Sunday, 10th November 2024

ಹೆಂಡತಿಯ ಹೆಸರಿಂದ ಗಂಡನಿಗೆ ಗುರುತು, ಗೌರವ

ತಿಳಿರು ತೋರಣ
ಶ್ರೀವತ್ಸ ಜೋಶಿ

ಅಮ್ಮಾವ್ರ ಗಂಡ ಎಂಬ ಪದಪುಂಜಕ್ಕೆ ಒಂಥರಾ ಲೇವಡಿಯ, ವಿಡಂಬನೆಯ ಅರ್ಥ ಅಂಟಿಕೊಂಡದ್ದಿರುತ್ತದೆ. ಹಾಗೆ ಹೇಳುವಾಗ ಅದರಲ್ಲೊಂಚೂರು ಕನಿಕರದ ಭಾವವೂ ಇರುತ್ತದೆ. ಇಂಗ್ಲಿಷ್‌ನಲ್ಲಿ henpecked husband ಎಂಬ ನುಡಿಗಟ್ಟಿಗೆ ಇದ್ದಂತೆ. ಅಲ್ಲಿ ಹೆನ್‌ಪೆಕ್ಡ್ ಅನ್ನೋದು ಅಕ್ಷರಶಃ hen (ಹೇಂಟೆ ಅಥವಾ ಹೆಣ್ಣು ಕೋಳಿ) ದವಸಧಾನ್ಯಕ್ಕೋಸ್ಕರ ಯಾವಾಗ ನೋಡಿದರೂ ನೆಲವನ್ನು ಕೊಕ್ಕಿನಿಂದ peck (ಕೆದಕುವುದು) ಮಾಡುತ್ತಿರುವಕ್ಕೆ ಹೋಲಿಕೆಯಾಗಿ ಬಂದಿದ್ದಂತೆ.

ಕನ್ನಡದಲ್ಲಾದರೆ ಹೆನ್ ಅಲ್ಲ ಹೆನ್-ಡತಿಯಿಂದ ಸದಾ ಕೆದಕಲ್ಪಡುವ, ಕೆಣಕಲ್ಪಡುವ ಬಡಪಾಯಿ ಗಂಡ. ಆಶ್ಚರ್ಯವೆಂದರೆ ಸಂಸ್ಕೃತದಲ್ಲೂ ಅಂಥ ಬಡಪಾಯಿಯನ್ನು ಬಣ್ಣಿಸಲಿಕ್ಕೊಂದು ಪದ ಇದೆ ‘ಭಾರ್ಯಾಟಿಕ’ ಎಂದು! ಅದರಲ್ಲಿ ಆಶ್ಚರ್ಯದ ಮಾತೇನಿದೆ? ಭಾರ್ಯೆ(ಹೆಂಡತಿ)ಗೆ ಒಂದು ಆಟಿಕೆ ಆಗಿ ಇರುವ ಗಂಡಸರು ಎಷ್ಟು ಜನರಿಲ್ಲ ಈ ಲೋಕದಲ್ಲಿ! ಟಿ.ಪಿ.ಕೈಲಾಸಂ ಅವರ ‘ಅಮ್ಮಾವ್ರ ಗಂಡ’ ನಾಟಕದ ಸುಬ್ಬಣ್ಣ ಒಬ್ಬನೇ ಸಾಕು ಅವರೆಲ್ಲರ ಪ್ರತಿನಿಧಿಯಾಗಿ. ‘ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಶಕ್ತಿ ಇರ ಬೇಕೆಂಬ ಹುಚ್ಚು ನಂಬಿಕೆಗೆ ತಗುಲಿಕೊಂಡಿದ್ದ ಸರೋಜಾ, ತೀರ ಸಾಧು ಸ್ವಭಾವದ ಗಂಡ ಸುಬ್ಬಣ್ಣನನ್ನು ಹೀನಾಯ ವೆನಿಸುವ ರೀತಿಯಲ್ಲಿ ಕಾಣುತ್ತಿರುತ್ತಾಳೆ.

ಬಿ.ಎ, ಬಿ.ಎಲ್ ಮಾಡಿ ಲಾಯರ್ ಆಗಿರುವ ಅವನನ್ನು ಮನೆ ಕೆಲಸಕ್ಕಾಗಿ ದುಡಿಸಿಕೊಳ್ಳುತ್ತ ತಾನು ಸಂಸಾರದ ಜವಾಬ್ದಾರಿ ಯನ್ನೇ ಕಡೆಗಡಿಸಿ ದಿನನಿತ್ಯ ಕ್ಲಬ್ಬು, ಭಾಷಣ, ಮನೋರಂಜನೆ ಮೊದಲಾದುವುಗಳಲ್ಲೇ ಆಸಕ್ತಿ ವಹಿಸಿ ಬಜಾರಿಯಂತೆ ಜರ್ಬಿ ನಿಂದ ಮೆರೆದಾಡುತ್ತಿರುತ್ತಾಳೆ. ಪ್ರಾಣಿ cocks town ನಲ್ಲಿದ್ದರೂ, ಕೋರ್ಟಿನಲ್ಲಿ ಕಕ್ಷಿದಾರರ ಪರವಾಗಿ ವಾದಗಳನ್ನು ಮಂಡಿಸು ತ್ತಿದ್ದರೂ, ಮನೆಯಲ್ಲಿ ಮಾತ್ರ henpecked ಎಂಬಂತಿರುತ್ತಾನೆ ಸುಬ್ಬು. ಆತನ ಅಸಹಾಯಕ ಸ್ಥಿತಿಗೆ ಕನಿಕರಿಸಿ, ಆತನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸರೋಜಳ ಅಸಹಜ ವರ್ತನೆಯನ್ನು ಕಂಡು ತಿದ್ದಲು ಪಕ್ಕದ್ಮನೆಯ ನರಸಿಂಹಯ್ಯ-ಕಮಲಮ್ಮ ದಂಪತಿ ಮುಂದಾಗುತ್ತಾರೆ.

ಅವರದೋ ಉಲ್ಟಾ ಕೇಸು. ನರಸಿಂಹಯ್ಯ ಅಕ್ಷರಶಃ ಉಗ್ರನರಸಿಂಹನಾದರೆ ಕಮಲಮ್ಮ ಸಾಧ್ವಿ ಶಿರೋಮಣಿ. ಒಂದರ
ಮೇಲೊಂದು ರಸಪ್ರಸಂಗಗಳು ಬರುತ್ತವೆ’ – ಇದು ಆ ನಾಟಕದ ಬ್ರೀಫ್ ಇಂಟ್ರೊ. ಟಿಪಿಕಲ್ ಟಿ.ಪಿ.ಕೈಲಾಸಂ ಕಂಗ್ಲಿಷ್ ಶೈಲಿಯ ಸಂಭಾಷಣೆಗಳು. ಅಮ್ಮಾವ್ರ ಗಂಡ ಎಂಬ ಹೆಸರಿನ ಒಂದು ಕನ್ನಡ ಸಿನಿಮಾ ಕೂಡ ಬಂದಿತ್ತು. ಫಣಿ ರಾಮಚಂದ್ರ ನಿರ್ದೇಶನ ದಲ್ಲಿ ಶಿವರಾಜ ಕುಮಾರ್ ಮತ್ತು ಭಾಗ್ಯಶ್ರೀ ನಟಿಸಿದ್ದರು. ನಾನು ನೋಡಿಲ್ಲವಾದರೂ, ಫಣಿ ರಾಮಚಂದ್ರರದೆಂದ ಮೇಲೆ ಗೌರಿ-ಗಣೇಶ, ಗಣೇಶನ ಮದುವೆ ಮುಂತಾದ ಚಿತ್ರಗಳಂತೆ ಹಾಸ್ಯದ ಸರಕೇ ಇರಬೇಕೆಂದು ಸುಲಭವಾಗಿ ಊಹಿಸಬಲ್ಲೆ. ಎರಡು ವರ್ಷ ಗಳ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರದ ಆಡಳಿತ ಇದ್ದಾಗ, ‘ಸಿ.ಎಂ ಕುಮಾರಸ್ವಾಮಿಯವರು ಅಮ್ಮಾವ್ರ ಗಂಡನಂತೆ ವರ್ತಿಸುತ್ತಿದ್ದಾರೆ’ ಎಂದು ಆಗಿನ ವಿರೋಧಪಕ್ಷದ ನಾಯಕ ಈಶ್ವರಪ್ಪ ಒಮ್ಮೆ ಕೆಣಕಿದ್ದರು.

ಯಥಾಪ್ರಕಾರ ಹರಕು ಬಾಯಿಯಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ. ಆಫ್ ಕೋರ್ಸ್ ಅವರು ಹೇಳಿದ್ದು ಸಿಯೆಮ್ಮು ಕಾಂಗ್ರೆಸ್ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂಬ ರಾಜಕೀಯ ಅರ್ಥದಲ್ಲಿ. ಆದರೆ ಕುಮಾರಸ್ವಾಮಿಯ ಮಟ್ಟಿಗೆ ಈಶ್ವರಪ್ಪ ಹೇಳಿಕೆಯಲ್ಲಿರುವ ‘ಅಮ್ಮಾವ್ರ ಗಂಡ’ ಎಂಬ ಸಂಖ್ಯಾವಾಚಕ ಬಹುವಚನ ಹೊಂದಾಣಿಕೆಯಾಗುವುದೂ ಗಮನಾರ್ಹ ಸಂಗತಿಯೇ.

ಅದೇನೇ ಇರಲಿ, ಒಟ್ಟಾರೆಯಾಗಿ ಅಮ್ಮಾವ್ರ ಗಂಡ ಎಂಬ ಪದಪುಂಜದ ಪ್ರಯೋಗವಾಗುವುದು ಗೌರವದ ಸಂದರ್ಭಗಳಲ್ಲಿ ಅಲ್ಲ, ಹಿತಾನುಭವ ತರುವಂಥದ್ದಲ್ಲ, ಎಂದು ತಿಳಿಸುವುದಕ್ಕೆ ಈ ಎಲ್ಲ ಉದಾಹರಣೆಗಳನ್ನು ಬಳಸಿಕೊಳ್ಳಬೇಕಾಯಿತು. ಅದಲ್ಲದೆ ನಾನು ಬರೆಯಲಿಕ್ಕೆ ಹೊರಟದ್ದು ಅಂಥ ಅಮ್ಮಾವ್ರ ಗಂಡಂದಿರ ಬಗ್ಗೆ ಅಲ್ಲ. ಬದಲಿಗೆ, ಹೆಂಡತಿಯ ಹೆಸರಿಂದ ಗುರುತು, ಗೌರವ ಪಡೆಯುವ ಅದೃಷ್ಟವಂತ ಗಂಡಂದಿರ ಬಗ್ಗೆ.

ಅದನ್ನು, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಂದಲೇ ಆರಂಭಿ ಸೋಣ. ಭದ್ರಗಿರಿ ಕೇಶವದಾಸರು ಸೀತಾಕಲ್ಯಾಣ ಹರಿಕಥೆಯಲ್ಲಿ ಒಂದು ಉಪಕಥೆಯಾಗಿ ಹೀಗೆ ಬಣ್ಣಿಸಿದ್ದಾರೆ: ರಾಮರಕ್ಷಾ ಸ್ತೋತ್ರದಲ್ಲಿ ‘ರಾಮಾಯ ರಾಮಭದ್ರಾಯ ರಾಮ ಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ಎಂಬ ಶ್ಲೋಕ ಬರುತ್ತದೆಯಷ್ಟೆೆ? ಶ್ರೀರಾಮನನ್ನು ಯಾರ್ಯಾರು ಯಾವ್ಯಾವ ಹೆಸರಿನಿಂದ ಕರೆಯುತ್ತಾರೆ, ಮತ್ತು ಯಾಕೆ ಹಾಗೆ ಕರೆಯುತ್ತಾರೆ ಎಂಬ ವಿಶ್ಲೇಷಣೆ ಆ ಶ್ಲೋಕದಲ್ಲಿರು ವುದು. ರಾಮಾ ಎಂದು ಏಕವಚನದಲ್ಲಿ ಪ್ರೀತಿಯಿಂದ ಕರೆಯುವ ಅಧಿಕಾರ ಇರುವುದು ತಾಯಿ ಕೌಸಲ್ಯೆಗೆ ಮಾತ್ರ. ರಾಮಭದ್ರ ಎಂದು ಮಮತೆಯಿಂದ ಕರೆಯುವವನು ತಂದೆ ದಶರಥ. ಮುಂದೆ ತನ್ನ ಸಾಮ್ರಾಜ್ಯಕ್ಕೊಂದು ಭದ್ರತೆ ಒದಗಿಸುವವ ಎಂಬ ನಂಬಿಕೆ ಆತನದು. ರಾಮಚಂದ್ರ ಎನ್ನುವವಳು ಮಲತಾಯಿ ಕೈಕೇಯಿ. ಸಿಂಹಾಸನವೇರಲಿದ್ದ ಶ್ರೀರಾಮನಿಗೆ ಅರ್ಧಚಂದ್ರ ಕೊಟ್ಟು ವನವಾಸಕ್ಕೆ ದೂಡುತ್ತಾಳಲ್ಲ ಅವಳೇ.

ವೇಧಸೇ ಎಂದು ಶ್ರೀರಾಮನನ್ನು ಕರೆಯುತ್ತಿದ್ದವರು ವಸಿಷ್ಠಾದಿ ಋಷಿಮುನಿಗಳು ಮತ್ತು ಜ್ಞಾನಿಗಳು. ವೇಧಸ್ ಎಂಬ ಪದಕ್ಕಿರುವ ಎಂಟು ಅರ್ಥಗಳಲ್ಲಿ ಪಂಡಿತ ಎನ್ನುವುದೂ ಒಂದು. ಶ್ರೀರಾಮ ಎಲ್ಲ ವಿದ್ಯೆಗಳಲ್ಲೂ ಪಾರಂಗತನಾಗಿ ಹಾಗೆ ಕರೆಸಿಕೊಳ್ಳಲಿಕ್ಕೆ ಪೂರ್ಣ ಅರ್ಹನು. ಅಯೋಧ್ಯೆಯ ಪ್ರಜೆಗಳೆಲ್ಲ ಶ್ರೀರಾಮನನ್ನು ರಘುನಾಥ ಎಂದು ಕರೆಯುವರು- ರಘುಕುಲಕ್ಕೆ ಒಡೆಯ ಎಂಬ ಅರ್ಥದಲ್ಲಿ. ಇನ್ನು, ನಾಥ ಎಂದು ಶ್ರೀರಾಮನನ್ನು ಕರೆಯುತ್ತಿದ್ದದ್ದು ಸೀತಾದೇವಿ ಮಾತ್ರ. ಏಕೆಂದರೆ ರಾಮ ಏಕಪತ್ನೀವ್ರತಸ್ಥ.

ಸೀತೆಗಷ್ಟೇ ಆತ ಗಂಡ. ಸರಿ, ಇಷ್ಟೆಲ್ಲ ಆದಮೇಲೆ ಮಿಥಿಲಾನಗರದ ಪ್ರಜೆಗಳು, ಅಂದರೆ ಸೀತೆಯ ತವರೂರಿನವರು ಶ್ರೀರಾಮ ನನ್ನು ಹೇಗೆ ಕರೆಯುತ್ತಿದ್ದರು? ಅವರಿಗೆ ರಾಮ ರಾಮಭದ್ರ ರಾಮಚಂದ್ರ ಇತ್ಯಾದಿಯೆಲ್ಲ ಏನೂ ಗೊತ್ತಿಲ್ಲ. ಅವರು ಕರೆಯುವುದು ಸೀತಾಪತಿ ಎಂದೇ. ಅದೇ, ‘ನಮ್ಮ ಸೀತಮ್ಮನ ಗಂಡ’ ಅಂತಲೇ ಕರೆಯುವರು. ಸಹಜವೇ ತಾನೆ? ಅವರಿಗೆ ಸೀತೆಯೇ ಪಾಯಿಂಟ್ ಆಫ್ ರೆಫರೆನ್ಸ್. ಸೀತೆಯ ಗಂಡ ಎಂದು ಶ್ರೀರಾಮನ ಗುರುತು. ಹಾಗೆ ಕರೆದೇ ಗೌರವಾರ್ಪಣೆ. ಬೇಕಿದ್ದರೆ ಸೂಕ್ಷ್ಮವಾಗಿ ಗಮನಿಸಿ. ಮಿಥಿಲೆಯ ಪ್ರಜೆಗಳ ಈ ಸಂಪ್ರದಾಯ ಈಗಲೂ ವಿವಾಹವಾದ ಪ್ರತಿಯೊಬ್ಬ ಹೆಣ್ಣಿನ ತವರೂರಲ್ಲಿ ಚಾಚೂ ತಪ್ಪದೆ ಚಾಲ್ತಿ ಯಲ್ಲಿದೆ.

ಪ್ರತಿಯೊಂದು ಊರಲ್ಲೂ ಜನರು ತಮ್ಮೂರ ಅಳಿಯಂದಿರನ್ನು ‘ಇಂಥವಳ ಗಂಡ’ ಎಂದೇ ಗುರುತಿಸುತ್ತಾರೆ! ಜಗತ್ತಿಗೆಲ್ಲ ಆತ
ಅದೆಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಯಾವ ಪದವಿಯನ್ನಾದರೂ ಗಳಿಸಿರಲಿ, ಎಷ್ಟೇ ಪ್ರಸಿದ್ಧನಾಗಿರಲಿ, ಆ ಊರಿನವರ ಮಟ್ಟಿಗೆ
ಆತನ ಗುರುತುಪರಿಚಯಕ್ಕೆ ಆತನ ಹೆಂಡತಿಯೇ ಪಾಯಿಂಟ್ ಆಫ್ ರೆಫರೆನ್ಸ್.

ಈಗ, ರಾಮನ ವಿಚಾರದ ಬಳಿಕ, ರಾಮಾಯಣದರ್ಶನಂ ಕಾವ್ಯ ಬರೆದ ಕುವೆಂಪು ಅವರ ವಿಚಾರಕ್ಕೆ ಬರೋಣ. 1965ರಲ್ಲಿ
ಅವರು ಬರೆದ ‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ’ ಎಂಬೊಂದು ಕವಿತೆ. ಅದು, ‘ಅನುತ್ತರಾ’ ಎಂಬ ಕವನಸಂಕಲನದಲ್ಲಿ ಇರುವುದು.
ತುಂಬ ಉದ್ದವಿದೆ, ಒಟ್ಟು ಒಂಬತ್ತು ಪರಿಚ್ಛೇದಗಳು. ಇಲ್ಲಿ ಪದ್ಯದ ರೂಪದಲ್ಲೇ ಪೂರ್ಣವಾಗಿ ಬರೆಯಹೊರಟರೆ ಅಂಕ
ಣದ ಸ್ಥಳಾವಕಾಶ ಸಾಲದು. ಆದ್ದರಿಂದ ನಡುನಡುವೆ ಕೆಲವು ಸಾಲುಗಳನ್ನಷ್ಟೇ ಉಲ್ಲೇಖಿಸಿ ಗದ್ಯರೂಪದಲ್ಲಿ ವಿವರಿಸುತ್ತೇನೆ.
‘ಸ್ವಪ್ನದಲಿ ನಾನೊಮ್ಮೆ ಸತ್ತಿದ್ದೆ- ಥೂ ಹಾಳು ಬಾಯಿ! – ಅಲ್ಲ, ಸತ್ತಿರಲಿಲ್ಲ, ಸ್ವರ್ಗಸ್ಥನಾಗಿದ್ದೆ! ಆದರೂ ಎಚ್ಚರಿದ್ದೆ! ಮುಂದೆ,
ಮುಂದೆ, ಮುಂದೆ, ರೆಕ್ಕೆ ಬಂದವನಂತೆ ಹೋಗುತಿದ್ದೆ; ಅಂಥ ನಿದ್ದೆ!’ ಎಂದು ಆರಂಭವಾಗುತ್ತದೆ ಕವಿತೆ.

ಹಾದಿಯಲ್ಲಿ ಹೋಗುವಾಗ ಏನೇನೋ ಬೋರ್ಡುಗಳನ್ನು ಕಂಡರಂತೆ. ಚಿತ್ರವಿಚಿತ್ರ ಅರ್ಥವಾಗದ ಲಿಪಿಗಳು. ಓದಲಿಕ್ಕಾಗುತ್ತಿಲ್ಲ. ಒಂದುಕಡೆ ಕೈಮರದ ಒಂದು ಬೋರ್ಡ್, ಕನ್ನಡ ಲಿಪಿಯಲ್ಲಿ ಬರೆದದ್ದು ಕಂಡಿತಂತೆ. ‘ನರಕಕ್ಕೆ ದಾರಿ’! ಒಡನೆಯೇ ಅವರ
ಕನ್ನಡ ಮಮತೆ ಉಕ್ಕಿತು. ಅರ್ಥವಾಗದ ಸಗ್ಗ ಎನಿತಿದ್ದರೇನು, ಅರ್ಥವಾದರೆ ಸಾಕು ನರಕವೂ ಜೇನು ಎಂದುಕೊಂಡು ಆ
ದಾರಿಯಲ್ಲೇ ನುಗ್ಗಿದರಂತೆ. ಇದ್ದಕ್ಕಿದ್ದಂತೆ ತಡೆಗಟ್ಟಿತೊಂದು ಕೈ! ಗರ್ಜಿಸಿತ್ತೊಂದು ದನಿ: ‘ನಿನಗಿಲ್ಲಿ ಪ್ರವೇಶವಿಲ್ಲ, ಹಿಂತಿರುಗು
ನಾಕಕ್ಕೆ!’ ಅವರಿಗೋ ನಾಕ ಬೇಕಾಗಿಲ್ಲ, ಅಲ್ಲಿ ಬಾಯಿಪಾಠದ ಬದುಕು ಸಪ್ಪೆ. ಅದಕ್ಕಿಂತ ನರಕವೇ ಲೇಸು.

ಆದರೇನು ಮಾಡುವುದು ದಾರಿ ಕಗ್ಗಲ್ಲಾಗಿ ಮುಚ್ಚೇಬಿಟ್ಟಿತು. ಉಪಾಯವಿಲ್ಲದೆ ಸ್ವರ್ಗದತ್ತ ನಡಿಗೆ. ‘ಯಾರು?’ ಮೊಳಗಿದುದು ದೌವಾರಿಕನ (ದ್ವಾರಪಾಲಕನ) ಧ್ವನಿ. ‘ನಾನು!- ಅಷ್ಟು ಕೆಚ್ಚಿತ್ತೆನ್ನ ನನ್ನತನದಲ್ಲಿ! ‘ನೀನು ನಿಜವಾಗಿ ಯಾರಾಗಿಹೆಯೋ, ನಿಜದಲ್ಲಿ ಏನಾಗಿಹೆಯೋ ಆ ಹೆಸರು ಹೇಳಿದರೆ ಮಾತ್ರ ತೆರೆಯುವುದೀ ದ್ವಾರ. ಇಲ್ಲಿ ನಡೆಯದು ನಿನ್ನ ಭೂಲೋಕದವತಾರ, ಲೋಕ ಮೆಚ್ಚಿದ ಬರಿಯ ಹುಸಿ ಹೆಸರು. ಅಂತರಾತ್ಮದ ನಿನ್ನ ನಿಜನಾಮವನು ಉಸಿರು!’ ದ್ವಾರಪಾಲಕ ಹಾಗೆಂದೊಡನೆ ‘ಪು…ಟ್ಟ…ಪ್ಪ!’ ಎಂದು ಒಂದೊಂದೇ ಅಕ್ಷರವನ್ನು ಉಚ್ಚರಿಸಿದರಂತೆ. ದೌವಾರಿಕನು ನಕ್ಕು ‘ಏನದು? ಟ ಟ್ಟ ಟ್ಟ!?’ ಎಂದು ತಮಾಷೆ ಮಾಡಿದನು.

‘ಮನದೊಳಂದುಕೊಂಡೆ ಇವನಿಗೇನಿದು ಸೊಕ್ಕು? ಅಮೃತ ಪಾನದ ಮಹಿಮೆ ನನ್ನಾ ಹೆಸರು ಪ್ರಸಿದ್ಧ. ಸುಪ್ರಸಿದ್ಧ. ಜಗತ್
ಪ್ರಸಿದ್ಧ! ಅದನಿವನು ಟ ಟ್ಟ ಟ್ಟ ಎಂದು ಅಣುಕಿಸುವನಲ್ಲ?’ ಬಹುಶಃ ಪುಟ್ಟಪ್ಪ ಎಂಬ ಹೆಸರಿನವರು ಅನೇಕರಿದ್ದಾರೆ;
ಇನಿಷಿಯಲ್ಸ್‌ ಸೇರಿಸಿ ಹೇಳಿದರೆ ಬಾಗಿಲು ತೆರೆದೀತು ಎಂದುಕೊಂಡು ‘ಕೆ… ವಿ… ಪು… ಟ್ಟ… ಪ್ಪ’ ಎಂದರು. ಊಹುಂ. ದ್ವಾರ ತೆರೆಯಲೇ ಇಲ್ಲ. ಆಂಗ್ಲ ಅಕ್ಷರಗಳನ್ನು ಸೇರಿಸಿದ್ದು ತಪ್ಪಾಯಿತೇನೋ. ತನ್ನ ನಿಜಜೀವ ಕಾವ್ಯ, ನಿಜನಾಮ ಕಾವ್ಯನಾಮ ಎಂದು, ‘ಕುವೆಂಪು!’ ಎಂದರಂತೆ.

ಏನಿಂಪು! ಎನಿತು ಪೆಂಪು! ಕನ್ನಡದ ಕಂಪು! ಕುವೆಂಪು! ಮಾನಪತ್ರಗಳ ರಾಶಿಯೊಳು ಬೆಳೆದ ನಾಮ! ಪುಷ್ಪಹಾರಗಳ
ಗೋಪುರವ ತಳೆದ ನಾಮ! ಆದರೇನಂತೆ, ಸ್ವರ್ಗದ್ವಾರ ತೆರೆಯದು. ದ್ವಾರಪಾಲಕನೂ ಹುಬ್ಬುಗಂಟಿಕ್ಕಿ ಬಿಮ್ಮಗೆ ಕುಳಿತಿದ್ದಾನೆ. ಮನಸ್ಸಿಗೆ ಗಾಯಗೊಂಡು ಅಭಿಮಾನ ಕೆರಳಿತು. ‘ಇದಕಿಂತ ನಿಜನಾಮ ಎಲ್ಲಿಂದ ತರಲಿ? ಹುಚ್ಚು ಹುಚ್ಚಾದೆ! ಸ್ವರ್ಗದಾ ಹೆಬ್ಬಾಗಿಲಿನ ಕಿವುಡುಗಿವಿಗೆ ಏನೇನೋ ಹೆಸರುಗಳ ನೊರಲುತ್ತ ನಿಂತೆ ಉನ್ಮತ್ತನಂತೆ. ಲೆಕ್ಚರರ್ ಎಂದೆ.

ಅಸಿಸ್ಟೆಂಟ್‌ ಪ್ರೊಫೆಸರ್ ಎಂದೆ. ಪ್ರೊಫೆಸರ್ ಎಂದೆ. ಪ್ರಿನ್ಸಿಪಾಲ್ ಎಂದೆ. ಕಡೆಗೆ ವೈಸ್ ಛಾನ್ಸಲರ್ ಎಂದೆ, ಪದ್ಮಭೂಷಣ ಎಂದೆ, ಕೊಟ್ಟಕೊನೆಗೆ ರಾಷ್ಟ್ರಕವಿ ಎಂದೂ ಅಂದೆ!’ ಒಂದಕೂ ಜಗ್ಗಲೊಲ್ಲದೆ ಹೋಯ್ತು ಸಗ್ಗದಾ ಹೆಬ್ಬಾಗಿಲು. ಪುಣ್ಯಪಾಪದ ಹೊರೆಯ ಪಟ್ಟಿಯನ್ನೂ ಒದರಿದ್ದಾಯ್ತು. ದೌವಾರಿಕ ಕನಿಕರದಿಂದ ಹೇಳಿದ: ‘ಆವುದಿದೆ ನಿನ್ನೊಳಗು, ನಿನ್ನೊಳಗಿನಾ ಬೆಳಗು, ನಿನ್ನ ಹಮ್ಮಿನದಲ್ಲ; ಲೋಕಕೀರ್ತಿಯದಲ್ಲ, ಮರ್ತ್ಯಗೌರವದ್ದಲ್ಲ, ಮತಗಿತದ ಧರ್ಮಗಿರ್ಮದ ಆತ್ಮವಂಚಕದ್ದಲ್ಲ; ನಿನ್ನ ಹೃದಯದ
ಹೃದಯದಾತ್ಮದೊಲವಿನ ಹೆಸರನುಸಿರು!’ ಅಷ್ಟು ಹೇಳಿದ್ದೇ ತಡ, ಒಳಗೇನೋ ಒಂದು ತಿಳಿವಿನ ಬೆಳಕು ಮಿಂಚಿದಂತಾಯ್ತು.
ತುಸು ನಾಚಿಕೆಯೂ ಆಯ್ತು. ಮತ್ತೆ ದ್ವಾರಪಾಲಕ ನುಡಿದ: ‘ಸಾಕು ಬಿಡು ಹುಸಿ ಹೆಸರುಗಳ ಆ ಭ್ರಾಂತಿ ; ನಾಚಿಗೆಯನಾಚೆಗಿಡು. ನಿಜದ ನಿಜನಾಮವನು ಹೆದೆಗೆ ತೊಡು. ಎದೆ ತೆರೆಯುವುದು ನಿನಗೆ ಶಾಂತಿ!’ ಈಗ ನಿರಾಯಾಸವಾಗಿ ಗುರುತು ತಿಳಿಸುವ ಸಮಯ.

‘ಕೈ ಮುಗಿದು, ನಾಚಿಕೆಯನಾಚೆ ತಳ್ಳಿ, ನಾನೆಂದೆ ತೊದಲಿ ತೊದಲಿ. ನನ್ನನುದ್ಧರಿಸೆ ಶ್ರೀಗುರುಕೃಪೆಯ ಮೆಯ್ವೆತ್ತು ಬಂದಿರುವ, ಶ್ರೀ ಮಹಾಮಾತೆಯಡಿದಾವರೆಯೆ ಆಗಿರುವ ಸತಿಯ ಒಲವಿನ ಸೆರೆಯ ನಾನು… ನಾನು… ನಾನು… ಹೇಮಿ ಗಂಡ!’ ಪವಾಡ ಸಂಭ ವಿಸಿತು. ಕಮಲವರಳಿ ಒಳಗಿಂದ ಹೊರಬರುವ ದುಂಬಿಯಂತೆ ಕಂಡುಬಂದ ಆ ದೇವದೂತ. ಕಂಡೆ! ಒಳನುಗ್ಗಿದೆ!

ಸಜ್ಜೆಮಂಚದ ಮೇಲೆ ಚಾಚಿದೆನ್ನಯ ತೋಳ ತಲೆದಿಂಬಿನಲಿ ಬಾಳ ಸಗ್ಗದ ಮೊಗವ ಕಂಡೆ; ಎಚ್ಚೆತ್ತಿದ್ದೆ! ವಾಹ್ ರೆ ವಾಹ್! ಹೀಗಿರಬೇಕು ಕನಸೆಂದರೆ! ಹೀಗಿರಬೇಕು ಕವಿತೆಯೆಂದರೆ! ಕುವೆಂಪು ತನ್ನ ಗುರುತುಪತ್ರವೆಂದು ಏನೇನೋ ಹೇಳಿದರೂ ತೆರೆಯದ ಸ್ವರ್ಗದ ಬಾಗಿಲು ತಾನು ಹೇಮಿಯ ಗಂಡ (ಹೇಮಿ ಅಂದರೆ ಹೇಮಾವತಿ; ಪುಟ್ಟಪ್ಪನವರ ಧರ್ಮಪತ್ನಿ) ಎಂದಾಗಷ್ಟೇ ತೆರೆಯಿತು. ಅಂದರೆ ಅದೊಂದೇ ಅವರ ನಿಜವಾದ ಗುರುತು! ಇಹಲೋಕದಲ್ಲಿ ಮಾಡಿದ ಸಾಧನೆಗಳು, ಗಳಿಸಿದ ಪ್ರಶಸ್ತಿಗಳು,

ಬಿರುದು ಸನ್ಮಾನಗಳು ಯಾವುವೂ ಕೆಲಸಕ್ಕೆ ಬರಲಿಲ್ಲ. ಅವೇನಿದ್ದರೂ ಅಹಂಕಾರಕ್ಕೆ, ಲೋಕ ಮೆಚ್ಚುವ ಅಸ್ಮಿತೆಗೆ ಮಾತ್ರ. ಆದರೆ ‘ಹೇಮಿಯ ಗಂಡ’ ಎಂಬ ಗುರುತು ಎಂತಹ ಗೌರವವನ್ನು ತಂದುಕೊಟ್ಟಿತು! ಒಬ್ಬ ಮನುಷ್ಯ ತನ್ನ ಸ್ವಾಾಭಿಮಾನ, ಸಾಧನೆ, ಮತ್ತು ಅಸ್ತಿತ್ವವನ್ನೇ ಮರೆತು ತನ್ನನ್ನು ‘ಇಂಥವಳ ಗಂಡ’ ಎಂದು ಕರೆದುಕೊಳ್ಳುವುದು ಅತ್ಯುನ್ನತ ಪ್ರೀತಿ; ಗಂಡಿನಿಂದ ಹೆಣ್ಣಿಗೆ ಸಲ್ಲುವ ಗೌರವದ ಅತ್ಯುತ್ತಮ ರೀತಿ. ಕನ್ನಡದ ಬೇರೆ ಕೆಲವು ಕವಿಶ್ರೇಷ್ಠರೂ ಇದನ್ನು ತಮ್ಮದೇ ಆದ ರೀತಿಯಲ್ಲಿ ಮಾಡಿದವರೇ. ಬೇಂದ್ರೆಯವರ ‘ಸಖೀಗೀತ’ಗಳಿಂದ ಹಿಡಿದು ರಾಮಚಂದ್ರ ಶರ್ಮರ ದಾಂಪತ್ಯ ಸುನೀತಗಳವರೆಗೆ;  ನರಸಿಂಹಸ್ವಾಮಿಯವ ರಂತೂ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದರೆ ನಾನೂ ಒಬ್ಬ ಸಿಪಾಯಿ’ ಎಂದವರು.

ಗೋಪಾಲಕೃಷ್ಣ ಅಡಿಗರು ಇದನ್ನೇ ಸಾಂಕೇತಿಕವಾಗಿಸಲು ಮನೆಗೆ ‘ಲಲಿತಾ’ ಎಂದು ಮಡದಿಯ ಹೆಸರನ್ನೇ ಇಟ್ಟು ಮನೆಮುಂದೆ ಫಲಕದಲ್ಲಿ ಗೋಪಾಲಕೃಷ್ಣ ಅಡಿಗ ಎಂದು ಚಿಕ್ಕ ಅಕ್ಷರಗಳಲ್ಲೂ, ‘ಲಲಿತಾ’ ಎಂದು ದೊಡ್ಡ ಅಕ್ಷರಗಳಲ್ಲೂ ಬರೆಸಿದವರು. ಸುಮತೀಂದ್ರ ನಾಡಿಗ, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶಮೂರ್ತಿ, ಡುಂಡಿರಾಜ್ ಮುಂತಾದವರೆಲ್ಲರೂ ಒಂದಿ ಲ್ಲೊಂದು ವಿಧದಲ್ಲಿ, ಒಂದಿಲ್ಲೊಂದು ಕವಿತೆಯಲ್ಲಿ ‘ಕಾಂತಾವಿಧೇಯ’ರೇ.

ಕುವೆಂಪು ಬರೆದ ಈ ಕವಿತೆ ನನಗೆ ಮೊನ್ನೆಯವರೆಗೂ ಗೊತ್ತೇ ಇರಲಿಲ್ಲ. ಕಳೆದವಾರ ಫೇಸ್‌ಬುಕ್‌ನಲ್ಲಿ ‘ಕಪಲ್ ಚಾಲೆಂಜ್’
ಫೋಟೊಗಳ ಕ್ರೇಜ್ ವಿಪರೀತವಾಗಿ ವಾಕರಿಕೆ ಬರುವಷ್ಟಾದಾಗ ಅದಿನ್ನು ಸಾಕು ಎಂದು ಹೇಳಲೋ ಎಂಬಂತೆ ನಾನು ‘ಕಪಲ್
ಚಾಲೆಂಜಿಗರಿಗೆ ಕುವೆಂಪು ಪದ್ಯದ ಉಡುಗೊರೆ’ ಎಂದು ಒಂದು ಪೋಸ್ಟ್‌ ಹಾಕಿದ್ದೆ. ಅದರಲ್ಲಿ ಕುವೆಂಪು ಅವರ ‘ಚಂದ್ರಮಂಚಕೆ
ಬಾ, ಚಕೋರಿ!’ ಕವನ ಸಂಕಲನದಿಂದಾಯ್ದ ‘ದಂಪತಿ’ ಕವಿತೆಯನ್ನೂ ಸೇರಿಸಿದ್ದೆೆ. ‘ನಮ್ಮ ಬಾಳಿಗೆ ಸಾಕ್ಷಿ ಹೋಳಿಗೆ! ನಾನು
ಕಣಕ, ನೀನು ಹೂರ್ಣ…’ ಎಂದು ಆರಂಭವಾಗಿ ಮತ್ತೊಂದಿಷ್ಟು ನಾನು-ನೀನುಗಳ ವರ್ಣನೆಯಾಗಿ ‘ಎರಡು ಹೆಸರಿಗೊಂದೆ ಉಸಿರು: ನಾನು ಪತಿ, ನೀನು ಸತಿ, ಒಂದೆ ದಂಪತಿ!’ ಎಂದು ಮುಗಿಯುವ ಅದು ಒಂದು ಪುಟ್ಟ ಕವಿತೆ. ಆ ಪೋಸ್ಟ್’ಗೆ ಪ್ರತಿಕ್ರಿಯೆ  ಬರೆಯುತ್ತ ಕೆಲವರು ಕುವೆಂಪು ಅವರ ಈ ‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ’ ಕವಿತೆಯನ್ನೂ ನೆನಪಿಸಿಕೊಂಡರು.

ಒಬ್ಬರಂತೂ ತಮ್ಮಲ್ಲಿದ್ದ ‘ಅನುತ್ತರಾ’ ಕವನಸಂಕಲನ ಪುಸ್ತಕದಿಂದ ಈ ಕವಿತೆಯಿರುವ ಐದಾರು ಪುಟಗಳ ಸ್ಕ್ಯಾನ್ ಚಿತ್ರಗಳನ್ನು ಹಂಚಿಕೊಂಡರು. ಅಂತೂ ಚಾಲೆಂಜ್ ಗೀಲೆಂಜ್ ಅಂತೆಲ್ಲ ಹುಚ್ಚಾಟವಿಲ್ಲದೆ ಒಂದು ಕವಿತೆಗೆ ಪ್ರತಿಯಾಗಿ ಕುವೆಂಪು
ಅವರದೇ ಇನ್ನೊಂದು ಕವಿತೆ ನನಗೆ ದಕ್ಕಿತು. ಅದೇ ರಸದೂಟವಾಯ್ತು. ನನ್ನ ಫೇಸ್‌ಬುಕ್ ಪೋಸ್ಟ್’ಗೆ ಪ್ರತಿಕ್ರಿಯೆಯಲ್ಲಿ ‘ಕುವೆಂಪು ಅವರ ನಾ ನಿನಗೆ ನೀನೆನಗೆ ಜೇನಾಗುವಾ ಕೂಡ ನನ್ನ ಇಷ್ಟದ ಕವನ. ಅವರ ಮತ್ತೊಂದು ಕವನದಲ್ಲಿ ಹೇಮಿಯ ಪತಿಯೆಂದು ಗುರುತಿಸಿಕೊಂಡ ಮೇಲೆಯೇ ಸ್ವರ್ಗ ಪ್ರವೇಶ ಸಾಧ್ಯವಾಯಿತೆನ್ನುತ್ತಾರೆ.’ ಎಂದು ಬರೆದ ಮಂಗಳಾ ಉಡುಪ
ಇಲ್ಲಿ ಉಲ್ಲೇಖಾರ್ಹರು. ಏಕೆ ಎಂದು ತಿಳಿಸುತ್ತೇನೆ.

ಮಂಗಳಾ ಮೂಲತಃ ಮಲೆನಾಡಿನವರು; ಈಗ ಇಲ್ಲಿ ಅಮೆರಿಕದ ಅಟ್ಲಾಂಟಾ ನಗರದಲ್ಲಿರುವವರು. ಈ ದೇಶಕ್ಕೆ ಬಂದ ಮೇಲೂ
ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಮಕ್ಕಳಿಗೆ ಕನ್ನಡ ತರಗತಿಗಳನ್ನು ನಡೆಸುತ್ತಿರುವವರು. ಸಾಹಿತ್ಯಾಸಕ್ತೆ, ಸಾಹಿತ್ಯದ ಒಲವುಳ್ಳ ಮನೆತನದಿಂದ ಬಂದವರು. ತಂದೆ ಗೋಪಾಲಕೃಷ್ಣ ಉಡುಪರು ‘ಕನ್ನಡ ವ್ಯಾಕರಣ ಮತ್ತು ರಚನೆ’
ಎಂಬ ಅತ್ಯುತ್ತಮ ಕೈಪಿಡಿ ಪುಸ್ತಕ ಬರೆದವರಾದರೆ ಚಿಕ್ಕಪ್ಪ ಶ್ರೀನಿವಾಸ ಉಡುಪರು (ಇತ್ತೀಚೆಗೆ ನಿಧನರಾದರು) ಮಕ್ಕಳಿಗೋಸ್ಕರ ಕಥೆ ಕವಿತೆ ಬರೆದು ಪ್ರಕಟಿಸಿದ ಸಾಹಿತಿ.

ಸರಿ, ಮಂಗಳಾ ಉಡುಪರ ಸ್ಪೆಷಲ್ ಮೆನ್ಷನ್ ಏಕೆಂದರೆ, ಅವರು ಅಮೆರಿಕಕ್ಕೆ ಬರುವ ಮೊದಲು ಪಾಸ್‌ಪೋರ್ಟ್ ಮಾಡಿಸಿದ್ದಾಗ ಮಂಗಳಾ ಉಡುಪ ಎಂದು ಹೆಸರಿದ್ದದ್ದನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಅವರ ಗಂಡ ಮಧುಸೂದನ್ ತನ್ನ ಹೆಸರನ್ನು ಆಫೀಷಿಯಲ್ ರೆಕಾರ್ಡ್‌ಗಳಲ್ಲಿ ಬಾಲಕೃಷ್ಣ ಎಂದು ತಂದೆ ಹೆಸರನ್ನೂ ಸೇರಿಸಿ ಬರೆಯುತ್ತಾರಾದರೂ ಸ್ನೇಹಿತರಿಗೆಲ್ಲ ಅವರು ಮಧು ಎಂದಷ್ಟೇ ಗೊತ್ತು. ಅಟ್ಲಾಂಟಾದ ಕನ್ನಡಿಗರೆಲ್ಲ ಅವರ ಪೂರ್ಣ ಹೆಸರು ಮಧುಸೂದನ್ ಉಡುಪ ಎಂದೇ ತಿಳಿದು ಕೊಂಡಿದ್ದಾರಂತೆ! ಅಂದರೆ, ಹೆಂಡತಿಯ ನೇಮ್‌ನಿಂದಲ್ಲ ಸರ್‌ನೇಮ್‌ನಿಂದ ಗಂಡನಿಗೆ ಗುರುತು, ಗೌರವ!