Saturday, 23rd November 2024

ಅಧಿವೇಶನಕ್ಕೆ ಆಲಸ್ಯ, ಅಸಡ್ಡೆ ಏಕೆ ?

ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು

ಇಡೀ ದೇಶದಲ್ಲಿ ಕರೋನಾ ಆತಂಕ, ಭಯದ ವಾತಾವರಣವಿದ್ದರೂ ನಮ್ಮ ರಾಜ್ಯದಲ್ಲಿ ಮಾತ್ರ ಧೈರ್ಯವಾಗಿ  ಆತ್ಮವಿಶ್ವಾಸ ದಿಂದ ವಿದ್ಯಾರ್ಥಿಗಳನ್ನು ಮನೆಯಿಂದ ಹೊರಡಿಸಿ ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ನಡೆಸಿ ಉತ್ತಮ ಫಲಿತಾಂಶ ಹೊರ ಹೊಮ್ಮುವಂತೆ ಮಾಡಿದ ಕೀರ್ತಿ ನಮ್ಮ ರಾಜ್ಯದ ಸರಕಾರಕ್ಕೆ ಸಲ್ಲುತ್ತದೆ.

ಹಾಗೆಯೇ ತಮ್ಮ ಹಿತಚಿಂತನೆ ಕುಟುಂಬವನ್ನು ಮರೆತು ತಮ್ಮ ಕರ್ತವ್ಯ ಮೆರೆದ ಪೌರಕಾರ್ಮಿಕರು ಆಶಾಕಾರ್ಯಕರ್ತೆಯರು ವೈದ್ಯಕೀಯ ತಂಡ ಮತ್ತು ಆರಕ್ಷಕರು ಸಮಾಜದಲ್ಲಿ ಗೌರವನೀಯರಾಗಿದ್ದಾರೆ. ಆದರೆ ಇಂದು ಕರೋನಾಕ್ಕೆ ಯಾರೂ ಹೆದರು ತ್ತಿಲ್ಲ. ದಿನ ಸಾಯುವವರಿಗೆ ಅಳೋರ್ಯಾರು ಎಂಬಂತೆ ಪ್ರತಿಯೊಬ್ಬರೂ ತಮ್ಮ ತುತ್ತಿನ ಕಾಯಕವನ್ನು ದೈನಂದಿನ ಚಟುವಟಿಕೆ ಗಳನ್ನು ಮಾಡಿಕೊಂಡು ಸಾಗುತ್ತಿದ್ದಾರೆ. ಬೆಂಗಳೂರಿನಲ್ಲೇ ಪ್ರತಿದಿನ ನಾಲ್ಕೈದು ಸಾವಿರ ಕರೋನಾ ಸೋಂಕಿತರು ದೃಢಪಡು ತ್ತಿದ್ದರೂ ಜನ ಆತಂಕಗೊಳ್ಳದೆ ಬರೋದು ಬರಲಿ ನೋಡೇ ಬಿಡೋಣಾ ಎಂಬ ಆತ್ಮವಿಶ್ವಾಸದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸಾಮಾಜಿಕ ಅಂತರವಿಲ್ಲದೆ ಮಾಸ್ಕ್‌ ಧರಿಸದೆ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವ ಉಡಾಫೆ ಮಂದಿಗಳು ಮಾತ್ರ ನಿಜವಾದ ಸಮಾಜಗೇಡಿಗಳು.

ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಬದಲಾವಣೆಗಳು ಸಂಭವಿಸಲೇ ಬೇಕು. ಪ್ರತಿನಿತ್ಯದ ಕರೋನಾ ಅಂಕಿಅಂಶಗಳನ್ನು ನೋಡದೇ ಹೋದರೆ ಇದೀಗ ಕರೋನಾ ಪೂರ್ವಕಾಲದ ಸ್ಥಿತಿ ಮರುಕಳಿಸುತ್ತಿರುವುದು ಉದ್ಯೋಗ ಉದ್ಯಮಗಳು ಮೆಲ್ಲಗೆತೆರದು ಕೊಳ್ಳುತ್ತಿರುವುದು ವ್ಯಾಪಾರ ವಹಿವಾಟುಗಳು ಮತ್ತೇ ಅಂಬೆಗಾಲಿಡುತ್ತಿರುವುದು ಸಮಾಧಾನಕರ ವಿಷಯ. ಇಂಥ ವಿಶ್ವಾಸನೀಯ ಸಮಯದಲ್ಲಿ ಸಮಾಜವನ್ನು ಆಳುವ ಸರಕಾರದ ಪಾತ್ರ ಬಲು ಮಹತ್ವವಾದದ್ದು.

ಸಾಮ್ರಾಜ್ಯಗಳ ಕಾಲದಲ್ಲಿ ಸ್ವತಃ ರಾಜರುಗಳೇ ಮಾರುವೇಶದಲ್ಲಿ ಹೊರಟು ಪ್ರಜೆಗಳ ಸುಖದುಃಖಗಳನ್ನು ಸಾಕ್ಷಾತ್ ಕಂಡು ಬರುತ್ತಿದ್ದರು. ಪ್ರಜೆಗಳೊಂದಿಗೆ ಬೆರೆತು ಅವರ ಸಮಸ್ಯೆ ಸಂಕಟಗಳನ್ನು ಮನಗಂಡು ರಾಜ್ಯಭಾರ ಮಾಡುತ್ತಿದ್ದರು. ಆದರೆ ಇಂದಿನ ಸಂವಿಧಾನಾತ್ಮಕ  ಕಾರ್ಯಾಂಗ ಮತ್ತು ವಿದ್ಯುನ್ಮಾನ ಇಂಟರ್ನೆಟ್ ಯುಗದಲ್ಲಿ ಮಂತ್ರಿ ಮಹೋದಯರು ವಿಧಾನಸೌಧದಲ್ಲಿ ಕುಳಿತೇ ಪ್ರತಿಯೊಬ್ಬ ಪ್ರಜೆಯನ್ನು ತಲುಪುವಂತೆ ಕಾರ್ಯ ನಿರ್ವಹಿಸಬಹುದು. ಏಕೆಂದರೆ ಸಮಾಜದ ಹಿತದೃಷ್ಟಿಯಲ್ಲೇ
ಸರಕಾರ ನಡೆದುಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ಇದೆ. ಇಲ್ಲಿನ ಪ್ರತಿಯೊಬ್ಬ ಜನಪ್ರತಿನಿಧಿಗಳೂ ಪ್ರಜಾಪ್ರಭುತ್ವದ ಸೇವಕರು ಪಾಲಕರೇ ಹೊರತು ಇಂದ್ರಚಂದ್ರರೇನಲ್ಲ. ಇದನ್ನು ಸರಿಯಾಗಿ ಅರ್ಥೈಸಿಕೊಂಡು ನಡೆಯುವವನೇ ನಿಜವಾದ
ಪ್ರಜಾಪ್ರತಿನಿಧಿ ಎನಿಸಿಕೊಳ್ಳುತ್ತಾನೆ. ಇಂದಿನ ಸರಕಾರದಲ್ಲೇ ನೋಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರೋನಾ ಸೋಂಕಿಗೆ ಒಳಗಾದರೂ ಗುಣಮುಖರಾದ ಬೆನ್ನಲ್ಲೇ ಹಲವಾರು ಜಿಲ್ಲಾ ಪ್ರವಾಸಗಳನ್ನು ಮಾಡಿ ಚಟುವಟುಕೆಯಿಂದ
ಇದ್ದಾರೆ.

ವಯಸ್ಸು ಎಪ್ಪತ್ತೇಳು ದಾಟಿದರೂ ತಮ್ಮ ರಾಜಕೀಯ ಭವಿಷ್ಯದ ತೊಳಲಾಟದಲ್ಲೇ ದಿಲ್ಲಿ ಯಾತ್ರೆಗಳನ್ನು ಮಾಡುತ್ತಿದ್ದಾರೆ. ತಮಗೆ ತಮ್ಮ ಮನೆಯವರೆಲ್ಲರೂ ಕರೋನಾ ಸೋಂಕಿತರಾದರು ಧೃತಿಗೆಡದೆ ತಮ್ಮ ಕರ್ತವ್ಯಗಳನ್ನು ನಿಭಾಯಿಸಿದ ವೈದ್ಯಕೀಯ ಸಚಿವ ಸುಧಾಕರ್, ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಕರೋನಾ ಸೋಂಕಿಗೆ ಚಿಕಿತ್ಸೆೆ ಪಡೆದು ಹೊರಬಂದ ಆರೋಗ್ಯ ಸಚಿವ ಶ್ರೀರಾಮುಲು, ಮೈಸೂರು ಬೆಂಗಳೂರಿನಲ್ಲೇ ತನ್ನ ಕರ್ತವ್ಯವನ್ನು ಮೆರೆಯುತ್ತಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಇನ್ನು ಕೆಲ ಪ್ರಜಾಪ್ರತಿನಿಧಿಗಳು ನಿರ್ವಹಿಸುತ್ತಿರುವ ಪರಿಯನ್ನು ಕಂಡು ಪ್ರಜ್ಞಾವಂತ ಪ್ರಜೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ದೊಡ್ಡ ಮತ್ತು ಮೂಲ ಕೆಲಸಗಳು ನಮ್ಮ ಪ್ರಜಾ ಪ್ರತಿನಿಧಿಗಳಿಗೆ ಇನ್ನೇನಿವೆ. ಹೀಗೆ ಕರ್ತವ್ಯ ನಿರ್ವಹಿಸುವ ಇಚ್ಛಾಶಕ್ತಿ, ಬದ್ಧತೆ, ಉತ್ಸಾಹ, ಹುರುಪು, ಆತ್ಮಪ್ರಜ್ಞೆ, ಪ್ರಾಮಾಣಿಕತೆ ನಮ್ಮ ರಾಜಕೀಯ ನಾಯಕರಲ್ಲಿರುವುದು ಬಲು ವಿರಳ. ಇದೆಲ್ಲದರ ಮೂಲರೂಪಿಯಾಗಿರುವುದೇ ಪ್ರಧಾನಿ ನರೇಂದ್ರ ಮೋದಿಯವರು. ನಾವು ವಾಟಾಳ್ ನಾಗರಾಜ್ ಅವರ ಟೋಪಿಯಿಲ್ಲದ ತಲೆಯನ್ನು, ರಾಜಕಾರಣಿಗಳ ನಟನಟಿಯರ ವಿಗ್ ಇಲ್ಲದ ಮೂತಿಗಳನ್ನು ನಮ್ಮ ಮಾಧ್ಯಮಗಳ ಮೂಲಕ ನೋಡಬಹು ದೇನೋ ಆದರೆ ಮೋದಿಯವರು ಕೆಮ್ಮುವುದು ಸೀನುವುದು ಆಕಳಿಸುವುದು ತಲೆಬಗ್ಗಿಸಿ ಗೊರಕೆ ಹೊಡೆಯುವುದನ್ನು ನೋಡಿ ದ್ದೇವೆಯೇ?. ಅಸಲಿಗೆ ಅವರಲ್ಲಿ ಆಲಸ್ಯ ಸುಸ್ತು ಧಣಿವಿನ ಮುಖಭಾವವನ್ನೇ ಕಾಣಲು ಸಾಧ್ಯವಿಲ್ಲ. ನಿಜಕ್ಕೂ ದೇಶಕ್ಕೆ ಬೇಕಿರು ವುದು ಇಂಥ ಚೈತನ್ಯಪೂರ್ಣ ವ್ಯಕ್ತಿಗಳೇ ಹೊರತು ತುಂಬಿದ ವೇದಿಕೆಗಳಲ್ಲಿ ತೂಕಡಿಸುವುದು, ಕಣ್ಣೀರಾಕುತ್ತಾ ಮುಖಮುಚ್ಚಿ ಕೊಳ್ಳುವುದು, ಕೃತಕ ಭಾವ ತೋರಿಸಲಾಗದೆ ಕಪ್ಪು ಕನ್ನಡಕ ಹಾಕಿಕೊಂಡು ಮಾತನಾಡುವ ಅಯೋಗ್ಯರಲ್ಲ. ನೆಟ್ಟಗೆ ತನ್ನ ಕ್ಷೇತ್ರವನ್ನು ಆಳಲು ಯೋಗ್ಯತೆ ಇಲ್ಲದಿದ್ದರೂ ತನ್ನ ಕ್ಷೇತ್ರದ ಮನೆಹಾಳರನ್ನು ಬೀದಿನಾಯಿ ಗಳಂತೆ ಬೆಳೆಸಿ ಅವರ ಪರವಹಿಸುವ, ಅನರ್ಥ ಅವೈಜ್ಞಾನಿಕ ಅವಾಸ್ತವಿಕ ವಿಷಯಾಂತರ ಗಳನ್ನು ಮಂಡಿಸಿ ತಮ್ಮ ಬೆಂಬಲಿಗರನ್ನು ಪ್ರಚೋದಿಸುವ ಅಡ್ಡಕಸುಬಿ ರಾಜಕಾರಣಿಗಳೇ ನಮಗೆ ಹೆಚ್ಚಾಗಿ ಕಾಣಸಿಗುತ್ತಾರೆ.

ಶಾಸಕರೆಲ್ಲಾ ಕಲೆತು ಸಂವಿಧಾನಾತ್ಮಕವಾಗಿ ಸಾಮಾಜಿಕ ಮಥನ ಮಂಥನವನ್ನು ಮಾಡುವ ಪವಿತ್ರ ಸ್ಥಳ ಮತ್ತು ಶ್ರೇಷ್ಠ
ಕಾಯಕದ ಅಖಾಡವೇ ವಿಧಾನಸಭಾ ಅಧಿವೇಶನ. ಪ್ರಜಾಪ್ರಭುತ್ವದ ಸರಿತಪ್ಪುಗಳು ಪ್ರಶ್ನೋತ್ತರಗಳು ಸ್ಪಷ್ಟನೆಗಳು ನಿರ್ಧಾರಗಳು ವಿಚಾರ ವಿನಿಮಯಗಳ ಆಗುಹೋಗು ಗಳು ಭವಿಷ್ಯ ಯೋಜನೆಗಳು ಅಭಿವೃದ್ಧಿ ಪ್ರಗತಿ ಮಾರ್ಗಗಳು ಹೀಗೆ ಇದಕ್ಕೆಲ್ಲಾ ಮೂಲ ವೇದಿಕೆಯೇ ವಿಧಾನ ಮಂಡಲ ಅಧಿವೇಶನ. ಕರೋನಾ ರಹಿತ ಕಾಲದಲ್ಲೇ ಅನೇಕ ಮಂದಿಗೆ ಅಧಿವೇಶನಕ್ಕೆ ಹಾಜರಾಗುವುದೆಂದರೆ ಪ್ರಾಥಮಿಕ ಶಾಲೆಗೆ ಮಕ್ಕಳು ತೆರಳಲು ತೋರುವ ಹಿಂಜರಿಕೆ.

ಇನ್ನು ಕಳೆದ ಫೆಬ್ರವರಿ ಮಾರ್ಚ್‌ನ ಕರೋನಾ ಆರಂಭದ ಅಧಿವೇಶನದಲ್ಲಿ ಭಾಗವಹಿಸಲು ಹೆದರಿಕೊಂಡಿದ್ದರು. ಅಧಿವೇಶನಕ್ಕೆ ಹಾಜರಾಗಲು ವಿಧಾನಸೌಧಕ್ಕೆ ಆಗಮಿಸಿದರೆ ಹೆಚ್ಚು ಜನಗಳು ಭೇಟಿಯಾಗುತ್ತಾರೆ. ಆದರಿಂದ ಕರೋನಾ ಸೋಂಕು ತಗಲುತ್ತದೆ ಎಂಬ ಆತಂಕದಿಂದ ಅಧಿವೇಶನವನ್ನೇ ಮೊಟಕುಗೊಳಿಸಲು ಪ್ರಯತ್ನಿಸಿದ್ದರು. ಆದರೀಗ ಕಳೆದವಾರ ನಡೆದ ಹದಿನೈದನೇ ವಿಧಾನಸಭೆಯ ಏಳನೇ ಅಧಿವೇಶನ ಆರಂಭ ಗೊಳ್ಳುವುದೇ ಅನುಮಾನವಿತ್ತು.

ಆರಂಭಗೊಂಡರೂ ಮೂರು ದಿನಕ್ಕೇ ಮುಕ್ತಾಯವಾಗುವ ಆಲೋಚನೆ ಯಿತ್ತು. ಆದರೂ ಕೆಲವರ ದಿಟ್ಟತನ ಕರ್ತವ್ಯಪ್ರಜ್ಞೆ ಯಿಂದಾಗಿ ಕೇವಲ ಒಂದು ವಾರವಷ್ಟೇ ಅಧಿವೇಶನ ಮುಗಿಸಿ ಮಂಗಳ ಹಾಡಿರುವುದು ನಿಜಕ್ಕೂ ದುರ್ದೈವ. ಸಮಾಜದ ಒಳಿತಿ ಗಾಗಿ ಯಾವುದು ಅಸಾಧ್ಯವೋ ಪ್ರಜೆಗಳಿಗೆ ನೆರವಾಗಲು ಯಾವುದು ಸವಾಲಾಗಿ ಪರಿಣಮಿಸುವುದೋ ಅದನ್ನು ಮೆಟ್ಟಿ  ನಿಂತು ನಿಭಾಯಿಸಿ ಪ್ರಜೆಗಳಿಗೆ ಆತ್ಮವಿಶ್ವಾಸ ತುಂಬುವುದು ಶಾಸಕಾಂಗದ ಆದ್ಯಕರ್ತವ್ಯ. ಇದಕ್ಕೆ ಆಡಳಿತವೇ ಆಗಿರಲಿ ಪ್ರತಿಪಕ್ಷಗಳೇ ಆಗಿರಲಿ ಹೊರತಲ್ಲ. ಆದರೆ ಕರೋನಾ ಸೋಂಕಿಗೆ ನಮ್ಮ ಮಂತ್ರಿಗಳು ಶಾಸಕರು ಪ್ರಜಾಪ್ರತಿನಿಧಿಗಳು ಹೆದರಿ ವಿಧಾನಸಭಾ ಅಧಿವೇಶನವನ್ನು ಮೊಟಕುಗೊಳಿಸುತ್ತಿರುವುದು ನಿಜಕ್ಕೂ ಹೊಣೆಗೇಡಿ ಮತ್ತು ಪಲಾಯನ ವಾದವನ್ನು ತೋರುತ್ತಿದೆ.

ಯಾರಿಗಿಲ್ಲ ಕರೋನಾ ಭಯ? ಸಂಪಾದನೆಯಿಲ್ಲದೆ ಧಣಿವಿಲ್ಲದೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಹಣ ಅನೈತಿಕವಾಗಿ ಹರಿದುಬಂದು ಗಾಂಜಾ ಡ್ರಗ್ಸ್‌ ಮಾಫಿಯಾದಲ್ಲಿ ಮಜಾಮೋಜು ಮಾಡಿಕೊಂಡು ಮತ್ತಿನಲ್ಲಿರುವ ನಟನಟಿಯಂಥ ವರನ್ನು ಹೊರತುಪಡಿಸಿದರೆ ಇಂದು ನಿತ್ಯಕರ್ಮಿಗಳು ಪ್ರತಿನಿತ್ಯ ಆತಂಕ ಮತ್ತು ಎಚ್ಚರಿಕೆಯಿಂದಲೇ ಮನೆಯಿಂದ ಹೊರಟು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ ಜೀವ ಮತ್ತು ಜೀವನ ಎರಡನ್ನೂ ರಕ್ಷಿಸಿಕೊಂಡು ಸಂಸಾರ ನಡೆಸುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಮೂಟೆ ಹೊರುವವರು, ಗಾರ್ಮೆಂಟ್ಸ್ ಮಹಿಳೆಯರು ಚಾಲಕರು ಕೊಂತ್ತಬರಿಯಿಂದ ಕೋಳಿಯವರೆಗೂ
ಮಾಲುಗಳಿಂದ ಮಾರುಕಟ್ಟೆಯವರೆಗೂ ಪ್ರತಿಯೊಬ್ಬರೂ ತಮ್ಮತಮ್ಮ ನಿತ್ಯಕರ್ಮಗಳಲ್ಲಿ ತೊಡಗಿಕೊಂಡು ಕರೋನಾವೇ ಓಡಿಹೋಗುವಂತೆ ಜೀವನ ನಡೆಸುತ್ತಿದ್ದಾರೆ. ನಮ್ಮ ರೈತರು ಯಾವುದಕ್ಕೂ ಅಂಜದೆ ನಿತ್ಯ ಭೂತಾಯಿ ಯೊಂದಿಗೆ ಸಂವೇದನೆ ಗೊಳ್ಳುತ್ತಿದ್ದಾರೆ. ರಸ್ತೆ ಮೋರಿ ಹೆದ್ದಾರಿ ಮೆಟ್ರೋ ಕಟ್ಟಡ ಕಾಮಗಾರಿಕೆ ಕಾರ್ಮಿಕರು ಮಾಡಬೇಕಾದ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ವರದಿಗಾರರು ಪತ್ರಕರ್ತರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹಗಲುರಾತ್ರಿ ಸಮಾಜವನ್ನು ತಿದ್ದುತ್ತಿದ್ದಾರೆ. ಸಿನಿಮಾ ಚಿತ್ರೀಕರಣಗಳು ಟಿ.ವಿ ಧಾರವಾಹಿಗಳು ರಿಯಾಲಿಟಿ ಷೋಗಳೆಲ್ಲಾ ಕರೋನಾ ಸುರಕ್ಷಿತ
ಕ್ರಮಗಳೊಂದಿಗೆ ಎಂದಿನಂತೆ ಪ್ರಾರಂಭಗೊಂಡಿದೆ.

ಅಷ್ಟೇ ಏಕೆ, ಬೆಡ್ಡಿಂಗ್ ಅಡ್ಡವಾಗಿರುವ ಐಪಿಎಲ್ ಎಂಬ ಪಂದ್ಯಾವಳಿಯೇ ನಡೆಯುತ್ತಿದೆ. ಆದರೆ ನಮ್ಮ ಶಾಸಕಾಂಗಕ್ಕೇನು ದಾಡಿ?. ಸಾಮಾನ್ಯ ಪ್ರಜೆಗೆ ಸೋಂಕು ತಗುಲಿದರೆ ಆತ ಆಸ್ಪತ್ರೆೆಗಳಿಗೆ ತೆರಳುವುದೇ ದುಸ್ತರವಾಗಿ ಮನೆಯಲ್ಲೇ ಕಷಾಯ ವನ್ನು ಕುಡಿದು ಗುಣಮುಖನಾಗುತ್ತಿದ್ದಾನೆ. ಇನ್ನು ಶಾಸಕರು ಮಂತ್ರಿಗಳಿಗೇನು ಕಡಿಮೆ? ಒಂದೊಮ್ಮೆ ಸೋಂಕು ತಗುಲಿದರೂ, ಕೋಟ್ಯಂತರ ರುಪಾಯಿಗಳ ಆಸ್ತಿಗಳಿದ್ದು ತಮ್ಮ ಮನೆಗಳಲ್ಲೋ ಫೈವ್ ಸ್ಟಾರ್ ಆಸ್ಪತ್ರೆ ಗಳಲ್ಲೋ ಮಲಗಿ ಚಿಕಿತ್ಸೆ ಪಡೆಯುತ್ತಾ ರಲ್ಲವೇ?. ಪೌರಕಾರ್ಮಿಕರು ಮಾಸ್ಕ್‌ ಧರಿಸಿ ದಿನನಿತ್ಯ ತೊಟ್ಟಿ ಬೀದಿಯಲ್ಲಿನ ಅಸಹ್ಯಕರ ಕಸವನ್ನು ಎತ್ತಿ ಸ್ವಚ್ಛ ವಾಗಿಡುವ ಕಾಯಕವನ್ನು ಮಾಡುತ್ತಾನೆಂದರೆ ಆತನನ್ನು ಆಳುವ ಪ್ರಭು ಇನ್ನೆಷ್ಟು ಆತ್ಮವಿಶ್ವಾಸ ತೋರಬೇಕು?. ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಮಜಾ ಮಸ್ತಿ, ಆಡಬಾರದ ಆಟವಾಡಲು ದೇಶದೇಶಗಳನ್ನು ಸುತ್ತುವ ಶಾಸಕರು ಪವಿತ್ರವಾದ ಶಾಸನಸಭೆ ಯನ್ನು ಪುಟಗೋಸಿ ಕರೋನಾಕ್ಕೆ ಅಗತ್ಯಕ್ಕಿಂತಲೂ ಹತ್ತುಪಟ್ಟು ಹೆದರಿ ಚಕ್ಕರ್ ಹೊಡೆಯುವುದು ಹೊಣೆಗೇಡಿತನವಲ್ಲವೇ?. ಸಮಾಜದಲ್ಲಿ ಅತ್ಯಂತ ಎಚ್ಚರಿಕೆಯಿಂದ ಅತ್ಯಂತ ದುಬಾರಿ ಸುರಕ್ಷಿತಕ್ರಮಗಳನ್ನು ಹೊಂದುವ ಅವಕಾಶ ನಮ್ಮ ರಾಜಕಾರಣಿ ಗಳಿಗಿದೆ.

ಅದಕ್ಕೆಂದೇ ಸರಕಾರದ ಬೊಕ್ಕಸವಿದೆ. ಇನ್ನೇನು ಬೇಕು. ಈಗಾಗಲೇ ಉತ್ತರಕರ್ನಾಟಕದಲ್ಲಿ ನೆರೆಯಿಂದಾಗಿ ಪ್ರಜೆಗಳು ತತ್ತರಿಸಿ ಹೋಗಿದ್ದಾರೆ. ಕರೋನಾ ಸಾವುಗಳು ಹೆಚ್ಚುತ್ತಿವೆ. ಡ್ರಗ್ಸ್‌ ಮಾಫಿಯಾ ಕೊರೆದಷ್ಟು ಕಿಕ್ ಹೆಚ್ಚಾಗತೊಡಗಿದೆ. ಡಿ.ಜೆ.ಹಳ್ಳಿ- ಕೆ.ಜೆ. ಹಳ್ಳಿ ಪ್ರಕರಣಗಳು ತಣ್ಣಗಾಗಿ ಸಾಯುವ ಹಂತಕ್ಕೆ ಬರುತ್ತಿದೆ. ಪೊಲೀಸ್ ಅಧಿಕಾರಿ ಗಣಪತಿಯವರ ಸಂಶಯಾಸ್ಪದ ಸಾವಿನ ತನಿಖೆ ಪುನರ್ಜೀವ ಪಡೆಯುತ್ತಿದೆ. ಕರೋನಾ ಉಪಕರಣಗಳ ಖರೀದಿಗಳು ಸರಕಾರವನ್ನು ಅನುಮಾನಿಸುವಂತಾಗಿದೆ.
ಶಾಲೆಗಳು ಕಾಲೇಜುಗಳು ಆರಂಭಿಸುವ ದೊಡ್ಡ ಸವಾಲು ಎಲ್ಲರ ಮುಂದಿದೆ. ನಾಡಹಬ್ಬ ಮೈಸೂರು ದಸರಾ ಹತ್ತಿರದಲ್ಲಿದೆ.

ಹೀಗೆ ಅನೇಕ ಪ್ರಶ್ನೆಗಳು ಚರ್ಚೆಗಳು ಇರುವಾಗ ಅಧಿವೇಶನವನ್ನೇ ಕ್ವಾರಂಟೈನ್ ಮಾಡುವುದು ಎಷ್ಟುಸರಿ? ಮತದಾರ ಪ್ರಭು ‘ಬಾ, ನನ್ನೊಂದಿಗೆ ತಿಪ್ಪ ಎತ್ತು’ ಎಂದು ಕೇಳಲಾರ. ‘ನೀನೇ ಬಸ್ ಓಡಿಸು ಬಾ’ ಎಂದು ಕರೆಯಲಾರ. ಎಲ್ಲಾ ಬಿಟ್ಟು ಒಂದಿಪ್ಪತ್ತು ದಿನ ಅಧಿವೇಶನದಲ್ಲಿ ಪಾಲ್ಗೊಂಡು ಸರಕಾರಿ ಯಂತ್ರವನ್ನು ಅಚ್ಚುಕಟ್ಟು ಮಾಡುವ ಮೂಲಭೂತ ಹೊಣೆಗಾರಿಕೆಯನ್ನು
ತೋರಿ ಆ ಮೂಲಕ ಸಮಾಜದಲ್ಲಿ ಪ್ರೀತಿ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದಲ್ಲವೇ?. ನಾವೇ ಹೆದರಿ ಕುಂತರೆ ನಮ್ಮನ್ನು ಆರಿಸಿ ಕಳಿಸಿರುವ ಮತದಾರನ ಕಥೆಯೇನು, ಮೊದಲು ನಾವುಗಳು ಧೈರ್ಯವಾಗಿ ನಿಂತು ಸೂಕ್ತ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಅಧಿವೇಶನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಾಗರಿಕರಲ್ಲಿ ಆತ್ಮವಿಶ್ವಾಸವನ್ನು ತುಂಬೋಣ. ಮತದಾರನಿಗೆ ಏನೇನು ಒಳಿತನ್ನು ಮಾಡಬಹುದೋ ಅದನ್ನೆಲ್ಲಾ ಪರಸ್ಪರ ಚರ್ಚಿಸಿ ಅಗತ್ಯವಾಗಿ ಮಾಡೋಣ. ತಮ್ಮ ತಮ್ಮ ಕ್ಷೇತ್ರದ ಸಮಸ್ಯೆಗಳು ಅಭಿವೃದ್ಧಿಗಳಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳೋಣ.

ಪ್ರತಿಪಕ್ಷದ ಶಾಸಕರಾಗಿ ಪ್ರಶ್ನೆಗಳನ್ನು ಮಾಡೋಣ. ಇದಕ್ಕೆಲ್ಲಾ ವೇದಿಕೆಯಾದ ಅಧಿವೇಶನವನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸದೇ ಧೈರ್ಯದಿಂದ ನಡೆಸೋಣ ಎಂಬ ಇಚ್ಛಾಶಕ್ತಿ ಆತನಿಗೆ ಇಲ್ಲದಿದ್ದರೆ ಆತ ಶಾಸನಸಭೆಯಲ್ಲ ಎಲ್ಲಿಗೇ ಹೋದರೂ ಅರ್ಥವಿಲ್ಲ. ಮೇಲ್ನೋಟಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರಲ್ಲೂ ಸದ್ಯ ಅಧಿವೇಶನ ನಡೆಯದಿದ್ದರೆ ಸಾಕಪ್ಪ ಎಂಬ ಕಳ್ಳನೆಪ ಇರುವುದು ಸ್ಪಷ್ಟ.

ಹೋಗಲಿ, ಪಾಪ, ಕರೋನಾ ಭಯದಿಂದ ಇಪ್ಪತ್ತು ದಿನಗಳ ವಿಧಾನಸಭೆ ಅಧಿವೇಶನವನ್ನು ನಡೆಸದೆ ಶಾಸಕರು ಆರೋಗ್ಯ ವಾಗಿರಲಿ ಎಂದೇ ಬಯಸೋಣ. ಆದರೆ ಇವರಿಗೆ ಈಗಿಂದೀಗಲೇ ಮರುಚುನಾವಣೆ ಗಳು ಬಿಬಿಎಂಪಿ ಚುನಾವಣೆ ಬೇಕು. ಗ್ರಾಮ ಪಂಚಾಯಿತಿ ಚುನಾವಣೆ ತುರ್ತಾಗಿ ಬೇಕು. ರಾಜಕೀಯದ ಗುಲಾಮರನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರತಿಭಟನೆ ಮೆರವಣಿಗೆಗಳು ಬೇಕು. ಜಾತಿ ಸಮಾವೇಶಗಳು ಬೇಕು. ತಮ್ಮ ಪಿತೃಪಕ್ಷಗಳ ಸಭೆಗಳು ಸಮಾವೇಶಗಳು ಬೇಕು.

ಒಂದೊಮ್ಮೆ ಕರೋನಾ ಕಟ್ಟುನಿಟ್ಟು ಇರದೇ ಹೋದರೆ ವೈಭವದ ಮದುವೆ, ಹುಟ್ಟುಹಬ್ಬದ ಸಮಾರಂಭಗಳು, ಜಾತಿ ಸಮಾವೇಶ ಗಳನ್ನು ನಡೆಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಬಿಟ್ಟರೆ ಸಾಕು ಕೆಲವರು ವಿದೇಶ ಪ್ರವಾಸಗಳು, ಮೋಜು ಗಳನ್ನು ಮಾಡಲು ಕಾದು ಕುಳಿತಿರುತ್ತಾರೆ. ಇದಕ್ಕೆಲ್ಲಾ ಕರೋನಾ ಆತಂಕ ಇರುವುದಿಲ್ಲ. ಈಗಾಗಲೇ ಜನಪ್ರತಿನಿಧಿ ಗಳು ಬೇಕಾಬಿಟ್ಟಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವಿಲ್ಲದೆ ನೂರಾರು ಜನರು ಒಂದೆಡೆ ಸೇರಿಕೊಂಡು ಓಡಾಡಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ನೋಡಿ, ಈಗ ನೋಡಿ ಉಪ ಚುನಾವಣೆ ಘೋಷಣೆಯಾಗಿದೆ. ಸ್ಪರ್ಧಿಸುವ ಪ್ರತಿಯೊಬ್ಬ ನಾಯಕನೂ ಎಲ್ಲವನ್ನೂ ಬಿಟ್ಟು ಬೀದಿಬೀದಿ ಮನೆಮನೆಯನ್ನು ತನ್ನ ಹಿಂಬಾಲಕರನ್ನು ಕಟ್ಟಿಕೊಂಡು ಸುತ್ತಾಡದಿದ್ದರೆ ಕೇಳಿ. ಬೃಹತ್ ಸಮಾವೇಶಗಳು ಚುನಾವಣಾ ಪ್ರಚಾರ ವೇದಿಕೆಗಳು ಯಾವುದೇ ಆತಂಕವಿಲ್ಲದೇ ನಡೆದು ಹೋಗುತ್ತದೆ. ಕರೋನಾ ಸೋಂಕಿನಿಂದ ದೇಶದಲ್ಲಿ ಕೆಲ ಮಂದಿ ಸಂಸದರು, ಶಾಸಕರು, ಜನಪ್ರತಿನಿಧಿಗಳು ಸಾವನ್ನಪ್ಪಿರುವುದು ದುರದೃಷ್ಟಕರ. ನಮ್ಮ ರಾಜ್ಯದಲ್ಲೇ ಅಶೋಕ ಗಸ್ತಿ, ಸುರೇಶ ಅಂಗಡಿಯಂಥ ಸಂಸದರು ಬಲಿಯಾಗಿದ್ದಾರೆ.

ಪ್ರತಿಯೊಬ್ಬರ ಆರೋಗ್ಯ ಮತ್ತು ಬದುಕು ಮಹತ್ವವೇ. ಹೀಗಾಗಿ ಇನ್ನೂ ಹೆಚ್ಚಿನ ನಿಗಾ ಮತ್ತು ಸುರಕ್ಷಿತ ಕ್ರಮಗಳನ್ನು ಪ್ರತಿನಿಧಿ ಗಳು ವಹಿಸಬೇಕಿದೆ. ಈಗಾಗಲೇ ಹುಚ್ಚಾಟ ಕೂಗಾಟ ಗಲಭೆಗಳಿಂದಾಗಿ ಅಧಿವೇಶನಗಳು ಪೂರ್ಣಾವಧಿ ನಡೆಯ ದಂತಾಗಿದೆ. ಆದರೀಗ ಕರೋನಾ ಕಾರಣದಿಂದ ಎಲ್ಲಾ ಬಿಟ್ಟು ಪ್ರಜಾಪ್ರಭುತ್ವದ ಉನ್ನತ ಮತ್ತು ಬಹುಮುಖ್ಯ ಕಾರ್ಯ ಚಟುವಟಿಕೆಯಾದ ಅಧಿವೇಶನ ಕಲಾಪಗಳನ್ನು ಅಷ್ಟು ಸುಲಭವಾಗಿ ಕೈಬಿಡುವುದು ಸಂವಿಧಾನಾತ್ಮಕ ದೋಷವಲ್ಲವೇ?