Sunday, 15th December 2024

ಮಣ್ಣಿನಲ್ಲಿ ಅಡಗಿದೆ ಮನುಕುಲದ ಅಸ್ತಿತ್ವ

ಕೃಷಿರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಕೃಷಿತ್ಯಾಜ್ಯಗಳ ಮರುಬಳಕೆ ಮತ್ತು ಹಸಿರೆಲೆ ಗೊಬ್ಬರಗಳ ನಿಯತ ಬಳಕೆಯಿಂದ ಮಣ್ಣಿನ -ಲವತ್ತತೆ ಹೆಚ್ಚುವುದಲ್ಲದೆ ಅದರ ಸದೃಢತೆ ಸಹಜವಾಗಿ ಬದಲಾಗುತ್ತದೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚು ಇದ್ದಲ್ಲಿ, ಅದರ ಉತ್ಪಾದನಾ ಶಕ್ತಿ ನೈಸರ್ಗಿಕವಾಗಿ ವೃದ್ಧಿಸುತ್ತದೆ ಮತ್ತು ಅಲ್ಲಿರುವ ನೀರು ಸೋಸಲ್ಪಟ್ಟು ಶುದ್ಧೀಕರಣಗೊಳ್ಳುತ್ತದೆ.

ಮಣ್ಣಿಂದಲೆ ಕಾಯ…’ ಎಂದು ಸಂತ ಶ್ರೇಷ್ಠರು ಹೇಳಿದಂತೆ, ಮನುಕುಲವು ಆರೋಗ್ಯಕರವಾದ ಬದುಕನ್ನು ಅನುಭವಿಸಲೆಂದು ಭಗವಂತನು ಸೃಷ್ಟಿಸಿರುವ ವಸ್ತುಗಳಲ್ಲಿ ಮಣ್ಣು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ, ಮಣ್ಣಿನ ಸಂರಕ್ಷಣೆಗಾಗಿಯೂ ದೇವರು ನೈಸರ್ಗಿಕವಾಗಿ ಹಲವಾರು ಕ್ರಮಗಳನ್ನು ದಯಪಾಲಿಸಿದ್ದಾನೆ. ಆದರೆ ಈ ಕ್ರಮಗಳನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಮಾನವ ಎಡವುತ್ತಿರು ವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಮಣ್ಣು ಮತ್ತು ಮನುಕುಲವು, ಆರೋಗ್ಯ ಮತ್ತು ಆಹಾರದ ವಿಷಯದಲ್ಲಿ ಭಯಾನಕ ತೊಂದರೆಯನ್ನು ಅನುಭವಿಸುವ ಹಂತಕ್ಕೆ ತಲುಪುತ್ತಿರುವುದು ಶತಸ್ಸಿದ್ಧವಾಗಿದೆ.

ಇದು ಆಘಾತಕಾರಿ ಬೆಳವಣಿಗೆಯಾಗಿದ್ದರೂ, ಸಂಬಂಧಿಸಿದವರು ಈ ಕುರಿತು ಚಿಂತನೆ ನಡೆಸದಿರುವುದು ದುರದೃಷ್ಟಕರ. ಮಣ್ಣು ವರ್ಷಪೂರ್ತಿ ಜೀವಂತವಾಗಿ, ಅಂದರೆ ಫಲವತ್ತತೆಯಿಂದ ಕೂಡಿದ್ದು ಫಸಲಿನ ಮೂಲಕ ನಿರಂತರವಾಗಿ ನಿರೀಕ್ಷಿತ ಫಲವನ್ನು ಕೊಡುತ್ತಲಿರಬೇಕು. ಆಗ ಮಾತ್ರವೇ ಮನುಕುಲ ಸೇರಿದಂತೆ ಒಂದಿಡೀ ಜೀವಸಂಕುಲ ಆರೋಗ್ಯಕರವಾಗಿರುತ್ತದೆ. ಮಣ್ಣು ಜೀವಂತವಾಗಿರಬೇಕಾದಲ್ಲಿ ಅದರಲ್ಲಿನ ಸಾವಯವ ಇಂಗಾಲದ ಪ್ರಮಾಣವು ಕನಿಷ್ಠ ಶೇ.೨ಕ್ಕಿಂತ ಹೆಚ್ಚು ಇರಲೇಬೇಕು. ಅಂದಾಗ ಮಾತ್ರ ಮಣ್ಣಿನಿಂದ ಗುಣಮಟ್ಟದ ಆಹಾರೋತ್ಪಾದನೆ ಸಾಧ್ಯವಾಗುತ್ತದೆ. ಆದರೆ ಇಂದು ಅತಿಯಾದ ನೀರು ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ ಭಾರತದ ಹಲವು ಭಾಗಗಳಲ್ಲಿ ಸಾವಯವ ಇಂಗಾಲದ ಪ್ರಮಾಣವು ಶೇ.೦.೫ಕ್ಕಿಂತ ಕಡಿಮೆಯಿದೆ.

ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು, ಇದರಿಂದ ಪ್ರತಿವರ್ಷ ಕೃಷಿ ಇಳುವರಿಯ ಪ್ರಮಾಣ ಕಡಿಮೆಯಾಗುತ್ತಿರುವುದಲ್ಲದೆ, ಮನುಕುಲ ವನ್ನು ಹೊಸ ಹೊಸ ರೋಗಗಳು ಬಾಧಿಸುವಂತಾಗುತ್ತಿದೆ. ಪ್ರತಿಯೊಂದು ಬೆಳೆಯ ನಾಟಿಯಿಂದ ಹಿಡಿದು ಕೊಯ್ಲಿನ ಸಮಯದವರೆಗೆ ಹಲವಾರು ಕೃಷಿತ್ಯಾಜ್ಯಗಳು ಹೊರಬರುತ್ತವೆ. ಇವು ಮಾನವನಿಗೆ ನೇರವಾಗಿ ಕಡಿಮೆ ಪ್ರಮಾಣದಲ್ಲಿ ಉಪಯುಕ್ತ ವಾಗಿವೆ. ಆದರೆ ಫಲಪ್ರದವಾಗದೆ ಉಳಿಯುವ ಕೃಷಿತ್ಯಾಜ್ಯಗಳನ್ನು ಮರಳಿ ಮಣ್ಣಿಗೆ ಸೇರಿಸುವ ಮೂಲಕ ಅದರ ಸಾವಯುವ ಇಂಗಾಲದ ಪ್ರಮಾಣವನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದಾಗಿದೆ.

ಇದು ಅತ್ಯಂತ ಕಡಿಮೆ ಖರ್ಚಿನ, ಸರಳವಾದ ಮಾರ್ಗೋಪಾಯವಾಗಿದೆ. ಮಣ್ಣಿನಲ್ಲಿರುವ ವೈವಿಧ್ಯಮಯ ಜೀವಾಣುಗಳು ಬದುಕಲು ಹಾಗೂ ಅವು ಗಳ ಸಂಖ್ಯೆ ಹೆಚ್ಚಾಗಲು ಕೃಷಿತ್ಯಾಜ್ಯಗಳು ಮರಳಿ ಮಣ್ಣಿಗೆ ಸೇರಲೇಬೇಕು. ಮಣ್ಣಿನ ಹಾಗೂ ಬೆಳೆಯ ಆರೋಗ್ಯಕರ ಬೆಳವಣಿಗೆಗೆ ಅವಶ್ಯವಿರುವ
ಪೋಷಕಾಂಶಗಳು ಈ ಜೀವಾಣುಗಳಿಂದ ಸೃಷ್ಟಿಯಾಗುತ್ತವೆ. ಇದು ಪ್ರಕೃತಿದತ್ತವಾಗಿ ನಡೆದುಬಂದಿರುವ ನಿಯಮ. ಸದ್ಯ ಕೃಷಿಯಲ್ಲಿ ಲಂಗು-ಲಗಾಮಿ ಲ್ಲದೆ ಉಪಯೋಗಿಸುತ್ತಿರುವ ಯಥೇಚ್ಛ ನೀರು ಮತ್ತು ರಾಸಾಯನಿಕಗಳಿಂದಾಗಿ ಮುಂದೊಂದು ದಿನ ಪ್ರಪಂಚದ ಒಟ್ಟಾರೆ ಜೀವಸಂಕುಲಕ್ಕೆ ಸಂಚಕಾರ ಒದಗಿದರೂ ಅಚ್ಚರಿಯಿಲ್ಲ.

ಮಣ್ಣಿನ ಫಲವತ್ತತೆಯನ್ನು ನಿರಂತರ ಕಾಪಾಡಲು ಯಾವುದೇ ಬಾಹ್ಯ ವಸ್ತುಗಳನ್ನು ಖರೀದಿಸಿ ಬಳಸದೆ, ಇಂಥ ನೈಸರ್ಗಿಕ ವಿಧಾನವನ್ನು ಅನುಸರಿಸು ವುದೇ ಶ್ರೇಷ್ಠ ಉಪಕ್ರಮವಾಗಿದೆ. ಈ ಮಹತ್ವದ ಅಂಶವನ್ನು ಪ್ರಸ್ತುತ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿದೆ. ಭೂತಾಯಿಯಿಂದ ಫಸಲು ಪಡೆದ ನಂತರ, ಮಣ್ಣಿನ ಫಲವತ್ತತೆ ಕಾಪಾಡಿ ಮುಂದಿನ ಬೆಳೆಗೆ ಭೂಮಿತಯಾರಿ ಮಾಡುವ ದೃಷ್ಟಿಯಿಂದ, ಫಸಲಿನ ಕನಿಷ್ಠ ಅರ್ಧತೂಕದಷ್ಟಾದರೂ ಸಾವಯವ ವಸ್ತುಗಳನ್ನು ಮರಳಿ ಮಣ್ಣಿಗೆ ಸೇರಿಸಲೇಬೇಕು.

ಆಗ ಮಾತ್ರವೇ ಮಣ್ಣಿಗೆ ತೃಪ್ತಿಕರವಾದ ಆರೋಗ್ಯವು ಪ್ರಾಪ್ತವಾಗುತ್ತದೆ. ರಸಗೊಬ್ಬರಗಳ ಅರಿವಿರದಿದ್ದ ನಮ್ಮ ಪೂರ್ವಜರು ಅಂದಿನ ಒಣಬೇಸಾಯದ ದಿನಮಾನಗಳಲ್ಲಿ, ಪ್ರತಿ ಎಕರೆಗೆ ಸರಾಸರಿ ೮-೧೦ ಕ್ವಿಂಟಾಲ್ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಆದರೆ ಅಷ್ಟು ಫಸಲನ್ನು ಪಡೆಯಲು ಆ ಭೂಮಿಗೆ ಕನಿಷ್ಠ ೮-೧೦ ಟನ್‌ನಷ್ಟು ಸಾವಯವ ವಸ್ತುಗಳನ್ನು (ಅಂದರೆ, ಜಾನುವಾರುಗಳ ಸಗಣಿ, ಗಂಜಲ ಮತ್ತು ತಿಪ್ಪೆಗೊಬ್ಬರ) ಉಪಯೋಗಿಸುತ್ತಿ
ದ್ದರು. ಆದರೀಗ ಬಹುತೇಕ ರೈತಾಪಿಗಳು ನಗರಗಳ ಕಡೆ ಮುಖಮಾಡಿರುವುದರಿಂದ ಹೈನುಗಾರಿಕೆಯು ಮಾಯವಾಗಿದೆ, ತಿಪ್ಪೆಗೊಬ್ಬರದ ಬಳಕೆ ಕಡಿಮೆ
ಯಾಗಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ, ಕೃಷಿಕಾರ್ಮಿಕರ ಕೊರತೆ. ಇದರಿಂದಾಗಿ ಬಹುತೇಕ ರೈತರು ದೀರ್ಘಾವಽ ಬೆಳೆಗಳ ಮೇಲೆ ಅವಲಂಬಿತರಾಗಿರುವುದರಿಂದ, ಮಣ್ಣಿಗೆ ವಿಶ್ರಾಂತಿ, ಕಾಲ್ಗೈ ಪದ್ಧತಿ ಹಾಗೂ ಮಾಗಿ ಉಳುಮೆಯಂಥ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ
ಕೊರತೆಯು ಸರ್ವೇಸಾಮಾನ್ಯವಾಗಿದೆ.

ಜತೆಗೆ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಯಥೇಚ್ಛವಾಗಿ ಬಳಸುತ್ತ ಮಣ್ಣಿನಲ್ಲಿರುವ ಜೀವಾಣುಗಳನ್ನು ನಾಶಪಡಿಸುತ್ತಿರುವುದು ಅತ್ಯಂತ ದುಃ
ಖಕರ ಸಂಗತಿಯಾಗಿದೆ. ಮಣ್ಣಿನ ಫಲವತ್ತತೆ ನಿರಂತರವಾಗಿರಬೇಕೆಂದರೆ, ಅದರಲ್ಲಿನ ವೈವಿಧ್ಯಮಯ ಜೀವಾಣುಗಳು ನಿರಂತರವಾಗಿ ಚಟುವಟಿಕೆ ಯಿಂದ ಕೂಡಿರಬೇಕು; ಆಗ ಮಾತ್ರವೇ ಮಣ್ಣು ಹಲವು ಆಯಾಮಗಳಿಂದ ಆರೋಗ್ಯಕರವಾಗಿರುತ್ತದೆ. ಸದ್ಯದ ಮಣ್ಣುಗಳ ಪರಿಸ್ಥಿತಿಯನ್ನು ಗಮನಿಸಿ
ದಾಗ, ಕೃಷಿತ್ಯಾಜ್ಯಗಳ ಮರುಬಳಕೆ ಮತ್ತು ಹಸಿರೆಲೆ ಗೊಬ್ಬರಗಳ ನಿಯತ ಬಳಕೆಯು ಅತ್ಯವಶ್ಯಕವಾಗಿದೆ ಎನಿಸುತ್ತದೆ. ಇವು ಮಣ್ಣಿನ ಫಲವತ್ತತೆಯನ್ನು
ಖಂಡಿತ ಹೆಚ್ಚಿಸುವುದಲ್ಲದೆ ಅದರ ಸದೃಢತೆಯನ್ನು ಸಹಜವಾಗಿ ಬದಲಿಸುತ್ತವೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚು ಇದ್ದಲ್ಲಿ, ಅದರ ಉತ್ಪಾದನಾ ಶಕ್ತಿ ನೈಸರ್ಗಿಕವಾಗಿ ವೃದ್ಧಿಸುತ್ತದೆ ಮತ್ತು ಅಲ್ಲಿರುವ ನೀರು ಸೋಸಲ್ಪಟ್ಟು ಶುದ್ಧೀಕರಣಗೊಳ್ಳುತ್ತದೆ.

ಆದರೆ ಇಂಥ ಸರಳ ಕ್ರಮದ ಅನುಷ್ಠಾನವಾಗದೆ ಮಣ್ಣು ದಿನದಿಂದ ದಿನಕ್ಕೆ ಅನಾರೋಗ್ಯಪೀಡಿತವಾಗುತ್ತಿರುವುದು ದುಃಖದ ಸಂಗತಿ. ಹಲವು ರೈತರು ಇಂದು ಬೆಳೆಯ ತ್ಯಾಜ್ಯಗಳನ್ನು ಸುಟ್ಟುಹಾಕುತ್ತಿರುವುದು ದುರದೃಷ್ಟಕರ ಬೆಳವಣಿಗೆ. ಕೆಲ ಸಂದರ್ಭಗಳಲ್ಲಿ ಸುಡುವಿಕೆ ಅನಿವಾರ್ಯವಿರಬಹುದು, ಆದರೆ ಇದರಿಂದ ವಾತಾವರಣ ಕಲುಷಿತಗೊಳ್ಳುವುದಲ್ಲದೆ ಮಣ್ಣಿನ ಮೇಲ್ಪದರದಲ್ಲಿರುವ ಕೋಟ್ಯಂತರ ಪರಿಸರಸ್ನೇಹಿ ಸೂಕ್ಷ್ಮಜೀವಾಣುಗಳು ನಾಶವಾಗುತ್ತವೆ ಹಾಗೂ ಮಣ್ಣು ದುರ್ಬಲಗೊಳ್ಳುತ್ತದೆ.

ಮಣ್ಣಿನಲ್ಲಿರಬೇಕಾದ ಸಾವಯವ ಇಂಗಾಲದ ಪ್ರಮಾಣವು ವಾತಾವರಣದಲ್ಲೇ ಉಳಿದು ಭೂಮಿ ಮತ್ತಷ್ಟು ಬರಡಾಗುತ್ತದೆ. ಇದರಿಂದಾಗಿ ವಾತಾ ವರಣದಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗಿ, ನೈಸರ್ಗಿಕ ರಚನೆಗಳಾಗಿರುವ ಹಿಮಗಡ್ಡೆಗಳು ಕರಗುತ್ತವೆ. ನಿಸರ್ಗವು ಅಸಮತೋಲನಗೊಂಡು ಪ್ರವಾಹ ಮತ್ತು ಕ್ಷಾಮದಂಥ ಪ್ರಕೃತಿ ವಿಕೋಪಗಳು ಸೃಷ್ಟಿಯಾಗುತ್ತವೆ. ರಾಸಾಯನಿಕದ ಬಳಕೆಯಾದ ಭೂಮಿಯಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಕಾಡು
ಹಾಗೂ ಬಯಲುಗಳಲ್ಲಿ ಈಗಾಗಲೇ ನೈಸರ್ಗಿಕವಾಗಿ ಲಭ್ಯವಿದ್ದ ಸಾವಯವ ಇಂಗಾಲದ ಪ್ರಮಾಣವೂ ಕಡಿಮೆಯಾಗುತ್ತ ಹೋಗುತ್ತದೆ.

ಕೃಷಿತ್ಯಾಜ್ಯವೆಂದರೆ ಭೂಮಿಯೆಂಬ ಬೃಹದಾಕಾರದ ಹಾಲಿನ ಪಾತ್ರೆಗೆ ಅಲ್ಪ ಪ್ರಮಾಣದ ಹೆಪ್ಪು ಇದ್ದಂತೆ ಹಾಗೂ ಅತಿಯಾದ ರಾಸಾಯನಿಕವೆಂದರೆ ಆ ಹಾಲಿನ ಪಾತ್ರೆಗೆ ಉಪ್ಪು ಸುರಿದಂತೆ. ಅಂದರೆ ಸ್ವಲ್ಪ ಪ್ರಮಾಣದಲ್ಲಿ ಭೂಮಿಯಲ್ಲಿ ಸೇರಿಸಿದ ಕೃಷಿತ್ಯಾಜ್ಯಗಳು ನೈಸರ್ಗಿಕವಾಗಿ ಕೊಳೆತು ಕಲೆತು, ಕೋಟ್ಯಂತರ ವೈವಿಧ್ಯಮಯ ಪರಿಸರಸ್ನೇಹಿ ಜೀವಾಣುಗಳು ಸೃಷ್ಟಿಯಾಗುತ್ತವೆ. ದಿನಗಳೆದಂತೆ ಜೀವಾಣುಗಳು ದ್ವಿಗುಣಗೊಂಡು ಒಟ್ಟು ಮಣ್ಣನ್ನು
ಹಂತ-ಹಂತವಾಗಿ ಫಲವತ್ತಾಗಿಸುತ್ತವೆ. ಹೀಗಾಗಿ ಕೃಷಿ ಭೂಮಿಯಲ್ಲಿ ಮುಖ್ಯ ಬೆಳೆಯನ್ನು ನಾಟಿ ಮಾಡುವ ಪೂರ್ವದಲ್ಲಿ ಹಸಿರೆಲೆ ಗೊಬ್ಬರದ
ಸಸ್ಯಗಳನ್ನು (ಸೆಣಬು, ಉದ್ದು, ಹೆಸರು, ಅಲಸಂದೆ, ಹುರುಳಿ ಇತ್ಯಾದಿ) ಬೆಳೆದು, ನಿಗದಿತ ಅವಧಿಯಲ್ಲಿ ಮೊಗ್ಗುಹೊಡೆದು ಮಣ್ಣಿನಲ್ಲಿ ಸೇರಿಸುವು ದರಿಂದ ಅದರಲ್ಲಿನ ಸಾವಯವ ಇಂಗಾಲದ ಪ್ರಮಾಣವು ಹೆಚ್ಚಾಗುವುದು. ಮಳೆಯಾಶ್ರಿತ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನೂ, ನೀರಾವರಿ ಜಮೀನಿನಲ್ಲಿ ಹಸಿರೆಲೆ ಗೊಬ್ಬರದ ಸಸ್ಯಗಳನ್ನೂ ಬಿತ್ತನೆ ಮಾಡಬೇಕು. ಇದರಿಂದಾಗಿ ಉತ್ಪತ್ತಿಯಾಗುವ ಜೀವಾಣುಗಳು ಮಣ್ಣಿನಲ್ಲಿರುವ ಮಾಲಿನ್ಯ ಕಾರಕ ವಸ್ತುಗಳನ್ನು ಹೀರಿ, ಮಣ್ಣು ಮತ್ತು ವಾತಾವರಣವನ್ನು ಶುದ್ಧೀಕರಿಸುತ್ತವೆ. ಕೃಷಿತ್ಯಾಜ್ಯ ಹಾಗೂ ಹಸಿರೆಲೆ ಗೊಬ್ಬರದಿಂದ ವಾರ್ಷಿಕವಾಗಿ ಟನ್ನುಗಳಷ್ಟು ಸಾವಯವ ಇಂಗಾವು ಸಹಜವಾಗಿ ಮಣ್ಣಿನಲ್ಲಿ ಸೃಷ್ಟಿಯಾಗುತ್ತದೆ. ಈ ಕ್ರಮದ ಅನುಸರಣೆಯಿಂದಾಗಿ, ಹವಾಮಾನದಲ್ಲಾಗುವ ಏರುಪೇರುಗಳಿಂದ ಮಣ್ಣಿನ ಮೇಲೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ.

ಜತೆಗೆ ಮುಂದೆ ಬೆಳೆಯುವ ಬೆಳೆಗಳ ಇಳುವರಿಯಲ್ಲಿ ಸುಧಾರಣೆಯಾಗಿ ಬೆಳೆಯ ಉತ್ಪಾದನಾ ಖರ್ಚು ಗಣನೀಯವಾಗಿ ಕಡಿಮೆ ಯಾಗುತ್ತದೆ. ಆದರೆ ರಾಸಾಯನಿಕಗಳ ಯಥೇಚ್ಛ ಬಳಕೆಯು ಈ ನೈಸರ್ಗಿಕ ಕ್ರಮಕ್ಕೆ ತದ್ವಿರುದ್ಧವಾಗಿದೆ. ಸಹಜವಾಗಿ ಸಿಗುವ ಕೃಷಿತ್ಯಾಜ್ಯಗಳನ್ನು ಒಂದು ವೇಳೆ ಮಣ್ಣಿನಲ್ಲಿ ಮಿಶ್ರಣಗೊಳಿಸದಿದ್ದಲ್ಲಿ ಮೇಲ್ಮಣ್ಣಿನ ಸವೆತವಾಗಿ ಅದರಲ್ಲಿರುವ ಫಲವತ್ತತೆಯು ದಿನದಿಂದ ದಿನಕ್ಕೆ ಕ್ಷೀಣಿಸುತ್ತದೆ. ಇದರಿಂದ ಮಣ್ಣಿನ ಮೇಲ್ಪದರ ಗಟ್ಟಿಯಾಗಿ ನೈಸರ್ಗಿಕವಾಗಿ ಖನಿಜಾಂಶಗಳನ್ನು ಹೊಂದಿರುವ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಇಂಥ ಮಣ್ಣಿನ ಮೇಲೆ ರಭಸವಾಗಿ ಬೀಳುವ ಮಳೆಹನಿಗಳು ಮಣ್ಣಿನ ಕಣಗಳನ್ನು ಚದುರಿಸಿ ಜಮೀನಿನಿಂದ ಅಲ್ಪ-ಸ್ವಲ್ಪವಿರುವ ಫಲವತ್ತಾದ ಮಣ್ಣನ್ನು ಸಹ ಒಯ್ಯುವುದರಿಂದ ಭೂಮಿ ಮತ್ತಷ್ಟು ನಿಷ್ಟ್ರಯೋಜಕವಾಗುತ್ತದೆ. ಮಣ್ಣು ಮೃದುವಾಗಿದ್ದು ವಾಸನೆಯಿಂದ ಕೂಡಿರಬೇಕು ಹಾಗೂ ಕೈಯಿಂದ ಅಗೆದಲ್ಲಿ ಎರೆಹು ಳುಗಳು ಕಾಣಸಿಗಬೇಕು, ಅಂದಾಗ ಮಣ್ಣು ಫಲವತ್ತಾಗಿದೆ ಎಂದರ್ಥ. ಸಾವಯವ ಗೊಬ್ಬರವನ್ನು ತಿಂದು ಬದುಕುವ ಜೀವಿಗಳು ಮಣ್ಣಿನಲ್ಲಿರುವ ಸಾವಯವ ವಸ್ತುಗಳನ್ನು ಕ್ರಮೇಣ ಬೆಳೆಯ ಬೆಳವಣಿಗೆಗೆ ಅತ್ಯಗತ್ಯವಾದ ಪೋಷಕಾಂಶಗಳಾಗಿ ಪರಿವರ್ತಿಸುವುದಲ್ಲದೆ ಮಣ್ಣಿನ ಮೇಲ್ಪದರಿನಲ್ಲಿ ಹ್ಯೂಮಸ್ ರೂಪುಗೊಳ್ಳುವಂತೆ ಮಾಡುತ್ತವೆ.

ಇದರಿಂದ ಭೂಮಿಯಲ್ಲಿ ಮಣ್ಣುಜೀವಿಗಳ ವೈವಿಧ್ಯ ಹಾಗೂ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ ಬೆಳೆಯ ಪ್ರತಿ ಹಂತದ ಬೆಳವಣಿಗೆಯಲ್ಲಿ ಅಗತ್ಯ
ಪೋಷಕಾಂಶಗಳು ಹಂತ-ಹಂತವಾಗಿ ಬೆಳೆಯ ಬೇರುಗಳ ಮೂಲಕ ರವಾನೆಯಾಗುತ್ತವೆ. ನೀರನ್ನು ಹಿಡಿದಿಡುವ ಸಾಮರ್ಥ್ಯ ಮಣ್ಣಿಗೆ ಲಭಿಸುವುದಲ್ಲದೆ
ಬೆಳೆಗೆ ಅಗತ್ಯವಿದ್ದಾಗ ಮಾತ್ರ ನೀರು ಬಳಕೆ ಯಾಗುತ್ತದೆ. ಇದರಿಂದಾಗಿ ಬರಗಾಲದಲ್ಲೂ ಸದಾತೇವಾಂಶದ ವಾತಾವರಣ ಸೃಷ್ಟಿಯಾಗುತ್ತದೆ, ಇಳುವರಿಯಲ್ಲಿ ಸುಧಾರಣೆಯೂ ಕಾಣುತ್ತದೆ.

ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗುವುದರಿಂದ ಮಣ್ಣಿನ ರಸಸಾರ ಹಾಗೂ ವಿದ್ಯುದ್ವಾಹಕತೆಯು ಅಪೇಕ್ಷಿತ ಪ್ರಮಾಣದಲ್ಲಿ ತಯಾರಾಗಿ ಮಣ್ಣಿನ
ಸವಕಳಿ ತಪ್ಪುತ್ತದೆ. ಅವಶ್ಯಕ ಪೋಷಕಾಂಶಗಳಾದ ಪೊಟ್ಯಾಷಿಯಂ, ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಂಗಳು ಸಾವಯವ ಇಂಗಾಲದೊಂದಿಗೆ ಕೂಡು
ವುದರಿಂದ ಅವುಗಳೆಲ್ಲವು ಸೋರಿಹೋಗುವುದು ತಪ್ಪುತ್ತದೆ. ಮಣ್ಣಿನಲ್ಲಿ ಸಾವಯವ ಅಂಶವು ಹೆಚ್ಚಾದಂತೆ ಬೆಳೆಯು ಸತ್ವಯುತವಾಗಿ ಬೆಳೆದು
ಸಾಮಾಜಿಕ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಅಂದಾಗ ಮಾತ್ರ ನಮ್ಮ ಕೃಷಿಯು ಮುಂದಿನ ಪೀಳಿಗೆಗೆ ಆರೋಗ್ಯಯುತವಾಗಿ ಮುಂದು
ವರಿಯುತ್ತದೆ. ತಪ್ಪಿದಲ್ಲಿ ಭಯಾನಕ ಹಾಗೂ ಪರಿಹರಿಸಲಾಗದ ಕಷ್ಟಗಳು ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ.

ಸರಕಾರವೂ ಈ ಕುರಿತು ಗಂಭೀರ ಚಿಂತನೆ ಮಾಡುವುದು ಅತ್ಯವಶ್ಯವಿದೆ. ಕಾರಣ ಇದು ಸಮುದಾಯ ಆರೋಗ್ಯದ ಸುಧಾರಣೆಯ ಪ್ರಥಮ ಹೆಜ್ಜೆ ಯಾಗಿದೆ. ರಾಸಾಯನಿಕಗಳನ್ನು ನೆಚ್ಚದ ನಮ್ಮ ಪೂರ್ವಜರು ನೂರಾರು ವರ್ಷಗಳ ಕಾಲ ಆರೋಗ್ಯದಿಂದ ಬದುಕಿದ್ದರು, ಆದರೆ ಇಂದು ಕ್ಷಣಿಕ ಸುಖಕ್ಕಾಗಿ ಅತಿಯಾದ ರಾಸಾಯನಿಕಗಳನ್ನು ಉಪಯೋಗಿಸಿ ಭವಿಷ್ಯದ ಆರೋಗ್ಯವನ್ನು ಹಾಳುಗೆಡುವುತ್ತಿರುವುದು ಎಷ್ಟು ಸರಿ?

(ಲೇಖಕರು ಸಹಾಯಕ ಮಹಾಪ್ರಬಂಧಕರು)