Friday, 22nd November 2024

ಸುಶೀಲ್‌ ಕುಮಾರ್‌ ಶಿಂಧೆ ರಾಜಕೀಯಕ್ಕೆ ವಿದಾಯ

ಮುಂಬೈ: ಕಾಂಗ್ರೆಸ್‌ ಹಿರಿಯ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಶಿಂಧೆ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.

82 ವರ್ಷದ ಸುಶೀಲ್‌ ಕುಮಾರ್‌ ಶಿಂಧೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

“ನಾನು ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಿದ್ದೇನೆ. ಯಾವುದೇ ಸಮಯದಲ್ಲಿ ಪಕ್ಷಕ್ಕೆ ಅಗತ್ಯ ಬಿದ್ದರೆ ನಾನು ಸೇವೆ ಸಲ್ಲಿಸುತ್ತೇನೆ. ನಾನು ಎರಡು ವರ್ಷಗಳ ಹಿಂದೆಯೇ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದೆ. ಇದು ಏಕಾಏಕಿ ತೆಗೆದುಕೊಂಡು ನಿರ್ಧಾರ ಅಲ್ಲ” ಎಂದು ತಿಳಿಸಿದ್ದಾರೆ.

ಪ್ರಮುಖ ದಲಿತ ನಾಯಕ ಆಗಿರುವ ಶಿಂಧೆ ಅವರ ನಿವೃತ್ತಿ ಬಳಿಕ 2024ರ ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಪ್ರಣಿತಿ ಶಿಂಧೆ ಅವರಿಗೆ ಸೊಲ್ಲಾಪುರ ಕ್ಷೇತ್ರದಿಂದ ಟಿಕೆಟ್‌ ನೀಡಬೇಕು ಎಂಬುದಾಗಿ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಪ್ರಣಿತಿ ಶಿಂಧೆ ಅವರು ಈಗಾಗಲೇ ಶಾಸಕಿಯಾಗಿದ್ದು, ಸೊಲ್ಲಾಪುರ ಸಿಟಿ ಸೆಂಟ್ರಲ್‌ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ಮಹಾರಾಷ್ಟ್ರದ ಸುಶೀಲ್‌ ಕುಮಾರ್‌ ಶಿಂಧೆ ಅವರು 1971ರಲ್ಲಿ ಕಾಂಗ್ರೆಸ್‌ ಸೇರಿದರು. 1974, 1980, 1985, 1990 ಹಾಗೂ 1992ರ ವಿಧಾನಸಭೆ ಚುನಾವಣೆ ಯಲ್ಲಿ ಗೆದ್ದಲು ಶಾಸಕರಾದ ಅವರು 2004ರ ಲೋಕಸಭೆ ಚುನಾವಣೆಯಲ್ಲೂ ಗೆದ್ದು ಸಂಸತ್‌ ಪ್ರವೇಶಿಸಿದರು. ಇವರು ಸೋಲಾಪುರ ಲೋಕಸಭೆ ಕ್ಷೇತ್ರ ದಿಂದ ಮೂರು ಬಾರಿ ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ. ಶಿಂಧೆ ಅವರು 2002ರಲ್ಲಿ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿ ಎನ್‌ಡಿಎ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದರು.ಮತ್ತೆ, 2002ರಿಂದ 2003ರ ಅವಧಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದರು.ಆಂಧ್ರಪ್ರದೇಶದ ರಾಜ್ಯಪಾಲರಾಗಿಯೂ ಶಿಂಧೆ ಕಾರ್ಯನಿರ್ವಹಿಸಿದ್ದಾರೆ.