Sunday, 15th December 2024

ಅಂಬೇಡ್ಕರರು ತಿರಸ್ಕರಿಸಿದ ಮಹಿಷಾಸುರ

ವಿಶ್ಲೇಷಣೆ

ಡಾ.ಸುಧಾಕರ ಹೊಸಳ್ಳಿ

ತಾವು ಹೇಳುತ್ತಿರುವುದು ಸುಳ್ಳು ಎನ್ನುವುದರ ಅರಿವಿದ್ದರೂ, ಪದೇ ಪದೆ ಅದನ್ನೇ ಹೇಳಿ ಜನಮಾನಸದಲ್ಲಿ ಉಳಿಯುವಂತೆ ಮಾಡುವಲ್ಲಿ ಎಡಪಂಥೀ ಯರಿಗೆ ಇರುವು ಬದ್ಧತೆಯನ್ನು ಮೆಚ್ಚಲೇಬೇಕು. ಇತ್ತೀಚಿನ ಕೆಲವು ವರ್ಷಗಳಲ್ಲಿ, ಕೆಲವೇ ಕೆಲವು ಮಂದಿ ಮೈಸೂರಿನಲ್ಲಿ ‘ಮಹಿಷ ದಸರಾ’ ಎಂಬ ಹೆಸರಿನ ಮುಖಾಂತರ ಸುಳ್ಳಿನ ನಿರೂಪಣೆಯನ್ನು ಪ್ರಾರಂಭಿಸಿದ್ದರು. ಈ ವರ್ಷ, ‘೨೦೨೩ರಲ್ಲಿ ಯಾವುದೇ ಅಂಜಿಕೆ ಇಲ್ಲದೆ, ಸಂಕೋಚವಿಲ್ಲದೆ ೫೦ನೇ ವರ್ಷದ ಮೈಸೂರು ದಸರಾ ಆಚರಣೆ’ ಎಂಬ ಬ್ಯಾನರನ್ನು ಕಟ್ಟಿದ್ದರು.

ಬದಲಾವಣೆ ಏನೂ ಇಲ್ಲ, ಈ ವರ್ಷ ಒಂದಿಷ್ಟು ಸಂಖ್ಯೆ ಹೆಚ್ಚಾಗಿತ್ತು. ಹಿಂದೂ ಧರ್ಮದಲ್ಲಿನ ಶ್ರೀಮಂತ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆ ಯನ್ನು ಶಿಥಿಲಗೊಳಿಸಲು ಅವರು ನಿರಂತರ ಪ್ರಯತ್ನ ಮಾಡುವುದುಂಟು. ಇಂಥದ್ದರ ಭಾಗವಾಗಿ, ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿರುವ ಶ್ರೀ ಚಾಮುಂಡೇ ಶ್ವರಿಯ ಪೂಜೆಯ ದಸರಾವನ್ನು ‘ಮಹಿಷ’ನ ಹೆಸರಲ್ಲಿ ಒಡೆದು ಉರುಳಿಸುವ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ. ಪ್ರಾರಂಭಿಸಿದ ಕೆಲವು ವರ್ಷಗಳಿಂದಲೂ ಸೋಲುತ್ತಲೇ ಬಂದಿದ್ದಾರೆ. ಈ ವರ್ಷವಂತೂ ಚಾಮುಂಡಿ ಭಕ್ತರು ಮತ್ತಷ್ಟು ವಿಜೃಂಭಣೆಯಿಂದ ದಸರಾ ಹಬ್ಬಕ್ಕೆ ಸಾಕ್ಷಿಯಾಗಿ ಗಂಭೀರವಾಗಿ ಸೋಲಿಸಿದರು. ಸೋತದ್ದಕ್ಕೆ ಅವರಿಗೆ ಏನೂ ಬೇಸರವಿಲ್ಲ, ಅದರಲ್ಲಿ ಸತ್ಯವಿಲ್ಲ ಎಂಬುದು ಸುಳ್ಳು ಹೇಳಲು ಪ್ರಾರಂಭಿಸಿದ್ದಾಗಿನಿಂದಲೂ ಗೊತ್ತು.

ಅವರ ಪ್ರಕಾರ, ಮಹಿಷಾಸುರ ಬೌದ್ಧ ದೊರೆ. ಅಂದರೆ, ಬಾಹಾಸಾಹೇಬ್ ಅಂಬೇಡ್ಕರ್‌ರವರು ಬೌದ್ಧ ಧರ್ಮಕ್ಕೆ ಸೇರಿದ ದಿವಸಕ್ಕಿಂತ ಮುಂಚೆ ಮಹಿಷನ ಅಸ್ತಿತ್ವವಿತ್ತು. ಅಂದಮೇಲೆ, ಬಾಬಾಸಾಹೇಬರು ತಾವು ಬೌದ್ಧ ಧರ್ಮವನ್ನು ಸೇರುವ ಒಂದು ದಿವಸ ಮುಂಚಿತವಾಗಿ, ೧೯೫೬ರ ಅಕ್ಟೋಬರ್ ೧೩ರಂದು ಬೌದ್ಧರಲ್ಲಿನ ಅಸ್ಪೃಶ್ಯತೆ ಆಚರಣೆಯನ್ನು ವಿರೋಧಿಸುವ ಮೂಲಕ ಅಲ್ಲಿನ ಪಂಥಗಳನ್ನು ತಿರಸ್ಕರಿಸಿದ್ದರು. ಸ್ವತಃ ಅಂಬೇಡ್ಕರರು, ‘ನಾನು ಬೌದ್ಧಧರ್ಮದಲ್ಲಿ ಆಚರಣೆಯಲ್ಲಿರುವ ಹೀನಯಾನ ಮತ್ತು ಮಹಾಯಾನ ಪಂಥವನ್ನು ತಿರಸ್ಕರಿಸುತ್ತಿದ್ದೇನೆ; ನಾನು ಮತ್ತು ನನ್ನ ಸಂಗಡಿಗರು ನವಯಾನದ ಬೌದ್ಧಮತವನ್ನು ಸ್ವೀಕಾರ ಮಾಡುತ್ತೇವೆ’ ಎಂದು ಘೋಷಣೆ ಮಾಡಿದ್ದರು.

ಅಂದಮೇಲೆ, ಎಡಪಂಥೀಯರ ಹೀನಯಾನ ಮಹಿಷಾಸುರನನ್ನು, ಮಹಾಯಾನ ಮಹಿಷಾಸುರನನ್ನು ತಿರಸ್ಕರಿಸಿದ್ದರು ಎಂಬುದು ಸಾಂಕಿಕ ಸತ್ಯ. ಅಂಬೇಡ್ಕರ್ ತಿರಸ್ಕರಿಸಿದವರನ್ನು ನಾವು ಒಪ್ಪುವುದಾದರೂ ಹೇಗೆ? ಇದು ಬರಿಯ ಮಣ್ಣಲ್ಲ, ಮೌಲ್ಯಗಳ ಸಂಪತ್ತು. ಈ ನೆಲದ ಮೂಲಧರ್ಮ ಹಿಂದೂ ಧರ್ಮ. ಸಿದ್ಧಾರ್ಥರ ನಿರ್ವಾಣ ಮನಸ್ಥಿತಿಯ ದ್ಯೋತಕವಾಗಿ ಬೌದ್ಧಧರ್ಮ ಅಸ್ತಿತ್ವ ಕಂಡಿತು. ದಶಕಗಳು ಸರಿದಂತೆ ಬರ್ಮಾ, ಶ್ರೀಲಂಕಾ, ಜಪಾನ್, ವಿಯೆಟ್ನಾಂ, ಕೊರಿಯಾ, ಚೀನಾ ಮುಂತಾದ ರಾಷ್ಟ್ರಗಳಲ್ಲಿ ಇದರ ಬೇರುಗಳು ಗಟ್ಟಿಗೊಂಡವು.

ಹಿಂದೂಧರ್ಮದಲ್ಲಿನ ಬಹುದೊಡ್ಡ ಲೋಪವೆಂದು ಗುರುತಿಸಿಕೊಳ್ಳುವ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಆಚರಣೆಯು ಸಂವಿಧಾನಶಿಲ್ಪಿ
ಅಂಬೇಡ್ಕರರನ್ನು ಬಹುವಾಗಿ ಕಾಡಿತ್ತು. ಸ್ವತಃ ಇಂಥ ಆಚರಣೆಯಿಂದ ನೋವುಂಡು ರೋಸಿಹೋಗಿದ್ದ ಅಂಬೇಡ್ಕರರು ೧೯೩೬ರಲ್ಲಿ ‘ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲಾರೆ’ ಎಂಬ ಘೋಷಣೆಯನ್ನು ಮಾಡಿದ್ದೂ ಆಯಿತು. ೨೦ ವರ್ಷಗಳ ನಂತರ, ಅಂದರೆ ೧೯೫೬ರ ಅಕ್ಟೋಬರ್ ೧೪ರಂದು, ಅಂಬೇಡ್ಕರರು ತಮ್ಮ ಅನುಯಾಯಿಗಳ ಜತೆಯಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಮತಾಂತರಕ್ಕೆ ಮೂಲಕಾರಣ, ಮೇಲ್ಕಾಣಿಸಿದ ಜಾತಿ ಮತ್ತು ಅಸ್ಪೃಶ್ಯತೆಯ ಆಚರಣೆ. ಇವುಗಳ ಕ್ಷುದ್ರ ಹಾಗೂ ಕ್ರೂರ ಪರಿಣಾಮಗಳು ಸಮಾಜವನ್ನು ಇನ್ನಿಲ್ಲದಂತೆ ಕಾಡುತ್ತಿವೆ ಎಂಬ ಭಾವ ಮತ್ತು ಅನುಭವ ಎರಡೂ ಅಂಬೇಡ್ಕರರದ್ದು. ಸದರಿ ದೋಷಗಳ ಕಾರಣಕ್ಕಾಗಿ ಅಂಬೇಡ್ಕರರು ಮತಾಂತರಗೊಂಡಿದ್ದು ವಾಸ್ತವವೇ ಆದರೂ, ಅವರು ಹಾಗೆ ಮತಾಂತರಗೊಂಡ ಬೌದ್ಧ ಧರ್ಮವು ಜಾತಿ-ಪಂಥವನ್ನು ಮೀರಿ ನಿಂತಿತ್ತೇ? ಎಂಬುದು ಚರ್ಚೆಗೆ ಮತ್ತು ವಿಮರ್ಶೆಗೆ ಒಳಪಡಲೇ
ಬೇಕಾದ ವಿಷಯ.

ಅಂಬೇಡ್ಕರರು ಹಿಂದೂಧರ್ಮವನ್ನು ತೊರೆಯಲು ಸುಮಾರು ೨೦ ವರ್ಷಗಳನ್ನು ತೆಗೆದುಕೊಂಡರು. ಅಂದರೆ, ಘೋಷಣೆ ಮಾಡಿದ್ದು ೧೯೩೬ರಲ್ಲಿ,
ಮತಾಂತರಗೊಂಡಿದ್ದು ೧೯೫೬ರಲ್ಲಿ. ಅಂಬೇಡ್ಕರರು ಬೌದ್ಧರಾಗಿ ಉಳಿದಿದ್ದು ೫೨ ದಿವಸಗಳು ಮಾತ್ರ (೧೯೫೬ರ ಡಿಸೆಂಬರ್ ೬ರಂದು ಅವರು ಇಹಲೋಕ ತ್ಯಜಿಸಿದರು). ಪ್ರಮುಖ ಧರ್ಮಗಳ ೨೦ ವರ್ಷಗಳ ಅಧ್ಯಯನವು ಅಂಬೇಡ್ಕರರಲ್ಲಿ ದೋಷವಿಲ್ಲದ ಧರ್ಮ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಲೋಪವಿಲ್ಲದ ಧರ್ಮ ಕಲ್ಪನೆಗೆ ಸೀಮಿತವಾದದ್ದು, ಲೋಪವು ಧರ್ಮಾತೀತವಾಗಿ ನಿಲ್ಲುವುದೂ ಇಲ್ಲ. ಶ್ರೇಷ್ಠ ರಾಷ್ಟ್ರಸಂತರಾದ ಅಂಬೇಡ್ಕರರು ಪರಕೀಯ ಧರ್ಮವನ್ನು ಒಪ್ಪುವುದು ದೂರದ ಮಾತಾಗಿತ್ತು.

ನೆಲದ ಧರ್ಮವೇ ಆದ ಬೌದ್ಧಧರ್ಮವನ್ನು ಒಮ್ಮೆಲೇ ಒಪ್ಪಲು ಸಾಧ್ಯವೂ ಇರಲಿಲ್ಲ. ಆದರೆ ಅಂಬೇಡ್ಕರರು ಯಾವುದೇ ವಿಷಯವನ್ನು ಸಾಮಾಜಿಕ ವಾಗಿ ಆಳವಿಮರ್ಶೆ, ತೌಲನಿಕ ಮಂಥನಕ್ಕೆ ಒಳಪಡಿಸಿಯೇ ತೀರುತ್ತಿದ್ದರು. ೨೦ ವರ್ಷಗಳ ಪರಾಮರ್ಶೆಯು ಲೋಪರಹಿತ ಧರ್ಮವನ್ನು ಹುಡುಕಿ ಕೊಡಲು ಸಾಧ್ಯವಾಗಲಿಲ್ಲ ಎಂಬುದು ಶೋಧಸತ್ಯ. ೧೯೫೬ರ ಅಕ್ಟೋಬರ್ ೧೩ರಂದು, ಅಂದರೆ ಬೌದ್ಧಧರ್ಮಕ್ಕೆ ಮತಾಂತರವಾಗುವ ಒಂದು ದಿವಸ ಮೊದಲೇ ಅಂಬೇಡ್ಕರರು ಆ ಧರ್ಮದಲ್ಲಿನ ಪಂಥಗಳನ್ನು, ವಿವಿಧ ಸಾಮಾಜಿಕ ಸ್ತರ, ಭೇದಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು ಮತ್ತು ಈ ಸಂದೇಶ ನೀಡಿದ್ದರು: I will accept and follow the teachings of Buddha.I will keep my people away from the different opinions of Hinayana and mahayana, two religious orders. Our Buddhism is a Neo-buddhism, Navayana..

ಅಂಬೇಡ್ಕರರು ಪಂಥ ಸೃಷ್ಟಿಸಿಯೇ ಧರ್ಮಪ್ರವೇಶ ಮಾಡಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾದದ್ದು ದಿಟ. ಪಂಥ ಮೀರಿದ ಧರ್ಮ ಶೋಧನೆಯೂ ಕಲ್ಪನಾತೀತವಾದದ್ದೇ. ಬೌದ್ಧರಲ್ಲಿ ಹೀನಯಾನ, ಮಹಾಯಾನ, ವಜ್ರಯಾನ, ಅಂಬೇಡ್ಕರರು ಹುಟ್ಟುಹಾಕಿದ ನವಯಾನ ಇವೆಲ್ಲ ಪಂಥಮಾದರಿಯ ದ್ಯೋತಕಗಳು. ಬೌದ್ಧಧರ್ಮ ಪಂಥಕ್ಕೆ ಮಾತ್ರ ಸೀಮಿತವೇ? ಅಲ್ಲಿ ಜಾತಿ ಇರಲಿಲ್ಲವೇ? ಸಾಮಾಜಿಕ ಸ್ತರವ್ಯವಸ್ಥೆ ಇರಲಿಲ್ಲವೇ?
ಎಂಬ ಪ್ರಶ್ನೆಗಳೂ ಇಲ್ಲಿ ಹುಟ್ಟಿಕೊಳ್ಳುತ್ತವೆ. ಬೌದ್ಧರಲ್ಲೂ ಉಪಸ್ತರಗಳು ಸೇರಿದಂತೆ ಸುಮಾರು ೯ ಸಾಮಾಜಿಕ ಸ್ತರಗಳಿವೆ. ಇವುಗಳಲ್ಲಿ ಪ್ರಮುಖವಾಗಿ ‘ಲಾಮ’ (ದಲೈ ಲಾಮ) ಎಂಬುದು ಸಾಮಾಜಿಕವಾಗಿ ಮೇಲುಸ್ತರವಾದರೆ, Sungs ಎಂಬುದು ಎರಡನೇ, “Ragyabpa’ ಎಂಬುದು ಮೂರನೇ ಸ್ಥಾನದಲ್ಲಿ ಕಾಣಸಿಗುವಂಥವು.

Theravadan (ಮಯನ್ಮಾರ್), Burmese (ಶ್ರೀಲಂಕಾ) ಹೀಗೆ ಬೇರೆ ಬೇರೆ ದೇಶಗಳಲ್ಲಿ ಬೌದ್ಧರ ವಿಭಿನ್ನ ಪಂಥ ಮತ್ತು ಜಾತಿಗಳು ಅಸ್ತಿತ್ವದಲ್ಲಿವೆ. ಹಾಗಾದರೆ ಬೌದ್ಧಮತವು ಪಂಥ ಮತ್ತು ಜಾತಿಗೆ ಸೀಮಿತವೇ, ಹಿಂದೂಧರ್ಮದಲ್ಲಿ ಇದ್ದಂತೆ ಅಸ್ಪೃಶ್ಯತೆಯ ಆಚರಣೆ ಇರಲಿಲ್ಲವೇ? ಎಂಬ ಮತ್ತೊಂದು ಪ್ರಶ್ನೆ ಎದುರು ನಿಲ್ಲುತ್ತದೆ. ಇದಕ್ಕೂ ‘ಇಲ್ಲ’ ಎಂಬ ಅಥವಾ ‘ಅದು ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾದ ಅನಿಷ್ಟ ಆಚರಣೆ’ ಎಂಬ ಆರೋಪ ಮಾದರಿಯ ಉತ್ತರ ಸಿಗುವುದಿಲ್ಲ.

ಟಿಬೆಟ್‌ನ ಸಾಮಾಜಿಕ ಸ್ತರದಲ್ಲಿ ಮೂರನೇ ಹಂತದಲ್ಲಿರುವ, Ragyabpa ಎಂದು ಗುರುತಿಸಲ್ಪಡುವ ವರ್ಗವು ಅಸ್ಪೃಶ್ಯ ವರ್ಗವಾಗಿದೆ. ನಿಶ್ಚಿತವಾಗಿ ಅಸ್ಪೃಶ್ಯರೆಂದು ಗುರುತಿಸಲ್ಪಡುವ ಈ ವರ್ಗ, ಕಾಯಕದಲ್ಲೂ ಶೌಚ ಶುದ್ಧೀಕರಣ ಹಾಗೂ ಇತರ ಕೆಳದರ್ಜೆ ಚಟುವಟಿಕೆಗಳಲ್ಲಿ ಇಂದಿಗೂ ತೊಡಗಿಸಿ ಕೊಂಡಿದೆ. ಹೀಗಾಗಿ, ‘ಇದು ಬುದ್ಧ ಬೋಧಿಸಿದ್ದೇನು?’ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಬುದ್ಧ ಬೋಧಿಸಲಿಲ್ಲ ಎಂಬುದು ನಗ್ನಸತ್ಯವೇ ಆದರೂ, ಈ ರೀತಿಯ ಆಚರಣೆಯ ಮೂಲಕ ಬೌದ್ಧಧರ್ಮವು ಜಾತಿ, ಪಂಥ, ಅಸ್ಪೃಶ್ಯತೆಯ ಭಾಗವಾಗಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಈ ಕುರಿತು ಸ್ವತಃ ಅಂಬೇಡ್ಕರರಿಗೇ ವಿರೋಧವಿತ್ತು.

ಆ ಕಾರಣದಿಂದಲೇ ಅವರು ಮತಾಂತರಗೊಳ್ಳುವ ಮುನ್ನಾದಿನವೇ ಬೌದ್ಧಧರ್ಮದೊಳಗಿನ ಪಂಥಗಳನ್ನು ತಿರಸ್ಕರಿಸಿ ಒಳಹೊಕ್ಕಿದ್ದು. ಯಾವ ಜಾತಿ, ಪಂಥದ ಕಾರಣಕ್ಕಾಗಿ ಅಂಬೇಡ್ಕರರು ಮತಾಂತರಗೊಂಡರೋ, ಯಾವ ಅಸ್ಪೃಶ್ಯತೆಯ ಕರಾಳತೆಯ ಕಾರಣಕ್ಕಾಗಿ ಧರ್ಮಬಾಹಿರವಾದರೋ, ಅಂಥ ಬೌದ್ಧಧರ್ಮದಲ್ಲಿ ಇವು ಧರ್ಮದ ಭಾಗವಾಗಿರುವುದು ಅಪಥ್ಯ. ಅಂಬೇಡ್ಕರರು ನಿರಾಸೆಗೊಂಡಿದ್ದರು ಎನ್ನುವುದರ ಸೂಚಕವಾಗಿ, ಹೊಸಪಂಥದ ಸಂದೇಶ ಸಾದೃಶವಾಗುತ್ತದೆ.

ಈ ಸಂವಿಧಾನಶಿಲ್ಪಿಯು ೧೭ನೇ ವಿಧಿಯನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡುವ ಮೂಲಕ, ಅಸ್ಪೃಶ್ಯತೆಯ ಆಚರಣೆಯನ್ನು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿಸಿದ್ದರು. ಹಾಗಾದರೆ, ಸಂವಿಧಾನೋತ್ತರ ಭಾರತದಲ್ಲಿ ಅಸ್ಪೃಶ್ಯತೆಯ ಆಚರಣೆ ಸಂಪೂರ್ಣ ನಿರ್ನಾಮವಾಗಿ ದೆಯೇ? ಎಂಬ ಪ್ರಶ್ನೆ ನಿರೀಕ್ಷೆಯಂತೆ ಹುಟ್ಟಿಕೊಳ್ಳುತ್ತದೆ. ಸಂಪೂರ್ಣ ಅಸ್ತಿತ್ವರಹಿತವಾಗದಿದ್ದರೂ ಶಿಕ್ಷಾರ್ಹ ಅಪರಾಧವಾಗಿರುವ ಈ ಆಚರಣೆಯನ್ನು ಧಿಕ್ಕರಿಸುವೆಡೆಗೆ ಹಿಂದೂಸಮಾಜ ಸಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ, ‘ಹಿಂದೂ ಮತ್ತು ಮುಸಲ್ಮಾನ ಇಬ್ಬರಲ್ಲೂ ಸಾಮಾಜಿಕ ಅನಿಷ್ಟ ಪದ್ಧತಿಗಳಿವೆ. ಆದರೆ, ಅಂಥ ಆಚರಣೆಯ ವಿರುದ್ಧ ಧ್ವನಿಯೆತ್ತುವವರು, ಅವು ನಾಶವಾಗಬೇಕು ಎಂಬ ಸಂಕಲ್ಪದಿಂದ ಹೋರಾಟ ಮಾಡುವವರು ಹಿಂದೂಗಳಲ್ಲಿ ಇದ್ದಾರೆ. ಇದು ಸಮಾಧಾನದ ಸಂಗತಿ’ ಎಂದು ಉಲ್ಲೇಖಿಸಲಾಗಿದೆ (ಅಂಬೇಡ್ಕರ್ ಬದುಕು ಬರಹ ಸಂಪುಟ ೬). ಆದರೆ, ಬೌದ್ಧಧರ್ಮದಲ್ಲಿ ಕೂಡ ಜಾತಿ-ಮತ-ಪಂಥ ಹಾಗೂ ಅಸ್ಪೃಶ್ಯತೆ ಆಚರಣೆ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಆಗದಿರುವುದು ಅಪಾಯಕಾರಿ ಸಂಗತಿ.

ಈ ಹಿನ್ನೆಲೆಯಲ್ಲಿ ಅವಲೋಕಿಸಿದಾಗ ಆ ಧರ್ಮವೂ ಶಾಂತಿ-ಅಹಿಂಸೆಯಂಥ ವಿಶಿಷ್ಟ ತತ್ತ್ವಗಳ ಅನುಷ್ಠಾನದ ಹೊರತಾಗಿ, ಜಾತಿ, ಅಸ್ಪೃಶ್ಯತೆ ಮೀರಿ ನಿಲ್ಲಲಾಗಲಿಲ್ಲ ಎಂಬುದು ವಾಸ್ತವ. ವಾಮಪಂಥೀಯರು ಈ ಕುರಿತು ಅದೆಷ್ಟು ಜಾಣಕಿವುಡು, ಮೌನವ್ರತ ಆಚರಿಸಿದರೂ ಸತ್ಯವನ್ನು ಅದುಮಿಡಲು ಸಾಧ್ಯವಾಗುವುದಿಲ್ಲ. ಬುದ್ಧ ನಮ್ಮ ಆದರ್ಶ ಅಂದ ಮಾತ್ರಕ್ಕೆ ಅಂಬೇಡ್ಕರರೇ ಒಪ್ಪದ ಜಾತಿ- ಪಂಥವನ್ನು ಒಪ್ಪಲು ಸಾಧ್ಯವೇ? ಗೌತಮನ ಮತ್ತು
ಅಂಬೇಡ್ಕರರ ಆಶಯದಂತೆ ಬೌದ್ಧಧರ್ಮವು ಜಾತಿ-ಮತ-ಪಂಥ, ಅಸ್ಪೃಶ್ಯತೆಯ ಆಚರಣೆಯನ್ನು ತೊರೆಯಲಿ ಎಂಬುದು ನನ್ನ ಆಶಯ, ತೊರೆಯ
ಬಹುದೇ? ಎಂಬುದು ಕೌತುಕ! ಅಂಬೇಡ್ಕರರ ಅನುಯಾ ಯಿಯಾಗಿ ನಾನು ಮಹಿಷನನ್ನು ತಿರಸ್ಕರಿಸುತ್ತೇನೆ.

(ಲೇಖಕರು ಸಂವಿಧಾನ ತಜ್ಞರು)