Sunday, 24th November 2024

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಭಯೋತ್ಪಾದಕರ ಧೈರ್ಯ ಹೆಚ್ಚಾಗುತ್ತದೆ

ಸೂರಜ್​ ಪುರ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ದೇಶದಲ್ಲಿ ಭಯೋತ್ಪಾದಕರು ಮತ್ತು ನಕ್ಸಲರ ಧೈರ್ಯ ಹೆಚ್ಚಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಛತ್ತೀಸಗಢದ ಸೂರಜ್ ಪುರದ ಬಿಶ್ರಾಮ್​ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ನಕ್ಸಲಿಸಂ ಅನ್ನು ನಿಗ್ರಹಿಸು ವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ನಕ್ಸಲ್ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ನಮ್ಮ ಕಾರ್ಯಕರ್ತ ರೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಛತ್ತೀಸಗಢದ ಸುರ್ಗುಜಾ ವಿಭಾಗದಲ್ಲಿ ಮಾನವ ಕಳ್ಳಸಾಗಣೆ ಮತ್ತು ಮಾದಕವಸ್ತು ಗಳ ವ್ಯವಹಾರ ಹೆಚ್ಚುತ್ತಿದೆ. ಅಪರಾಧಿಗಳು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಗುರಿಯಾಗಿಸುತ್ತಿದ್ದಾರೆ ಎಂದರು.

ಬುಡಕಟ್ಟು ಕುಟುಂಬಗಳ ಅನೇಕ ಬಾಲಕಿಯರು ಕಾಣೆಯಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರ ಬಳಿ ಉತ್ತರವಿಲ್ಲ. ದ್ರೌಪದಿ ಮುರ್ಮು ಭಾರತದ ಮೊದಲ ಬುಡಕಟ್ಟು ರಾಷ್ಟ್ರಪತಿಯಾಗುವುದನ್ನು ತಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು ಎಂದು ಆರೋಪಿಸಿದರು.

ಬಿಜೆಪಿ ನೇ ಬನಾಯಾ ಹೈ, ಬಿಜೆಪಿ ಹಿ ಸವಾರೇಗಿ ಎಂದು ಹೇಳುವ ಮೂಲಕ ಬಿಜೆಪಿ ಛತ್ತೀಸ್ ಗಢವನ್ನು ರಚಿಸಿದೆ ಎಂಬುದನ್ನು ಪ್ರಧಾನಿ ಮೋದಿ ನೆನಪಿಸಿದರು. ಅಟಲ್​ ಬಿಹಾರಿ ವಾಜಪೇಯಿ ಅವರ ಸಮಯದಲ್ಲಿ ಛತ್ತೀಸಗಢ ರಾಜ್ಯ ರಚನೆಯಾಗಿತ್ತು ಎಂದು ಅವರು ಹೇಳಿದರು.

ಛತ್ತೀಸಗಢ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ನವೆಂಬರ್ 17 ರಂದು ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 3 ರಂದು ನಿಗದಿಯಾಗಿದೆ.