ಸಂಡೆ ಸಮಯ
ಸೌರಭ ರಾವ್, ಕವಯತ್ರಿ ಬರಹಗಾರ್ತಿ
ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡುಮಕ್ಕಳಿಗೂ ಒಳ್ಳೆಯ ನಡೆ-ನುಡಿ ಸಮಾನ ಆಸ್ಥೆಯಿಂದ ಚಿಕ್ಕವಯಸ್ಸಿನಿಂದ ಕಲಿಸ ಬೇಕಲ್ಲವಾ ಎಂದು ಕಳೆದವಾರ ಬರೆದದ್ದಕ್ಕೆ ಮಿಂಚಂಚೆಗೆ ಬಂದ ಅಸಹನೆ ತುಂಬಿದ ಪತ್ರಗಳನ್ನು ನೋಡಿ ಖೇದವಾಯ್ತು.
ಮಾನವೀಯೆಗೂ ಲಿಂಗ ಭೇದವಾ? ಸಂಜೆ ಕತ್ತಲಾಗುವುದರೊಳಗೆ ಮನೆ ಸೇರಿಕೋ ಎಂದು ಹೆಣ್ಣುಮಕ್ಕಳಿಗೆ ಹೇಳುವ ಪೋಷಕ ರಲ್ಲಿ ಎಷ್ಟು ಜನ, ಹೆಣ್ಣುಮಕ್ಕಳು ರಾತ್ರಿ ರಸ್ತೆಯಲ್ಲಿ ಕಂಡರೂ ಅದು ನಿನ್ನ ಉಸಾಬರಿಯಲ್ಲ. ಶಿಳ್ಳೆ, ಚಪ್ಪಾಳೆ, ಹೇಸಿಗೆ ಹುಟ್ಟಿಸುವ ಕೆಟ್ಟಮಾತನ್ನಾಡುವುದು, ಮುಟ್ಟುವುದು, ಮತ್ತೊಂದು ಮಾಡುವುದು ನಿನ್ನ ಹಕ್ಕಲ್ಲ, ನೀನೂ ಗಾಂಭೀರ್ಯದಿಂದ ನಿನ್ನ ಕೆಲಸ ನೀನು ನೋಡಿಕೋ ಎಂದು ತಮ್ಮ ಗಂಡು ಮಕ್ಕಳಿಗೆ ಹೇಳುತ್ತಾರೆ ಎಂದು ಸೌಜನ್ಯದಿಂದ ಕೇಳಿದರೂ ಕೆರಳುವುದೇಕೆ? ಇನ್ನೊಂದು ಮಾತು.
ನಿಜಕ್ಕೂ ಎಷ್ಟು ಮನೆಗಳಲ್ಲಿ ಗಂಡಸರು ಹೆಂಗಸರಿಗೆ ಬಟ್ಟೆ, ಪಾತ್ರೆ ತೊಳೆಯುವುದರಲ್ಲಿ, ಮಕ್ಕಳ ಪಾಲನೆಯಲ್ಲಿ, ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವಲ್ಲಿ (ಬಿಡುವಾದಾಗಲಾದರೂ?) ಸಹಾಯ ಮಾಡುತ್ತಾರೆ? ಅದರಲ್ಲೂ ಹೆಂಗಸರೂ ಹೊರಗೆ
ಕೆಲಸಕ್ಕೆ ಹೋಗುವವರಿಗೆ ಮನೆಯಲ್ಲೂ ಕೆಲಸ ಹಂಚಿಕೊಳ್ಳುವುದಕ್ಕೆ ಪ್ರೀತಿಸುವವರು ನೆರವಾಗದಿದ್ದರೆ ಅವರು ಪಡುವ ಪಾಡು ಕೇಳುವವರಾರು? ಗಂಡಸರಿಗೆ ಕೆಲಸ ಬದಲಾದರೆ, ವರ್ಗಾವಣೆಯಾದರೆ ಇಡೀ ಕುಟುಂಬ ಮನೆ, ಏರಿಯಾ, ಊರು ಬದಲಿಸು ವುದು ಚರ್ಚೆಯೇ ಅಲ್ಲ. ಅದೇ ಹೆಂಗಸರಿಗೆ ವರ್ಗಾವಣೆಯೋ ಅಥವಾ ಕೆಲಸ ಬದಲಾದರೆ ಒಂದು ಮನೆ, ಒಂದು ಏರಿಯಾ, ಒಂದು ಊರು ಬದಲಿಸುವ ಮಾತು ಅಷ್ಟೇ ಸುಲಭವಾಗಿ ನಡೆಯುತ್ತದೆಯೇ? ನಮ್ಮಲ್ಲಿ ಇವತ್ತಿಗೂ ಕೆಲವರು ಏಹ್, ಅವನ ಮಾತು ಬಿಡು, ಆತ ಹೆಂಡತಿಯ ಒಳ ಉಡುಪುಗಳನ್ನು ಒಗೆಯುವ ಆಸಾಮಿ ಎಂದು ಅದನ್ನೇನೋ ಅಸಹ್ಯದ ವಿಷಯ ಎನ್ನುವ ಹಾಗೆ ಅಸಹ್ಯವಾಗಿ ಮಾತನಾಡಿಬಿಡುತ್ತಾರಲ್ಲ ಯಾಕೆ? ಅವನು ಬಿಡು, ಹೆನ್ ಪೆಕ್ಡ ಹಸ್ಬೆಂಡ್.
ಹೆಂಡತಿ ಮಾತು ಕೇಳದೆ ಏನನ್ನೂ ಮಾಡುವುದಿಲ್ಲ. ಯಾಕೆ ಹೆಂಡತಿ ಜೊತೆ ಅವರಿಗೆ ಇಷ್ಟ ಬಂದ ವಿಷಯಗಳನ್ನು ಗಂಡಸರು ಚರ್ಚಿಸಬಾರದು? ಇದು ಮನೆಯೊಳಗೇ ನಡೆಯುವ ತಾರತಮ್ಯಗಳ ಕಥೆಯಾದರೆ, ಹೊರಗೆ ಹೆಣ್ಣುಮಕ್ಕಳು ಅನುಭವಿಸುವ ಕಥೆಗಳೇನೂ ಕಮ್ಮಿಿಯಿಲ್ಲ. ಕಳೆದ ವಾರವೇ ಗೆಳತಿಯೊಬ್ಬಳೊಡನೆ ಜಯನಗರದ ಜನನಿಬಿಡ ರಸ್ತೆಯೊಂದರಲ್ಲಿ ಹಾದು ಹೋಗುತ್ತಿದ್ದಾಗ ನಡೆದ ಕೆಲಕ್ಷಣಗಳ ಘಟನೆ: ಇನ್ನೇನು ಯಾವುದೇ ಕ್ಷಣದಲ್ಲಿ ಮೇಲೆ ದಟ್ಟವಾಗಿ ಕವಿದ ಮೋಡಗಳೆಲ್ಲ
ಎದೆಯೊಡೆದುಕೊಂಡು ರೋದಿಸಲು ಶುರು ಮಾಡಬಹುದೆಂದು ಬಿರುಸಿನ ಹೆಜ್ಜೆ ಹಾಕಲು ಶುರುಮಾಡಿದೆವು. ಎದುರಿನಿಂದ ಬರುತ್ತಿದ್ದ ಹುಡುಗನೊಬ್ಬನ ದೃಷ್ಟಿ ಕೆಲ ಕ್ಷಣ ಗೆಳತಿಯ ಮೇಲಿದ್ದುದು, ಹಾಗೇ ಯಾವುದೇ ಉದ್ದೇಶವಿಲ್ಲದ ನನ್ನ ನೋಟಕ್ಕೆ ಸಿಕ್ಕಿತು.
ಆತನದ್ದೂ ಅಂಥದ್ದೇ ಉದ್ದೇಶರಹಿತವಾದ ನೋಟವಾಗಿತ್ತು, ಆತ ಅವಳನ್ನು ಕಸಿವಿಸಿಗೊಳ್ಳುವಂತೇನೂ ಖಂಡಿತಾ ನೋಡ ಲಿಲ್ಲ. ಆದರೆ ಅಷ್ಟರಲ್ಲಿ ಗೆಳತಿ ಕುತ್ತಿಗೆ ಮೇಲಿದ್ದ ತನ್ನ ದುಪಟ್ಟಾವನ್ನು ಸ್ವಲ್ಪ ಕೆಳಗೆಳೆದುಕೊಂಡಿದ್ದಳು. ನಂತರ ಮನೆ ತಲುಪಿ ಕೂತು ಹರಟುತ್ತಿದ್ದಾಗ ಅದರ ಪ್ರಸ್ತಾಪ ಮಾಡಿದಾಗ ಅವಳಾಡಿದ ಮಾತುಗಳು ಇನ್ನೂ ಕಿವಿಯಲ್ಲಿ ಗುಂಯ್ಗುಡುತ್ತಿವೆ: ನಮ್ಮ (ಹೆಣ್ಣುಮಕ್ಕಳ) ಉಪಪ್ರಜ್ಞೆ ಎಷ್ಟು ಪ್ರೋಗ್ರಾಮ್ಡ್ ಆಗಿಬಿಟ್ಟಿದೆ ಅಲ್ಲವಾ? ರಸ್ತೆಯಲ್ಲಿ ಅರ್ಧ ಕಿಲೋಮೀರ್ಟ ನಡೆಯು ವಷ್ಟರಲ್ಲಿ ಎಷ್ಟು ಸಲ ಮುಜುಗರಪಡಿಸುವ ನೋಟ, ಕೆಲವು ಸಲ ಅಸಹ್ಯ ಹುಟ್ಟಿಸುವ ಕಾಮೆಂಟುಗಳಿಗೆ ಮನಸ್ಸು ರೋಸಿ ಹೋಗುತ್ತದೆ. ಅಂಥಾ ಯಾವುದೇ ಉದ್ದೇಶವಿಲ್ಲದೇ ತಮ್ಮ ಪಾಡಿಗೆ ತಾವು ನಡೆದುಹೋಗುವ ಗಂಡಸರು ಹತ್ತಿರ ಬರುತ್ತಿದ್ದರೂ ನಮಗೆ ಗೊತ್ತಿಲ್ಲದೇ, ಅವಶ್ಯಕತೆ ಇಲ್ಲದಿದ್ದರೂ ಸ್ವಲ್ಪ ಪಕ್ಕ ದೂರಕ್ಕೆ ನಡೆದುಬಿಡುತ್ತೇವೆ. ಏನಿಲ್ಲದಿದ್ದರೂ ಮಿದುಳಿನ ಒಂದು ಪುಟ್ಟ ಭಾಗ, ಸಲ್ಲದ ಸ್ಪರ್ಶವನ್ನೋ, ಬೇಡದ ಮಾತನ್ನೋ ನಿರೀಕ್ಷಿಸಿ, ಚುರುಕಾಗಿ ಅಷ್ಟೆೆಲ್ಲಾ ಯೋಚನೆ ಬಹಳ ಸಹಜವೆಂಬಂತೆ ನಡೆಸಿಬಿಟ್ಟಿರುತ್ತದೆ.
ಬಸ್ಸಿನಲ್ಲಿ, ರೈಲಿನಲ್ಲಿ, ರಸ್ತೆಯಲ್ಲಿ, ಎಲ್ಲಕಡೆಯೂ ಹೀಗೆ ಸುಪ್ತಮನಸ್ಸು ಗಲಿಬಿಲಿಗೊಳ್ಳುತ್ತದಲ್ಲ, ನನ್ನ ಜೆಂಡರ್ ಇದು ಎಂಬ
ಒಂದೇ ಕಾರಣಕ್ಕೆ ಪ್ರವಾಸಗಳಿಗೆ ಹೋಗುವುದು, ಯಾವುದೋ ಬೆಟ್ಟದ ಮೇಲೆ ನೆಮ್ಮದಿಯಾಗಿ ಟೆಂಟ್ ಹಾಕಿ ಒಂದು ರಾತ್ರಿ ಏಕಾಂಗಿಯಾಗಿ ಕಳೆಯಲು ಭಯವಾಗುತ್ತದಲ್ಲ, ಇನ್ನೂ ಪ್ರಪಂಚದ ಎಲ್ಲ ಕಡೆ ಹೆಣ್ಣುಮಕ್ಕಳು ಮೀ ಟೂ, ಟೈಮ್ ಈಸ್ ಅಪ್ ಎಂದು ಇನ್ನೂ ಹೊಡೆದಾಡಬೇಕಿದೆಯಲ್ಲ. ಛೇ! ಹೌದು, ಈಗಿನ ಕಾಲದಲ್ಲಿ ಎಷ್ಟೋ ಮನೆಗಳಲ್ಲಿ ಇದು ಚರ್ಚೆಯ ವಿಷಯವೇ
ಆಗದಿರುವಷ್ಟು ಕೆಲಸಗಳನ್ನು ಹಂಚಿಕೊಂಡು ಚಂದವಾಗಿ ಬದುಕುತ್ತಾ, ಒಬ್ಬರನ್ನೊಬ್ಬರು ಎಲ್ಲ ರೀತಿಯಲ್ಲೂ ಗೌರವಿಸುತ್ತಾ ಪ್ರೀತಿ ಅಕ್ಕರೆಗಳು ತುಂಬಿದ ಮನೆಗಳು ಇವೆ, ಆ ಸಂಖ್ಯೆ ನಮ್ಮಸುತ್ತಮುತ್ತ ಹೆಚ್ಚುತ್ತಲೂ ಇರಬಹುದು. ಮತ್ತೂ ಹೆಚ್ಚಲಿ. ಹೌದು, ಎಲ್ಲ ಗಂಡಸರೂ ಮುಜುಗರವಾಗುವಂತೆ, ಅಸಹ್ಯ ಪಡುವಂತೆ ನಡೆದುಕೊಳ್ಳುವುದಿಲ್ಲ. ಆದರೆ ಅಂಥವರು ಇದ್ದಾರೆ ಎನ್ನುವುದು ಖಂಡಿತಾ ಸುಳ್ಳಲ್ಲ. ಹೆಣ್ಣುಮಕ್ಕಳಾದ ನಮ್ಮ ಸುಪ್ತಪ್ರಜ್ಞೆ ಹೀಗೆಲ್ಲಾ ಚಿಂತಿಸುತ್ತಿರುತ್ತದೆ ಎಂಬುದು ಅತಿಶಯೋಕ್ತಿಯೂ ಅಲ್ಲ.
ನಿಮ್ಮಲ್ಲಿ ಇದನ್ನು ಒಪ್ಪದಿರುವವರು ಸ್ವಲ್ಪ ತಾಳ್ಮೆ ವಹಿಸಿ ಒಂದು ಸಣ್ಣ ಸೋಶಿಯಲ್ ಎಕ್ಸ್ಪರಿಮೆಂಟ್ ಮಾಡಬಹುದು: ನಿಮ್ಮ
ಅಕ್ಕ-ತಂಗಿ, ಗೆಳತಿಯರು, ಕಡೆಗೆ ಹೆಂಡತಿ-ತಾಯಂದಿರನ್ನೂ ಶಾಂತವಾಗಿ, ಪೂರ್ವಾಗ್ರಹ ಪೀಡಿತರಾಗದೇ ಮಾತಿಗೆ ಕರೆದು ಇಂತಹ ಒಂದೆಡು ಅನುಭವಗಳನ್ನು ಹಂಚಿಕೊಳ್ಳಲು ಕೇಳಿ. ಅದು ಒಂದೋ, ಎರಡೋ ಆಗಿರದೇ, ಅವರು ಮಾತು ಮುಂದು ವರಿಸಿದರೆ ತಾಳ್ಮೆಯಿಂದ ಕೂತು ಗಮನ ಕೊಟ್ಟು ಕೇಳಿ. ಆ ಮಟ್ಟಿಗೆ ಒಳ್ಳೆಯ ಸ್ನೇಹಿತನಾಗಿ ಕೇಳಿ. ಸುಮ್ಮನೆ ಒಂದು ಚರ್ಚೆ ಮಾಡಿ ಅದರಲ್ಲಿ ಗೆಲ್ಲಬೇಕು, ಫೇಮಿನಿಸಂ, ಸ್ತ್ರೀವಾದದ ನ್ಯೂನತೆಗಳನ್ನು ಎತ್ತಿ ಹಿಡಿದು ಅವತಾರ ತಳೆದ ಬುದ್ಧಿಜೀವಿಯಾಗದೇ, ನಮಗೇನೋ ಜ್ಞಾನೋದಯ ಮಾಡಿಸುವ ಹಂಬಲವಿಲ್ಲದೇ, ಲಿಂಗಭೇದವನ್ನೂ ಮರೆತು, ಕೇವಲ ಮನುಷ್ಯರಾಗಿ ಮಾತನಾ ಡೋಣವೆನ್ನಿ, ನಂತರ ಇಂತಹ ಅನುಭವಗಳ ಬಗೆಗಿನ ಅರಿವಿನ ಮಹತ್ವ ನಮಗೆ ತಿಳಿದೀತು.
ಗಂಡುಜಾತಿಯನ್ನು ಇಡಿಯಾಗಿ ಹಳಿದು ಉದ್ಧಾರವಾಗಬೇಕಿರುವ ಪೊಳ್ಳು ಸ್ತ್ರೀವಾದ ನಮಗೂ ಬೇಡ. ನಮಗೆ ಬೇಕಿರುವುದು ಲಿಂಗ ಸಮಾನತೆ. ಕೇವಲ ಹೆಣ್ಣಾದ ಮಾತ್ರಕ್ಕೆ ನಾವು ನಿತ್ಯ ಅನುಭವಿಸುವ ಅಹಿತಕರ ಅನುಭವಗಳಿಂದ ಮುಕ್ತಿ. ಬಲಾತ್ಕಾರ ದಂಥ ಕ್ರೂರ ಪೈಶಾಚಿಕ ಕೃತ್ಯಗಳ ಮುಂದೆ ಇವೆಲ್ಲಾ ಚಿಕ್ಕಪುಟ್ಟ ಸಂಗತಿಯೆಂದು ಅಲ್ಲಗೆಳೆಯದೇ ಯೋಚಿಸಬೇಕಿದೆ. ಅನಗತ್ಯ ಆವೇಶ, ಪ್ರತಿಷ್ಠೆೆಗಳ ಬದಿಗಿಟ್ಟು ನಡೆದುಕೊಳ್ಳುವ ಸಹನೆ, ತಾದಾತ್ಮ್ಯ ಬೇಕಿದೆ.
ನಮ್ಮ ಕಾಲದ ಅತ್ಯಂತ ಪ್ರಖರ ಚಿಂತಕರಲ್ಲಿ ಒಬ್ಬರಾದ ರೆಬೆಕ್ಕಾ ಸಾಲ್ನಿಟ್ ತುಂಬಾ ನೆನಪಾಗುತ್ತಿರುತ್ತಾರೆ. ‘ದ ಗಾರ್ಡಿಯನ್’ ನಲ್ಲಿ ಒಮ್ಮೆ ಫೆಮಿನಿಸಂ ಬಗ್ಗೆ ಅವರು ಬರೆದಿದ್ದಲೇಖನವೊಂದರಲ್ಲಿ ಹಂಚಿಕೊಂಡ ಒಂದು ಸತ್ಯವನ್ನು ಇಲ್ಲಿ ನೆನೆಯಬೇಕಿದೆ: ಸ್ತ್ರೀಯರು ಸ್ತ್ರೀಯಾಗಿರುವುದಕ್ಕೇ ಅನುಭವಿಸುವ ಹಿಂಸೆ, ವೇದನೆಗಳ ಬಗ್ಗೆ ಬರೆಯುತ್ತಲೇ, ಒಬ್ಬ ಮಹಿಳೆಯಾಗಿರುದಕ್ಕೇ ನನಗೆ ಸಿಗುವ ಹಲವು ಹಿತವಾದ ಅನುಭವಗಳನ್ನೂ ನಾನು ಹಂಚಿಕೊಳ್ಳಬೇಕು. ಸುಮ್ಮನೆ ಹೊರಗೆ ವಾಕಿಂಗ್ ಹೋದಾಗ ಯಾವುದಾ ದರೂ ಪುಟ್ಟ ಮಗುವೊಂದನ್ನು ನಾನು ಮಾತನಾಡಿಸಿ ಮುದ್ದಿಸಬೇಕೆಂದರೆ, ಅದರ ತಂದೆ-ತಾಯಿ ಸಾಮಾನ್ಯವಾಗಿ ಒಬ್ಬ
ಅಪರಿಚಿತ ಪುರುಷ ಹತ್ತಿರ ಬಂದಾಗ ಹಿಂಜರಿಯುವಷ್ಟು ಹಿಂಜರಿಯುವುದಿಲ್ಲ. ಇಂಥ ಅನುದಿನದ ಚಿಕ್ಕ, ಆದರೆ ಚೆಂದದ ಅರ್ಥ ಪೂರ್ಣ ಅನುಭವಗಳನ್ನು ಸ್ತ್ರೀಯರಾದ ನಾವು ಮರೆಯದಿರೋಣ. (https://www.theguardian.com/lifeandstyle/ 2017/ aug/26/rebecca&solnit&if&i&were&a&man). ಆಕಸ್ಮಿಕವಾಗಿ ಅಲ್ಲ, ಬೇಕಂತಲೇ ಮುಟ್ಟಾದ ರಕ್ತದ ಕಲೆಗಳ ಫೋಟೋ ಗಳನ್ನು ಇನ್ಸ್ಟಾಗ್ರಾಮ್ ಮಾಡಿ ಹ್ಯಾಷ್ ಟ್ಯಾಗ್ ಫೆಮಿನಿಸಂ ಎಂದು ಬೊಬ್ಬೆೆಯಿಡುವವರನ್ನು ಸ್ವಲ್ಪ ಆ ಕಡೆ ಅವರ ಪಾಡಿಗೆ ಅವರನ್ನು ಬಿಟ್ಟು, ಸದ್ಯಕ್ಕೆ ಸಾಲ್ನಿಟ್ ಅವರಂಥ ವಸ್ತುನಿಷ್ಠ ಸ್ತ್ರೀಯರು ಅಲ್ಲ, ಜೀವಿಗಳು ನಮಗೆ ಮಾದರಿಯಾಗಲಿ. ಮತ್ತೆ ಕೆಲವು ವಿಷಯಗಳನ್ನು ಒತ್ತಿ ಹೇಳಬೇಕಿದೆ.
ನೋಡುವವನ ಮನಸ್ಥಿತಿ ಹೀನಾಯವಾಗಿದ್ದರೆ ಒಂದು ಹೆಣ್ಣು ಚರ್ಮ ಎಲ್ಲಿಯೂ ಕಾಣದಷ್ಟು ಬಟ್ಟೆ ತೊಟ್ಟಿದ್ದರೂ ಅಪಾಯ ತಪ್ಪಿದ್ದಲ್ಲ. ಚರ್ಮ ಕಾಣಿಸುವುದೇ ಕೆಲವು ಗಂಡಸರು ಲೈಂಗಿಕವಾಗಿ ಕೆರಳುವುದಕ್ಕೆ ಕಾರಣ ಎನ್ನುವುದಾದರೆ ಕಂದಮ್ಮಗಳನ್ನೂ ಬಿಡದೇ ಅತ್ಯಾಚಾರವೆಸಗುವ ಅಥವಾ 60-70ರ ಹರೆಯದ ಮುದುಕಿಯರನ್ನೂ ಬಿಡದೆ ಕಾಮತೃಷೆ ತೀರಿಸಿಕೊಳ್ಳುವ ರಾಕ್ಷಸರ ಬಗ್ಗೆ ನಾವು ಯಾವ ವಿವೇಕಯುಕ್ತ ವಿಶ್ಲೇಷಣೆ ನೀಡಬಹುದು? ಅಥವಾ ಯಾರೋ ಹೇಗೋ ಬಟ್ಟೆ ತೊಟ್ಟ ಮಾತ್ರಕ್ಕೆ ನಮ್ಮ ಆಲೋಚನೆ, ಬಾಯಿ ಹೊಲಸು ಮಾಡಿಕೊಳ್ಳುವಷ್ಟು ನಮ್ಮ ಸಚ್ಚಾರಿತ್ರ್ಯ ಸಡಿಲವಾ? ಯಾರು ಹೇಗೆ ಬಟ್ಟೆ ತೊಡುತ್ತಾರೆ ಎನ್ನುವುದು 21ನೇ ಶತಮಾನದಲ್ಲೂ ಪಬ್ಲಿಕ್ ಡಿಬೇಟ್ ಆಗಬೇಕಿಲ್ಲ. ನಮ್ಮ ಕಣ್ಣು, ಮನಸ್ಸು, ನಾಲಿಗೆ, ಆಲೋಚನೆಗಳು ನಮ್ಮ ನಮ್ಮ ಹತೋಟಿಯಲ್ಲಿದ್ದರೆ ಎಷ್ಟೋ ನಕಾರಾತ್ಮಕತೆಯನ್ನು ನಮ್ಮಿಂದಲೇ ಕಡಿಮೆ ಮಾಡಬಹುದು.
ನಮ್ಮ ಕೆಲವು ನುಡಿಗಟ್ಟುಗಳು ಬದಲಾಗಬೇಕು. ನಾನೇನು ಕೈಗೆ ಬಳೆ ತೊಟ್ಟುಕೊಂಡಿದ್ದೀನಾ? ಎಂಬ ಮಾತು, ಒಬ್ಬ ಹುಡುಗ ಅತ್ತರೆ ಅಣಕಿಸುತ್ತಾ ಹುಡುಗಿಯ ಹಾಗೆ ಅಳುತ್ತೀಯಲ್ಲೊ! ಎಂಬ ಮಾತು ಎಷ್ಟೋ ಪೋಷಕರೇ (ಹೆಂಗಸರೂ, ಹೆಂಗಸರೇ ಸೇರಿದಂತೆ) ಆಗಾಗ ಆಡಿಬಿಡುತ್ತಾರೆ. ಇದರಿಂದ ಹೆಣ್ಣುಮಕ್ಕಳಿಗಾಗುವ ಸೂಕ್ಷ್ಮ ಅಗೌರವದ ಜೊತೆ, ಅತ್ತು ಹಗುರಾಗುವ ಅವಕಾಶದಿಂದ ಗಂಡುಮಕ್ಕಳೂ ವಂಚಿತರಾಗುತ್ತಾರೆ. ಭಾವನೆಗಳಿಗೆ ಗಂಡಾದರೇನು, ಹೆಣ್ಣಾದರೇನು? ಕವಿ, ಸಾಹಿತಿ ಜಯಂತ ಕಾಯ್ಕಿಣಿ ಒಮ್ಮೆ ಹೀಗೆಂದಿದ್ದು ನೆನಪಾಗುತ್ತದೆ: ನಮ್ಮ rhetoric ಬದಲಾಗಬೇಕಿದೆ. ಹೆಂಡತಿ ಗಂಡನನ್ನು ಗಂಡ ಎನ್ನಲಿ, ಯಜಮಾನ ಎಂದೇಕೆ ಕರೆಯಬೇಕು? ಇವೆಲ್ಲಾ ಮೇಲ್ನೋಟಕ್ಕೆೆ ಸಣ್ಣದೆನಿಸಿದರೂ, ಇಂಥ ಮಾತುಗಳೇ ನಮ್ಮ ಆಲೋಚೆ ಯನ್ನೂ ರೂಪಿಸುವುದು. ಕಾಲ ಸರಿದಂತೆ, ಇಂಥ ತರ್ಕಹೀನ ಮಾತುಗಳೇ ಸತ್ಯವೆಂಬಂತೆ ಕಾಣುವ ಅಪಾಯವಿದೆ.
ಈಗಾಗಲೇ ಅಪಾಯಗಳು ನಮಗೆ ಗೊತ್ತಿಲ್ಲದಂತೆಯೇ ದಿನನಿತ್ಯ ಜೀವನದಲ್ಲಿ ನುಸುಳಿಕೊಂಡುಬಿಟ್ಟಿದೆ. ಹೌದು, ನಮ್ಮ rhetoric ಬದಲಾಗಬೇಕಿದೆ. ಮಾತನಾಡಲು, ಹಂಚಿಕೊಳ್ಳಲು ಜೀವನದ ಅನೇಕ ಸುಂದರ ವಿವರಗಳಿವೆ. ಒಂದಲ್ಲ, ಹತ್ತು ಜನ್ಮ ತಳೆದು ಬಂದರೂ ಸಾಲದಷ್ಟು ಒಳ್ಳೆಯ ವಿಷಯಗಳು ಕಲಿಯಲು ಇವೆ. ಕೇವಲ ವೈಯಕ್ತಿಕವಾಗಿ ಮಾತ್ರವಲ್ಲ, ಸಾಮೂಹಿಕವಾಗಿ ನಾವು ಆಡುವ ಮಾತುಗಳನ್ನು, ನಡೆದುಕೊಳ್ಳುವ ರೀತಿಗಳನ್ನು ಒಂದು ಮುಕ್ತ, ತಾರತಮ್ಯರಹಿತ, ಮಾನವೀಯತೆಯೇ ಅಡಿಪಾಯ ವಾದ ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾಗುವಂತೆ ಪ್ರತಿದಿನ ಬದುಕಬಹುದು. ಸ್ತ್ರೀವಾದ, ಆ ವಾದ, ಈ ವಾದ ಯಾವುದರ ಅಗತ್ಯವೇ ಇಲ್ಲದಂತೆ ಬದುಕಲು ನಾವೇ ಸಾಧ್ಯಮಾಡಬಹುದಲ್ಲವಾ?