ನೀರು-ನೆರಳು
ಮಿರ್ಲೆ ಚಂದ್ರಶೇಖರ
ರಾಜ್ಯದ ಅಣೆಕಟ್ಟುಗಳಲ್ಲಿನ ನೀರು ಕುಡಿಯಲಿಕ್ಕೂ ಸಾಕಾಗದು. ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಬರ ಆವರಿಸಿದೆ. ಕಾವೇರಿ ಕಣಿವೆಯಲ್ಲಿ ಕಳೆದ ೨ ವರ್ಷ ಸಮೃದ್ಧ ಮಳೆಯಾಗಿದ್ದರಿಂದ ಭೂಮಿಗೆ ಬಿದ್ದ ನೀರೆಲ್ಲವನ್ನೂ ಹಿಡಿದಿಟ್ಟುಕೊಳ್ಳಲಾಗದೆ ಯಥೇಚ್ಛ ಪ್ರಮಾಣದಲ್ಲಿ
ನದಿಗೆ ಬಿಡಲಾಯಿತು. ಶೇಖರಣಾ ಸಾಮರ್ಥ್ಯಕ್ಕಿಂತ ಹೆಚ್ಚುವರಿಯಾದ ನೀರು ದಿನಂಪ್ರತಿ ೧೦ ಟಿಎಂಸಿಗಿಂತ ಹೆಚ್ಚು ಪ್ರಮಾಣದಲ್ಲಿ ಜಲಾಶಯಗಳಿಂದ ಹರಿಯಿತು. ಹೇಮಾವತಿ, ಕಪಿಲಾ, ಕಾವೇರಿ ನದಿಗಳು ತುಂಬಿ ಹರಿಯುವುದನ್ನು ನೋಡಿದಾಗ ಅನಿಸಿದ್ದುಂಟು- ಇವಕ್ಕೆ ಇನ್ನೊಂದೆರಡು ಜಲಾಶಯ ಗಳನ್ನು ನಿರ್ಮಿಸಬಾರದಿತ್ತೇ ಎಂದು!
ಕಾವೇರಿ ಕಣಿವೆಯ ಜಲಾನಯನದಲ್ಲಿ ದೊರೆಯುವ ನೀರು ೭೯೦ ಟಿಎಂಸಿ. ಇದರಲ್ಲಿ ಕರ್ನಾಟಕದ ವ್ಯಾಪ್ತಿಯ ಪ್ರದೇಶದಲ್ಲಿ ೪೨೫, ತಮಿಳುನಾಡಿನಿಂದ ೨೫೨ ಮತ್ತು ಕೇರಳದಿಂದ ೧೧೩ ಟಿಎಂಸಿಯಷ್ಟು ಇದೆ. ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಶೇ.೫೩.೮೦ರಷ್ಟು ದೊರೆಯುತ್ತಿದ್ದು ಇತರೆ ರಾಜ್ಯ ಗಳಿಗಿಂತ ಮುಂದಿದೆ. ರಾಜ್ಯದಲ್ಲಿ ದೊರಕುವ ಅಷ್ಟೂ ನೀರನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ, ಹೆಚ್ಚು ಮಳೆ ಆದಾಗಲೆಲ್ಲ ತಮಿಳುನಾಡಿಗೆ ಹರಿದು
ಹೋಗುವುದರಿಂದ ಕೆಲ ವರ್ಷಗಳನ್ನು ಹೊರತುಪಡಿಸಿ ಎಲ್ಲಾ ವರ್ಷಗಳಲ್ಲೂ ನಿಗದಿತ ವಾರ್ಷಿಕ ಪ್ರಮಾಣಕ್ಕಿಂತ ಹೆಚ್ಚೇ ನೀರು ಹೋಗಿದೆ ಮತ್ತು ಮುಂದೆಯೂ ಹರಿಯುವುದುಂಟು.
ಏಕೆಂದರೆ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳಲು ನಮ್ಮಲ್ಲಿ ಅಗತ್ಯದಷ್ಟು ಜಲಾಶಯಗಳಿಲ್ಲ. ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಹೆಚ್ಚು ಮಳೆಯ ಸಂದರ್ಭಗಳಲ್ಲಿ ಸಂಗ್ರಹಿಸಿಕೊಂಡು ಉಪಯೋಗಿಸಿಕೊಳ್ಳಬಹುದು. ಆದರೆ ಇದಕ್ಕೆ ಕೇಂದ್ರ ಜಲ ಆಯೋಗದ ಪ್ರಕಾರ ಅವಕಾಶ ಇದ್ದಂತಿಲ್ಲ ಅಥವಾ ಅನುಮೋದನೆ ನೀಡಲು ರಾಜಕೀಯ ಕಾರಣಗಳಿರಬಹುದು.
ಕಾವೇರಿ ನದಿಯ ಪಾತ್ರದಲ್ಲಿ ಜೋರು ಮಳೆ ಆಗುವಾಗ ಹಳ್ಳಕೊಳ್ಳ, ನದಿಗಳು ತುಂಬಿಹರಿಯುವುದು. ಹೀಗೆ ಹೆಚ್ಚುವರಿ ಹರಿಯುವ ನೀರು ನಮಗೆ ಉಪಯೋಗವಾಗದೆ ತಮಿಳುನಾಡು ಕಡೆಗೆ ಹರಿಯುವುದು, ಅಲ್ಲಿಯೂ ಹೆಚ್ಚಾದರೆ ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ. ಒಮ್ಮೆ ಹರಿದುಹೋದ ನೀರನ್ನು ಮತ್ತು ಆಡಿದ ಮಾತನ್ನು ವಾಪಸ್ ಪಡೆಯಲಾಗದು. ಎರಡೂ ಸಂದರ್ಭಗಳಲ್ಲಿ ಎಚ್ಚರ ವಹಿಸಿದರೆ ಭವಿಷ್ಯದ ಬದುಕಿನಲ್ಲಿ ಸಮಸ್ಯೆ ಉದ್ಬವಿಸುವು ದಿಲ್ಲ.
ವಿಜ್ಞಾನ ಹೇಳುವ ಪ್ರಕಾರ ನೀರು ಮತ್ತು ಶಕ್ತಿಯನ್ನು ಉತ್ಪಾದಿಸಲಾಗದು; ಅವು ಒಂದು ರೂಪ ಅಥವಾ ಸ್ಥಿತಿಯಿಂದ ಮತ್ತೊಂದು ರೂಪಕ್ಕೆ ಬದಲಾಗು ವುದಷ್ಟೇ. ನೀರು ಮಳೆಯ ಮೂಲಕ ಭೂಮಿ ಸೇರುವುದು, ನಂತರ ಒಂದಷ್ಟು ಪ್ರಮಾಣ ಅಂತರ್ಜಲದ ಮೂಲಕ ಭೂಮಿಯ ಒಡಲು ಸೇರುವುದು. ಉಳಿದಿದ್ದರಲ್ಲಿ ಜೀವಸಂಕುಲಗಳ ನಿತ್ಯದ ಬಳಕೆಗೆ, ನದಿಗಳ ಮುಖಾಂತರ ಸಮುದ್ರಕ್ಕೆ ಮತ್ತು ಹೆಚ್ಚಿನ ಭಾಗ ಆವಿಯಾಗಿ ಮೋಡಗಳ ರೂಪಕ್ಕೆ ಬದಲಾಗು
ವುದು. ಕಡೆಗೆ ಎಲ್ಲವೂ ಆವಿಯಾಗಿ ವಾತಾವರಣಕ್ಕೆ ಸೇರಿ ಮೋಡಗಳಾಗುವುದು, ಮೋಡ ಮಳೆಯಾಗಿ ಮತ್ತೆ ಭೂಮಿಗೆ ಬರುವುದು. ಈ ಜಲಚಕ್ರದ ಸ್ವಾಭಾವಿಕ ಆಟದಲ್ಲಿ ನೀರು ಮಳೆಯ ರೂಪದಲ್ಲಿ ಭೂಮಿಗೆ ಬಿದ್ದಾಗ ಸಿಗುವ ನೀರನ್ನು ಸಾಧ್ಯವಿರುವಷ್ಟು ಪ್ರಮಾಣದಲ್ಲಿ ಸದು ಪಯೋಗಪಡಿಸಿಕೊಳ್ಳ ಬೇಕಿದೆ.
ತಂತ್ರಜ್ಞಾನದ ಅಳವಡಿಕೆಯ ಮೂಲಕ ಲಭ್ಯವಿರುವ ನೀರಿನಲ್ಲೇ ಅತಿಹೆಚ್ಚು ಉಪಯೋಗ ಮಾಡಿಕೊಂಡು ಕೊರತೆ ಆಗದಂತೆ ನಿರ್ವಹಿಸಲು ಸಾಧ್ಯವಿದೆ. ನೀರಿನ ಉಪಯೋಗವು ಜನಸಂಖ್ಯೆ ಏರಿದಂತೆಲ್ಲ ಹೆಚ್ಚುತ್ತಲೇ ಇದೆ, ಆದರೆ ನೀರಿನ ಪರಿಮಾಣ ಭೂಮಂಡಲದಲ್ಲಿ ಅಷ್ಟೇ ಇದೆ(ಅಂದಾಜು ೩೨೬ ಮಿಲಿಯನ್ ಕ್ಯೂಬಿಕ್ ಮೈಲುಗಳು). ಇದರಲ್ಲಿ ಏರಿಕೆ ಆಗುವ ಸಾಧ್ಯತೆ ಇಲ್ಲವೇ ಇಲ್ಲ. ಪ್ರಸ್ತುತ ವಿಶ್ವದ ಜನಸಂಖ್ಯೆ ೮೦೭ ಕೋಟಿಯಿದ್ದು, ೨೦೫೦ರ ವೇಳೆಗೆ ೯೮೦ ಕೋಟಿಗೆ ಮುಟ್ಟುವುದೆಂದು ಅಂದಾಜಿಸಲಾಗಿದೆ. ಸಿಗಬಹುದಾದ ಆಹಾರ ಮತ್ತು ನೀರು ಇವನ್ನು ಪರಿಗಣಿಸಿ ಭೂಮಿಗೆ ತಡೆಯವ ಶಕ್ತಿ ಇರುವುದು ೧,೦೦೦ ಕೋಟಿಗೆ ಮಾತ್ರವೆಂದು ತಜ್ಞರು ಹೇಳುತ್ತಿದ್ದಾರೆ.
೨೦೬೦ರ ಹೊತ್ತಿಗೆ ಈ ಸಂಖ್ಯೆಯನ್ನು ತಲುಪುವುದರಲ್ಲಿ ಅನುಮಾನವಿಲ್ಲ. ಕೇವಲ ಮುಂದಿನ ೪೦ ವರ್ಷಗಳಲ್ಲಿ ಮನುಷ್ಯರಷ್ಟೇ ಅಲ್ಲ ಭೂಮಿಯ ಬದುಕಿನ ಚಿತ್ರಣವೇ ಬದಲಾಗುವುದು. ಬದಲಾವಣೆ ಸ್ವಾಭಾವಿಕ, ಭೂಮಿ ಕ್ಷಣ ಕ್ಷಣವೂ ಬದಲಾವಣೆ ಕಾಣುತ್ತಲೇ ಇರುತ್ತದೆ. ಕುಡಿಯುವ ನೀರು ಮತ್ತು ಆಹಾರಕ್ಕೆ ಕೊರತೆ ಆಗದಂತೆ, ಆಯಾ ವರ್ಷ ಆಗುವ ಮಳೆಯಲ್ಲಿ ದೊರೆಯುವ ನೀರನ್ನು ಆಶ್ರಯಿಸಿ ಜಾಣ್ಮೆಯಿಂದ ನಿರ್ವಹಿಸಬೇಕಿದೆ. ಇಲ್ಲದಿದ್ದರೆ ಎಲ್ಲಾ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ವಾಗುವುದು. ನೀರಿಲ್ಲದೆ ಜೀವಿಗಳಿಗೆ ಉಳಿಗಾಲವಿಲ್ಲ. ದೈವದತ್ತವಾಗಿ ದೊರೆಯುವ ನೀರಿನ ಪ್ರಮಾಣದಲ್ಲೇ, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು ಬದುಕನ್ನು ನಿರ್ವಹಿಸಲೇಬೇಕಿದೆ.
ಗಾಜಾಪಟ್ಟಿಯಲ್ಲಿರುವ ಹಮಾಸ್ ಉಗ್ರರ ನಿರ್ನಾಮಕ್ಕೆ ಇಸ್ರೇಲ್ ಹೊರಟಿರುವ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಇದೇ ಇಸ್ರೇಲ್, ನೀರಿನ ಸದ್ಬಳಕೆಗಾಗಿ ತೆಗೆದುಕೊಂಡಿರುವ ಗಟ್ಟಿ ನಿರ್ಧಾರಗಳು ಯುದ್ಧದಿಂದಾಗಿ ನಗಣ್ಯವಾಗುತ್ತಿದೆ. ಇಸ್ರೇಲ್ ಕೇವಲ ೯೧.೭೫ ಲಕ್ಷ ಜನಸಂಖ್ಯೆಯ ಪುಟ್ಟದೇಶ, ಭೂವಿಸ್ತೀರ್ಣ ಕೇವಲ ೮,೩೫೫ ಚ.ಮೈಲು (ಮೈಸೂರು ಜಿಲ್ಲೆಯ ವಿಸ್ತೀರ್ಣಕ್ಕಿಂತ ೩ ಪಟ್ಟು ದೊಡ್ಡದು). ೨೦೫೦ನೇ ವರ್ಷಕ್ಕೆ ಆ ದೇಶದ ಜನಸಂಖ್ಯೆ ೧೭೫ ಲಕ್ಷಗಳಾಗಬಹುದೆಂದು ಅಂದಾಜಿಸಲಾಗಿದೆ. ಒಂದು ಚ.ಕಿ.ಮೀ.ಗೆ ೪೨೯ ಜನರು ಇದ್ದಾರೆ. ಭಾರತದ ಈಗಿನ ಜನಸಂಖ್ಯೆ ೧೪೨.೮೬ ಕೋಟಿ. ಜನಸಾಂದ್ರತೆಯಲ್ಲಿ ಪ್ರತಿ ಚ.ಕಿ.ಮೀ.ಗೆ ೪೮೧ ಜನರು ಇರುವರು. ಅಲ್ಲಿನ ಭೂಮಿ ಫಲವತ್ತಾಗಿಲ್ಲ.
ಇರುವುದರಲ್ಲಿ ಶೇ.೬೦ ಭಾಗ ಮರುಭೂಮಿ, ಉಳಿದಿದ್ದು ಒಣಭೂಮಿ. ಆದರೆ ಲಭ್ಯವಿರುವ ನೀರಲ್ಲಿ ಅತಿಹೆಚ್ಚು ಇಳುವರಿ ತೆಗೆಯುವ ದೇಶವಿದು.
ಒಂದು ತೊಟ್ಟು ನೀರೂ ವ್ಯರ್ಥವಾಗದಂತೆ ಎಚ್ಚರ ವಹಿಸುವ ಇಸ್ರೇಲಿಗರು, ಕೊಳಚೆ ನೀರನ್ನೂ ವ್ಯರ್ಥ ಮಾಡದೆ ಶೋಧಿಸಿ ಮರುಬಳಸುತ್ತಾರೆ.
ಇಸ್ರೇಲ್‌ನ ಸಿಮ್ಚಾ ಬ್ಲಾಸ್ ಎಂಬ ಎಂಜಿನಿಯರ್ ತನ್ನ ಮಗ ಯೆಶಾಯಹು ಜತೆಗೂಡಿ ಡ್ರಿಪ್ ಇರಿಗೇಷನ್‌ನಲ್ಲಿ ಪ್ಲಾಸ್ಟಿಕ್ ಎಮಿಟರ್ ಅಳವಡಿಸಿ ಅಭಿವೃದ್ಧಿ ಗೊಳಿಸಿದ ಫಲವಾಗಿ ಇಸ್ರೇಲ್ ಕಡಿಮೆ ನೀರು ಬಳಸಿ ಹೆಚ್ಚು ಉತ್ಪಾದಿಸುವ ದೇಶವಾಗಿದೆ. ಇದಕ್ಕೂ ಮೊದಲು ಚೀನಾ ಮತ್ತು ಜರ್ಮನಿಯಲ್ಲಿ ಡ್ರಿಪ್ ಇರಿಗೇಷನ್ ಬಳಸುತ್ತಿದ್ದರಂತೆ. ಈ ವಿಧಾನದಿಂದ ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯ ಜತೆಗೆ ಇಳುವರಿಯನ್ನೂ ಪಡೆಯಬಹುದಾಗಿದೆ.
ಭಾರತವೂ ಮೈಕ್ರೋ ಇರಿಗೇಷನ್ ಅಳವಡಿಸಿಕೊಂಡು ವ್ಯವಸಾಯ ಮಾಡುವ ನಿಟ್ಟಿನಲ್ಲಿ ಇಸ್ರೇಲ್ ದೇಶದೊಂದಿಗೆ ಕೈಜೋಡಿಸಿದೆ. ಕರ್ನಾಟಕದ ಭದ್ರಾ ಮೇಲ್ದಂಡೆ ಮತ್ತು ಮಳವಳ್ಳಿಯ ಪೂರಿಗಾಲಿ ಏತ ಯೋಜನೆಗಳಲ್ಲಿ ಮೈಕ್ರೋ ಇರಿಗೇಷನ್ ಪದ್ದತಿಯನ್ನು ಅಳವಡಿಸಿಕೊಂಡು ಯೋಜನೆ ರೂಪಿಸಿದ್ದು,
ಕೆಲಸಗಳು ಪ್ರಗತಿಯಲ್ಲಿವೆ. ‘ಛಿoಟ್ಠ್ಟ್ಚಛಿo ಠಿಟ ಟಟಠಿ Zb Iಟ್ಟಛಿ ಟm mಛ್ಟಿ bಟm’ ಎಂಬುದು ಈ ಯೋಜನೆಗಳ ಕಾನ್ಸೆಪ್ಟ್. ಅಂದರೆ, ಜಲಸಂಪನ್ಮೂಲ
ವ್ಯರ್ಥವಾಗದಂತೆ ನೇರವಾಗಿ ಬೇರಿಗೆ ನೀರುಣಿಸುವುದು ಮತ್ತು ಹನಿ ನೀರೂ ವ್ಯರ್ಥವಾಗದಂತೆ ಉಪಯೋಗಿಸಿಕೊಂಡು ಹೆಚ್ಚು ಬೆಳೆ ತೆಗೆಯುವುದು. ಕಾಲುವೆ, ಹೊಲ ಗಾಲುವೆ ಮುಖಾಂತರ ಜಮೀನುಗಳಿಗೆ ನೀರನ್ನು ತುಂಬಿ ವ್ಯವಸಾಯ ಮಾಡುವುದರಿಂದ ಹೆಚ್ಚು ನೀರು ಬೇಕಾಗುತ್ತದೆ.
ಇದರಿಂದ ನೀರಿನ ಪೋಲು ಹೆಚ್ಚಾಗುತ್ತದೆ. ಇಳುವರಿಯೂ ಕಡಿಮೆಯಾಗುವುದಲ್ಲದೆ ಮಣ್ಣು ಫಲವತ್ತತೆಯನ್ನು ಬೇಗ ಕಳೆದುಕೊಳ್ಳುತ್ತದೆ. ಕಾಲುವೆಗೆ ಹರಿಸುತ್ತಿದ್ದ ನೀರಿನಲ್ಲಿ ಹೆಚ್ಚು ಪ್ರಮಾಣವು ಜಮೀನುಗಳು ತುಂಬಿದ ನಂತರ ವ್ಯರ್ಥವಾಗಿ ಹಳ್ಳಗಳ ಮೂಲಕ ಮತ್ತೆ ನದಿಯನ್ನು ಸೇರುತ್ತಿತ್ತು. ನೀರಿನ ಮೇಲ್ಮೈ ವಾತಾವರಣಕ್ಕೆ ತೆರೆದಿರುವುದರಿಂದ ಆವಿಯ ಪ್ರಮಾಣ ಹೆಚ್ಚು ಮತ್ತು ಹರಿಯುವ ನಾಲೆಯಲ್ಲಿ ಸೀಪೇಜ್ ಲಾಸ್ ಕೂಡ ಆಗುವುದು. ನಮ್ಮ ದೇಶದಲ್ಲಿ ತೆರೆದ ಕಾಲುವೆಗಳ ಮೂಲಕ ಹರಿಸಿ -ಡ್ ಇರಿಗೇಷನ್ ಪದ್ಧತಿಯನ್ನೇ ಅನುಸರಿಸುತ್ತಿರುವುದು. ನೀರಿನ ಅಪವ್ಯಯ ತಡೆಯಲು ಈಗ
ನಾವು ಸಹ ಇಸ್ರೇಲ್ ಮಾದರಿಯ ವ್ಯವಸಾಯಕ್ಕೆ ಮುಖ ಮಾಡಿದ್ದೇವೆ.
ಇರುವ ಎಲ್ಲಾ ನೀರಾವರಿ ಯೋಜನೆಗಳಲ್ಲಿ ಇದೇ ಪದ್ಧತಿಯನ್ನು ಅಳವಡಿಸಿಕೊಂಡರೆ ಬರಗಾಲದಲ್ಲೂ ನೀರಿನ ಕೊರತೆ ಉಂಟಾಗುವುದಿಲ್ಲ.
ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ೨,೨೫,೫೧೫ ಹೆಕ್ಟೇರ್(೫,೫೭,೦೨೨ ಎಕರೆಗಳು) ಪ್ರದೇಶಕ್ಕೆ ೧೯.೦೪ ಟಿಎಂಸಿ ನೀರನ್ನು ಮೈಕ್ರೋ ಇರಿಗೇಷನ್ ಪದ್ಧತಿಯಲ್ಲಿ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಬರಪ್ರದೇಶಗಳಿಗೆ ನೀರುಣಿಸುವ ೧೨,೩೪೦ ಕೋಟಿ ರು. ಮೊತ್ತದ ಯೋಜನೆ ಇದಾಗಿದ್ದು ಸದ್ಯ ಪ್ರಗತಿಯಲ್ಲಿದೆ.
ನಮ್ಮಲ್ಲಿ ಇದೇ ಮೊದಲಬಾರಿಗೆ ಮೈಕ್ರೋ ಇರಿಗೇಷನ್ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಹೆಚ್ಚು ಪ್ರದೇಶವನ್ನು ನೀರಾವರಿಗೆ
ಒಳಪಡಿಸಲಾಗುತ್ತಿದೆ. ಪೂರಿಗಾಲಿ ಏತಯೋಜನೆ ೫೬೯ ಕೋಟಿ ರು. ಮೊತ್ತದ್ದಾಗಿದ್ದು, ೧.೯೭ ಟಿಎಂಸಿ ನೀರಿನಲ್ಲಿ ೨೫,೩೧೭ ಎಕರೆ ವಿಸ್ತೀರ್ಣದ ಅಚ್ಚುಕಟ್ಟಿನಲ್ಲಿ ಖಾರಿ- ಮತ್ತು ಬೇಸಗೆಯ ೨ ಬೆಳೆ ಬೆಳೆಯುವುದಕ್ಕೆ ಯೋಜಿಸಿದ್ದು ದೇಶದಲ್ಲೇ ಇದು ಪ್ರಥಮವೆನಿಸಿದೆ. ನಮ್ಮಲ್ಲಿ ನೀರಾವರಿ ತಜ್ಞರಿದ್ದಾರೆ, ಮೇಧಾವಿ ಎಂಜಿನಿಯರ್‌ಗಳಿದ್ದಾರೆ. ನೀರಿಗೆ ಕೊರತೆಯಾದರೂ (ಇಸ್ರೇಲ್ ದೇಶದಷ್ಟು ಕೊರತೆ ಎಂದೂ ಇಲ್ಲ) ದೇಶದಲ್ಲಿ ಬುದ್ಧಿವಂತರಿಗೆ ಕೊರತೆ ಇಲ್ಲ. ಇವರ ಜ್ಞಾನವನ್ನು ಭಾರತ ಯಶಸ್ವಿಯಾಗಿ ಉಪಯೋಗಿಸಿಕೊಂಡಲ್ಲಿ, ಇಸ್ರೇಲ್ ದೇಶವನ್ನು ಹಿಂದಿಕ್ಕಿ ಕಡಿಮೆ ನೀರಿನಲ್ಲಿ ಅತಿಹೆಚ್ಚು ಇಳುವರಿ ತೆಗೆಯುವ ದೇಶವಾಗಬಹುದು ಮತ್ತು ಮಳೆ ಕಡಿಮೆ ಇದ್ದಾಗಲೂ ಬರದಿಂದ ಮುಕ್ತಿ ಪಡೆದು ನೀರಿನ ಹಾಹಾಕಾರವನ್ನು ಯಶಸ್ವಿಯಾಗಿ ನೀಗಿಸಬಹುದು.
(ಲೇಖಕರು ನಿವೃತ್ತ ಸಹಾಯಕ
ಕಾರ್ಯಪಾಲಕ ಇಂಜಿನಿಯರ್)