ಲಕ್ನೋ: ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬದವರ ಭೇಟಿಗೆ ರಾಹುಲ್ ಗಾಂಧಿ ಸೇರಿ ಐವರು ಕಾಂಗ್ರೆಸ್ ನಾಯಕರಿಗೆ ಅನುಮತಿ ದೊರೆತಿದೆ.
ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಐವರಿಗೆ ಮಾತ್ರ ಹತ್ರಾಸ್ ಗೆ ತೆರಳಲು ಅನುಮತಿ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಪೊಲೀಸರು ಅವರನ್ನು ಕಳೆದ ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದರು. ಕಳೆದ ಗುರುವಾರ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಹತ್ರಾಸ್ ಗೆ ತೆರಳುತ್ತಿದ್ದ ಈ ಇಬ್ಬರು ಕಾಂಗ್ರೆಸ್ ನಾಯಕ ರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದರು.
ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಗಿಸದ ಹೀನ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಶನಿವಾರ ಮತ್ತೆ ಹತ್ರಾಸ್ ಗೆ ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಕಾರನ್ನು ದೆಹಲಿ- ನೋಯ್ಡಾ ಗಡಿಯಲ್ಲಿಯೇ ಉತ್ತರ ಪ್ರದೇಶ ಪೊಲೀಸರು ತಡೆದರು.