Thursday, 12th December 2024

ಪೊಲೀಸರ ವೇತನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಸಚಿವ ಪರಮೇಶ್ವರ್ 

ತುಮಕೂರು: ಪೊಲೀಸರ ವೇತನ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ನಗರದ  ಎಸ್.ಪಿ. ಕಚೇರಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ವಸತಿ ಸಮುಚ್ಛಯವನ್ನು ಉದ್ಘಾಟಿಸಿ  ಮಾತನಾಡಿದರು.
ವೇತನ ತಾರತಮ್ಯ ನಿವಾರಣೆ ದೃಷ್ಠಿಯಿಂದ ಔರಾದ್ಕರ್ ವರದಿಯನ್ವಯ ಪೊಲೀಸರ ವೇತನ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿ ದ್ದಾರೆ ಎಂದರು.
ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಿಂಭಾಗ 16.04 ಕೋಟಿ ಖರ್ಚು ಮಾಡಿ 72 ವಸತಿ ಗೃಹಗಳನ್ನು ಕಟ್ಟಲಾಗಿದೆ. ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ಪ್ರಯತ್ನ ಮಾಡುವು ದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿರುವ ಅಂದಾಜು 1 ಲಕ್ಷ ಪೊಲೀಸರ ಪೈಕಿ 30-40 ಸಾವಿರ ಮಾತ್ರ ಸಿವಿಲ್ ಸೇವೆಗೆ ಪೊಲೀಸರಿದ್ದು, ಉಳಿದವರು ಕೆಎಸ್‌ಆರ್‌ಪಿ ಮತ್ತು ರಿಸರ್ವ್ ದಲ್ಲಿದ್ದಾರೆ. ಕಳೆದ ಬಾರಿ ತಾವು ಸಚಿವರಾಗಿದ್ದಾಗ 21ಸಾವಿರ ವಿವಿಧ ವೃಂದದ ಹುದ್ದೆಗಳಿಗೆ ನೇಮಕಾತಿ ಮಾಡಿದ್ದೆ. ಆದರೆ ಕಳೆದ ನಾಲ್ಕು ವರ್ಷದಿಂದ ಇಲಾಖೆಯಲ್ಲಿ ಯಾವುದೇ ನೇಮಕಾತಿ ಮಾಡಲಾಗಿಲ್ಲ. ಇನ್ನು ಎರಡು ವರ್ಷದೊಳಗಾಗಿ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲಾಗುವುದು. ಈ ಕುರಿತು ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
ಎಎಸ್‌ಐಗಳಿಗೆ ಬಡ್ತಿ 
545 ಸಬ್ ಇನಸ್ಪೆಕ್ಟರ್ ನೇಮಕಾತಿ ಹಗರಣ ಬಗೆಹರಿಸಲು ಆಗಿಲ್ಲ. ಒಂದು ಸಾವಿರಕ್ಕೂ ಹೆಚ್ಚು ಎಸ್‌ಐ ಹುದ್ದೆಗಳು ಖಾಲಿ ಉಳಿದಿದ್ದು, ಇವುಗಳನ್ನು ತುಂಬಲು ನಿಯಮಾನುಸಾರ ರೂಲ್ 32ನಲ್ಲಿ 600 ಮಂದಿ ಎಎಸ್‌ಐಗಳಿಗೆ ಎಸ್‌ಐಗಳಾಗಿ ಬಡ್ತಿ ನೀಡಲಾಗಿದೆ ಎಂದರು.
ಕಳೆದ ಬಾರಿ 12ಸಾವಿರ ಜನ ವಿವಿಧ ಕೆಳಹಂತದ ಹುದ್ದೆಗಳಿಗೆ ಬಡ್ತಿ ನೀಡಲಾಗಿತ್ತು. ಈ ಬಾರಿಯೂ ಆಗುತ್ತಿದೆ. 30 ಜನರಿಗೆ ಅಡಿಷನಲ್ ಎಸ್ಪಿಯಾಗಿ ಬಡ್ತಿ ನೀಡಲಾಗಿದೆ. ಒಂದು ಜಿಲ್ಲೆಗೆ ಎರಡು ಅಡಿಷನಲ್ ಎಸ್ಪಿ ನೀಡಲಾಗುವುದು. ಅಪರಾಧ ವಿಭಾಗಕ್ಕೆ ಒಬ್ಬರು ಹಾಗೂ ಕಾನೂನು ಸುವ್ಯವಸ್ಥೆಗೆ ಒಬ್ಬರು ಅಡಿಷನಲ್ ಎಸ್ಪಿ ಕಾರ್ಯ ನಿರ್ವಹಿಸುತ್ತಾರೆ ಎಂದರು.
ಪೊಲೀಸ್ ಇಲಾಖೆ ಸರ್ಕಾರದ ಮುಖವಿದ್ದ ಹಾಗೆ. ಪೊಲೀಸ್ ಇಲಾಖೆ ಚೆನ್ನಾಗಿ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಇಂದು ಪೊಲೀಸ್ ಇಲಾಖೆ ತಂತ್ರಜ್ಞಾನ ಆಧಾರಿತವಾಗಿ ಕೆಲಸ ಮಾಡುತ್ತಿದೆ. ಪೊಲೀಸರಿಗೆ ತಂತ್ರಜ್ಞಾನ ಆಧಾರಿತ ತರಬೇತಿ ನೀಡಲಾಗುತ್ತದೆ. ರಾಷ್ಡ್ರದಲ್ಲೇ ಮೊದಲ ಸೈಬರ್ ಅಪರಾಧ ಕೇಂದ್ರ ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ತಂತ್ರಜ್ಞಾನ ಹೆಚ್ಚಿದಂತೆ ಸೈಬರ್ ಅಪರಾಧಗಳು ಹೆಚ್ಚುವ ಮೂಲಕ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ ಎಂದರು.
ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಪೊಲೀಸರಿಗೆ ಅನೇಕ ಸವಾಲುಗಳು ಎದುರಾಗು ತ್ತಿದ್ದು, ನೆಮ್ಮದಿ ಬದುಕು ಕಟ್ಟಿಕೊಳ್ಳದೆ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರಿಗೆ ನೆಮ್ಮದಿ ಬದಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಸತಿ ಸಮುಚ್ಚಯಗಳು ಸಹಕಾರಿಯಾಗಿವೆ ಎಂದು ಹೇಳಿದರು.
ದಿನೇ ದಿನೇ ಪೊಲೀಸ್ ಇಲಾಖೆಯ ಸವಾಲುಗಳು ಹೆಚ್ಚುತ್ತಿವೆ. ಆರ್‌ಟಿಐ ಸೇರಿದಂತೆ ಇತರೆ ಕಾಯ್ದೆಗಳನ್ನು ಒಳ್ಳೆ ಹಿತದೃಷ್ಟಿ ಯಿಂದ ಬಂದಂತಹ ಕಾನೂನುಗಳು ಪೊಲೀಸ್ ವ್ಯವಸ್ಥೆ ಹದಗೆಡಿಸುವಷ್ಟು ಸ್ಥಿತಿಗೆ ತಲುಪಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಕೊರಟಗೆರೆ ಕ್ಷೇತ್ರಕ್ಕೆ ಪೊಲೀಸ್ ಬೆಟಾಲಿಯನ್ ಮಾಡಿದಂತೆ ನಮ್ಮ ಕ್ಷೇತ್ರಕ್ಕೂ ಬೆಟಾಲಿಯನ್ ಮಾಡಿಕೊಡಿ ಎಂದು ಪರಮೇಶ್ವರ್ ಅವರಿಗೆ ಮನವಿ ಮಾಡಿದ ರಾಜಣ್ಣ ಅವರು, ನಮ್ಮ ಕ್ಷೇತ್ರದ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯನ್ನು ದುರಸ್ಥಿ ಮಾಡಿಕೊಡ ಬೇಕೆಂದು ಮನವಿ ಮಾಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪೊಲೀಸ್ ಇಲಾಖೆ ಘನತೆ ಹೆಚ್ಚಿಸಬೇಕು, ತುಮಕೂರು ನಗರಕ್ಕೆ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಬೇಕು ಹಾಗೂ ಹೆಚ್ಚುವರಿ ಯಾಗಿ ಔಟ್ ಪೋಸ್ಟ್ಗಳನ್ನು ನಿರ್ಮಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಅಧ್ಯಕ್ಷರು ಹಾಗೂ ಡಿಜಿಪಿ ಡಾ: ಕೆ.ರಾಮಚಂದ್ರರಾವ್, ಬೆಂಗಳೂರು ಕೇಂದ್ರ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಡಾ: ಬಿ.ಆರ್. ರವಿಕಾಂತೇಗೌಡ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಉಪಸ್ಥಿತರಿದ್ದರು.