ಚರ್ಚಾ ವೇದಿಕೆ
ಸಚ್ಚಿದಾನಂದ ಶೆಟ್ಟಿ ಚೆರ್ಕಾಡಿ
ವಿಶ್ವಶಾಂತಿ ಪಾಲನೆ, ದೇಶ-ದೇಶಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸುವುದು, ಮಾನವ ಹಕ್ಕುಗಳಿಗೆ ಗೌರವ ನೀಡುವುದು, ಜಾಗತಿಕ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕರಿಸುವುದು, ಒಂದು ದೇಶವು ಮತ್ತೊಂದರ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಲಪ್ರಯೋಗ ಮಾಡ ದಂತೆ ಮತ್ತು ಭಯ ಹುಟ್ಟಿಸದಂತೆ ತಡೆಯುವುದು ಇವು ವಿಶ್ವಸಂಸ್ಥೆಯ ಪ್ರಮುಖ ಗುರಿ ಹಾಗೂ ಧೋರಣೆಗಳಾಗಿವೆ.
ವಿಶ್ವಸಂಸ್ಥೆಯ ವಾರ್ಷಿಕ ಬಜೆಟ್ ಬರೋಬ್ಬರಿ ೧,೧೩೪ ಕೋಟಿ ರುಪಾಯಿ. ಈ ಮೊತ್ತವನ್ನು ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳಿಂದ ದೇಣಿಗೆ ರೂಪದಲ್ಲಿ ಪಡೆಯುತ್ತದೆ. ಆದರೆ ಹೆಚ್ಚು ದೇಣಿಗೆ ನೀಡುವ ದೇಶಗಳ ಮಾತನ್ನು ವಿಶ್ವಸಂಸ್ಥೆಯು ಕೇಳುತ್ತಿದೆ. ಇದು ವಿಪರ್ಯಾಸವಲ್ಲದೆ ಮತ್ತೇನು? ಅನ್ಯಾಯದ ವಿರುದ್ಧ ಹೋರಾಡುವಲ್ಲಿ, ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆಯು ವಿ-ಲವಾಗಿರುವುದು ದುರದೃಷ್ಟಕರ ಸಂಗತಿ. ಅಮೆರಿಕದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಡಿ.ರೂಸ್‌ವೆಲ್ಟ್ ಮತ್ತು ಬ್ರಿಟನ್ ಪ್ರಧಾನಿಯಾಗಿದ್ದ ವಿನ್ಸ್‌ಟನ್ ಚರ್ಚಿಲ್‌ರ ಕನಸಿನ ಕೂಸಾದ ವಿಶ್ವಸಂಸ್ಥೆ ಹುಟ್ಟಿದ್ದೇ ೨ನೇ ಮಹಾಯುದ್ಧ ಕೊನೆ ಗೊಳ್ಳುತ್ತಿದ್ದ ಸಂದರ್ಭದಲ್ಲಿ. ಈ ಯುದ್ಧದಲ್ಲಿ ಜರ್ಮನಿ ಮತ್ತದರ ಮಿತ್ರರಾಷ್ಟ್ರಗಳ ಭೀಕರ ದಾಳಿಯಿಂದ ಕಕ್ಕಾಬಿಕ್ಕಿಯಾಗಿದ್ದ ರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಡಲಿಕ್ಕೆ ೧೯೪೫ರಲ್ಲಿ ಅಧಿಕೃತವಾಗಿ ಜನ್ಮತಳೆದ ವಿಶ್ವಸಂಸ್ಥೆ, ಪ್ರಸ್ತುತ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪೂರ್ತಿ ಸ್ಪಂದಿಸುತ್ತಿಲ್ಲ.
ತನ್ನ ಗುರಿ ಮತ್ತು ಧೋರಣೆಗಳನ್ನು ಪಾಲಿಸಲು ಅಶಕ್ತವಾಗಿರುವ ಈಗ ಅದು ಕಾಗದದ ಹುಲಿಯಾಗಿದೆ, ಹಲ್ಲಿಲ್ಲದ ಹಾವಾಗಿದೆ. ೧೯೩ ಸದಸ್ಯ ರಾಷ್ಟ್ರ ಗಳನ್ನು ಹೊಂದಿರುವ ಈ ಪ್ರಬಲ ಸಂಸ್ಥೆಯ ಕಣ್ಣಮುಂದೆಯೇ ಎರಡು ಯುದ್ಧಗಳು ನಡೆಯುತ್ತಿವೆ. ಅದರಲ್ಲೂ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷದಲ್ಲಿ ಸಹಸ್ರಾರು ಸಾವು-ನೋವುಗಳಾಗಿದ್ದರೂ, ಯುದ್ಧ ನಿಲ್ಲಿಸಬೇಕಾದ ನಿರ್ಣಾಯಕ ಸ್ಥಾನದಲ್ಲಿರುವ ವಿಶ್ವಸಂಸ್ಥೆ ಕೈಕಟ್ಟಿ
ಕುಳಿತಿರುವುದೇಕೆ? ಇದು ಎಲ್ಲರ ಮುಂದಿರುವ ಪ್ರಶ್ನೆ. ವಿಶ್ವಸಂಸ್ಥೆ ಇಲ್ಲಿಯವರೆಗೆ ಯಾವ ಯುದ್ಧವನ್ನೂ ತಡೆದಿಲ್ಲ, ಯಾವ ಸರ್ವಾಧಿಕಾರಿಯನ್ನೂ ಮಣಿಸಿಲ್ಲ, ಮಾನವ ಹಕ್ಕುಗಳನ್ನೂ ಕಾಪಾಡಿಲ್ಲ.
ಇದು ಹೀಗೇ ಮುಂದುವರಿದರೆ, ಒಂದನೆಯ ಮಹಾಯುದ್ಧದ ನಂತರ ಶಾಂತಿಯನ್ನು ಕಾಪಾಡಲೆಂದು ಹುಟ್ಟಿ ಕೊನೆಗೂ ಸೋತು, ಎರಡನೇ ಮಹಾ ಯುದ್ಧದ ಆರಂಭದಲ್ಲಿ ಅಂತ್ಯ ಕಂಡ ‘ಲೀಗ್ ಆಫ್ ನೇಷನ್ಸ್’ನ ಸ್ಥಿತಿಯೇ ವಿಶ್ವಸಂಸ್ಥೆಗೂ ಬರಬಹುದು. ಜಗತ್ತಿನ ಯಾವುದೇ ಭೌಗೋಳಿಕ ನೆಲೆಯಾಗಿ ರಲಿ, ಶಾಂತಿಯ ಮಾತು ಬಂದಕೂಡಲೇ ವಿಶ್ವಸಂಸ್ಥೆಯ ಹೆಸರು ಮುನ್ನೆಲೆಗೆ ಬರುತ್ತದೆ. ಆದರೆ ಅದು ಈಗೇನು ಮಾಡುತ್ತಿದೆ? ಇಸ್ರೇಲ್-ಹಮಾಸ್‌ಗಳ ನಡುವಿನ ಯುದ್ಧದಲ್ಲಿ ಸಂಧಾನ ನಡೆಸುತ್ತಿದೆಯೋ ಅಥವಾ ಯುದ್ಧಪೀಡಿತ ನೆಲದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆಯೋ? ಇದ್ಯಾವುದೂ ವರದಿಯಾದಂತಿಲ್ಲ.
ಕೆಲ ದಿನಗಳ ಹಿಂದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ೯೦ ನಿಮಿಷದ ಸುದೀರ್ಘ ಸಭೆ ನಡೆಸಿತು. ಅಕ್ಟೋಬರ್ ೨೬ರಂದೂ ಅದು ಸಭೆ ನಡೆಸಿತ್ತು. ಈ ವೇಳೆ ೧೫ ದೇಶಗಳು ಒಟ್ಟಾಗಿ ಹಮಾಸ್ ಉಗ್ರರ ದಾಳಿಯನ್ನು ಖಂಡಿಸಿದವು ಹಾಗೂ ಶಾಂತಿ ಕಾಪಾಡುವಂತೆ ಇಸ್ರೇಲ್‌ಗೆ ಮನವಿ ಮಾಡಿದವು. ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧದ ಸಂದರ್ಭದಲ್ಲೂ ವಿಶ್ವಸಂಸ್ಥೆ ಇಂಥದ್ದೇ ನಿಲುವನ್ನು ತಳೆದಿತ್ತು. ಆದರೆ ವಿಶ್ವಸಂಸ್ಥೆಗೆ ಇದಕ್ಕಿಂತ ಹೆಚ್ಚೇನೂ ಸಾಧ್ಯವಿಲ್ಲವೆಂಬುದು ಇದೀಗ ಗೋಚರವಾಗುತ್ತಿದೆ. ಹಾಗಾದರೆ ನಿಷ್ಕ್ರಿಯವಾಗಿರುವಂತೆ ಅದರ ಕೈಕಟ್ಟಿರುವವರು ಯಾರು? ಎರಡನೆಯ ಮಹಾ ಯುದ್ಧದ ಸಂದರ್ಭವನ್ನೇ ಪರಿಗಣಿಸಿದರೆ, ಜರ್ಮನಿಯ ಹಿಟ್ಲರ್ ಬಲಿಷ್ಠ ರಾಷ್ಟ್ರಗಳ ಮೂಗಿನಡಿಯಲ್ಲೇ ಯೆಹೂದಿಗಳು ಸೇರಿದಂತೆ ಸುಮಾರು
೧ ಕೋಟಿ ೧೦ ಲಕ್ಷ ಮಂದಿಯ ಹತ್ಯಗೈದು ಬಿಟ್ಟ. ಈ ಯುದ್ಧಾಪರಾಧದ ನಂತರ ಕೊನೆಗೆ ಆತ ಆತ್ಮಹತ್ಯೆಗೆ ಶರಣಾದ, ಅದು ಬೇರೆ ವಿಚಾರ. ಆದರೆ ಈ ಘೋರಕೃತ್ಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯಿಂದ ಹೊಮ್ಮಿದ್ದು ಬಾಯಿ ಮಾತಿನ ಖಂಡನೆಯಷ್ಟೇ.
೨೦೦೧ರಲ್ಲಿ ಹಿಂದು ಕುಶ್ ಪರ್ವತದಲ್ಲಿ ವಿಶ್ವದ ಅತಿ ಎತ್ತರದ ಬುದ್ಧನ ವಿಗ್ರಹವನ್ನು ತಾಲಿಬಾನಿಗಳು ನಾಶ ಗೊಳಿಸಿದ್ದು, ರುವಾಂಡಾದಲ್ಲಿ ನಡೆದ ೮ ಲಕ್ಷ ಮಂದಿಯ ಮಾರಣಹೋಮ, ಶ್ರೀಲಂಕಾದಲ್ಲಾದ ೧ ಲಕ್ಷ ಜನರ ಮಾರಣಹೋಮ ಮತ್ತು ಅದಕ್ಕೆ ಕಾರಣವಾದ ರಕ್ತಸಿಕ್ತ ದಂಗೆ ಮುಂತಾದ ಬೆಳವಣಿಗೆಗಳನ್ನು ತಡೆಯಲು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ. ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಮತ್ತು ಹಮಾಸ್‌ಗಳ ನಡುವಿನ ಯುದ್ಧದ ವಿಷಯ ದಲ್ಲೂ ಇದೇ ವರ್ತನೆ ಮರುಕಳಿಸುತ್ತದೆ ಎಂಬಂತೆ ಭಾಸವಾಗುತ್ತಿದೆ. ದೊಡ್ಡ ರಾಷ್ಟ್ರಗಳ ತಪ್ಪನ್ನು ವಿಶ್ವಸಂಸ್ಥೆ ಬೇಗನೆ ಕ್ಷಮಿಸುತ್ತದೆ. ತನ್ನ ಕಾಯಂ ಸದಸ್ಯತ್ವ ಪಡೆದು ವಿಟೋ ಅಧಿಕಾರವನ್ನು ಹೊಂದಿರುವ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ಚೀನಾಗಳ ಯಾವ ಅತಿರೇಕದ ನಡವಳಿಕೆಯನ್ನೂ ವಿಶ್ವಸಂಸ್ಥೆ ನಿಯಂತ್ರಿಸುವುದಿಲ್ಲ.
ಅಂದಹಾಗೆ, ಈ ವಿಟೋ ರಾಷ್ಟ್ರಗಳೇ ಒಂದನೇ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿನ ಹತ್ಯಾಕಾಂಡಗಳಿಗೆ ನೇರ ಕಾರಣವಾಗಿವೆ. ಇವುಗಳ ಬಳಿಕ, ಭದ್ರತಾ ಮಂಡಳಿಯಲ್ಲಿರುವ ೧೫ ಸದಸ್ಯ ರಾಷ್ಟ್ರಗಳನ್ನು ಅತ್ಯಂತ ಶಕ್ತಿಶಾಲಿ ಘಟಕ ಎಂದೇ ಪರಿಗಣಿಸಲಾಗಿದೆ. ಇವು ಯಾವುದೇ ದೇಶದ ಮೇಲೆ
ನಿರ್ಬಂಧಗಳನ್ನು ವಿಧಿಸುವವರನ್ನು ಅಥವಾ ಮಿಲಿಟರಿ ಹಸ್ತಕ್ಷೇಪ ಮಾಡುವಂಥವರನ್ನು ವಿರೋಧಿಸಬಹುದು. ಆದರೆ ಇವುಗಳ ಮಾತಿಗೆ ಕಿಂಚಿತ್ತೂ ಮಾನ್ಯತೆ ಸಿಗುತ್ತಿಲ್ಲ.
ವಿಟೋ ಅಧಿಕಾರ ಹೊಂದಿರುವ ಎಲ್ಲಾ ೫ ರಾಷ್ಟ್ರಗಳು, ಪ್ರತಿಯೊಂದು ಯುದ್ಧವನ್ನೂ ತಮ್ಮದೇ ಆದ ರೀತಿಯಲ್ಲಿ ನೋಡುತ್ತಿವೆ ಹಾಗೂ ತಮ್ಮದೇ ಆದ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿವೆ. ಇವುಗಳ ಪೈಕಿ ಯಾವುದಾದರೊಂದು ರಾಷ್ಟ್ರವು ಯುದ್ಧನಿರತ ರಾಷ್ಟ್ರವೊಂದರ ಪರವಾಗಿ ನಿಂತರೆ, ಅದರ
ಎದುರಾಳಿ ರಾಷ್ಟ್ರದ ಪರವಾಗಿ ಇನ್ನೊಂದು ವಿಟೋ ರಾಷ್ಟ್ರ ಬೆಂಬಲ ನೀಡುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ಉದಾಹರಣೆಗೆ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ ರಷ್ಯಾ ದೇಶವು ಪ್ಯಾಲೆಸ್ತೀನ್‌ನ ಪರವಾಗಿದ್ದರೆ, ಇಸ್ರೇಲ್ ಜತೆಗೆ ನಿಂತಿದೆ ಅಮೆರಿಕ. ಇಂಥ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಒಟ್ಟಾರೆ ಹೇಳುವುದಾದರೆ, ವಿಟೋ ಸದಸ್ಯ ರಾಷ್ಟ್ರಗಳು ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳುವ ಮೂಲಕ ವಿಶ್ವಸಂಸ್ಥೆಯನ್ನು ನಿಯಂತ್ರಿಸುತ್ತಿವೆ. ಈ ವಿಟೋ ಪದ್ಧತಿಯನ್ನು ಕೊನೆಗೊಳಿಸದಿದ್ದರೆ, ಭದ್ರತಾ ಮಂಡಳಿಯು ಸ್ವತಂತ್ರವಾಗಿ ಕೆಲಸ ಮಾಡಲು ಮತ್ತು ಜಗತ್ತಿನ ಯಾವುದೇ ಯುದ್ಧವನ್ನು ನಿಲ್ಲಿಸಲೂ ವಿಶ್ವಸಂಸ್ಥೆಗೆ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ವಿಶ್ವಸಂಸ್ಥೆಯ ಮಾಜಿ ಕಾರ್ಯದರ್ಶಿಯೊಬ್ಬರು.
೧೯೪೮ರಲ್ಲಿ ಯೆಹೂದಿಗಳ ರಾಷ್ಟ್ರದ ರಚನೆಯಾದಾಗಿನಿಂದಲೂ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಿರಂತರ ಉದ್ವಿಗ್ನತೆಯಿದೆ; ಆದರೆ ಅದನ್ನು
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶಮನಗೊಳಿಸಲೂ ಇಲ್ಲ, ಅದರ ಮಾತನ್ನು ಯಾರೂ ಕೇಳುತ್ತಿಲ್ಲ. ಇರಾಕ್ ಮತ್ತು ಇರಾನ್ ನಡುವೆ ೮ ವರ್ಷ ಯುದ್ಧ ನಡೆದು ಸುಮಾರು ೧೦ ಲಕ್ಷ ಮಂದಿ ಅಸುನೀಗಿದರೂ ವಿಶ್ವಸಂಸ್ಥೆ ಸ್ಪಂದಿಸಲಿಲ್ಲ. ಹೇಳುತ್ತಾ ಹೋದರೆ ಇಂಥ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾದ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವವಿಲ್ಲ ಹಾಗೂ ವಿಟೋ ಅಧಿಕಾರವಿಲ್ಲ. ಮತ್ತೊಂದೆಡೆ, ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್‌ನಂಥ ಜಾಗತಿಕ ಸಂಸ್ಥೆಗಳು ಶ್ರೀಮಂತ ರಾಷ್ಟ್ರಗಳ ಆಣತಿಯಂತೆ ನಡೆಯುತ್ತಿವೆ. ಈ ಪರಿಪಾಠ ನಿಲ್ಲಬೇಕು.
ವಿಟೋ ಅಧಿಕಾರವನ್ನು ತೆಗೆದು ವಿಶ್ವಸಂಸ್ಥೆಗೆ ಸ್ವಯಮಾಧಿಕಾರವನ್ನು ನೀಡಬೇಕು ಹಾಗೂ ಆ ಅಧಿಕಾರವನ್ನು ಅದು ಸಮರ್ಥವಾಗಿ ನಿಭಾಯಿಸಬೇಕು. ಎಲ್ಲಾ ೧೯೩ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ವಿಶ್ವಸಂಸ್ಥೆ ಗೌರವಿಸುವಂತಾಗಬೇಕು. ಎಲ್ಲಕ್ಕೂ ಮಿಗಿಲಾಗಿ, ಈ ಮೊದಲೇ ಹೇಳಿದಂತೆ,
ವಿಶ್ವಶಾಂತಿಯ ರಕ್ಷಣೆಯು ವಿಶ್ವಸಂಸ್ಥೆಯ ಉದ್ದೇಶವಾಗಬೇಕು. ರಷ್ಯಾ-ಉಕ್ರೇನ್ ಹಾಗೂ ಇಸ್ರೇಲ್ -ಹಮಾಸ್ ನಡುವಿನ ಯುದ್ಧಕ್ಕೆ ಅದು ಕೊನೆ ಹಾಡಬೇಕು. ಮಾತ್ರವಲ್ಲದೆ ಇಡೀ ವಿಶ್ವದ ಯಾವುದೇ ರಾಷ್ಟ್ರಕ್ಕೆ ಮತ್ತೊಂದು ಬಲಿಷ್ಠ ರಾಷ್ಟ್ರದಿಂದ ಯಾವುದೇ ಹಾನಿಯಾಗುವುದನ್ನು ವಿಶ್ವಸಂಸ್ಥೆ ತಪ್ಪಿಸಬೇಕು.
(ಲೇಖಕರು ವಿಜಯಾ ಬ್ಯಾಂಕ್‌ನ ನಿವೃತ್ತ ಮುಖ್ಯ
ಪ್ರಬಂಧಕರು)