ಐಝಾವ್: ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇವಿಎಂ ದೋಷದಿಂದಾಗಿ ಮತ ಚಲಾಯಿಸಲು ಸಾಧ್ಯವಾಗದೆ ಮಿಜೋರಾಂ ಮುಖ್ಯಮಂತ್ರಿ ಝೊರಾಂತಂಗಾ ಹಿಂತಿರುಗಿದ್ದಾರೆ.
ಮಿಜೋ ನ್ಯಾಷನಲ್ ಫ್ರಂಟ್ ಅಧ್ಯಕ್ಷರೂ ಆಗಿರುವ ಸಿಎಂ ಝೊರಾಂತಂಗಾ ಮತ ಚಲಾಯಿಸಲು ಬೆಳಿಗ್ಗೆ 19-ಐಝಾವ್ ವೆಂಗ್ಸ್- 1 ವೈಎಂಎ ಹಾಲ್ ಮತಗಟ್ಟೆಗೆ ಆಗಮಿಸಿದ್ದರು. ಈ ಮತಗಟ್ಟೆಯು ಐಝಾವ್ ಉತ್ತರ- II ವಿಧಾನಸಭಾ ಕ್ಷೇತ್ರದಡಿಯಲ್ಲಿ ಬರುತ್ತದೆ. ಇವಿಎಂ ತಾಂತ್ರಿಕ ದೋಷದಿಂದಾಗಿ ಮತ ಚಲಾಯಿಸದೇ ವಾಪಸ್ ಆಗಿದ್ದಾರೆ.
ನಾನು ಮತ ಚಲಾವಣೆಗೆಂದು ಮತ ಕೇಂದ್ರಕ್ಕೆ ಹೋದಾಗ ಇವಿಎಂ ಕೆಲಸ ಮಾಡಲಿಲ್ಲ. ಹಾಗಾಗಿ ಸ್ವಲ್ಪ ಹೊತ್ತು ಕಾದೆ. ಆದರೆ ಯಂತ್ರ ಸರಿಯಾಗದೇ ಇದ್ದುದರಿಂದ ವಾಪಸಾಗಿದ್ದೇನೆ. ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಬಳಿಕ ಮತದಾನ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ತಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ತಮ್ಮ ಪಕ್ಷ ಭಾಗವಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿಯಿಲ್ಲ ಎಂದು ಹೇಳಿದರು.