ವೀಕೆಂಡ್ ವಿತ್ ಮೋಹನ್
camohanbn@gmail.com
ಭಾರತದಲ್ಲಿ ಒಗ್ಗಟ್ಟು ಎಂಬುದನ್ನು ಮುಸಲ್ಮಾನರನ್ನು ನೋಡಿ ಕಲಿಯಬೇಕೆಂಬ ಮಾತಿದೆ. ಅಲ್ಪಸಂಖ್ಯಾತರ ಹಣೆಪಟ್ಟಿಯಡಿ ಕೆಲ ವಿಷಯದಲ್ಲಿ ತಮ್ಮ ಮೂಗಿನ ನೇರಕ್ಕೆ ನಿರ್ಧಾರಗಳು ಪ್ರಕಟವಾಗದ ಸಂದರ್ಭದಲ್ಲಿ ಮುಸಲ್ಮಾನರ ಒಗ್ಗಟ್ಟು ಹೆಚ್ಚಾಗಿ ಕಾಣುತ್ತದೆ. ಚುನಾವಣಾ ಸಮಯದಲ್ಲಂತೂ ತಮ್ಮ ಆಲೋಚನೆಗಳಿಗೆ ಸ್ಪಂದಿಸುವವರಿಗೆ ಗುಂಪು ಗುಂಪಾಗಿ ಮತ ಹಾಕುವ ಪರಿಪಾಠವನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ.
ತಮ್ಮ ಸಮುದಾಯದಲ್ಲಿ ಯಾರಿಗಾದರೂ ಅನ್ಯಾಯವಾದರೆ ಇಡೀ ಸಮುದಾಯವೇ ಅವರ ಪರವಾಗಿ ನಿಲ್ಲುತ್ತದೆ. ರಸ್ತೆಯಲ್ಲಿ ಒಂದು ಸಣ್ಣ ಅಪಘಾತ ವಾದರೆ ಗಾಯಗೊಂಡ ವ್ಯಕ್ತಿ ಮುಸಲ್ಮಾನನಾಗಿದ್ದರೆ ಅವನ ರಕ್ಷಣೆಗೆ ರಸ್ತೆಯಲ್ಲಿ ಬಹಳಷ್ಟು ಜನ ಒಟ್ಟುಗೂಡುತ್ತಾರೆ. ತಮ್ಮ ಹಬ್ಬಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಭಾರತ ಬಹುಸಂಖ್ಯಾತ ಹಿಂದೂ ರಾಷ್ಟ್ರವಾಗಿರುವ ಕಾರಣ ಮುಸಲ್ಮಾನರಿಗೆ ಸಣ್ಣದೊಂದು ಭಯವಿದೆ.
ಆದರೆ, ಜಗತ್ತಿನಲ್ಲಿ ಮುಸಲ್ಮಾನರಿಗೆ ಭಾರತದಷ್ಟು ಸುರಕ್ಷಿತ ರಾಷ್ಟ್ರ ಮತ್ತೊಂದಿಲ್ಲವೆಂಬ ಸತ್ಯದ ಅರಿವು ಅವರಿಗಿಲ್ಲ. ಚೀನಾದಲ್ಲಿ ಮಸೀದಿ ಕೆಡವಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿರುವ ಹಲವು ಉದಾಹರಣೆಗಳಿವೆ. ಆದರೂ ಅಲ್ಲಿನ ಮುಸಲ್ಮಾನರು ಚೀನಾ ಸರಕಾರದ ವಿರುದ್ಧ ಮಾತನಾಡುವು ದಿಲ್ಲ. ಆದರೆ ಭಾರತದಲ್ಲಿ ದಾಳಿಕೋರ ಬಾಬರ್ ರಾಮಮಂದಿರವನ್ನು ಕೆಡವಿ ಕಟ್ಟಿದ್ದ ಮಸೀದಿಯನ್ನು ಕೆಡವಿದಾಕ್ಷಣ ಅಸಹಿಷ್ಣುತೆ ಕಾಡತೊಡ ಗುತ್ತದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ತನ್ನ ಸೇನಾ ನೆಲೆಗಳನ್ನು ಸ್ಥಗಿತಗೊಳಿಸಿ ದೇಶ ಬಿಟ್ಟು ಹೊರಟಾಗ, ಅಲ್ಲಿನ ಮುಸಲ್ಮಾನರು ತಾಲಿಬಾನ್ ಆಡಳಿತಕ್ಕೆ ಹೆದರಿ ತಮ್ಮ ಮನೆಗಳನ್ನು ಬಿಟ್ಟು ಬೇರೆ ಬೇರೆ ದೇಶಗಳಿಗೆ ವಲಸೆ ಹೊರಟರು. ತಮ್ಮನ್ನು ಬೇರೆ ಮುಸ್ಲಿಂ ರಾಷ್ಟ್ರಗಳು ಸ್ವಾಗತಿಸುತ್ತವೆಂಬ ಆಸೆಯಿಂದ ಸುಮಾರು ೧೪ ಲಕ್ಷ ಮಂದಿ ಪಾಕಿಸ್ತಾನಕ್ಕೆ ವಲಸೆ ಬಂದರು. ಆದರೆ ಪಾಕಿಸ್ತಾನ ಸ್ವತಃ ಇಸ್ಲಾಮಿಕ್ ರಾಷ್ಟ್ರವಾಗಿ ಅಫ್ಘಾನಿಸ್ತಾನದಿಂದ ಬಂದಿರುವ ಮುಸಲ್ಮಾನರಿಗೆ ರಕ್ಷಣೆ ನೀಡಲು ತಯಾರಿರಲಿಲ್ಲ.
ಮುಸಲ್ಮಾನರು ಅಫ್ಘಾನಿಸ್ತಾನ ತೊರೆದು ಪಾಕಿಸ್ತಾನಕ್ಕೆ ಬಂದಿದ್ದರು. ಇವರಿಗೆ ರಕ್ಷಣೆ ನೀಡಲು ನಿರಾಕರಿಸಿದ ಪಾಕಿಸ್ತಾನ ಇನ್ನು ಮುಂದೆ ಬರುವ ನಿರಾಶ್ರಿತ
ರಿಗೆ ಆಶ್ರಯ ನೀಡದಿರಲು ನಿರ್ಧರಿಸಿದೆ. ಅಖಂಡ ಭಾರತ ವಿಭಜನೆಯ ನಂತರ ಹುಟ್ಟಿಕೊಂಡ ಪಾಕಿಸ್ತಾನ ಭ್ರಷ್ಟಾಚಾರದಿಂದ ಇಂದಿಗೂ ಹೊರಬರಲಾಗದೇ ತನ್ನಲ್ಲಿರುವ ಮೂಲ ಪ್ರಜೆಗಳಿಗೆ ಒಂದು ಹೊತ್ತು ಅನ್ನ ನೀಡಲಾಗದ ಪರಿಸ್ಥಿತಿಯಲ್ಲಿದೆ. ಧರ್ಮದ ಹೆಸರಿನಲ್ಲಿ ಭಾರತದೊಂದಿಗೆ
ರಾಜಕೀಯ ಮಾಡುವ ಪಾಕಿಸ್ತಾನಕ್ಕೆ ಆಫ್ಘನ್ ಪ್ರಜೆಗಳ ಧರ್ಮವು ಇಸ್ಲಾಂ ಎಂಬುದು ತಿಳಿದಿರಲಿ.
ಅಫ್ಘಾನಿಸ್ತಾನಿಗಳಿಗೆ ಆಶ್ರಯ ಕೊಡಲಾಗದ ಪಾಕಿಸ್ತಾನ, ಭಾರತದ ಕಾಶ್ಮೀರವನ್ನು ಕೇಳುತ್ತಿರುವುದು ಹಾಸ್ಯಾಸ್ಪದ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಹಿನ್ನೆಲೆ ಯಲ್ಲಿ ಪ್ಯಾಲಸ್ತೇನಿಗಳ ಪರವಾಗಿ ದೊಡ್ಡ ದೊಡ್ಡ ಮಾತನಾಡುತ್ತಿರುವರು, ಗಾಜಾ ಪಟ್ಟಿಯಲ್ಲಿ ನಿರಾಶ್ರಿತರಾಗಿರುವ ಮುಸಲ್ಮಾನರಿಗೆ ತಮ್ಮ ಮನೆಯಲ್ಲಿ ಆಶ್ರಯ ಕೊಡಲು ತಯಾರಿಲ್ಲ. ಒಂದು ಕಾಲದಲ್ಲಿ ಪ್ಯಾಲಸ್ತೇನಿಗಳ ಪರವಾಗಿ ನಿಂತು ಇಸ್ರೇಲ್ ದೇಶದ ಮೇಲೆ ದಾಳಿ ಮಾಡುತ್ತಿದ್ದಂತಹ ಇಸ್ಲಾಮಿಕ್ ದೇಶ ಈಜಿಪ್ಟ್, ಗಾಜಾ ಪಟ್ಟಿಯಿಂದ ನಿರಾಶ್ರಿತರಾಗಿ ಹೊರಬರುತ್ತಿರುವ ಮುಸ್ಲಿಮರಿಗೆ ತನ್ನ ಗಡಿಯನ್ನು ಮುಚ್ಚಿತ್ತು.
ಕಳೆದ ಒಂದು ತಿಂಗಳಿಂದ ತನ್ನ ಗಡಿ ಮುಚ್ಚಿದ್ದ ಈಜಿಪ್ಟ್, ವಿಶ್ವಸಂಸ್ಥೆಯ ಮದ್ಯಸ್ತಿಕೆಯ ನಂತರ ಕಳೆದ ಎರಡು ದಿನದಿಂದ ಗಡಿಯನ್ನು ಗಾಜಾ ನಿರಾಶ್ರಿತರಿಗೆ ತೆರೆದಿದೆ. ೧೯೪೮ ಮತ್ತು ೧೯೬೭ರಲ್ಲಿ ಇಸ್ರೇಲಿನ ವಿರುದ್ಧ ಮುಗಿಬಿದ್ದಿದಂತಹ ಪ್ಯಾಲಸ್ತೈನ್‌ನ ಅಕ್ಕ ಪಕ್ಕದ ಇಸ್ಲಾಮಿಕ್ ದೇಶ ಗಳು,
ಇಂದು ಗಾಜಾ ಪಟ್ಟಿಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡುತ್ತಿಲ್ಲ. ಒಂದು ಕಾಲದಲ್ಲಿ ಜೋರ್ಡಾನ್ ದೇಶ ತನ್ನೊಳಗೆ ಪ್ಯಾಲಸ್ತೈನ್ ಜನರನ್ನು ಬಿಟ್ಟುಕೊಂಡಿತ್ತು. ಅವರ ಮೂಲಕ ಯಹೂದಿಗಳ ಮೇಲೆ ದಾಳಿ ನಡೆಸಲು ದೊಡ್ಡದೊಂದು ಪಡೆಯನ್ನೇ ಸೃಷ್ಟಿಸಿತ್ತು.
ಯಾಸಿರ್ ಅರಾಫತ್ ಎಂಬ ಅಂದಿನ ಕಾಲದ ಯುವಕ, ಪ್ಯಾಲಸ್ತೇನಿಗಳ ನಾಯಕನಾಗಿ ಇಸ್ರೇಲನ್ನು ಸೋಲಿಸಿದ್ದ. ನಂತರ ಇದೇ ಯಾಸಿರ್ ಅರಾಫತ್, ಜೋರ್ಡನ್ ದೊರೆಯ ವಿರುದ್ಧವೇ ತಿರುಗಿ ಬಿದ್ದಾಗ ಆತನ ಸಂಘಟನೆಯನ್ನು ಮಟ್ಟಹಾಕಲು ಜೋರ್ಡನ್ ರಾಜ ಅಬ್ದು, ಪಾಕಿಸ್ತಾನದ ಸಹಾಯ
ಕೇಳಿದ್ದ. ಅಂದಿನ ಪಾಕಿಸ್ತಾನಿ ಮಿಲಿಟರಿ ನಾಯಕ ಜಿಯಾ ಉಲ್ ಹಕ್‌ನ ಸಹಾಯದಿಂದ ೨೫ ಸಾವಿರ ಪ್ಯಾಲಸ್ತೇನಿ ಮುಸಲ್ಮಾನರನ್ನು ಜೋರ್ಡನ್ ದೇಶದ ರಸ್ತೆ ರಸ್ತೆಗಳಲ್ಲಿಕೊಂದ. ವಿಪರ್ಯಾಸ ನೋಡಿ ನಾವು ಭಾರತದಲ್ಲಿರುವ ಮುಸಲ್ಮಾನರ ಒಗ್ಗಟ್ಟನ್ನು ಹೊಗಳುತ್ತೇವೆ. ಆದರೆ ಬಹು ಸಂಖ್ಯಾತ ಮುಸಲ್ಮಾನರಿರುವ ಇಸ್ಲಾಮಿಕ್ ದೇಶಗಳಲ್ಲಿ ಮುಸಲ್ಮಾನರಿಗೆ ರಕ್ಷಣೆಯೇ ಇಲ್ಲ.
ಒಂದಂತೂ ಸತ್ಯ, ಚೀನಾ ಹೊರತುಪಡಿಸಿ ಮುಸಲ್ಮಾನರಿಗೆ ಇಸ್ಲಾಮೇತರ ರಾಷ್ಟ್ರಗಳೇ ಹೆಚ್ಚು ಸುರಕ್ಷಿತ. ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಿಂದ
ಸರಕಾರದ ಸಕಲ ಸವಲತ್ತುಗಳನ್ನೂ ಆಯಾ ದೇಶದಲ್ಲಿ ಅನುಭವಿಸುತ್ತಿರುತ್ತಾರೆ. ಇರಾಕ್ ಮತ್ತು ಸಿರಿಯಾ ದೇಶದ ಮೇಲೆ ನಿರಂತರವಾಗಿ ನಡೆದ ದಾಳಿಯಿಂದ ತತ್ತರಿಸಿದ್ದ ಅಲ್ಲಿನ ಮುಸಲ್ಮಾನರಿಗೆ ಆಶ್ರಯ ನೀಡಿದ್ದು ಯೂರೋಪಿನ ದೇಶಗಳು. ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆ ‘ಐಸಸ್’ ಹುಟ್ಟಿದ್ದು ಸಿರಿಯಾದಲ್ಲಿ.
ಮತಾಂಧತೆಯ ಅಮಲಿನಲ್ಲಿ ಹುಟ್ಟಿಕೊಂಡ ಈ ಸಂಘಟನೆ ಜಗತ್ತಿನಾದ್ಯಂತ ಉಗ್ರ ಚಟುವಟಿಕೆಗಳನ್ನು ನಡೆಸಿತ್ತು. ಇರಾಕ್ ಮತ್ತು ಸಿರಿಯಾ ತೊರೆದಿದ್ದ ಮುಸ್ಲಿಂ ನಿರಾಶ್ರಿತರಿಗೆ ಬೆಲ್ಜಿಯಂ, ಜರ್ಮನ್, ಪೋಲೆಂಡ್, ಫ್ರಾನ್ಸ್, ಹಂಗರಿ, ಸ್ಪೇನ್, ಇಂಗ್ಲೆಂಡ್, ಪೋರ್ಚುಗಲ್ ದೇಶಗಳು ಕೆಂಪು ಹಾಸಿನ ಸ್ವಾಗತ ಕೋರಿದ್ದವು. ಯೂರೋಪಿನ ಜನರು ತಮ್ಮ ನೆಂಟರು ಮನೆಗೆ ಬಂದಂತೆ ನಿರಾಶ್ರಿತರನ್ನು ಸ್ವಾಗತಿಸಿದ್ದರು. ಅವರ ಸ್ವಾಗತ ಯಾವ ಮಟ್ಟದ್ದಿತ್ತೆಂದರೆ ಸ್ಥಳೀಯ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಕೆಲವರು ತಮ್ಮ ಸ್ತನಗಳ ಮೇಲೆ ಸ್ವಾಗತದ ಪದಗಳನ್ನು ಹಚ್ಚೆ ಹಾಕಿಸಿ ಮಾಧ್ಯಮದ ಮುಂದೆ ಪ್ರದರ್ಶಿಸಿದ್ದರು.
ಸರಿಸುಮಾರು ಎರಡು ಕೋಟಿಗೂ ಅಧಿಕ ನಿರಾಶ್ರಿತ ಮುಸಲ್ಮಾನರು ಸಿರಿಯಾ ಮತ್ತು ಇರಾಕ್ ತೊರೆದು ಯೂರೋಪಿನ ದೇಶಗಳಿಗೆ ವಲಸೆ ಹೋದರು. ಅಂದು ನಿರಾಶ್ರಿತರಿಗೆ ಕೆಂಪುಹಾಸು ಸ್ವಾಗತ ಕೋರಿದ್ದ ಯೂರೋಪಿನ ದೇಶಗಳು ಇಂದು ಯಾಕಾದರೂ ಅವರಿಗೆ ಆಶ್ರಯ ನೀಡಿದೆವೋ ಎಂದು ತಲೆ
ಚಚ್ಚಿಕೊಳ್ಳುತ್ತಿವೆ. ಕೊಲ್ಲಿ ರಾಷ್ಟ್ರಗಳಾದ ದುಬೈ, ಬಹರೇನ್, ಕತಾರ್, ಮಸ್ಕಟ್, ಸೌದಿ ಅರೇಬಿಯಾ, ಕುವೈಟ್, ಓಮನ್ ತಮ್ಮ ಪಕ್ಕದಲ್ಲಿದ್ದ ಸಿರಿಯಾದ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಲಿಲ್ಲ. ಕಚ್ಚಾತೈಲದ ನಿಕ್ಷೇಪಗಳ ಮೂಲಕ ಜಗತ್ತಿನ ಶ್ರೀಮಂತ ರಾಷ್ಟ್ರವೆನಿಸಿಕೊಂಡಿರುವ ಇಸ್ಲಾಮಿಕ್ ಕೊಲ್ಲಿ ದೇಶಗಳು, ಇರಾಕಿನ ನಿರಾಶ್ರಿತ ಮುಸಲ್ಮಾನರಿಗೆ ಆಶ್ರಯವನ್ನೇ ನೀಡಲಿಲ್ಲ.
ಪ್ಯಾಲಸ್ತೇನಿನ ಹಮಾಸ್ ಉಗ್ರರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದ ನಿರಾಶ್ರಿತರಾಗಿರುವ ಗಾಜಾಪಟ್ಟಿಯ ಮುಸಲ್ಮಾನರಿಗೆ ಶ್ರೀಮಂತ
ಮುಸ್ಲಿಂ ದೇಶಗಳು ಆಶ್ರಯ ನೀಡುತ್ತಿಲ್ಲ. ಭಿಕ್ಷೆ ನೀಡುವಂತೆ ಹಣಸಹಾಯವನ್ನು ಆಗಾಗ ಮಾಡುತ್ತ ಬಂದಿವೆ. ಭಾರತವನ್ನು ಯುದ್ಧಕ್ಕೆ ಎಳೆ ತರುವ ಉದ್ದೇಶದಿಂದ ಕತಾರ್, ತನ್ನ ನೆಲದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಧಿಕಾರಿಗಳನ್ನು ಬಂಧಿಸಿರುವ ಹಿಂದಿನ ಪ್ರಖರ ಕಾರಣ ನೀಡುವಲ್ಲಿ ವಿಫಲವಾದ ಕತಾರ್, ದುರುದ್ದೇಶ ದಿಂದಲೇ ಈ ಕೆಲಸ ಮಾಡಿದೆ.
ಪ್ಯಾಲಸ್ತೇನಿಗಳ ಪರವಾಗಿ ಹೇಳಿಕೆಗಳನ್ನು ನೀಡುವ ಕತಾರ್ ಅಲ್ಲಿನ ನಿರಾಶ್ರಿತರನ್ನು ತನ್ನ ದೇಶದೊಳಗೆ ಬಿಡುತ್ತಿಲ್ಲ. ಆಶ್ರಯ ನೀಡಿದ ಪಾಶ್ಚಿಮಾತ್ಯ ದೇಶಗಳಲ್ಲಿ ಅಶಾಂತಿ ಸೃಷ್ಟಿಸುವಲ್ಲಿ ಇರಾಕ್ ಮತ್ತು ಸಿರಿಯಾ ದೇಶದ ನಿರಾಶ್ರಿತರು ಯಶಸ್ವಿಯಾಗಿದ್ದಾರೆ. ತಮ್ಮ ಧರ್ಮವನ್ನು ಪಾಶ್ಚಿಮಾತ್ಯರ ಮೇಲೆ ಹೇರಬೇಕೆಂಬ ಏಕೈಕ ಉದ್ದೇಶದಿಂದ, ಅಲ್ಪಸಂಖ್ಯಾತ ರೆಂಬ ಹಣೆಪಟ್ಟಿಯ ಮೂಲಕ ಅಲ್ಲಿನ ರಾಜಕೀಯ ವ್ಯವಸ್ಥೆಯ ಭಾಗವಾಗಿದ್ದಾರೆ.
ತಾವು ಅಲ್ಪಸಂಖ್ಯಾತರಾಗಿರುವ ದೇಶಗಳಲ್ಲಿ ‘ಜಾತ್ಯತೀತ’ ಸಿದ್ಧಾಂತದ ಅಡಿಯಲ್ಲಿ ಆಶ್ರಯ ಬಯಸುವ ಮುಸಲ್ಮಾನರು, ಇಸ್ಲಾಮಿಕ್ ದೇಶದಲ್ಲಿರುವ ಅಲ್ಪಸಂಖ್ಯಾತ ಧರ್ಮದವರ ವಿಚಾರದಲ್ಲಿ ‘ಜಾತ್ಯತೀತ’ ಸಿದ್ಧಾಂತ ಮರೆಯುತ್ತಾರೆ. ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯಡಿಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ಪೌರತ್ವ ನೀಡಿದರೆ ಮುಸಲ್ಮಾನರ ಜಾತ್ಯತೀತಕ್ಕೆ ಧಕ್ಕೆಯಾಗುತ್ತದೆಯೆಂಬ ವಿತಂಡವಾದ ಮಾಡುತ್ತಾರೆ. ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸಲ್ಮಾನರು ೨೦೧೭ರಲ್ಲಿ ನಡೆದ ನರಮೇಧದಲ್ಲಿ ದೇಶ ಬಿಟ್ಟು ನಿರಾಶ್ರಿತರಾದರು.
ಸುಮಾರು ೧೪ಲಕ್ಷ ರೋಹಿಂಗ್ಯಗಳು ಮ್ಯಾನ್ಮಾರ್ ದೇಶದಲ್ಲಿದ್ದರು. ೨೦೧೭ರ ನಂತರ ಪಕ್ಕದ ಇಸ್ಲಾಮಿಕ್ ದೇಶ ಬಾಂಗ್ಲಾದೇಶ ಅಷ್ಟೂ ರೋಹಿಂಗ್ಯಗಳಿಗೆ ಆಶ್ರಯ ನೀಡಲಿಲ್ಲ. ಗಡಿ ದಾಟಿ ಬಂದಂತಹ ಅದೆಷ್ಟೋ ಮುಸಲ್ಮಾನರನ್ನು ಬಾಂಗ್ಲಾದೇಶ ಜೈಲಿನಲ್ಲಿರಿಸಿದೆ. ಮತ್ತೊಂದೆಡೆ ೧೯೭೧ರಲ್ಲಿ ಲಕ್ಷಾಂತರ
ಹಿಂದೂಗಳ ಮಾರಣಹೋಮಕ್ಕೆ ಬಾಂಗ್ಲಾದೇಶದ ಉದಯ ಕಾರಣವಾಗಿತ್ತು. ಅಂದಿನಿಂದ ಇಂದಿನವರೆಗೂ ಪಕ್ಕದ ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸಲ್ಮಾನರ ನಿರಾಶ್ರಿತರ ಸಮಸ್ಯೆ ಬಗೆಹರಿದಿಲ್ಲ. ಇಸ್ಲಾಮಿಕ್ ದೇಶ ಬಾಂಗ್ಲಾದೇಶದ ಮೂಲಕ ಭಾರತಕ್ಕೂ ರೋಹಿಂಗ್ಯಗಳು ಕಾಲಿಟ್ಟಿದ್ದಾರೆ.
ಕೊಲ್ಲಿ ರಾಷ್ಟ್ರಗಳು ನಿರಾಶ್ರಿತ ಮುಸಲ್ಮಾನರಿಗೆ ಆಶ್ರಯ ನೀಡುವ ಬದಲು ಹಣ ಸಹಾಯ ಮಾಡಿದ್ದೇವೆಂದು ಹೇಳುವ ಮೂಲಕ ವಿಶ್ವ ಸಂಸ್ಥೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ. ಸೌದಿ ಅರೇಬಿಯಾ ದೇಶವು ಜರ್ಮನ್ ನಲ್ಲಿರುವ ಸಿರಿಯಾ ನಿರಾಶ್ರಿತ ಮುಸಲ್ಮಾನರಿಗೆ ಪ್ರಾರ್ಥನೆ ಸಲ್ಲಿಸಲು ೨೦೦ ಮಸೀದಿಗಳನ್ನು ನಿರ್ಮಾಣ ಮಾಡುವ ಸಲುವಾಗಿ ಹಣ ಸಹಾಯ ಮಾಡಲು ಮುಂದಾಗಿತ್ತು. ತಮ್ಮ ಧರ್ಮವನ್ನು ಇತರೆ ದೇಶಗಳಲ್ಲಿ ಬೆಳೆಸಲು ಹಣ ಸಹಾಯ ಮಾಡಲು ಮುಂದೆ ಬರುವ ಕೊಲ್ಲಿ ರಾಷ್ಟ್ರಗಳು ಇಸ್ಲಾಮಿಕ್ ನಿರಾಶ್ರಿತರನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಸೌದಿ ಅರೇಬಿಯಾ, ಓಮನ್, ಕತಾರ್, ಬಹರೇನ್, ಕುವೈತ್, ದುಬೈ ದೇಶಗಳು ತಮ್ಮ ಆಡಳಿತದಲ್ಲಿ ನಿರಾಶ್ರಿತರನ್ನು ಗುರುತಿಸುವ ಕೆಲಸವನ್ನು ೧೯೫೧ರಿಂದಲೂ ಮಾಡಿಲ್ಲ. ಈ ದೇಶಗಳಲ್ಲಿ ನಿರಾಶ್ರಿತರ ಹಕ್ಕುಗಳೆಂಬ ಪರಿಕಲ್ಪನೆಯೇ ಇಲ್ಲ. ವಿಶ್ವ ಸಂಸ್ಥೆಯು ೧೯೫೧ರಲ್ಲಿ ನಿರಾಶ್ರಿತರನ್ನು ಗುರುತಿಸಿ, ಅವರ ಹಕ್ಕುಗಳ ಬಗ್ಗೆ ಮಂಡಿಸಿದ್ದ ವಿಧೇಯಕಕ್ಕೆ ಕೊಲ್ಲಿಯ ಮುಸ್ಲಿಂ ದೇಶಗಳು ಸಹಿಯನ್ನೇ ಹಾಕಿಲ್ಲ.
ಈ ದೇಶಗಳಿಗೆ ನಿರಾಶ್ರಿತ ಮುಸ್ಲಿಮ ರನ್ನು ತನ್ನೊಳಗೆ ಬಿಟ್ಟುಕೊಳ್ಳುವ ಉದ್ದೇಶವೇ ಇರಲಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿ ಸಿಗುವ ಕಚ್ಚಾ ತೈಲ ನಿಕ್ಷೇಪದ ಪರಿಣಾಮ, ವಲಸಿಗರು ಹೆಚ್ಚಾಗಿ ಜಗತ್ತಿನ ಬೇರೆ ಬೇರೆ ದೇಶಗಳಿಂದ ಕೆಲಸಕ್ಕಾಗಿ ಬರುತ್ತಾರೆ. ಈಗಾಗಲೇ ಕೊಲ್ಲಿ ರಾಷ್ಟ್ರಗಳಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿರುವುದೂ ಸಹ ಮುಸ್ಲಿಂ ನಿರಾಶ್ರಿತ ರಿಗೆ ಆಶ್ರಯ ನೀಡದಿರುವುದರ ಹಿಂದಿನ ಕಾರಣವಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚಿನ ರಾಜಕೀಯ ಚಟುವಟಿಕೆಗಳು ನಡೆಯುವುದಿಲ್ಲ. ಅಲ್ಲಿನ ರಾಜಮನೆತನಗಳು ಇಂದಿಗೂ ಆಡಳಿತ ನಡೆಸಿಕೊಂಡು ಬಂದಿವೆ. ಸಿರಿಯಾ ಮತ್ತು ಇರಾಕ್ ದೇಶದಲ್ಲಿ ದ್ದಂತಹ ರಾಜಕೀಯ ಚಟುವಟಿಕೆಗಳು ಕೊಲ್ಲಿ ರಾಷ್ಟ್ರಗಳಿಗೆ ಹಬ್ಬಿ ಅಲ್ಲಿ ನಡೆದ ಕೃತ್ಯಗಳು ಕೊಲ್ಲಿ ರಾಷ್ಟ್ರ ಗಳಲ್ಲಿಯೂ ನಡೆಯಬಹುದೆಂಬ ಭಯ ನಿರಾಶ್ರಿತ ಮುಸಲ್ಮಾನರಿಗೆ ಆಶ್ರಯ ಸಿಗದಂತೆ ಮಾಡಿದೆ.
ಜಗತ್ತಿನ ಕ್ರೂರ ಉಗ್ರ ಸಂಘಟನೆ ಐಸಸ್, ಕೊಲ್ಲಿ ರಾಷ್ಟ್ರಗಳಿಗೆ ಹಬ್ಬಿದರೆ, ಉಂಟಾಗುವ ದೊಡ್ಡ ಅನಾಹುತದ ಭಯದಿಂದ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಆಗುತ್ತಿಲ್ಲವೆಂಬುದೂ ಸತ್ಯ. ಒಟ್ಟಿನಲ್ಲಿ ಮುಸ್ಲಿಮರ ಬದುಕಿಗೆ ಮುಸ್ಲಿಂ ದೇಶಗಳೇ ಕೊಳ್ಳಿ ಇಟ್ಟವು, ಮುಸ್ಲಿಂ ದೇಶಗಳಲ್ಲಿ ಮುಸ್ಲಿಮರೇ ಅನಾಥ
ರಾಗಿರುವ ಸತ್ಯವನ್ನು ಭಾರತೀಯ ಮುಸಲ್ಮಾನರು ಅರ್ಥ ಮಾಡಿಕೊಳ್ಳಬೇಕು.