ವಿದೇಶವಾಸಿ
dhyapaa@gmail.com
ಹಿಂದೊಮ್ಮೆ ಟಾಟಾರನ್ನು ಬರಿಗೈಯಲ್ಲಿ ವಾಪಸ್ ಕಳಿಸಿದ್ದ ಫೋರ್ಡ್ ಸಂಸ್ಥೆ ತಾನು ಹಿಂದೆ ಸುಮಾರು ೫ ಬಿಲಿಯನ್ ಡಾಲರ್‌ಗೆ ಖರೀದಿ ಸಿದ್ದ ಘಟಕವನ್ನು ಅರ್ಧ ಬೆಲೆಗೆ ಟಾಟಾರಿಗೆ ಮಾರಾಟ ಮಾಡಿತು. ‘ಗೊತ್ತಿಲ್ಲದ ವ್ಯವಹಾರಕ್ಕೆ ಕೈಹಾಕಬಾರದು’ ಎಂದಿದ್ದವರು ‘ನಷ್ಟದಲ್ಲಿದ್ದ ನಮ್ಮ ಘಟಕವನ್ನು ಖರೀದಿಸಿ ಉಪಕರಿಸಿದಿರಿ’ ಎಂದಿದ್ದರು!
೧೯೯೮ ನೇ ಇಸವಿಯ ಕೊನೆಯ ಕೆಲವು ದಿನಗಳು ಬಾಕಿ ಇದ್ದವು. ಭಾರತದಲ್ಲೇ ವಿನ್ಯಾಸಗೊಂಡು, ಭಾರತದಲ್ಲೇ ತಯಾರಾದ ಮೊದಲ ದೇಶೀಯ ‘ಇಂಡಿಕಾ’ ಕಾರನ್ನು ಟಾಟಾ ಸಂಸ್ಥೆಯ ಅಂಗಸಂಸ್ಥೆಯಾದ ಟಾಟಾ ಮೋಟರ್ಸ್ ರಸ್ತೆಗೆ ಇಳಿಸಿತ್ತು. ಅದುವರೆಗೂ ಸಾಕಷ್ಟು ರಸ್ತೆಯಲ್ಲಿ ಧೂಳು ಹಾರಿ ಸಿದ್ದ ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿ (ಫಿಯಟ್) ಕಾರುಗಳು ಹಿಂತಿರುಗಿ ಬರಲಾಗದ ಗೂಡು ಸೇರಿಕೊಳ್ಳುತ್ತಿದ್ದವು. ಅವುಗಳ ಸ್ಥಾನವನ್ನು ‘ಮಾರುತಿ ಸುಝುಕಿ’ ಕಾರುಗಳು ಆಕ್ರಮಿಸಿಕೊಂಡಿದ್ದವು.
ಆ ಲೆಕ್ಕದಲ್ಲಿ ಹೇಳುವುದಾದರೆ ಮಾರುತಿ ಸುಝುಕಿ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಆರಂಭಿಸಿದ ೧೮ ವರ್ಷದ ನಂತರ ಟಾಟಾ ಸಂಸ್ಥೆ ಸಾರ್ವಜನಿಕರ ಪ್ರಯಾಣಕ್ಕೆ ಯೋಗ್ಯವಾದ, ಜನರ ಕೈಗೆಟುವ (ಆರ್ಥಿಕವಾಗಿ) ಕಾರು ತಯಾರಿಸಲು ಮುಂದಾಗಿತ್ತು. ಸಂಪೂರ್ಣ ಭಾರತೀಯ ಕಾರು ಎಂದು ಹಣೆಪಟ್ಟಿ ಹೊತ್ತು ರಸ್ತೆಗಿಳಿಯುವ ಕಾರು ಹೇಗಿರಬಹುದೆಂಬ ಕೌತುಕ ಎಲ್ಲರಲ್ಲಿಯೂ ಇತ್ತು. ಟಾಟಾ ಸಂಸ್ಥೆಯ, ಟಾಟಾ ಮೋಟರ್ಸ್ ವಿಭಾಗದ ಎಂಜಿನಿಯರ್‌ಗಳೇ
ವಿನ್ಯಾಸಗೊಳಿಸಿದ ಕಾರು ಹೇಗಿರಬಹುದೆಂಬ ಕುತೂಹಲ ಒಂದು ಕಡೆಯಾದರೆ, ಇನ್ನೊಂದು ಕಡೆಗೆ ಮಾರುತಿ ಕಾರಿನೊಂದಿಗೆ ಸೆಣಸಿ ಟಾಟಾ ಗೆಲ್ಲಬಹು ದೇ ಎಂಬ ಅನುಮಾನವೂ ಇತ್ತು.
ಟ್ಯಾಕ್ಸಿ ಅಥವಾ ಬಾಡಿಗೆಗೆ ಕಾರು ನಡೆಸುವವರು ಇಂಡಿಕಾ ಡೀಸೆಲ್ ಎಂಜಿನ್ ಕಾರು ಕೊಳ್ಳಲು ಆರಂಭಿಸಿದ ಪರಿಣಾಮವಾಗಿ ಮಹಾನಗರಗಳಲ್ಲಿ ಕಪ್ಪು ಬಣ್ಣದ ಫಿಯಟ್ ಕಾರಿನ ಸ್ಥಾನದಲ್ಲಿ ನೀಲಿ ಬಣ್ಣದ ಇಂಡಿಕಾ ಕಾರುಗಳು ರಾರಾಜಿಸಲು ಆರಂಭವಾಯಿತು. ಆರಂಭಗೊಂಡ ೧೦ ವರ್ಷ ಆಗುವಷ್ಟರಲ್ಲಿ ಸಂಸ್ಥೆ ಸುಮಾರು ೧೪ ಲಕ್ಷ ಕಾರು ಉತ್ಪಾದಿಸಿತ್ತು. ಅಷ್ಟೇ ಅಲ್ಲ, ೨೦೦೪ರ ಹೊತ್ತಿಗೆ ಇಂಡಿಕಾ ಕಾರುಗಳು ಯುನೈಟೆಡ್ ಕಿಂಗ್‌ಡಮ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ರಫ್ತಾಗುತ್ತಿದ್ದವು. ಭಾರತದ ರಸ್ತೆಗಿಳಿದ ೬ ವರ್ಷದಲ್ಲೇ ವಿದೇಶದ ರಸ್ತೆಗಳಲ್ಲೂ ಇಂಡಿಕಾ ಓಡಾಡುತ್ತದೆ ಎಂದು ಆ ಕಾಲದಲ್ಲಿ ಯಾರೂ ಅಂದುಕೊಂಡಿರಲಿಕ್ಕಿಲ್ಲ.
ಮುಂದುವರಿಯುವುದಕ್ಕಿಂತ ಮೊದಲು, ‘ಟಾಟಾ ಗಾಥೆ’ಯನ್ನು ಒಮ್ಮೆ ಮೆಲುಕು ಹಾಕಬೇಕು. ಟಾಟಾ ಸಂಸ್ಥೆಯ ಪಿತಾಮಹ ಜಮ್ಷೆಡ್‌ಜಿ ಟಾಟಾ. ಅವರನ್ನು ‘ಫಾದರ್ ಆಫ್ ಇಂಡಿಯನ್ ಇಂಡಸ್ಟ್ರಿ’ ಎಂದೂ ಕರೆಯುವುದಿದೆ. ೧೮೬೮ರಲ್ಲಿ, ಅಂದರೆ ತಮ್ಮ ೨೯ನೆಯ ವರ್ಷಕ್ಕೇ ಜವಳಿ ಕಾರ್ಖಾನೆ ಖರೀದಿಸಿ ಉದ್ದಿಮೆ ಆರಂಭಿಸಿದವರು ಜಮ್ಷೆಡ್‌ಜಿ. ತಮ್ಮ ೬೫ನೆಯ ವರ್ಷದಲ್ಲಿ ಇಹಲೋಕ ತ್ಯಜಿಸುವುದಕ್ಕಿಂತ ಒಂದು ವರ್ಷ ಮೊದಲು, ಮುಂಬೈನಲ್ಲಿ ‘ತಾಜ್ ಮಹಲ್’ ಹೋಟೆಲ್ ಆರಂಭಿಸಿದ್ದೂ ಇವರೇ. ಅವರ ಮಗ ದೊರಬ್ ಟಾಟಾ, ಮೊಮ್ಮಗ ನವಲ್ ಟಾಟಾ. ರತನ್ ಟಾಟಾ, ಜಮ್ಷೆಡ್‌ಜಿಯವರ ಮರಿಮೊಮ್ಮಗ. ಜಮ್ಷೆಡ್‌ಜಿ ಅವರ ಸಾಹಸಗಾಥೆ ಕಮ್ಮಿಯೇನಲ್ಲ, ಅವರ ಕುರಿತು ಈಗಾಗಲೇ ಸಾಕಷ್ಟು ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ. ಡಾಕ್ಯು
ಮೆಂಟರಿ, ಕಿರುಚಿತ್ರಗಳು ಕೂಡ ಬಂದಿವೆ. ರತನ್ ಟಾಟಾ ಅವರ ಅಪ್ಪ, ಅಜ್ಜ ಕೂಡ ಅತ್ಯುತ್ತಮ ಉದ್ಯಮಿಗಳಾಗಿದ್ದರು ಎನ್ನುವುದರಲ್ಲಿ ಎರಡು
ಮಾತಿಲ್ಲ. ಇವರಲ್ಲಿ ಯಾರಾದರೂ ಒಬ್ಬರು ಜೊಳ್ಳಾಗಿದ್ದರೂ ಈ ಕೊಂಡಿ ಕಳಚಿ ಹೋಗುತ್ತಿತ್ತು,
ಟಾಟಾ ಸಂಸ್ಥೆ ಈಗ ಇರುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ ಅಥವಾ ತಲುಪುತ್ತಲೂ ಇರಲಿಲ್ಲ. ಇಂದಿನ ವಿಷಯ ‘ಟಾಟಾ ಮೋಟರ್ಸ್’ ಮತ್ತು ರತನ್
ಟಾಟಾ ಅವರ ಕುರಿತು ಇರುವುದರಿಂದ ಜಮ್ಷೆಡ್ ಜಿಯವರ ಬಗ್ಗೆ ಇಲ್ಲಿ ಹೆಚ್ಚು ವಿವರಣೆ ಬೇಡ. ರತನ್ ಟಾಟಾ ಅವರಿಗೆ ಉದ್ದಿಮೆ, ವ್ಯಾಪಾರ ರಕ್ತಗತ ವಾಗಿ ಬಂದಿತ್ತು ಎನ್ನುವುದಕ್ಕಾಗಿ ಮಾತ್ರ ಈ ಉಲ್ಲೇಖ. ಟಾಟಾ ಮೋಟರ್ಸ್ ಸ್ಥಾಪನೆಯಾದದ್ದು ೧೯೪೫ ರಲ್ಲಿ. ಆರಂಭದ ದಿನಗಳಲ್ಲಿ ಸಂಸ್ಥೆ ಲೋಕೋ ಮೋಟಿವ್ ರೈಲು ಇಂಜಿನ್ ಮಾತ್ರ ತಯಾರಿಸುತ್ತಿತ್ತೇ ವಿನಾ ಸಾರ್ವಜನಿಕರ ಪ್ರಯಾಣಕ್ಕೆಂದು ಯಾವುದೇ ವಾಹನ ತಯಾರಿಸುತ್ತಿರಲಿಲ್ಲ. ಇದಾಗಿ ಸುಮಾರು ಒಂದು ವರ್ಷದ ನಂತರ ಜರ್ಮನಿಯ ಹೆಸರಾಂತ ವಾಹನ ತಯಾರಕ ಸಂಸ್ಥೆ ‘ಡೈಲ್ಮರ್ -ಬೆಂಝ್’ನೊಂದಿಗೆ ಸೇರಿ ಸರಕು ಸಾಗಿಸುವ ಟ್ರಕ್ ಮತ್ತು ಸಾರ್ವಜನಿಕರು ಪ್ರಯಾಣ ಮಾಡುವ ಬಸ್ ತಯಾರಿಸಲು ಆರಂಭಿಸಿದ್ದಷ್ಟೇ ಅಲ್ಲ, ಕೆಲವು ದಶಕಗಳ ಕಾಲ ಭಾರತದ ವಾಣಿಜ್ಯ ವಾಹನ
ಮಾರುಕಟ್ಟೆಯಲ್ಲಿ ಆಧಿಕ್ಯವನ್ನೂ ಸಾಧಿಸಿತು.
೧೯೯೧ರ ವೇಳೆಗೆ ಟಾಟಾ ಮೋಟರ್ಸ್ ‘ಸಿಯೆರಾ’, ಅದಾಗಿ ೩ ವರ್ಷದ ನಂತರ, ಐದು ಬಾಗಿಲಿನ ಎಸ್‌ಯುವಿ ‘ಸುಮೊ’ ಮತ್ತು ೧೯೯೮ರ ಆರಂಭದಲ್ಲಿ ‘ಸಫಾರಿ’ ಯನ್ನು ಮಾರುಕಟ್ಟೆಗೆ ಬಿಟ್ಟಿತು. ಇದೆಲ್ಲದರ ನಡುವೆ ರತನ್ ಟಾಟಾ ಅವರಿಗೆ ಇಂಡಿಕಾ ಮೇಲೆ ಒಂದು ಚಿಟಿಕೆ ಪ್ರೀತಿ ಹೆಚ್ಚೇ ಇತ್ತು. ಕಡಿಮೆ ಬೆಲೆಯ, ಡೀಜಲ್ ಯಂತ್ರದ ಒಂದು ಕಾರು ಭಾರತದ ಮಾರುಕಟ್ಟೆಗೆ ಬರುತ್ತಿದೆ ಎನ್ನುವುದೇ ಜನರಿಗೆ ರೋಮಾಂಚನ ಕಾರಿಯಾಗಿತ್ತು. ಮೊದಲ ವರ್ಷವೇ ಒಂದು ಲಕ್ಷಕ್ಕೂ ಹೆಚ್ಚು ಜನ ಇಂಡಿಕಾ ಕಾರು ಕೊಳ್ಳಲು ತಯಾರಾಗಿ ನಿಂತಿದ್ದರು.
ಆದರೆ ಯಾಕೋ ಏನೋ, ‘ಇಂಡಿಕಾ’ ರತನ್ ಟಾಟಾ ಅವರು ನಿರೀಕ್ಷಿಸಿದ್ದ ಯಶಸ್ಸನ್ನು ಕೊಡಲಿಲ್ಲ. ಕೆಲವು ಕಾರಣಗಳಿಂದಾಗಿ ಇಂಡಿಕಾ ಉತ್ಪಾದನೆ ಯಲ್ಲಿ ಹಿಂದೆ ಬಿದ್ದಿತ್ತು. ನಿರೀಕ್ಷಿಸಿದಷ್ಟು ಲಾಭಗಳಿಸದೇ, ನಷ್ಟ ಅನುಭವಿಸುತ್ತಿತ್ತು. ಅವರ ಸಂಸ್ಥೆಯಲ್ಲಿ ಕೆಲವರು, ನಷ್ಟದಲ್ಲಿರುವ ಕಾರು ತಯಾರಿಕಾ ಘಟಕವನ್ನು ಮಾರುವಂತೆ ಸೂಚಿಸಿದರು. ರತನ್ ಟಾಟಾ ಅವರಿಗೂ ಆ ಕ್ಷಣಕ್ಕೆ ಅದು ಹೌದೆನಿಸಿತು. ಇನ್ನೊಂದು ಹೆಸರಾಂತ ಕಾರು ತಯಾರಿಸುವ ಸಂಸ್ಥೆಯಾದ ‘ಫೋರ್ಡ್ ಮೋಟರ್ಸ್’ ಜತೆ ಮಾತುಕತೆ ಮಾಡಲು ಅವರು ಅಮೆರಿಕದ ಡೆಟ್ರಾಯ್ಟ್ ನಗರಕ್ಕೆ ತೆರಳಿದರು.
ಫೋರ್ಡ್ ಸಂಸ್ಥೆಯಲ್ಲಿ ಮಾತುಕತೆ ವಿಫಲವಾಯಿತು. ಅದಕ್ಕಿಂತ ಹೆಚ್ಚಾಗಿ, ಭಾರತದ ಅತಿದೊಡ್ಡ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಟಾಟಾ
ಸಂಸ್ಥೆಯ ಮುಖ್ಯಸ್ಥರಿಗೆ ಕೊಡಬೇಕಾದ ಗೌರವವನ್ನೂ ಫೋರ್ಡ್ ಕೊಡಲಿಲ್ಲ. ‘ನಿಮ್ಮ ಕಂಪನಿ ಯನ್ನು ಖರೀದಿಸುವಲ್ಲಿ ಫೋರ್ಡ್ ಸಂಸ್ಥೆಗೆ ಯಾವುದೇ ಆಸಕ್ತಿ ಇಲ್ಲ’ ಎಂದ ಮುಖ್ಯಸ್ಥ ಬಿಲ್ ಫೋರ್ಡ್, ‘ನಿಮಗೆ ಗೊತ್ತಿಲ್ಲದ ಉದ್ಯಮದಲ್ಲಿ ನೀವು ಕೈ ಹಾಕಬಾರದಿತ್ತು’ ಎಂದುಬಿಟ್ಟರು. ಖಾಲಿ ಕೈಯಲ್ಲಿ ಭಾರತಕ್ಕೆ ಹಿಂದಿರುಗಿದ ರತನ್ ಟಾಟಾ ಒಂದು ನಿರ್ಧಾರಕ್ಕೆ ಬಂದಿದ್ದರು. ಇಂಡಿಕಾದ ಎರಡನೆಯ ಆವೃತ್ತಿಯನ್ನು ಮಾರುಕಟ್ಟೆಗೆ ತರಲು ನಿರ್ಧರಿಸಿ ದ್ದರು ಟಾಟಾ.
ಮೊದಲನೆಯ ಆವೃತ್ತಿಯಲ್ಲಿದ್ದ ತೊಡಕುಗಳನ್ನು ನಿವಾರಿಸಿಕೊಂಡು, ಜನರ ದೂರುಗಳಿಗೆ ಪರಿಹಾರ ಕಂಡುಕೊಂಡು, ಇಂಡಿಕಾ ಮತ್ತೆ ರಸ್ತೆಗೆ ಬರಲು ಸಿದ್ಧವಾಗಿದೆ ಎಂಬ ಸಂದೇಶವನ್ನು ಅವರು ರವಾನಿಸಿದ್ದರು. ಅದರ ಪರಿಣಾಮವಾಗಿ ಇಂಡಿಕಾ ಜನಪ್ರಿಯವಾಯಿತು, ಭಾರತದ ಆಚೆಗೂ ರಫ್ತಾಗತೊಡ ಗಿತು. ೨೦೦೪ರಲ್ಲಿ ಟಾಟಾ ಮೋಟರ್ಸ್ ನ್ಯೂಯಾರ್ಕ್‌ನ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿತು. ಅದರೊಂದಿಗೆ ಸ್ಪೇನ್ ದೇಶದ ಬಸ್ ತಯಾರಿಸುವ ಹಿಸ್ಪಾನೊ ಕ್ಯಾರೊಸೆರಾ ಸಂಸ್ಥೆಯೊಂದಿಗೆ, ಬ್ರೆಜಿಲ್ ಮೂಲದ ಮಾರ್ಕೊ ಪೊಲೊ ಜತೆಗೆ ಜಂಟಿಯಾಗಿ ವಾಹನ ತಯಾರಿಸುವ ಒಪ್ಪಂದಕ್ಕೂ ಟಾಟಾ ಸಂಸ್ಥೆ ಸಹಿ ಹಾಕಿತು. ಇಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕಾಲಚಕ್ರ ತಿರುಗಿ ಪರಿಸ್ಥಿತಿ ಬದಲಾಗುತ್ತಿತ್ತು.
ಒಂದು ಕಡೆ ಟಾಟಾ ಸಂಸ್ಥೆ ಪ್ರತಿ ಋತುವಿನಲ್ಲೂ ಚಿಗುರೊಡೆಯುತ್ತಿದ್ದರೆ, ಇನ್ನೊಂದು ಕಡೆ ಫೋರ್ಡ್ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿತ್ತು. ೨೦೦೮ರ ಹೊತ್ತಿಗೆ ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗಿತ್ತು. ಫೋರ್ಡ್ ಸಂಸ್ಥೆ ತನ್ನ ಪ್ರತಿಷ್ಠಿತ ಬ್ರ್ಯಾಂಡ್ ‘ಜಾಗ್ವಾರ್’ ಮತ್ತು ‘ಲ್ಯಾಂಡ್ ರೋವರ್’ಗಳನ್ನು ಮಾರಲು ಸಿದ್ಧವಾಗಿತ್ತು. ಆಗ ಅದನ್ನು ಕೊಳ್ಳಲು ಮುಂದಾದವರು ಟಾಟಾ. ನಿಜ, ಒಂದು ದಶಕದ ಹಿಂದೆ ಯಾವ ತಮ್ಮ ಕಾರಿನ ಘಟಕವನ್ನು ಮಾರಲು ಮುಂದಾಗಿ ಹೋಗಿ ದ್ದರೋ ಅದೇ ರತನ್ ಟಾಟಾ.
ಫೋರ್ಡ್ ಸಂಸ್ಥೆಯ ಆ ಎರಡೂ ಘಟಕವನ್ನು ಟಾಟಾ ಎರಡೂಕಾಲು ಬಿಲಿಯನ್ ಡಾಲರ್‌ಗೆ ಖರೀದಿಸಿದರು. ಯಾವ ಫೋರ್ಡ್ ಸಂಸ್ಥೆ ಒಂದು ದಶಕದ
ಹಿಂದೆ ಟಾಟಾ ಅವರನ್ನು ಬರಿಕೈಯಲ್ಲಿ ಹಿಂದಿರುಗಿ ಕಳಿಸಿತ್ತೋ, ಅದೇ ಫೋರ್ಡ್ ಸಂಸ್ಥೆ ತಾನು ಒಂದು ದಶಕದ ಹಿಂದೆ ಸುಮಾರು ಐದು ಬಿಲಿಯನ್
ಡಾಲರ್ ಕೊಟ್ಟು ಖರೀದಿಸಿದ್ದ ಘಟಕವನ್ನು ಅರ್ಧ ಬೆಲೆಗೆ ಮಾರಾಟ ಮಾಡಿತ್ತು. ದಶಕದ ಹಿಂದೆ, ‘ಗೊತ್ತಿಲ್ಲದ ವ್ಯವಹಾರಕ್ಕೆ ಕೈ ಹಾಕಬಾರದು’
ಎಂದಿದ್ದ ಅದೇ ಬಿಲ್ ಫೋರ್ಡ್, ಟಾಟಾ ಅವರಿಗೆ ‘ನಷ್ಟದಲ್ಲಿದ್ದ ನಮ್ಮ ಘಟಕವನ್ನು ಖರೀದಿಸಿ ನಮಗೆ ಉಪಕಾರ ಮಾಡಿದಿರಿ’ ಎಂದಿದ್ದ!
೨೦೧೮ರ ವೇಳೆಗೆ ಸಮಯ ಮತ್ತೆ ಬದಲಾಗಿತ್ತು. ಎರಡು ದಶಕಗಳ ಕಾಲ ರಸ್ತೆ ತುಂಬ ಓಡಾಡಿಕೊಂಡು ದಣಿದಿದ್ದ ಭಾರತದ ಇಂಡಿಕಾ ವಿಶ್ರಾಂತಿಗೆ ತೆರಳಿತು. ಅದಕ್ಕೂ ಒಂದು ವರ್ಷ ಮೊದಲೇ ರತನ್ ಟಾಟಾ ಸಂಸ್ಥೆಯ ತಮ್ಮ ಜವಾಬ್ದಾರಿಯ ಸ್ಥಾನದಿಂದ ನಿವೃತ್ತರಾಗಿದ್ದರು. ಅವರೇ ಇದ್ದಿದ್ದರೆ ಇಂಡಿಕಾ ನಿಲ್ಲುತ್ತಿತ್ತೇ? ಗೊತ್ತಿಲ್ಲ. ಇದು ಕಾರಿನ ಕಾಲಚಕ್ರ ತಿರುಗುವುದಲ್ಲದೆ ಮತ್ತಿನ್ನೇನು!? ನಷ್ಟದಲ್ಲಿದ್ದ ‘ಜಿಎಲ್‌ಆರ್’ (ಜಾಗ್ವಾರ್ ಲ್ಯಾಂಡ್ ರೋವರ್) ಸಂಸ್ಥೆಯ ಆದಾಯವು ಟಾಟಾ ಸಂಸ್ಥೆ ಖರೀದಿಸಿದ ನಂತರ ಶೇ.೪೦ರಷ್ಟು, ಲಾಭ ೫೦ರಷ್ಟು ಹೆಚ್ಚಿತು (ಕಳೆದ ವರ್ಷ ಈ ಸಂಸ್ಥೆಯ ಆದಾಯ ಸುಮಾರು ೧೩೦ ಬಿಲಿಯನ್ ಡಾಲರ್).
ಫೋರ್ಡ್ ೨೦೨೨ರಲ್ಲಿ ಗುಜರಾತ್ ನಲ್ಲಿದ್ದ ತನ್ನ ಘಟಕವನ್ನು ಟಾಟಾ ಸಂಸ್ಥೆಗೆ ಮಾರಿತು. ಭಾರತದ ಸಂಸ್ಥೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು. ಸುಮಾರು ೧೦ ಲಕ್ಷ ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಅಷ್ಟೂ ಹೆಸರು ಮಾಡದಿದ್ದರೆ ಹೇಗೆ, ಅಲ್ಲವೇ? ಯಾವುದೇ ಉದ್ದಿಮೆ ಯಲ್ಲಿರುವವರಿಗೆ ಈ ಘಟನೆ ಒಂದು ಅದ್ಭುತವಾದ ಪಾಠ. ನಮ್ಮನ್ನು ಅವಮಾನಿಸಿದವರೇ (!?) ಪುನಃ ನಮ್ಮ ಬಳಿ ಬರುವಂತಾದಾಗ ಅವರಿಗೆ ಉಪಕಾರ
ಮಾಡುವುದಕ್ಕಿಂತ (ಬಿಲ್ ಫೋರ್ಡ್ ಮಾತಿನಂತೆ!) ಹೆಚ್ಚಿನ ಸಾಧನೆ ಇನ್ನೇನಿದೆ? ಜತೆಗೆ, ನಮ್ಮ ಸಮಯ ಬರುವ ತನಕ ಕಾಯಬೇಕು ಎನ್ನುವುದು.
ಹಾಗೆಂದ ಮಾತ್ರಕ್ಕೆ ಎಷ್ಟು ಕಾಯುವುದು? ಕಾಲಚಕ್ರ ತಿರುಗುತ್ತಿರುತ್ತದೆ ಎನ್ನುವುದೂ ಲಕ್ಷ್ಯದಲ್ಲಿರಬೇಕು. ಇದನ್ನು ಹೇಳಲೂ ಕಾರಣವಿದೆ. ರತನ್ ಟಾಟಾ ಈಗ ಟಾಟಾ ಸಂಸ್ಥೆಯ ಮುಖ್ಯಸ್ಥರಾಗಿ ಉಳಿದಿಲ್ಲ. ಕಾಲವೂ ಬದಲಾಗುತ್ತಿದೆ. ಚೀನಾ ಪ್ರತಿವರ್ಷ ಸುಮಾರು ಎರಡೂವರೆ ಕೋಟಿ ಕಾರು ತಯಾರಿಸುತ್ತಿದೆ. ಪ್ರತಿವರ್ಷ ಒಂದು ಕೋಟಿ ಕಾರು ತಯಾರಿಸುವ ಅಮೆರಿಕ ಈಗ ಹಿಂದೆ ಬಿದ್ದಿದೆ. ಚೀನಾದ ಜಿಲಿ, ಶೆರ್ರಿ, ಬಿಯೈಡಿ ಕಾರುಗಳು ಹೆಚ್ಚು ಕಮ್ಮಿ ವಿಶ್ವದ ಎಲ್ಲ
ದೇಶದ ರಸ್ತೆಗಳಲ್ಲೂ ಓಡಾಡುತ್ತಿವೆ. ಚೀನಾ ಸರಕಾರ ಕಾರು ತಯಾರಿಸುವ ಸಂಸ್ಥೆಗಳಿಗೆ ನೀಡುತ್ತಿರುವ ಸವಲತ್ತು ಇದಕ್ಕೆ ಪ್ರಮುಖ ಕಾರಣ.
ಹೀಗೆಯೇ ಮುಂದುವರಿದರೆ ಬಹಳಷ್ಟು ಪಾಶ್ಚಿಮಾತ್ಯ ದೇಶಗಳು ಕಾರು ತಯಾರಿಸುವ ಕಾರ್ಖಾನೆಯನ್ನು ಮುಚ್ಚಬೇಕಾಗಬಹುದು. ಯಾವುದಕ್ಕೂ ಕಾದು ನೋಡೋಣ, ರತನ್ ಟಾಟಾ ಕಲಿಸಿದ ಪಾಠವನ್ನು ಮಾತ್ರ ಮರೆಯದಿರೋಣ!