಿ ಬಂದಿತು.

‘ಇದು ಮಾರುಕಟ್ಟೆ ಪ್ರಧಾನ ಜಮಾನ. ಮಾರುಕಟ್ಟೆ ಬಯಸುವ ಎಲ್ಲ ತಂತ್ರಗಳನ್ನು ಪುಸ್ತಕೋದ್ಯಮವೂ ಅಳವಡಿಸಿಕೊಳ್ಳಬೇಕು. ಪ್ರಚಾರವಿಲ್ಲದೇ ಯಾವ ಪುಸ್ತಕವನ್ನು ಬಿಡುಗಡೆ ಮಾಡಬಾರದು. ಸಾಮಾಜಿಕ ಜಾಲತಾಣದ ಹೊರತಾಗಿಯೂ ಬೇಟೆ ಬೇರೆ ವೇದಿಕೆಗಳನ್ನು ಪುಸ್ತಕ ಪ್ರಚಾರಕ್ಕೆ ಬಳಸಿ ಕೊಳ್ಳಬೇಕು’ ಎಂಬ ಅಭಿಪ್ರಾಯವನ್ನು ಗೋಷ್ಠಿಯಲ್ಲಿ ಮಾತಾಡಿದ ಗಣ್ಯರು ವ್ಯಕ್ತಪಡಿಸಿದರು. ‘ಹಿಂದೆಂದಿಗಿಂತಲೂ ಪುಸ್ತಕಗಳು ಸೊಗಸಾಗಿ ಮೂಡಿ ಬರುತ್ತಿವೆ. ಹೊಸ ಭಾಷೆ, ಆಲೋಚನೆಯಲ್ಲಿ ಬರೆಯುವ ಪ್ರತಿಭಾವಂತ ಲೇಖಕರು ಬರುತ್ತಿzರೆ. ಆದರೆ ಮಾರುಕಟ್ಟೆ ಇವರ ಕೃತಿಗಳನ್ನು ಸ್ವೀಕರಿಸು ವಂತಾಗಲು ಅದು ಪುಸ್ತಕಪ್ರೇಮಿಗಳಿಗೆ ತಲುಪುವಂತಾಗಬೇಕು.

ಇಂದು ಪುಸ್ತಕ ಸುಲಭ ಬೆಲೆಗೆ ಸಿಗುತ್ತಿದೆ. ಆದರೆ ಪುಸ್ತಕ ಹಂಚಿಕೆ ಇನ್ನಷ್ಟು ಸಮರ್ಪಕವಾಗಿ ಆಗಬೇಕಿದೆ. ಒಂದು ಸಿನಿಮಾ ಜಗತ್ತಿನ ಎಲ್ಲ ದೇಶಗಳಲ್ಲಿ ಒಂದೇ ದಿನ ಬಿಡುಗಡೆಯಾಗುವುದು ಸಾಧ್ಯವಾಗುವುದಾದರೆ, ಇದು ಪುಸ್ತಕದ ವಿಷಯದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ಈ ಪ್ರಶ್ನೆಯನ್ನು ಪುಸ್ತಕೋ ದ್ಯಮದಲ್ಲಿ ತೊಡಗಿರುವವರೆಲ್ಲ ತಮಗೆ ಕೇಳಿಕೊಳ್ಳಬೇಕು’ ಎಂದು ಉಪನ್ಯಾಸಕರು ಅಭಿಮತ ವ್ಯಕ್ತಪಡಿಸಿದರು.

ಒಬ್ಬ ಉಪನ್ಯಾಸಕರಂತೂ ಪುಸ್ತಕೋದ್ಯಮಕ್ಕೆ ಎಲಾನ್ ಮಸ್ಕ್ ಮತ್ತು ಸ್ಟೀವ್ ಜಾಬ್ಸ್ ಅವರಂಥವರು ಬೇಕಾಗಿದ್ದಾರೆ. ಹೊಸ ಮತ್ತು ತಾಜಾ ಆಗಿ ಯೋಚಿಸುವವರು ಬೇಕಾಗಿದ್ದಾರೆ. ಅಂಥವರು ಪುಸ್ತಕೋದ್ಯಮದ ನಾಯಕತ್ವವನ್ನು ವಹಿಸಿಕೊಳ್ಳಬೇಕು’ ಎಂದು ಹೇಳಿದಾಗ ದೀರ್ಘ ಕರತಾಡನ ಕೇಳಿ ಬಂತು.