Friday, 15th November 2024

ವರ್ಷ ಪೂರೈಸಿದ ಎಐಸಿಸಿ ಅಧ್ಯಕ್ಷರು

ಗುಣಗಾನ 

ಡಾ | ಆನಂಧ ಕುಮಾರ್‌

ಪಕ್ಷದ ನಿರ್ಧಾರಗಳನ್ನೆಲ್ಲ ಅತ್ಯಂತ ತಾಳ್ಮೆಯಿಂದ ಸ್ವೀಕರಿಸಿದ್ದು, ಜವಾಬ್ದಾರಿಗಳನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ್ದು ಖರ್ಗೆಯವರ ಹೆಚ್ಚುಗಾರಿಕೆ.
ವೈಚಾರಿಕ ಸ್ಪಷ್ಟತೆ, ಕಳಂಕರಹಿತ ರಾಜಕೀಯ ಜೀವನ, ಮುತ್ಸದ್ದಿ ನಡೆ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ಎತ್ತರಕ್ಕೆ ಕೊಂಡೊಯ್ದಿವೆ.

ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕರಾಗಿ ಇಂದಿಗೆ (೨೬ ಅಕ್ಟೋಬರ್ ೨೦೨೩) ಒಂದು ವರ್ಷವಾಯಿತು. ದೊಡ್ಡ ವ್ಯಕ್ತಿ, ದೊಡ್ಡತನ, ದೊಡ್ಡಸ್ಥಾನ. ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶೋಷಿತರಲ್ಲಿ ಆಂಧ್ರದ ಸಂಜೀವಯ್ಯ ಮೊದಲಿಗರು. ಕರ್ನಾಟಕದ ಖರ್ಗೆ ಎರಡನೆ ಯವರು. ಎಐಸಿಸಿ ಅಧ್ಯಕ್ಷ ಸ್ಥಾನ ಪಡೆದ ಎಸ್.ನಿಜಲಿಂಗಪ್ಪ ಮೊದಲ ಕನ್ನಡಿಗರಾದರೆ, ಮಲ್ಲಿಕಾರ್ಜುನ ಖರ್ಗೆ ಎರಡನೆಯವರು.

ಖರ್ಗೆಯವರು ಅಂಥ ಉನ್ನತ ಸ್ಥಾನಕ್ಕೆ ಹೇಳಿಮಾಡಿಸಿದ ವ್ಯಕ್ತಿ. ೮೨ ವರ್ಷದ ನಾಯಕ ಖರ್ಗೆಯವರಿಂದಾಗಿ ಅಧ್ಯಕ್ಷ ಸ್ಥಾನದ ಗೌರವ, ಕೀರ್ತಿ, ಪ್ರತಿಷ್ಠೆಗಳು ಇಮ್ಮಡಿಯಾಗಿವೆ. ಪರಿಪಕ್ವ ಅನುಭವದ ಪರಿಶುದ್ಧ ರಾಜಕಾರಣಿ ಖರ್ಗೆಯವರು ಐಸಿಯುನಲ್ಲಿದ್ದ ಕಾಂಗ್ರೆಸ್‌ಗೆ ಚೈತನ್ಯ ತುಂಬಿ ಲೋಕಸಭಾ ಚುನಾವಣೆಗೆ ಸಜ್ಜುಗೊಳಿಸಿದ್ದಾರೆ. ಈಗ ನಡೆಯಲಿರುವ ೫ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ೨-೩ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದರೆ ಅದರ ಕೀರ್ತಿ, ಖರ್ಗೆಯವರ ಕೀರ್ತಿ ಎರಡೂ ಇಮ್ಮಡಿಗೊಳ್ಳುತ್ತವೆ, ಲೋಕಸಭಾ ಚುನಾವಣೆಯ ಗೆಲುವಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತದೆ.

ಬೀದರ್ ಜಿಲ್ಲೆಯ ವರವಟ್ಟಿ ಗ್ರಾಮದಲ್ಲಿ ಹುಟ್ಟಿದ ಖರ್ಗೆಯವರು, ಬ್ರಿಟಿಷ್ ರೆಜಿಮೆಂಟಿನವರು ತಮ್ಮ ತಾಯಿಯನ್ನು ತಮ್ಮ ಕಣ್ಣೆದುರೇ ಸುಟ್ಟಿದ್ದನ್ನು ಕಂಡು ತಂದೆಯೊಡನೆ ಗುಲ್ಬರ್ಗಾಕ್ಕೆ ಬಂದು ನೆಲೆಸಿದರು. ಕಾರ್ಮಿಕನ ಮಗನಾದ ಇವರು ಕಾನೂನು ಪದವೀಧರರಾಗಿ ರಾಜಕೀಯಕ್ಕೆ ಬಂದು ಸತತ ೯ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಕಂದಾಯ, ಸಣ್ಣ ಕೈಗಾರಿಕೆ, ಸಹಕಾರ, ಜಲಸಂಪನ್ಮೂಲ, ಗೃಹ, ಸಾರಿಗೆ,
ಸಣ್ಣ ನೀರಾವರಿ ಮೊದಲಾದ ಖಾತೆಗಳ ಸಚಿವರಾಗಿ, ವಿರೋಧಪಕ್ಷದ ನಾಯಕ, ಪಕ್ಷಾಧ್ಯಕ್ಷ ಎಲ್ಲವೂ ಆಗಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು.

ತರುವಾಯ ಲೋಕಸಭಾ ಸದಸ್ಯರಾಗಿ ಕೇಂದ್ರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ, ರೈಲ್ವೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಗಳ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಕೀರ್ತಿ ಗಳಿಸಿದ ಖರ್ಗೆಯವರು ಪ್ರಸ್ತುತ ರಾಜ್ಯಸಭೆಯಲ್ಲಿ ವಿಪಕ್ಷ
ನಾಯಕರಾಗಿ, ಎಐಸಿಸಿ ಅಧಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಖರ್ಗೆಯವರು ಐದೂವರೆ ದಶಕ ಸಕ್ರಿಯ ರಾಜಕಾರಣದಲ್ಲಿದ್ದರೂ, ಸತತ ೯ ಬಾರಿ ಶಾಸಕರಾಗಿ ಆಯ್ಕೆಯಾದರೂ, ಸಚಿವರಾಗಿ ಹಲವು ಮಹತ್ವಪೂರ್ಣ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರೂ, ಹಿರಿಯ ದಲಿತ ನಾಯಕರಾಗಿದ್ದರೂ, ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಪ್ತ ವಲಯದವರಾಗಿದ್ದರೂ, ರಾಜ್ಯ ರಾಜಕಾರಣದಲ್ಲಿ ಇದಾವುದೂ ಅವರನ್ನು ಸಿಎಂ ಸ್ಥಾನದೆಡೆಗೆ ಕೈಹಿಡಿದು ನಡೆಸಲಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ಈ ಬಗ್ಗೆ ಅವರಿಗೆ ಬೇಸರವಿದ್ದರೂ, ಅವರ ಆಪ್ತರು ಈ ಕಾರಣಕ್ಕಾಗಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಸಿಟ್ಟಾದ ಸಂದರ್ಭಗಳಿದ್ದರೂ, ಪಕ್ಷದ ಅನೇಕ ಹಿರಿಯ ನಾಯಕರು ಆಸೆ-ಆಮಿಷಗಳಿಗೆ ಶರಣಾಗಿ ಬಂಡೆದ್ದರೂ, ಖರ್ಗೆಯವರು ಮಾತ್ರ ತಮ್ಮ ಅಚಲ ನಿಷ್ಠೆಯನ್ನು ಯಾವತ್ತೂ ಬಿಟ್ಟುಕೊಡದೆ
ಪಕ್ಷದಲ್ಲೇ ನೆಲೆ ನಿಂತರು. ಪಕ್ಷದ ನಿರ್ಧಾರಗಳನ್ನೆಲ್ಲ ಅತ್ಯಂತ ತಾಳ್ಮೆಯಿಂದ ಸ್ವೀಕರಿಸಿದ್ದು, ಎಲ್ಲಾ ಸಂದರ್ಭಗಳನ್ನು ಅರ್ಥಮಾಡಿಕೊಂಡು ಸಂಯಮ ತೋರಿಸಿದ್ದು, ವಹಿಸಿದ ಜವಾಬ್ದಾರಿಗಳನ್ನೆಲ್ಲಾ ಸಮರ್ಥವಾಗಿ ನಿರ್ವಹಿಸಿದ್ದು ಖರ್ಗೆಯವರ ಹೆಚ್ಚುಗಾರಿಕೆ.

ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತದೆಡೆಗಿನ ಅಚಲನಿಷ್ಠೆ, ಕೊಟ್ಟ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ, ಸಾಧಿಸಿ ತೋರಿಸುವ ಛಲ, ಆಳವಾದ ಅಧ್ಯಯನದಿಂದ ದಕ್ಕಿರುವ ವೈಚಾರಿಕ ಸ್ಪಷ್ಟತೆ, ಕಳಂಕರಹಿತ ರಾಜಕೀಯ ಜೀವನ, ಮುತ್ಸದ್ದಿ ನಡೆ ಈ ಎಲ್ಲವೂ ಅವರನ್ನು
ರಾಷ್ಟ್ರ ರಾಜಕಾರಣದಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ. ಜೀವನದಲ್ಲಿ ಅಂಬೇಡ್ಕರ್‌ರನ್ನು ಆದರ್ಶ ವ್ಯಕ್ತಿಯಾಗಿ ಪರಿಗಣಿಸಿರುವ ಖರ್ಗೆಯವರು ರಾಜಕಾರಣದಲ್ಲಿ ಇಂದಿರಾ ಗಾಂಧಿಯವರನ್ನು ಅನುಸರಿಸಿ ನಿಷ್ಠೆ ಮೆರೆದವರು.

ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೇಲ್ವರ್ಗಗಳನ್ನು ವಿರೋಧಿಸಿ, ಕೆಳವರ್ಗಗಳನ್ನು ಪೋಷಿಸಿ ಬೆಳೆಸಿದ ಮುಖ್ಯಮಂತ್ರಿ ದೇವರಾಜ ಅರಸರ ಶಿಷ್ಯನಾಗಿ ಬೆಳೆದರೂ ಖರ್ಗೆಯವರು ಎಂದೂ ಮೇಲ್ವರ್ಗಗಳನ್ನು ವಿರೋಧಿಸಲಿಲ್ಲ. ಬಸವಲಿಂಗಪ್ಪನವರಂತೆ ಕೆಳವರ್ಗದ ಪರ ಘರ್ಜಿಸಲೂ ಇಲ್ಲ. ಮೇಲ್ವರ್ಗಗಳ ವಿಶ್ವಾಸ ಗಳಿಸಿಕೊಂಡು, ಕೆಳವರ್ಗದ ಜನರ ಹಿತಕ್ಕಾಗಿ ದುಡಿದರು. ಆಜಾನುಬಾಹು ಶರೀರ, ಪ್ರಬುದ್ಧ ವ್ಯಕ್ತಿತ್ವ ಈ ಎರಡನ್ನೂ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದವರು. ಸತತ ೫೪ ವರ್ಷ ರಾಜಕಾರಣದಲ್ಲಿದ್ದರೂ ಅವರೆಂದೂ ತಪ್ಪುಹೆಜ್ಜೆ ಇಡಲಿಲ್ಲ. ಮಾಧ್ಯಮಗಳಿಗೆ ಆಹಾರವಾಗಲಿಲ್ಲ, ಉಡಾಫೆಯಿಂದ ನಡೆದುಕೊಳ್ಳಲಿಲ್ಲ. ಈ ಒಂಟಿಸಲಗ ಅರಣ್ಯದ ಹಾದಿಯಲ್ಲೂ ಅಷ್ಟೇ, ರಾಜಮಾರ್ಗದಲ್ಲೂ
ಅಷ್ಟೇ. ಒಂದೇ ವೇಗ, ಒಂದೇ ಗುರಿ.

ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಸೇರಿ ೨೬ ಪಕ್ಷಗಳಿವೆ. ಈ ಮೈತ್ರಿಕೂಟದ ಹಿರಿಯ ನಾಯಕರಿಗೆ ಭಾರತದ ಬಹುತ್ವ ಮತ್ತು ಸೌಹಾರ್ದದ ಬದುಕನ್ನು ಪುನರ್ ಸ್ಥಾಪಿಸುವುದು ಆದ್ಯತೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವುದು, ಸಮೃದ್ಧ ಭಾರತವನ್ನು
ನಿರ್ಮಿಸುವುದು ಅವರ ಕನಸಾಗಿದೆ. ಮೈತ್ರಿಕೂಟದ ಸಹಭಾಗಿಗಳಾಗಿರುವ ವಿವಿಧ ಪಕ್ಷಗಳ ನಡುವೆ ಸಮನ್ವಯ ತರಲು ಯತ್ನಿಸುತ್ತಿರುವ ಕಾಂಗ್ರೆಸ್ ಉದಾರವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆಯವರು ಅಭಿಮಾನಪಡುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಅನುಭವವನ್ನು ಪಣಕ್ಕಿಟ್ಟು ಅವರು ಮೈತ್ರಿಕೂಟವನ್ನು ಬಲಪಡಿಸುತ್ತಿದ್ದಾರೆ, ಮುನ್ನಡೆಸುತ್ತಿದ್ದಾರೆ.

ಹಾಗೆ ನೋಡಿದರೆ ಖರ್ಗೆಯವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌ರವರ ಆದರ್ಶಗಳಲ್ಲಿ ಬಲವಾದ ನಂಬಿಕೆಯಿಟ್ಟು ರಾಜಕಾರಣ ಮಾಡಿದ ನಾಯಕರವರು. ಖರ್ಗೆಯವರು ಭ್ರಷ್ಟಾಚಾರದಲ್ಲಿ, ಹಗರಣಗಳಲ್ಲಿ ಸಿಲುಕದೆ ಪ್ರಚಾರ ಬಯಸದೆ ಬಂದವರು. ಟೀಕೆ-ಟಿಪ್ಪಣಿಗಳ ವಿರುದ್ಧ ಸೇಡಿನ ರಾಜಕಾರಣ ಮಾಡಿದವರಲ್ಲ. ಆವರ ಈ ‘ಮಾದರಿ ರಾಜಕಾರಣ’ದ ವ್ಯಾಪಕ ಪ್ರಚಾರ ನಡೆದಿದ್ದಿದ್ದರೆ, ಮೋದಿಯವರು ಇಷ್ಟೆಲ್ಲಾ ಅನಾಹುತ ಮಾಡಿಯೂ ಮಹಾನ್ ದೇಶಭಕ್ತರೆನಿಸಿಕೊಳ್ಳಲು ಅವಕಾಶವೇ ಇರುತ್ತಿರಲಿಲ್ಲ. ಖರ್ಗೆಯವರದು ಕಾಂಗ್ರೆಸಿಗರಿಗೆ ಮಾತ್ರವಲ್ಲದೆ,
ಎಲ್ಲಾ ಪಕ್ಷಗಳ ರಾಜಕಾರಣಿಗಳ ಪಾಲಿಗೂ ಅನುಕರಣೀಯ ವ್ಯಕ್ತಿತ್ವ.

‘ಇಂಡಿಯ’ ಮೈತ್ರಿಕೂಟದ ನೇತೃತ್ವ ವಹಿಸಿರುವ ಖರ್ಗೆ ಯವರು ತಮ್ಮದೇ ಆದ ಉದ್ದೇಶ, ಗುರಿ, ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಬದ್ಧತೆಯಿಂದ ಮುನ್ನಡೆಯುತ್ತಿರುವುದು ಸದ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆ. ಮೋದಿಯವರು ಕಟ್ಟುವ ಹುಸಿ ಕಥಾನಕಗಳ ಬಣ್ಣವನ್ನು ಬಯಲು ಮಾಡುವುದು, ೨೦೨೪ರ ಲೋಕಸಭಾ ಚುನಾವಣೆಯನ್ನು ಮೋದಿ-ಕೇಂದ್ರಿತವಾಗದಂತೆ ತಡೆಯುವುದು ಅಗತ್ಯವಾಗಿದೆ. ಎನ್‌ಡಿಎ ಸರಕಾರದ ವೈಫಲ್ಯವನ್ನು ಜನ ಸಾಮಾನ್ಯರ ಕಷ್ಟ-ಕಾರ್ಪಣ್ಯವನ್ನು, ಮೋದಿಭಕ್ತರ ಹುಸಿ ದೇಶಭಕ್ತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ. ಅಪ್ಪಟ ದೇಶಭಕ್ತ, ಕರ್ನಾಟಕದ ಹೆಮ್ಮೆ ಯೆನಿಸಿರುವ ಖರ್ಗೆಯವರ ನೇತೃತ್ವದ ‘ಇಂಡಿಯ’ ಮೈತ್ರಿಕೂಟ ಯಶಸ್ವಿಯಾದರೆ ಪ್ರಜಾಪ್ರಭುತ್ವದ
ಮೌಲ್ಯಗಳು ಗೆದ್ದಂತೆ.

(ಲೇಖಕರು ಕೆಪಿಸಿಸಿ ಮಾಜಿ ಕಾರ್ಯದರ್ಶಿ)