Thursday, 12th December 2024

ಕನ್ನಡ, ಕರ್ನಾಟಕ ಮತ್ತು ನಾವು

ನಮ್ಮ ನಾಡು ನಮ್ಮ ಹೆಮ್ಮೆ

ಅಜಯ್ ಅಂಗಡಿ

ಕರ್ನಾಟಕ ಸುವರ್ಣ ಸಂಭ್ರಮದಲ್ಲಿದೆ. ಕರ್ನಾಟಕ ಎಂಬ ನಾಮಕರಣವಾಗಿ ಇಂದಿಗೆ ಐವತ್ತು ವರ್ಷಗಳು ಸಂದಿವೆ. ಈ ಐವತ್ತು ವರುಷಗಳಲ್ಲಿ ಕರ್ನಾಟಕ ಅನೇಕ ಏರುಪೇರುಗಳನ್ನು ಕಂಡಿದೆ, ಏಳುಬೀಳುಗಳನ್ನೂ ನೋಡಿದೆ. ಕನ್ನಡನಾಡಿನ ಉದ್ದಗಲಕ್ಕೂ ಕನ್ನಡದ ಕಂಪು ಬೀಸುತ್ತಿದೆ ಮತ್ತು ಬೀಸುತ್ತಲೇ ಇರುತ್ತದೆ.

ಯಾವುದೇ ಭಾಷೆ ಕೂಡ ಬಳಕೆಯಲ್ಲಿರದ ಹೊರತು ನಶಿಸುವುದಿಲ್ಲ. ಅದಾಗ್ಯೂ ಒಂದು ಭಾಷೆ ಅವಸಾನದತ್ತ ಮುಖ ಮಾಡುತ್ತಿದೆ ಎಂದಾದರೆ ಅದು ಬಳಸುವವರ ನಿರ್ಲಕ್ಷ್ಯ. ನಮ್ಮ ಮಾತೃಭಾಷೆ ಕನ್ನಡ ಆಗಿರಲಿ ಅಥವಾ ಆಗಿಲ್ಲದಿರಲಿ ನಾವು ಕನ್ನಡ ಮಾತನಾಡುವ ಪ್ರದೇಶದಲ್ಲಿ ಅಂದರೆ ಕರ್ನಾಟಕ ದಲ್ಲಿ ಇದ್ದೇವೆಂದರೆ ನಾವು ಕನ್ನಡ ಕಲಿಯಬೇಕಾದ್ದು ಅಗತ್ಯ.

ಆ ನಿಟ್ಟಿನಲ್ಲಿ ಕನ್ನಡದ ಪತ್ರಿಕೆಗಳ ಪಾತ್ರ ಬಹು ದೊಡ್ಡದು. ಕನ್ನಡದ ಎಲ್ಲ ಪತ್ರಿಕೆಗಳೂ ಕನ್ನಡದ ಕಂಪು ಪಸರಿಸಿರುವ ಮಹತ್ಕಾರ್ಯದಲ್ಲಿ ನಿರತ ರಾಗಿರುವುದು ಖುಷಿಯ ವಿಚಾರ. ಬಹುಮುಖಿ ಪುರವಣಿಗಳ ಮುಖೇನ ಹಲವು ಯುವ ಬರಹಗಾರರು ಮತ್ತು ಅನುಭವಿ ಲೇಖಕರ ಸಂಗಮದಲ್ಲಿ ಹೊಸ ವಿಚಾರಗಳ ಚರ್ಚೆ ಹೊಸ ಆಯಾಮವನ್ನು ತೆರೆದಿಡುವ ಕಾರ್ಯದಲ್ಲಿ ಮುಂಚೂಣಿಯಲ್ಲಿವೆ. ವೈಚಾರಿಕ ಲೇಖನಗಳು ಹೊಸ ಅನ್ವೇಷಣೆಗಳಿಗೆ ನಾಂದಿ ಹಾಡುತ್ತಿವೆ. ಸಾಹಿತ್ಯದ ಸಂಪತ್ತನ್ನು ವಿಸ್ತಾರಗೊಳಿಸುತ್ತಾ ಕನ್ನಡದ ಮಹತ್ವವನ್ನು ತಿಳಿಸುವ ಹಾದಿಯಲ್ಲಿ ಸಾಗುತ್ತಿವೆ. ನೂರಾರು ಲೇಖಕರ ಸಹಸ್ರಾರು
ಪುಸ್ತಕಗಳು, ಸಂಪುಟಗಳು ಕನ್ನಡ ಭಾಷೆಯ ಸತ್ವವನ್ನು ಹೆಕ್ಕಿ ಹೊರತೆಗೆದು ಓದುಗರ ಮನದಾಳಕ್ಕೆ ಮುಟ್ಟಿಸುವ ಕೆಲಸದಲ್ಲಿ ಸತತವಾಗಿ ತೊಡಗಿ ಕೊಂಡಿರುವುದು ಶ್ಲಾಘನೀಯ.

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಸಾರ್ವಜನಿಕವಾಗಿ ಕನ್ನಡದಲ್ಲಿ ಸಂವಹಿಸಿ, ಸಂಭಾಷಿಸಲು ನಾವೇ ಹಿಂಜರಿದರೆ ಇಲ್ಲಿಗೆ ಉದ್ಯೋಗ ನಿಮಿತ್ತ ಬಂದಿರುವ ಪರರಾಜ್ಯದವರು ಹೇಗೆ ತಾನೆ ಕನ್ನಡ ಮಾತನಾಡಿಯಾರು? ಕನ್ನಡ ಮಾಧ್ಯಮದಲ್ಲಿ ಕಲಿಯುವಿಕೆ ಕೂಡ ಇತ್ತೀಚೆಗೆ ಕ್ಷೀಣಿಸುತ್ತಿರುವುದು ದುರಂತವೇ. ಕರುನಾಡಿನಲ್ಲಿ ನೆಲೆಯೂರಿ ತಮ್ಮ ಬೇರು ಬಿಳಲುಗಳನ್ನು ಪಸರಿಸಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ಉದ್ಯಮಗಳಲ್ಲಿ
ಕನ್ನಡಕ್ಕೆ, ಕನ್ನಡಿಗರಿಗೆ ಪ್ರಾಶಸ್ತ್ಯಯ ಇದ್ದರೆ ಸೂಕ್ತ. ಹಾಗೆಂದ ಮಾತ್ರಕ್ಕೆ ಪರಭಾಷೆಯನ್ನು ನಿಂದಿಸಿ, ಹೀಯಾಳಿಸಬೇಕೆಂದಲ್ಲ.

ಸ್ಥಾನಮಾನಗಳನ್ನು ಅರಿಯಬೇಕಷ್ಟೆ. ಈ ಭಾಷೆಯ ನಿರಂಚರತೆಗೆ ಸಾಹಿತ್ಯಿಕ ಕೊಡುಗೆ ಬಹುಮುಖ್ಯ. ಸಾಹಿತ್ಯ ರಚನೆ ನಿರಂತರವಾಗಿ, ವೈವಿಧ್ಯಮಯ ವಾಗಿ ಇzಗಲೇ ಅದಕ್ಕೆ ಬೆಲೆ. ಹೊಸ ಬರಹಗಳು ಬರುತ್ತಿರಬೇಕು, ಹಳೆಯವು ಸ್ಪೂರ್ತಿಯ ಚಿಲುಮೆಯಾಗಿರಬೇಕು. ಕನ್ನಡದ ಉಳಿವಿನ ಹೆಸರಿನಲ್ಲಿ ಬಹಳಷ್ಟು ಚಳವಳಿಗಳು, ಹೋರಾ ಟಗಳು ನಡೆದಿವೆ ಮತ್ತು ಆಗಾಗ ನಡೆಯುತ್ತಿರುತ್ತವೆ. ಆದರೆ ಜನರ ಮನಸ್ಸಿನಲ್ಲಿ ಶಾಶ್ವತ ಜಾಗ ಪಡೆವಂಥವು ಕೆಲವಷ್ಟೆ. ಆ ಸಾಲಿನಲ್ಲಿ ಗೋಕಾಕ್ ಚಳವಳಿ ಪ್ರಮುಖವಾದುದು. ಕಾರಣ, ಆ ಸಮಯದಲ್ಲಿ ಇದ್ದಂತಹ ಒಗ್ಗಟ್ಟು, ದೂರದೃಷ್ಟಿತ್ವ ಮತ್ತು ಮುಂದಾ ಳತ್ವ.

ಆದರೆ, ಇತ್ತೀಚಿನ ಚಳವಳಿಗಳು ಯಾವ ಅರ್ಥಥಲ್ಲಿ ಚಳವಳಿ ಅನಿಸಿಕೊಳ್ಳುತ್ತಿವೆಯೋ ಗೊತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಕನ್ನಡಪರ ಹೋರಾಟ ವೂ ಒಂದು ಪ್ರಚಾರದ ಸರಕಾಗಿ ಬಿಂಬಿತವಾಗುತ್ತಿರುವುದು ಕೆಲವು ಹಿತಾಸಕ್ತಿಗಳ ಹಿಡನ್ ಅಜೆಂಡಾ ಆಗಿರಬಹುದು. ಯಾವುದೇ ವಿಚಾರವಿರಲಿ, ಅದು ಕರ್ನಾಟಕಕ್ಕೆ ಸಂಬಂಧಿಸಿದ್ದರೆ ಅದಕ್ಕೆ ತಾರ್ಕಿಕ ಚರ್ಚೆ ನಡೆಸುವಲ್ಲಿ ಮತ್ತು ಸೂಕ್ತ ಪರಿಹಾರ ನೀಡುವಲ್ಲಿ ಆಳುಗರು ಅಷ್ಟಾಗಿ ಆಸಕ್ತಿ ವಹಿಸದಿರುವುದು ಬೇಸರದ ಸಂಗತಿ. ಅದಕ್ಕೆ ಉತ್ತಮ ನಿದರ್ಶನ ಕಾವೇರಿ ಬಿಕ್ಕಟ್ಟು. ಅದೆಷ್ಟು ಕಾಲವಾದರೂ ಅದಿನ್ನೂ ಬಗೆಹರಿಯದ ಸಮಸ್ಯೆಯಾಗೇ ಉಳಿದಿದೆಯಲ್ಲ ಇದಕ್ಕಿಂತ ದುರಂತವಿನ್ನೇನಿದೆ? ಈ ವಿಷಯದಲ್ಲಿ ಬೇರೆ ರಾಜ್ಯದವರ ಭಾಷಾಭಿಮಾನ ಮತ್ತು ರಾಜ್ಯಾಭಿಮಾನ ನೋಡಿಯಾದರೂ ನಾವು ಅರಿಯಬೇಕು.

ಕನ್ನಡತನ ಮತ್ತು ನಮ್ಮತನ ನಮ್ಮಲ್ಲಿದ್ದರೆ ನಮಗೇ ಹೆಮ್ಮೆಯಲ್ಲವೆ? ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಕನ್ನಡದ ಹೆಸರಿನಲ್ಲಿ ಅನ್ಯಭಾಷೆಯ ಮೇಲೆ ಪ್ರಹಾರ ಮಾಡುವುದೆಷ್ಟು ಸರಿ? ಅದರಿಂದ ಕನ್ನಡ ಮತ್ತು ಕರ್ನಾಟಕದ ಮೌಲ್ಯ ಏನಾಗುತ್ತದೆ? ಈ ಎಲ್ಲವನ್ನೂ ಯೋಚಿಸಲೇ ಬೇಕು. ಕರುನಾಡಿನಲ್ಲಿ ನಿಸರ್ಗದ ಸಂಪತ್ತೇ ಇದೆ. ಅದನ್ನು ಕಾಪಾಡುವ ಜತೆಯಲ್ಲಿ ನಾಡಿನ ಘನತೆ ಕಾಪಾಡುವುದೂ ನಮ್ಮ ಆದ್ಯ ಕರ್ತವ್ಯ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕನ್ನಡ ಸೇನಾನಿಗಳ ರೀತಿ ಆರ್ಭಟಿಸದೆ ತನು ಮನಗಳಲ್ಲಿ ಕನ್ನಡವನ್ನು ಒಳಗೊಳ್ಳಬೇಕಿದೆ.