ಕೊಪ್ಪಳ: ಕೊಪ್ಪಳ ಜಿಲ್ಲೆಯ ಮೂವರನ್ನು ರಾಜ್ಯ ಸರ್ಕಾರ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೋಟ್ಯಾಂತರ ರೂ. ಬೆಲೆ ಬಾಳುವ ಎರಡು ಎಕರೆ ಭೂದಾನ ಮಾಡಿ ಅದೇ ಶಾಲೆಯಲ್ಲಿ ಬಿಸಿಯೂಟ ಕೆಲಸಗಾರಳಾಗಿ ಸೇವೆ ಸಲ್ಲಿಸಿದ ಮಹಾಧಾನಿ ಭೂ ಧಾನಿ ಕೊಪ್ಪಳ ತಾಲೂಕಿನ ಕುಣಕೇರಿ ಗ್ರಾಮದ ನಿವಾಸಿ ಹುಚ್ಚಮ್ಮ ಬಸಪ್ಪ ಚೌದ್ರಿ ಅವರಿಗೆ ಕರ್ನಾಟಕ ಸರ್ಕಾರವು ಸಮಾಜ ಸೇವಾ ಕ್ಷೇತ್ರದಡಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತಾನು ಅಕ್ಷರ ಕಲಿಯದಿದ್ದರೂ ಮಕ್ಕಳ ಅಕ್ಷರ ಕಲಿಕೆಗೆ ನೆರಳಾಗಲು ತನ್ನ ಭೂಮಿಯನ್ನೇ ದಾನ ಮಾಡಿ ಮಹಾ ತ್ಯಾಗಮಯಿ.
ತೊಗಲು ಗೊಂಬೆಯಾಟದಲ್ಲಿ ನಾಡಿನ ತುಂಬೆಲ್ಲಾ ಹೆಸರು ಮಾಡಿ ಸಾಗರದಾಚೆಗೂ ಸಾಗಿ ವಿದೇಶಗಳಲ್ಲಿಯೂ ತಮ್ಮ ಕಲೆಯ ಕಂಪು ಬೀಸಿದ ಕೊಪ್ಪಳ ತಾಲೂಕಿನ ಮೋರನಹಳ್ಳಿಯ ನಿವಾಸಿ ಕೇಶಪ್ಪ ಶಿಳ್ಳಿಕ್ಯಾತರ್ ಅವರಿಗೆ ರಾಜ್ಯ ಸರ್ಕಾರವು ಯಕ್ಷಗಾನ, ಬಯಲಾಟ ಕಲಾ ಕ್ಷೇತ್ರದಡಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ತಮ್ಮ ತೊಗಲು ಗೊಂಬೆಯಾಟ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ.
ಹಗಲು ವೇಷಧಾರಿಯಾಗಿ ರಾಮ, ಲಕ್ಷ್ಮಣ, ಕೃಷ್ಣ, ಸೀತೆ ಹೀಗೆ ನಾನಾ ಪಾತ್ರದಾರಿಗಳಲ್ಲಿ ಬಣ್ಣ ಹಚ್ಚಿ ನೂರಾರು ಊರು ಸುತ್ತಾಟ ನಡೆಸಿ ತಮ್ಮ ಕಲೆಯಲ್ಲೇ ಜೀವನ ಸಾಗಿಸುತ್ತಿರುವ ಕೊಪ್ಪಳ ಜಿಲ್ಲೆಯ ಸಿದ್ದಾಪುರದ ಹಗಲುವೇಷಧಾರಿ ಗುಂಡಪ್ಪ ವಿಭೂತಿ ಅವರಿಗೆ ರಾಜ್ಯ ಸರ್ಕಾರವು ಈಗ ಜಾನಪದ ಕ್ಷೇತ್ರದಡಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.