Friday, 20th September 2024

ಸಂಸತ್ತಿಗೆ ಪ್ರತಿಪಕ್ಷಗಳು ಗೌರವ ತೋರಲಿ !

ಪ್ರತಿಕ್ರಿಯೆ
ಪ್ರಹ್ಲಾದ ಜೋಶಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ

ಸೆಪ್ಟೆೆಂಬರ್ 20ರಂದು ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದ ಕಪಿಲ್ ಸಿಬಲ್ ಅವರು ಲೇಖನ ವೊಂದನ್ನು ಬರೆದು ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇಂದು
ಸಂಸತ್ತು ಎಷ್ಟು ಸ್ವಾವಲಂಬಿ (ಆತ್ಮನಿರ್ಭರ)ಯಾಗಿದೆ ಅಂದರೆ ಅದಕ್ಕೆ ವಿರೋಧ ಪಕ್ಷಗಳ ಧ್ವನಿಯೇ ಬೇಕಾಗಿಲ್ಲ ಎಂದೂ ಅವರು ಹೇಳಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ 18 ದಿನಗಳ ಕಾಲ ನಡೆಯಬೇಕಿತ್ತು. ಒಂದು ದಿನವೂ ರಜೆಯಿಲ್ಲದೆ ನಿರಂತರ 18 ದಿನಗಳ ಅಧಿವೇಶನಕ್ಕೆ ಯೋಜಿಸಲಾಗಿತ್ತು. ಕೋವಿಡ್ –  19 ಸಮಸ್ಯೆ ಹಾಗೂ ಅದರ ಬಗ್ಗೆ ಇರುವ ಮಾರ್ಗದರ್ಶಿ ಸೂತ್ರಗಳ ಹಿನ್ನೆಲೆಯಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಬೇರೆ ಕೈಗೊಳ್ಳಲಾಗಿತ್ತು. ಬೇರೆ ಬೇರೆ ರಾಜಕೀಯ ಪಕ್ಷಗಳ ನಾಯಕರ ಜೊತೆಗೆ ಚರ್ಚಿಸಿದ ಮೇಲೆಯೇ ಸಂಸತ್ತಿನ ಕಾರ್ಯಸೂಚಿಯನ್ನು ನಿರ್ಧರಿಸಲಾಗಿತ್ತು. ಅದರಲ್ಲಿ ಪ್ರಶ್ನೋತ್ತರ ಕಲಾಪವನ್ನು ಕೈಬಿಡುವ ನಿರ್ಧಾರವೂ ಇತ್ತು. ಚುಕ್ಕಿ ಗುರುತಿಲ್ಲದ ಪ್ರಶ್ನೆಗಳು, ವಿಶೇಷ ಸೂಚನೆಗಳು ಹಾಗೂ ಸಂಸತ್ತಿನ ಇತರ ಕಲಾಪಗಳನ್ನು ಎಂದಿನಂತೆ ಕೈಗೊಳ್ಳಲು
ಉಭಯ ಸದನಗಳ ಮುಖ್ಯಸ್ಥರು ನಿರ್ಧರಿಸಿದ್ದರು. ನಂತರ ವಿವಿಧ ಪಕ್ಷಗಳ ನಾಯಕರೇ ಕರೋನಾ ಸಮಸ್ಯೆಯಿಂದಾಗಿ ಕಲಾಪ ವನ್ನು ಬೇಗ ಮೊಟಕುಗೊಳಿಸಬೇಕು ಎಂದು ಬಯಸಿದರು.

ವಿರೋಧ ಪಕ್ಷಗಳು ಪ್ರಧಾನಿ ಮೋದಿಯವರಿಗೆ ಸಿಕ್ಕ ಜನಾದೇಶವನ್ನು ಪದೇ ಪದೆ ಕಡೆಗಣಿಸುತ್ತಿವೆ. ಸಂಸತ್ತಿನಲ್ಲಿ ಮಂಡನೆಯಾದ ಸುಧಾರಣಾ ಮಸೂದೆಗಳನ್ನು ತಡೆಯಲು ಪಕ್ಷಗಳು ಹಲವು ಬಾರಿ ಯತ್ನಿಸಿವೆ. ಈ ಹಿಂದೆ ತ್ರಿವಳಿ ತಲಾಖ್ ಮಸೂದೆ, ಶತ್ರುಗಳ ಆಸ್ತಿ ಮಸೂದೆ, ಮೋಟಾರು ವೆಹಿಕಲ್‌ಗಳ ತಿದ್ದುಪಡಿ ಮಸೂದೆಗಳು ಕೂಡ ವಿರೋಧ ಪಕ್ಷಗಳ ವಿರೋಧದಿಂದಾಗಿಯೇ ವಿಳಂಬ ವಾಗಿದ್ದವು.

ಇನ್ನು, ಸೆ.20ರಂದು ಕೃಷಿ ಸುಧಾರಣೆ ಮಸೂದೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ನಡೆದು ಕೊಂಡ ರೀತಿಯಿಂದಾಗಿ ರಾಜ್ಯಸಭೆಯ ಘನತೆಗೇ ಧಕ್ಕೆೆಯುಂಟಾಯಿತು. ಸಂಸತ್ತಿನಲ್ಲಿ ತಾವೇ ಕೋಲಾಹಲ ಸೃಷ್ಟಿಸಿ, ಎಲ್ಲದಕ್ಕೂ ಅಡ್ಡಿಪಡಿಸಿ, ಈಗ ಅದರ ಆರೋಪವನ್ನು ಸರಕಾರದ ಬಾಗಿಲ ಬುಡದಲ್ಲಿ ಹಾಗೂ ರಾಜ್ಯಸಭೆಯ ಉಪಸಭಾಪತಿಗಳ ಬುಡದಲ್ಲಿ ತಂದು ಹಾಕಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಜನಾದೇಶಕ್ಕೆ ವಿರೋಧ ಪಕ್ಷಗಳು ಯಾವುದೇ ಗೌರವ ನೀಡುತ್ತಿಲ್ಲ. ಸುಳ್ಳು ಗಳನ್ನೇ ನಿಜವೆಂದು ಸಾರಲು ಅವು ಹೊರಟಿವೆ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ವಿಚಾರಗಳೂ ಅವಿರೋಧವಾಗಿ ಅಥವಾ ಸರ್ವಸಮ್ಮತ ರೀತಿಯಲ್ಲೇ ಸ್ವೀಕೃತವಾಗಬೇಕು ಎಂದಿಲ್ಲ.

ಸಂಸತ್ತಿನಲ್ಲಿ ಪ್ರಸ್ತಾಪವಾಗುವ ಯಾವುದೇ ವಿಷಯದ ಬಗ್ಗೆ ಯಾವುದೇ ಪ್ರಚೋದನೆ ಅಥವಾ ಪೂರ್ವೋದ್ದೇಶಗಳಿಲ್ಲದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಲ್ಲಾ ಸಂಸದರಿಗೂ ಮುಕ್ತ ಸ್ವಾತಂತ್ರ್ಯವಿದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ದಂತೆ ಇತರ ಸದಸ್ಯರಿಗೆ ಇರುವ ಹಕ್ಕು ಮತ್ತು ಅಧಿಕಾರವನ್ನು ಉಲ್ಲಂಘಿಸಲು ಅವರಿಗೂ ಹಕ್ಕಿಲ್ಲ. ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಮೇಲಿನ ಚರ್ಚೆಯ ವೇಳೆ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್‌ (ಎನ್‌ಡಿಎ)ನ 109 ಸದಸ್ಯರು ಸದನದಲ್ಲಿ ಹಾಜರಿದ್ದರು. ಆದರೆ, ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್‌ (ಯುಪಿಎ)ನ ಕೇವಲ 70 ಸದಸ್ಯರು ಹಾಜರಿದ್ದರು. ಇದು ಹಾಜರಿ ಪುಸ್ತಕದಲ್ಲೇ ನಮೂದಾಗಿದೆ. ಕೆಲ ಸದಸ್ಯರು ಗೈರು ಹಾಜರಿಗೆ ಅನುಮತಿ ಕೂಡ ಕೋರಿದ್ದರು. ಸೆ.20ರಂದು ಉಪಸಭಾಪತಿಗಳ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ನಡೆದ ಕಲಾಪಗಳು ಸಂಪೂರ್ಣ ಸಂವಿಧಾನಬದ್ಧವಾಗಿ ಮತ್ತು ಸಂಸತ್ತಿನ ನಿಯಮಗಳಿಗೆ ಬದ್ಧ ವಾಗಿಯೇ ಇದ್ದವು. ರಾಜ್ಯಸಭೆಯ ಕಲಾಪ ಸಲಹಾ ಸಮಿತಿ ನೀಡಿದ್ದ ಸಮಯಕ್ಕಿಂತ ಹೆಚ್ಚು ಹೊತ್ತು ಕೃಷಿ ಮಸೂದೆಗಳ ಬಗ್ಗೆ ಚರ್ಚೆಯಾಗಿತ್ತು.

ಆದರೆ, ವಿರೋಧ ಪಕ್ಷಗಳು ಸಂಸತ್ ಕಲಾಪದ ಅಂದಿನ ವಿಧಾನವೇ ಸಂಸತ್ತಿನ ಒಮ್ಮತಾಭಿಪ್ರಾಯ ಎಂಬಂತೆ ಬಿಂಬಿಸಲು
ಯತ್ನಿಸುತ್ತಿವೆ. ಅದು ಸಂಸತ್ತಿನ ಹಾಗೂ ಸಂವಿಧಾನದ ನಿಯಮಗಳಿಗೆ ಸಂಪೂರ್ಣ ವಿರುದ್ಧವಾದುದು. ಸಂಸತ್ತಿನಲ್ಲಿ ಎಲ್ಲಾ ನಿರ್ಧಾರಗಳನ್ನು ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.

ನಾವು ಎಷ್ಟೇ ಕೇಳಿದರೂ ಕೃಷಿ ಮಸೂದೆಗಳ ತಿದ್ದುಪಡಿಗೆ ರಾಜ್ಯಸಭೆಯ ಉಪಸಭಾಪತಿಗಳು ಮತದಾನ ನಡೆಸಲಿಲ್ಲ, ಹಾಗೆಯೇ ಪಾಸು ಮಾಡಿಸಿಕೊಂಡರು ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಇದು ಸುಳ್ಳು ಆರೋಪ. ಸದನದಲ್ಲಿ ಯಾವುದೇ ಪ್ರಸ್ತಾಪದ ಬಗ್ಗೆ ಮತದಾನ ನಡೆಸಲು ಎರಡು ಮೂಲಭೂತ ನಿಯಮಗಳಿವೆ. ಮೊದಲನೆಯದಾಗಿ, ಮತದಾನಕ್ಕೆ ಕೋರುವ ಸಂಸದರು ತಮ್ಮ ಆಸನ ದಲ್ಲಿರಬೇಕು. ಎರಡನೆಯದಾಗಿ, ಸದನ ಸರಿಯಾದ ರೀತಿಯಲ್ಲಿ ನಡೆಯುತ್ತಿರಬೇಕು. ಆಗಷ್ಟೇ
ಮತದಾನ ನಡೆಸಲು ಸಾಧ್ಯ. ಆದರೆ, ಅಂದು ಮತದಾನಕ್ಕೆ ಕೋರಿದ್ದ ಕೆಲ ಸಂಸದರು ಅವರ ಸೀಟಿನಲ್ಲೇ ಇರಲಿಲ್ಲ. ಈ ವಿಚಾರ ಸದನದ ನಡಾವಳಿ ಯಲ್ಲೂ ದಾಖಲಾಗಿದೆ.

ಆವತ್ತು ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ರೂಲ್ ಬುಕ್ ಹರಿದು ಬಿಸಾಕುವುದು, ಘೋಷಣೆ ಕೂಗುವುದು, ಸಚಿವಾಲಯದ
ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು, ಮಾರ್ಷಲ್‌ಗಳ ಜೊತೆಗೆ ಘರ್ಷಣೆ ನಡೆಸುವುದು ಹಾಗೂ ರಾಜ್ಯಸಭೆಯ ಅಧಿಕಾರಿಗಳ
ಮೇಜುಗಳ ಮೇಲೆ ಹತ್ತಿ ನಿಲ್ಲುವುದೂ ಸೇರಿದಂತೆ ನಾನಾ ರೂಪದ ಸಮಸ್ಯೆಗಳನ್ನು ಸೃಷ್ಟಿಸಿದ್ದವು. ಅವರ ನಡತೆ ಕೇವಲ
ಸಂಸತ್ತಿನ ನಿಯಮಗಳಿಗಷ್ಟೇ ವಿರುದ್ಧವಾಗಿರಲಿಲ್ಲ, ಭಾರತೀಯ ದಂಡ ಸಂಹಿತೆಗೂ ವಿರುದ್ಧವಾಗಿತ್ತು. ಸಂಸತ್ತಿನ ನಿಯಮ ಗಳನ್ನು ಉಲ್ಲಂಸಿದ ಕಾರಣಕ್ಕೆ ಅವರಲ್ಲಿ ಎಂಟು ಜನರನ್ನು ಅಧಿವೇಶನದ ಇನ್ನುಳಿದ ಅವಧಿಗೆ ಅಮಾನತು ಮಾಡಲಾಗಿತ್ತು. ಭಾರತೀಯ ದಂಡ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಅವರ ವಿರುದ್ಧ ಕ್ರಿಮಿನಲ್ ಕೇಸು ಕೂಡ ದಾಖಲಿಸಲು ಅವಕಾಶವಿದೆ.

ಏಕೆಂದರೆ ಸಂಸತ್ತಿನೊಳಗೆ ನಡೆಸುವ ಕ್ರಿಮಿನಲ್ ಚಟುವಟಿಕೆಗಳಿಂದ ಸಂಸದರಿಗೆ ಯಾವುದೇ ರಕ್ಷಣೆ ಇಲ್ಲ. ಕಪಿಲ್ ಸಿಬಲ್ ಅವರು ಪ್ರಶ್ನೋತ್ತರ ಕಲಾಪವನ್ನು ರದ್ದುಪಡಿಸಲಾಗಿತ್ತು, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪ್ರಶ್ನೋತ್ತರ ಕಲಾಪ ಬಹಳ ಮುಖ್ಯ, ಪ್ರಶ್ನೋತ್ತರ ಕಲಾಪ ರದ್ದುಪಡಿಸುವ ಮೂಲಕ ಸಂಸತ್ತಿಗೆ ಕಾರ್ಯಾಂಗದ ಉತ್ತರದಾಯಿತ್ವ ತೋರುವುದರಿಂದ ತಪ್ಪಿಸಿಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ.

ಸಾಮಾನ್ಯವಾಗಿ ಒಂದು ದಿನಕ್ಕೆ 20 ಚುಕ್ಕಿ ಗುರುತಿನ ಪ್ರಶ್ನೆಗಳು ಹಾಗೂ 230 ಚುಕ್ಕಿ ಗುರುತಿಲ್ಲದ ಪ್ರಶ್ನೆಗಳನ್ನು ಲೋಕಸಭೆಯ ಕಲಾಪಕ್ಕೆ ತೆಗೆದುಕೊಳ್ಳಲಾಗುತ್ತದೆ. ರಾಜ್ಯಸಭೆಯಲ್ಲಿ 15 ಚುಕ್ಕಿ ಗುರುತಿನ ಪ್ರಶ್ನೆಗಳು ಹಾಗೂ 160 ಚುಕ್ಕಿ ಗುರುತಿಲ್ಲದ ಪ್ರಶ್ನೆ ಗಳನ್ನು ಕಲಾಪಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದು ಸಾಮಾನ್ಯ ದಿನಗಳ ಮಾತಾಯಿತು. ಈ ಬಾರಿಯ ಅಧಿವೇಶನದಲ್ಲಿ ಕೋವಿಡ್ ಸಂದರ್ಭದ ಅನಿವಾರ್ಯತೆಯನ್ನು ಪರಿಗಣಿಸಿ ಕೇವಲ ಚುಕ್ಕಿ ಗುರುತಿನ ಪ್ರಶ್ನೆಗಳನ್ನಷ್ಟೇ ಕೈಬಿಡಲಾಗಿತ್ತು. ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೆ ಎಂದಿನಂತೆ ಉತ್ತರ ನೀಡಲಾಗಿದೆ.

ದಿನಕ್ಕೆ ಸರಾಸರಿ 230/160 ಪ್ರಶ್ನೆಗಳಿಗೆ ಆಯಾ ಸದನಗಳಲ್ಲಿ ಸರಕಾರ ಉತ್ತರ ನೀಡಿದೆ. ಸಂಸತ್ತಿಗೆ ಕಾರ್ಯಾಂಗದ ಉತ್ತರಾದಿ ಯಿತ್ವ ತೋರುವುದರಿಂದ ಸರಕಾರ ತಪ್ಪಿಸಿಕೊಂಡಿದೆ ಎಂಬ ಸುಳ್ಳು ಭಾವನೆಯನ್ನು ಬಿತ್ತಲು ಅವರು ಯತ್ನಿಸುತ್ತಿದ್ದಾರೆ. ಸುಗ್ರೀವಾಜ್ಞೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸದೆಯೇ ಪಾಸು ಮಾಡಲಾಗಿದೆ ಎಂದೂ ಅವರು ಟೀಕಿಸಿದ್ದಾರೆ. ಇದೂ ಕೂಡ ಆಧಾರರಹಿತ ಆರೋಪ. ಏಕೆಂದರೆ, ಸುಗ್ರೀವಾಜ್ಞೆಗಳನ್ನು ಸಾಮಾನ್ಯವಾಗಿ ಯಾರೂ ಸ್ಥಾಯಿ ಸಮಿತಿಗೆ ಒಪ್ಪಿಸುವುದಿಲ್ಲ. ಏಕೆಂದರೆ ಆರು ತಿಂಗಳೊಳಗೆ ಅವುಗಳನ್ನು ಪಾಸು ಮಾಡಿ ಕೊಳ್ಳುವ ಅನಿವಾರ್ಯತೆ ಸರಕಾರಕ್ಕಿರುತ್ತದೆ.

ಸಂವಿಧಾನದ 123ನೇ ವಿಧಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಮಸೂದೆಯನ್ನು ಪರಾಮರ್ಶಿಸಿ ವರದಿ ನೀಡಲು ಇಷ್ಟು ಕಡಿಮೆ ಅವಧಿಯಲ್ಲಿ ಸಮಿತಿಗೆ ಸಾಧ್ಯವಾಗುವುದಿಲ್ಲ. ಕಪಿಲ್ ಸಿಬಲ್ ಅವರು ಪ್ರಧಾನಿ ವಿರುದ್ಧ ವೈಯಕ್ತಿಕವಾಗಿಯೂ ಸಾಕಷ್ಟು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಆದರೆ, ಇಡೀ ಮುಂಗಾರು ಅಧಿವೇಶನದುದ್ದಕ್ಕೂ ಸಂಸತ್ತಿಗೆ ಕಾಲಿರಿಸದ ತಮ್ಮದೇ
ಪಕ್ಷದ ನಾಯಕಿಯ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನಡೆದುಕೊಂಡ ರೀತಿಯು ಜನಾ ದೇಶದ ಬಗ್ಗೆ ಹಾಗೂ ಸಂಸತ್ತಿನ ಬಹುಮತದ ಬಗ್ಗೆ ಅವುಗಳಿಗೆ ಗೌರವವಿಲ್ಲದಿರುವ ಮನಸ್ಥಿತಿಯ ದ್ಯೋತಕಗಳಲ್ಲದೆ ಬೇರೇನೂ ಅಲ್ಲ.