ಕೆ.ಜೆ.ಲೋಕೇಶ್ ಬಾಬು ಮೈಸೂರು
ಅದ್ದೂರಿಯ ಮೈಸೂರು ಜಂಬೂ ಸವಾರಿ
ಭವ್ಯ ಸಾಲಂಕೃತ ಮೆರವಣಿಗೆಗೆ ಸಾಕ್ಷಿಯಾದ ಲಕ್ಷಾಂತರ ಜನ
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಅಂಬಾರಿ ಹೊತ್ತು ಸಾಗಿದ ಅಭಿಮನ್ಯು
ಚಿನ್ನದಂಬಾರಿಯಲ್ಲಿ ಸರ್ವಾಲಂಕೃತಳಾಗಿದ್ದ ನಾಡದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಅಂಬಾವಿಲಾಸ ಅರಮನೆ ಅಂಗಳದಿಂದ ಹೊರಟ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಜಂಬೂಸವಾರಿ, ಲಕ್ಷಾಂತರ ಮಂದಿಯ ಮನಸೂರೆ ಯೊಂದಿಗೆ ಬನ್ನಿಮಂಟಪ ತಲುಪುವ ಮೂಲಕ ಹತ್ತು ದಿನಗಳ ಕಾಲ ನಡೆದ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಂಪನ್ನಗೊಂಡಿತು.
ಶುಭ ಮಕರ ಲಗ್ನದಲ್ಲಿ ಮದ್ಯಾಹ್ನ ೧.೪೮ ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಮನೆಯ ಬಲರಾಮ ದ್ವಾರದಲ್ಲಿ (ಕೋಟೆ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗ) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾ ದೇವಪ್ಪ ಸೇರಿದಂತೆ ಸಚಿವ ಸಂಪುಟದ ಸದಸ್ಯರು, ಪ್ರಮುಖರು ಹಾಜರಿದ್ದು ದಸರಾ ಮಹೋತ್ಸವವನ್ನು ಸಾಕ್ಷೀಕರಿಸಿದರು.
ನಂತರ ಮುಖ್ಯಮಂತ್ರಿ ಹಾಗೂ ಪರಿವಾರ ಅರಮನೆ ಮುಂಭಾಗ ಇದ್ದ ವೇದಿಕೆಯ ಬಳಿ ಆಸೀನರಾಗುತ್ತಿದ್ದಂತೆ ಜಾನಪದ ಕಲಾತಂಡಗಳ ಆಕರ್ಷಕ ಮೆರವಣಿಗೆ ವಿಧ್ಯುಕ್ತವಾಗಿ ಆರಂಭವಾಯಿತು. ಈ ವೇಳೆ ನೆರೆದಿದ್ದ ಪ್ರೇಕ್ಷಕರ ಕಡೆಯಿಂದ ಮುಗಿಲು ಮುಟ್ಟುವ ರೀತಿಯಲ್ಲಿ ಶಿಳ್ಳೆ, ಚಪ್ಪಾಳೆ ಕೇಳಿಬಂತು.
ನಂತರ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಜೆ ೫.೦೯ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿಯಲ್ಲಿರಿಸಿದ್ದ
ಚಾಮುಂಡೇಶ್ವರಿದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು.
ಮುಖ್ಯಮಂತ್ರಿ ಅವರೊಡನೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿ ಉಸ್ತುವಾರಿ ಸಚಿವ ಡಾ.ಎಚ್ .ಸಿ.ಮಹಾದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಉಪಸ್ಥಿತರಿದ್ದು ಸಾಂಪ್ರದಾಯಿಕವಾಗಿ ಪುಷ್ಪಾರ್ಚನೆ ಮಾಡಿದರು.
ಅಂಬಾರಿ ಹೊತ್ತ ಅಭಿಮನ್ಯು ಗಾಂಭೀರ್ಯದಿಂದ ಮುಂದಡಿ ಇಡುತ್ತಿದ್ದಂತೆ ಆತನ ಎರಡೂ ಬದಿಗಳಲ್ಲಿ ಕುಮ್ಕಿ ಆನೆಗಳಾದ ವಿಜಯ ಹಾಗೂ ವರ ಲಕ್ಷ್ಮಿ , ಹಿಂಬದಿಯಲ್ಲಿ ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಗೋಪಿ, ಪಾರ್ಥಸಾರಥಿ, ಪ್ರಶಾಂತ್, ಸುಗ್ರೀವ, ಕಂಜನ್ ಹೆಜ್ಜೆ ಹಾಕಿದರು.
ಇತಿಹಾಸ ಪುಟಗಳಲ್ಲಿ ದಾಖಲು: ಕಣ್ಮನ ತಣಿಸುವ ಜಾನಪದ ಕಲಾಪ್ರಾಕಾರಗಳು ಹಾಗೂ ಮನಸೂರೆಗೊಳ್ಳುವ ಸ್ಥಬ್ದಚಿತ್ರಗಳೊಂದಿಗೆ ಈ ನೆಲದ
ಸಂಸ್ಕೃತಿ, ಪರಂಪರೆಯ ಹೆಗ್ಗುರುತಾದ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಲಕ್ಷಾಂತರ ಜನರನ್ನು ಆಕರ್ಷಿಸು ವಲ್ಲಿ ಯಶಸ್ವಿಯಾಗಿ ಇತಿಹಾಸದ ಪುಟ ಸೇರಿತು. ಈ ಮೂಲಕ ಕಳೆದ ೧೦ ದಿನಗಳಿಂದ ಮೈಸೂರಿನಲ್ಲಿ ಮನೆ ಮಾಡಿದ್ದ ನವರಾತ್ರಿ ಸಂಭ್ರಮ ಸಂಪನ್ನ ವಾಯಿತು. ಅಶ್ವಪಡೆ, ಸ್ತಬ್ಧಚಿತ್ರ, ಜಾನಪದ ಕಲಾತಂಡಗಳು, ಪೊಲೀಸ್ ತುಕಡಿಗಳು ಮೆರವಣಿಗೆಗೆ ಮೆರುಗು ನೀಡಿದರೆ ಅಬಾಲವೃದ್ಧರಾದಿ ಯಾಗಿ ಲಕ್ಷಾಂತರ ಮಂದಿ ೨೦೨೩ರ ದಸರಾ ಉತ್ಸವಕ್ಕೆ ಸಾಕ್ಷಿಯಾದರು.
ಕಾಲಮೀರಿ ಪುಷ್ಪಾರ್ಚನೆ
ಜಂಬೂಸವಾರಿ ಮೆರವಣಿಗೆಗೆ ಸಂಜೆ ೪.೪೦ ರಿಂದ ೫ ಗಂಟೆಯೊಳಗೆ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಸಿಎಂ ಸಿದ್ಧರಾಮಯ್ಯ ಪುಷ್ಪಾರ್ಚನೆ ಮಾಡ
ಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಪುಷ್ಪಾರ್ಚನೆ ಆಗದೆ ೫ ಗಂಟೆ ೯ ನಿಮಿಷಕ್ಕೆ ಅಂದರೆ ೯ ನಿಮಿಷ ತಡವಾಗಿ ಪುಷ್ಪಾರ್ಚನೆ ನೆರವೇರಿದೆ.
೪ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು
೮ ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ ನಿವೃತ್ತಿಯೊಂದಿಗೆ ಗಜಪಡೆಯ ಕ್ಯಾಪ್ಟನ್ ಆಗಿ ಬಡ್ತಿ ಪಡೆದ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಈವರೆಗೆ
ನಾಲ್ಕು ಬಾರಿ ಅಂಬಾರಿ ಹೊತ್ತಂತಾಯಿತು. ಈ ಪೈಕಿ ಎರಡನೇ ಬಾರಿಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡ. ಕಳೆದ ಎರಡು ವರ್ಷಗಳ ಕಾಲ ಕರೋನಾ ಕಾರಣಕ್ಕೆ ಜಂಬೂಸವಾರಿ ಮೆರವಣಿಗೆ ಅರಮನೆಗೆ ಸೀಮಿತವಾದ್ದರಿಂದ ಬನ್ನಿ ಮಂಟಪದವರೆಗೆ ಅಂಬಾರಿ ಹೊತ್ತಿರಲಿಲ್ಲ. ಆದರೆ, ಈ ಬಾರಿ ಸಾಂಪ್ರದಾಯಿಕ ಹಾಗೂ ಅದ್ದೂರಿಯಾಗಿ ದಸರಾ ಆಚರಣೆ ಮಾಡಿದ್ದರಿಂದ ಮೊದಲ ಬಾರಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಗಿ ಎಲ್ಲರ ಮೆಚ್ಚುಗೆ ಗಳಿಸಿದ.