Friday, 22nd November 2024

ಮಾರ್ಚ್ 17ಕ್ಕೆ ರಾಜಕೀಯ ನಿವೃತ್ತಿ ಘೋಷಿಸುವೆ: ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು: ಮಾರ್ಚ್ 17ಕ್ಕೆ ಚುನಾವಣಾ ರಾಜಕಾರಣಕ್ಕೆ ಬಂದು 50 ವರ್ಷ, ಅದೇ ದಿನ ಬೃಹತ್ ಕಾರ್ಯಕ್ರಮ ಮಾಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ನಾನು ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವುದಿಲ್ಲ. ಯಾವ ಪಕ್ಷಕ್ಕೂ ಸಲಹೆ ಸೂಚನೆಗಳನ್ನು ನೀಡುವುದಿಲ್ಲ. ಎಲ್ಲ ರಾಜಕೀಯ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿಯುವೆ. ಮಾರ್ಚ್ 17ಕ್ಕೆ ಚುನಾವಣೆ ರಾಜಕೀಯಕ್ಕೆ ಬಂದು 50 ವರ್ಷ. ಅದೇ ದಿನ ಬೃಹತ್ ಕಾರ್ಯಕ್ರಮ ಮಾಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡುವೆ ಎಂದರು.

ಬಿಜೆಪಿ ಹೈಕಮಾಂಡ್ ಕೊನೆಗೂ ಗಜ ಪ್ರಸವ ಮಾಡಿದೆ. ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಿ, ಗಜಮೋಕ್ಷ ಮಾಡಲಿ ಎಂದು ಹಾಸ್ಯಭರಿತವಾಗಿ ಮಾತ ನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ವಿಜಯೇಂದ್ರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿರುಸಿ ನಿಂದ ಓಡಾಡುತ್ತಿವೆ. ಅದನ್ನು ತಡೆದು ಪಕ್ಷ ಸಂಘಟನೆ ಮಾಡಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ರಾಜಕಾರಣ ಮಾಡುತ್ತಾರೆ. ಎಲ್ಲರೂ ಒಳ್ಳೆಯ ರಾಜಕಾರಣ ಮಾಡಲಿ. ಲೋಕಸಭಾ ಚುನಾವಣೆಗೆ ವಿಜಯೇಂದ್ರ ಆಯ್ಕೆ ಅನುಕೂಲ ಆಗುತ್ತದೆ ಎಂದು ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇತ್ತೀಚೆಗಷ್ಟೇ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ತಾವು ಚುನಾವಣಾ ರಾಜಕೀಯದಿಂದ ದೂರ ಉಳಿಯಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದರು. ಇವರ ಬಳಿಕ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕೂಡ ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.