Thursday, 21st November 2024

ತೆಲಂಗಾಣದಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 7 ಕೆಜಿ ಚಿನ್ನ ವಶ

ತೆಲಂಗಾಣ: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಏಳು ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ಈಗಾಗಲೇ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ತೆಲಂಗಾಣದಲ್ಲೂ ನವೆಂಬರ್‌ 30ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ರಾಜ್ಯಾದ್ಯಂತ ವ್ಯಾಪಕ ತಪಾಸಣೆ ನಡೆಯುತ್ತಿದೆ.

ತಪಾಸಣೆ ಭಾಗವಾಗಿ ಸಂಗಾರೆಡ್ಡಿ ಜಿಲ್ಲೆಯಲ್ಲಿ ಸರಿಯಾದ ದಾಖಲೆಗಳನ್ನು ತೋರಿಸದ ಕಾರಣ ಪೊಲೀಸರು 7 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಸಂಗಾರೆಡ್ಡಿ ಜಿಲ್ಲೆಯ ಮಾಗಿಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರೊಂದರಲ್ಲಿ 4.5 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.

ಈಗಾಗಲೇ, ತೆಲಂಗಾಣ ರಾಜ್ಯದ ಗಡಿಯಲ್ಲಿ ಕಣ್ಗಾವಲು ನಡೆಸಿದ ಪೊಲೀಸರು ಅಪಾರ ಪ್ರಮಾಣದ ನಗದು ಸಹಿತ ಚಿನ್ನಾಭರಣ, ಮದ್ಯ, ಬೆಳ್ಳಿ ಆಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಭಾಗವಾಗಿ ಕೆಲ ದಿನಗಳ ಹಿಂದೆ ಮಿಯಾಪುರದಲ್ಲಿ 27 ಕೆಜಿ ಚಿನ್ನ ಹಾಗೂ 15 ಕೆಜಿ ಬೆಳ್ಳಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಪೊಲೀಸರು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ಈ ತಪಾಸಣೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ ಹಾಗೂ ಕೋಟ್ಯಂತರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗುತ್ತಿದೆ.