ನ್ಯೂಯಾರ್ಕ್: ಸಿವಿಲ್ ವಂಚನೆ ಆರೋಪ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಾರಣೆ ನಡೆಯುತ್ತಿದೆ.
ಪ್ರಕರಣದ ವಿಚಾರಣೆ ವೇಳೆ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗಳು ಇವಾಂಕಾ ಟ್ರಂಪ್ ವಿಚಾರಣೆಯನ್ನು ನವೆಂಬರ್ 8ರಂದು ನಡೆಸಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಶುಕ್ರವಾರ ಇವಾಂಕಾ ಟ್ರಂಪ್ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿತ್ತು. ಇವಾಂಕಾ ಅವರ ವಿಚಾರಣೆ ದೀರ್ಘ ಅವಧಿಗೆ ನಡೆಯುವುದರಿಂದ ನ್ಯಾಯಾಧೀಶ ಆರ್ಥರ್ ಎಂಗೊರಾನ್ ಅವರು ನವೆಂಬರ್ 8ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ. ನವೆಂಬರ್ 6ಕ್ಕೆ ಡೊನಾಲ್ಡ್ ಟ್ರಂಪ್ ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಕಳೆದ ವಾರ ಇವಾಂಕಾ ಅವರು ಪ್ರಕರಣದ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶ ಆರ್ಥರ್ ಎಂಗೊರಾನ್ ಅವರು ತಿರಸ್ಕರಿಸಿದ್ದರು. ಇದೀಗ ಇವಾಂಕಾ ನವೆಂಬರ್ 8ರಂದು ಪ್ರಕರಣದ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ನ್ಯಾಯಾಧೀಶ ಆರ್ಥರ್ ಎಂಗೊರಾನ್ ತಿಳಿಸಿದ್ದಾರೆ.
ಶುಕ್ರವಾರ ಇಡೀ ದಿನ ಸಿವಿಲ್ ವಂಚನೆ ಪ್ರಕರಣ ವಿಚಾರಣೆ ನಡೆಸುವ ಬಗ್ಗೆ ನ್ಯಾಯಾಧೀಶರು ಪ್ರಸ್ತಾಪಿಸಿದಾಗ, ಡೊನಾಲ್ಡ್ ಟ್ರಂಪ್ ಪರ ವಕೀಲರು ಕಾರಣಾಂತರಗಳಿಂದ ವಿಚಾರಣೆಗೆ ಪೂರ್ತಿ ದಿನ ಹಾಜರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ಈ ಸಂಬಂಧ ಡೊನಾಲ್ಡ್ ಟ್ರಂಪ್ ಪರ ವಕೀಲರೊಂದಿಗೆ ಚರ್ಚೆ ನಡೆಸಿದ ಬಳಿಕ ನ್ಯಾಯಾಧೀಶರು, ನವೆಂಬರ್ 8ರಂದು ಇವಾಂಕಾ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಕಳೆದ ವರ್ಷ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಡೊನಾಲ್ಡ್ ಟ್ರಂಪ್ ಮತ್ತು ಟ್ರಂಪ್ ಸಂಸ್ಥೆ ಹಾಗೂ ಪುತ್ರರಾದ ಎರಿಕ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್ ವಿರುದ್ಧ ಆಸ್ತಿ ಮೌಲ್ಯವನ್ನು ಹೆಚ್ಚು ತೋರಿಸಿದ ಹಿನ್ನೆಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇವಾಂಕಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ. ಇವಾಂಕಾ ಅವರು ಈ ಮೊದಲು ಟ್ರಂಪ್ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕರಾಗಿದ್ದರು. ಈ ಸಂಬಂಧ ಅವರ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ಕಳೆದ ಜೂನ್ ತಿಂಗಳಲ್ಲಿ ನ್ಯಾಯಾಲಯವು ಆರೋಪವನ್ನು ತಿರಸ್ಕರಿಸಿತ್ತು.
2017ರ ಜನವರಿಯಲ್ಲಿ ಇವಾಂಕಾ ಅವರು ಟ್ರಂಪ್ ಸಂಸ್ಥೆಯಿಂದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ಥಾನವನ್ನು ತೊರೆದಿದ್ದರು. ಬಳಿಕ ತಂದೆಗೆ ಆಡಳಿತ ಸಲಹೆಗಾರರಾಗಿ ಸೇರಿಕೊಂಡಿದ್ದರು. 2021ರಲ್ಲಿ ಡೊನಾಲ್ಡ್ ಟ್ರಂಪ್ ಸೋತ ನಂತರ ಫ್ಲೋರಿಡಾಕ್ಕೆ ತೆರಳಿದರು. ಇದೇ ವೇಳೆ ಟ್ರಂಪ್ ಇದು ರಾಜಕೀಯ ಪ್ರೇರಿತ ಪ್ರಕರಣ. ನನ್ನ ವಿರುದ್ಧ ದ್ವೇಷ ಸಾಧಿಸಲು ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇವಾಂಕಾ ವಿಚಾರಣೆ ನಂತರ ಪ್ರಕರಣ ಸಂಬಂಧ ಒಟ್ಟು 127 ಜನರನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ. ಈ ಪ್ರಕರಣದ ತನಿಖೆಯು ಅಕ್ಟೋಬರ್ 2 ರಂದು ಪ್ರಾರಂಭವಾಗಿತ್ತು.
ಟ್ರಂಪ್ ಪ್ರಕರಣ : ಡೊನಾಲ್ಡ್ ಟ್ರಂಪ್ ತನ್ನ ಆಸ್ತಿಯನ್ನು ಅತಿಯಾಗಿ ಮೌಲ್ಯಮಾಪನ ಮಾಡುವ ಮೂಲಕ ಮತ್ತು ತಮ್ಮ ನಿವ್ವಳ ಮೌಲ್ಯವನ್ನು ಹೆಚ್ಚು ತೋರಿಸುವ ಮೂಲಕ ಬ್ಯಾಂಕುಗಳು, ವಿಮಾದಾರರು ಮತ್ತು ಇತರರಿಗೆ ವಂಚಿಸಿದ್ದಾರೆ. ಟ್ರಂಪ್ ಸಂಸ್ಥೆಗೆ ಹೆಚ್ಚಿನ ಹಣವನ್ನು ಪಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಡೊನಾಲ್ಡ್ ಟ್ರಂಪ್ 1 ಶತಕೋಟಿ ಡಾಲರ್‌ಗೂ ಹೆಚ್ಚು ಸಾಲ ಮಾಡಿದ್ದಾರೆ ಎಂಬ ಆರೋಪವೂ ಅವರ ಮೇಲಿದೆ.