ಬತ್ತಿ ಹೋಗಿವೆ ಬೋರ್ವೆಲ್ಗಳು
ಆಗಲೇ ಹಲವೆಡೆ ನೀರಿಗೆ ಹಾಹಾಕಾರ
ಹಣ್ಣು-ತರಕಾರಿ ಬೆಲೆ ಗಗನಕ್ಕೇರುವ ಆತಂಕ
ಶರಣಬಸವ ಹುಲಿಹೈದರ ಕೊಪ್ಪಳ
ಬೇಸಿಗೆ ಆರಂಭಕ್ಕೂ ಮೊದಲೇ ಕೊಪ್ಪಳ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಬೆಳೆದು ನಿಂತ ಬೆಳೆ ಉಳಿಸಿಕೊಳ್ಳಲು ಮಳೆಗಾಲ ಮುಗಿಯುವುದಕ್ಕೂ ಮುನ್ನವೇ ರೈತರು ಅನಿವಾರ್ಯವಾಗಿ ಟ್ಯಾಂಕರ್ ಮೊರೆ ಹೋಗಿದ್ದಾರೆ. ಪರಿಣಾಮ ಈ ಬಾರಿಯ ಬೇಸಿಗೆಯ ವೇಳೆಗೆ ಹಣ್ಣು- ತರಕಾರಿಗಳ ಬೆಲೆ ಗಗನಕ್ಕೇರುವ ಲ್ಲ ಸಾಧ್ಯತೆ ಇದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರಿನ ಜತೆಗೆ ಹಿಂಗಾರಿನ ಮಳೆಯೂ ಕೈ ಕೊಟ್ಟಿದೆ. ಇದರಿಂದ ಜಿಲ್ಲೆಯ ಮಳೆಯಾಶ್ರಿತ ರೈತರು ಬೆಳೆದ ಬಹುತೇಕ ಬೆಳೆ ಹಾಳಾಗಿದೆ. ಇದೀಗ ಬೋರ್ ವೆಲ್ ಆಶ್ರಯಿಸಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಸಂಕಷ್ಟ ಎದುರಾಗಿದೆ. ಶೇ. ೫೦ರಷ್ಟು ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದ್ದು, ಮಳೆಗಾಲದಲ್ಲೇ ಬೋರ್ ವೆಲ್ಗಳು ಬತ್ತಿ ಹೋಗಿವೆ. ಇದರಿಂದ ಜಿಲ್ಲೆಯ ಕನಕಗಿರಿ, ಕುಷ್ಟಗಿ,
ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಬೋರ್ವೆಲ್ ಆಶ್ರಿತ ತೋಟಗಾರಿಕೆ ರೈತರಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಸಾಕಷ್ಟು ರೈತರು ಟ್ಯಾಂಕರ್ ಮೂಲಕ ಬೆಳೆಗೆ ನೀರು ನೀಡಿ, ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಅಖಂಡ ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಷ್ಟೇ ಸುಮಾರು ೧೮ ಸಾವಿರ ಎಕರೆ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆ ಇದೆ. ಈ ಪೈಕಿ ದಾಳಿಂಬೆ, ದ್ರಾಕ್ಷಿ, ಪಪ್ಪಾಯ, ಪೇರಲ, ಮಾವು ಪ್ರಮುಖ ಬೆಳೆಗಳಾಗಿವೆ. ಈ ಬಾರಿ ಕನಕಗಿರಿ ತಾಲೂಕಿನಲ್ಲಿ ಸುಮಾರು ೪ ಸಾವಿರ ಎಕರೆಗೂ ಹೆಚ್ಚು ಪಪ್ಪಾಯ ನಾಟಿ ಮಾಲಾಗಿದ್ದು, ಮೆಣಸಿನಕಾಯಿ, ಈರುಳ್ಳಿ ಸೇರಿ ಇತರೇ ತರಕಾರಿ ಬೆಳೆಯೂ ಇವೆ.
ಒಬ್ಬನ ವ್ಯಥೆಯಲ್ಲ: ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದ ನೂರ ಮಹ್ಮದ್ ಎಂಬ ರೈತ ೪ ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದಾನೆ. ಕನಿಷ್ಠ ೮ ತಿಂಗಳಿಗೆ ಕಟಾವು ಮಾಡಬಹುದಾಗಿದ್ದು, ಈಗಾಗಲೇ ೭ ತಿಂಗಳು ಕಳೆದಿವೆ. ಇಷ್ಟೊತ್ತಿಗೆ ೧೦ ಲಕ್ಷ ರು.ಖರ್ಚು ಮಾಡಿದ್ದಾನೆ. ಇದೀಗ ಬೋರ್ ವೆಲ್ ನಲ್ಲಿ ನೀರು ಇಲ್ಲದ್ದರಿಂದ ಟ್ಯಾಂಕರ್ ಗೆ ಮೊರೆ ಹೋಗಿದ್ದಾರೆ. ದಿನಕ್ಕೆ ೧೦ ಟ್ಯಾಂಕ್ ನೀರು ಬೇಕಿದ್ದು, ಕೇವಲ ೬ ಟ್ಯಾಂಕ್ ಮಾತ್ರ ಪೂರೈಕೆ ಮಾಡಲು ಸಾಧ್ಯವಾಗುತ್ತಿದ್ದು, ಇಳುವರಿ ಕುಂಠಿತವಾಗುವ ಆತಂಕವೂ ಎದುರಾಗಿದೆ. ಇದು ಜಿಲ್ಲೆಯ ಬಹುತೇಕ ತೋಟಗಾರಿಕೆ ರೈತರ ದುಃಸ್ಥಿತಿ.
ದಿನಕ್ಕೆ ಐದು ಸಾವಿರ ಖರ್ಚು
ಕೆಲ ರೈತರು ಕಟಾವಿಗೆ ಬಂದ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಕೆಲ ರೈತರು ಹಣ್ಣು ಬೆಳೆಗಾರರು ಟ್ಯಾಂಕರ್ ಮೊರೆ ಹೋಗಿದ್ದು, ನೀರಿನ ಟ್ಯಾಂಕ್, ಟ್ಯಾಕ್ಟರ್ ಮತ್ತು ಪ್ರತಿ ಟ್ಯಾಂಕ್ ನೀರಿಗೆ ೩೦೦ ರೂ ಸೇರಿ ಒಂದು ದಿನಕ್ಕೆ ೫ ಸಾವಿರ ರೂ. ಖರ್ಚು ಮಾಡಬೇಕಿದೆ. ದಿನಕ್ಕೆ ೫ ಸಾವಿರ ಖರ್ಚು
ಮಾಡಿದರೆ ೫ ರಿಂದ ೬ ಟ್ಯಾಂಕ್ ನೀರು ಜಮೀನಿಗೆ ತಲುಪು ತ್ತದೆ. ಸ್ವಂತಃ ಟ್ಯಾಕ್ಟರ್ ಇದ್ದ ರೈತರು ದಿನಕ್ಕೆ ೩ ಸಾವಿರ ರುಪಾಯಿ ಖರ್ಚು ಮಾಡಬೇಕಿದೆ. ಇನ್ನು ಈಗಷ್ಟೇ ನಾಟಿ ಮಾಡಿದ ಸಾಕಷ್ಟು ರೈತರು ಲಕ್ಷಂತರ ರು.ಖರ್ಚು ಮಾಡಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನು ನೀರಿನ ಕೊರತೆಯಿಂದ
ಸಾವಿರಾರು ಹೆಕ್ಟೇರ ಪ್ರದೇಶ ಬಿತ್ತನೆ ಮಾಡದೇ ಬಿಡಲಾಗಿದೆ.
*
ನಾಲ್ಕು ಎಕರೆಯಲ್ಲಿ ಪಪ್ಪಾಯ ಬೆಳೆದಿದ್ದು, ಇನ್ನೊಂದು ತಿಂಗಳಿಗೆ ಕಟಾವಿಗೆ ಬರುತ್ತೆ. ಬೋರ್ ಬತ್ತಿ ಹೋಗಿದ್ದು, ನೀರು ಕೊಡದಿದ್ದರೆ ಖರ್ಚು ಮಾಡಿದ
೧೦ ಲಕ್ಷ ಮಣ್ಣುಪಾಲು ಆಗುತ್ತೆ. ಸದ್ಯ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ.
– ನೂರ ಮಹ್ಮದ್ ರೈತ
ಮಳೆಯ ಅವಕೃಪೆಯಿಂದ ಈ ಬಾರಿ ತೋಟಗಾರಿಕೆ ರೈತರೂ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿ ಹೊಂಡಗಳ ನಿರ್ಮಾಣ ಮತ್ತು ಹನಿ ನೀರಾವರಿ
ಒಂದೇ ಇದಕ್ಕೆ ಪರಿಹಾರ. ಸರಕಾರ ಇದಕ್ಕೆ ಪ್ರೋತ್ಸಾಹ ಧನ ನೀಡುತ್ತದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಿದ್ದೇವೆ.
– ಮಹೇಶ ಹಿರೇಮಠ, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ