ಅಶ್ವತ್ಥಕಟ್ಟೆ
ranjith.hoskere@gmail.com
ಇಡೀ ವಿಶ್ವಕ್ಕೆ ವೇದ-ಶಾಸ್ತ್ರಗಳನ್ನು ಪರಿಯಚಿಸಿದ್ದು ಹಿಂದೂ ಧರ್ಮವಾದರೆ, ಸಾಮಾಜಿಕ ಕಾಂತ್ರಿಗೆ ಮುನ್ನುಡಿ ಬರೆದಿದ್ದು ವಚನ ಸಾಹಿತ್ಯ. ಕಂದಾಚಾರದ ವಿರುದ್ಧ ಸಿಡಿದೆದ್ದು, ಅಣ್ಣ ಬಸವಣ್ಣರ ಸಾರಥ್ಯದಲ್ಲಿ ಶುರುವಾದ ವಚನ ಚಳವಳಿಯನ್ನು ಬಹುತೇಕರು ‘ಸಾಮಾಜಿಕ ನ್ಯಾಯ’ವೇ ಪ್ರಧಾನ ವಿಷಯ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ೧೨ನೇ ಶತಮಾನದ ಆ ವಚನ ಚಳವಳಿಯನ್ನು ತಮಗೆ ಬೇಕಾದ ರೀತಿ ಬಳಸಿ ಕೊಂಡು, ಸನಾತನ ಧರ್ಮವನ್ನು ಟೀಕಿಸುವುದೇ ಕೆಲವರ ‘ಕೆಲಸ’ ವಾಗಿದೆ. ಈ ರೀತಿ ಟೀಕಿಸಿದ ಮಾತ್ರಕ್ಕೆ ತಾವೊಮ್ಮೆ ‘ಬುದ್ಧಿ ಜೀವಿ’, ಪ್ರಗತಿಪರ ಎನ್ನುವ ಭ್ರಮೆಯಲ್ಲಿ ಅನೇಕರು ಜೀವಿಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆಯಾಗಿ ಇತ್ತೀಚೆಗೆ ಸಾಣೇಹಳ್ಳಿ ಪೀಠಾಧಿಪತಿಯಾಗಿರುವ ಶ್ರೀ ಶಿವಾಚಾರ್ಯ ಪಂಡಿತಾರಾಧ್ಯ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಗಮನಿಸಬಹುದು. ನವೆಂಬರ್ ೨ರಂದು ನಡೆದ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡುತ್ತ ‘ಪ್ರಗತಿಪರ ಚಿಂತಕ’ ಎನ್ನುವ ಬಿರುದು ಪಡೆಯಬೇಕೆಂಬ ಅತ್ಯುತ್ಸಾಹದಲ್ಲಿ ಶ್ರೀಗಳು, ಗಣಪತಿಯ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ಅದರಲ್ಲಿ ಪ್ರಮುಖ ವಾಗಿ ‘ಗಣೇಶ ಎನ್ನುವುದೇ ಕಾಲ್ಪನಿಕ ದೇವರು; ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹುಟ್ಟಿಕೊಂಡ ಕಾಲ್ಪನಿಕ ದೇವರಾದ ಗಣೇಶನಿಗೆ ಪೂಜೆ ಸಲ್ಲಿಸುವ ಬದಲು ವಚನ ಗಳನ್ನು ಹೇಳಿ’ ಎಂದು ಪುಂಕಾನುಪುಂಕವಾಗಿ ನುಡಿಮುತ್ತುಗಳನ್ನು ಉದುರಿಸಿದ್ದಾರೆ.
ಶ್ರೀಗಳು ಈ ರೀತಿ ಮಾತನಾಡು ತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನಿಂದಲೂ ಹಿಂದೂ ಧರ್ಮದ ಹತ್ತು ಹಲವು ಆಚರಣೆಗಳ ಬಗ್ಗೆ ಪ್ರಶ್ನಿಸುತ್ತಲೇ ಬಂದಿದ್ದಾರೆ. ಈ ಎಲ್ಲ ಸಮಯದಲ್ಲಿ ತಮ್ಮ ವಾದಕ್ಕೆ ಶೀಲ್ಡ್ ರೀತಿ ಬಳಸಿಕೊಂಡ ಏಕೈಕ ಸರಕೆಂದರೆ ‘ವಚನ ಸಾಹಿತ್ಯ’. ಆದರೆ ಈ ಸ್ವಾಮಿ(ಜೀ)ಯ ಬಹುದೊಡ್ಡ ಸಮಸ್ಯೆಯೆಂದರೆ ಭಾಷಣದಲ್ಲಿ ಮಾತನಾಡಿದ್ದು ಎಲ್ಲವನ್ನೂ ತಮ್ಮ ನಡೆನುಡಿಯಲ್ಲಿ ಆಚರಿಸಿಕೊಂಡು ಬಂದಿದ್ದರೆ, ಇಂದು ಅವರ ವಿರುದ್ಧ ಮೇಲೆ ಈ ಪ್ರಮಾಣದ ವಿರೋಧ ವ್ಯಕ್ತವಾಗುತ್ತಿರಲಿಲ್ಲ. ಆದರೆ ವಚನ ಸಾಹಿತ್ಯದಲ್ಲಿ ‘ಮೂರ್ತಿಪೂಜೆ’ ವಿರೋಧಿಸಿ
ದಷ್ಟೇ ‘ವ್ಯಕ್ತಿಪೂಜೆ’ಯನ್ನೂ ವಚನಕಾರರು ವಿರೋಧಿಸಿದ್ದಾರೆ ಎನ್ನುವುದನ್ನು ಮರೆತು, ನಿತ್ಯ ಮಠದಲ್ಲಿ ಬರುವ ಭಕ್ತರಿಗೆ ನಮ್ಮ ಪಾದ ತೋರಿಸಿ ಪೂಜೆ ಮಾಡಿಕೊಳ್ಳುತ್ತಾರೆ.
ದೇವರು ನಿರಾಕಾರಿ, ಮೂರ್ತಿಪೂಜೆ ಸಲ್ಲ ಎಂದು ಹೇಳಿಕೊಂಡು ಒಳ ಹೋಗಿ ಶಿವಲಿಂಗಪೂಜೆ ಮಾಡುತ್ತಾರೆ. ಅದನ್ನು ಮಾಡದಿದ್ದರೆ ಭಕ್ತರು ಮಠದತ್ತ ಸುಳಿಯುವುದಿಲ್ಲ ಎನ್ನುವುದು ಅವರಿಗೂ ಗೊತ್ತಿರುವ ಸಂಗತಿ ಎನ್ನುವುದು ಬೇರೆ ಮಾತು. ವಚನ ಚಳವಳಿ, ವಚನಕಾರರ ಬಗ್ಗೆ ಮಾತನಾಡುವ ಮೊದಲು ಸ್ವಾಮಿಗಳು ಹೇಳಿರುವ ಕಾಲ್ಪನಿಕ ದೇವರಾಗಿರುವ ಗಣೇಶನ ಅಸ್ವಿತ್ತದ ಪ್ರಸ್ತಾಪ ವಚನಗಳಲ್ಲಿಯೇ ಇರುವ ಬಗ್ಗೆ
ಒಮ್ಮೆ ನೋಡೋಣ. ಗಣೇಶನನ್ನು ಕಾಲ್ಪನಿಕ ದೇವರು ಎನ್ನುವ ಸಾಣೇಹಳ್ಳಿ ಶ್ರೀಗಳು, ಒಂದು ವಿಷಯವನ್ನು ಗಮನಿಸಬೇಕಿದೆ.
ವಚನ ಸಂಚಯ ಎನ್ನುವ ವೆಬ್‌ಸೈಟ್‌ನಲ್ಲಿ ಲಭ್ಯ ವಿರುವ ಎಲ್ಲ ವಚನಗಳನ್ನು, ವಚನಕಾರರ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಆ ವೆಬ್‌ಸೈಟ್‌ನ ಮಾಹಿತಿಯ ಅನುಸಾರ ಸುಮಾರು ೨೪ ವಚನಕಾರರು ತಮ್ಮ ೬೬ ವಚನಗಳಲ್ಲಿ ೨೯೪ ಕಡೆ ‘ಗಣೇಶ’ನ ಪ್ರಸ್ತಾಪ ಮಾಡಿದ್ದಾರೆ. ಕಂದಾಚಾರದ
ಬಗ್ಗೆ ಬಹುದೊಡ್ಡ ಧ್ವನಿಯಾಗಿದ್ದ ಅಲ್ಲಮಪ್ರಭು ದೇವರು ತಮ್ಮ ೧೦ ವಚನದಲ್ಲಿ ಸುಮಾರು ೩೩ ಕಡೆ ಗಣೇಶನ ಬಗ್ಗೆ ಪ್ರಸ್ತಾಪಿಸಿದ್ದಾರೆ.
ವಚನಕಾರರೇ ಗಣೇಶನ ಬಗ್ಗೆ ಉಲ್ಲೇಖಿಸಿರುವ ಬಗ್ಗೆ ಇಲ್ಲಿ ಪ್ರಸ್ತಾಪಿಸಿದ್ದು, ಗಣೇಶನ ಅಸ್ತಿತ್ವವನ್ನು ನಿಮಗೆ ತೋರಿಸಬೇಕು ಎಂದಲ್ಲ. ಬದಲಿಗೆ ಗಣೇಶ ಕಾಲ್ಪನಿಕ ಎನ್ನುವ ಮೊದಲು ಇಂತಹ ನಾಲ್ಕೈದು ವಚನಗಳನ್ನು ಓದಿಕೊಂಡಿದ್ದರೂ, ಈ ರೀತಿಯ ಮಾತುಗಳನ್ನು ಆಡುತ್ತಿರಲಿಲ್ಲವೇನೋ? ಒಂದು
ವೇಳೆ ಓದಿಕೊಂಡಿದ್ದರೂ ‘ಮೈಲೇಜ್’ಗಾಗಿ ಹೇಳಿದ್ದರೆ ಅದಕ್ಕೆ ಹರಿ-ಹರ-ಬ್ರಹ್ಮರು ಬಂದರೂ ನಿಮ್ಮ ಮನಃಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಇನ್ನೀಗ ಸಾಣೇಹಳ್ಳಿ ಶ್ರೀಗಳು ದಿನ ಬೆಳಗಾದರೆ ಜಪಿಸುವ ಬಸವಣ್ಣನವರ ಬಗ್ಗೆ ಗಮನಿಸಬೇಕಿದೆ. ಇಡೀ ದೇಶಕ್ಕೆ, ವಿಶ್ವಕ್ಕೆ ಬಸವಣ್ಣನವರು ‘ಸಾಮಾಜಿಕ ಕಾಂತ್ರಿ’ ನೀಡಿದರೂ ಎನ್ನುವು ದರಲ್ಲಿ ಎರಡನೇ ಮಾತಿಲ್ಲ.
ಆದರೆ ಅನೇಕ ಸೋಕಾಲ್ಡ್ ಬುದ್ಧಿ ಜೀವಿಗಳ ಪ್ರಕಾರ, ಬಸವಣ್ಣನವರು ಹಿಂದೂ ಧರ್ಮದ ಕಂದಾಚಾರವನ್ನು ವಿರೋಧಿಸಿ ಹೊರನಡೆದರು. ಆ ಕಾರಣ
ಕ್ಕಾಗಿ ಮೂರ್ತಿ ಪೂಜೆಯನ್ನು ವಿರೋಽಸಿ, ಇಷ್ಟಲಿಂಗ ಪೂಜೆಗೆ ಎಲ್ಲರನ್ನು ಪ್ರೇರೇಪಿಸಿದರು. ಮುಂದೆ ಸನಾತನ ಧರ್ಮದ ಆಚರಣೆಯನ್ನು ವಿರೋಧಿಸಿ, ಹುಟ್ಟಿಕೊಂಡ ಧರ್ಮವೇ ಲಿಂಗಾಯತ ಧರ್ಮ ಎನ್ನುವ ಮಾತನ್ನು ಅನೇಕರು ಹೇಳುತ್ತಾರೆ. ಸನಾತನ ಧರ್ಮದ ಹಲವು ವಾದ
ವನ್ನು ವಿರೋಧಿಸಿ, ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿ ದರು ಎನ್ನುವುದು ಎಷ್ಟು ಸತ್ಯವೋ, ಅವರೂ ಆಸ್ತಿಕ ರಾಗಿಯೇ ಸಾವಿರಾರು ವಚನಗಳನ್ನು ರಚಿಸಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಇಂದಿನ ಅನೇಕ ಪ್ರಗತಿಪರರು ಬಸವಣ್ಣನ ತತ್ವಗಳನ್ನು ‘ನಾಸ್ತಿಕ’ವಾದದಲ್ಲಿ ವಿಶ್ಲೇಷಿಸುತ್ತಿದ್ದಾರೆ. ಆದರೆ, ಬಸವೇಶ್ವರರನ್ನು ಕೇವಲ ಒಂದು ಆಯಾಮದಲ್ಲಿ ನೋಡುವ ವ್ಯಕ್ತಿ ಯಾಗಿರಲಿಲ್ಲ. ಬದಲಿಗೆ ಅವರು ನಾನಾ ಆಯಾಮದಲ್ಲಿ ರಚಿಸಿರುವ ವಚನಗಳ ಬಗ್ಗೆ ಏಕೆ ಮಾತನಾಡುವುದಿಲ್ಲ?
ಅವರು ಹೇಳಿದ್ದೆಲ್ಲವನ್ನು ನಾಸ್ತಿಕ ವಾದ ಎನ್ನುವ ಮೂಲಕ, ಅವರ ನೀಡಿದ ಸಂದೇಶವನ್ನೇ ತಪ್ಪಾಗಿ ಅರ್ಥೈಸಿಕೊಳ್ಳುವ ಕೆಲಸವನ್ನು ಇಂದಿನ ಅನೇಕರು ಮಾಡುತ್ತಿದ್ದಾರೆ. ಅಷ್ಟಕ್ಕೂ ಗಣೇಶ, ಸರಸ್ವತಿ, ಲಕ್ಷ್ಮೀ ಸೇರಿದಂತೆ ಮುಕ್ಕೋಟಿ ದೇವರನ್ನು ಪೂಜಿಸಬೇಡಿ ಎನ್ನುವವರು ಇಷ್ಟಲಿಂಗ ಪೂಜೆ ಮಾಡುವಂತೆ ಹೇಳುತ್ತಿದ್ದರೇ? ಬಸವಣ್ಣನವರು ಹಿಂದೂ ಧರ್ಮದ ಕೆಲವು ಕಂದಾಚಾರವನ್ನು ವಿರೋಧಿಸಿದ್ದರೆ ಹೊರತು, ಇಡೀ ಧರ್ಮವನ್ನು ವಿರೋಽಸಿರಲಿಲ್ಲ. ಬಸವಣ್ಣವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ತಮಗೆ ಬೇಕಾದ ಕೆಲವೊಂದು ವಚನ ಗಳನ್ನು ತಮಗೆ ಬೇಕಾದಂತೆ ವಿಶ್ಲೇಷಿಸಿ, ಅದಕ್ಕೆ ಕೆಲವೊಂದು ‘ನಕಲಿ’ ವಚನಗಳನ್ನು ಸೇರಿಸಿ, ಬಸವಣ್ಣ ಮೂರ್ತಿಪೂಜೆ ಯನ್ನೇ ಒಪ್ಪಿರಲಿಲ್ಲ ಎಂದು ಹೇಳುವ ಮೂಲಕ ಸನಾತನ ಧರ್ಮವನ್ನು ಟೀಕಿಸುತ್ತಿದ್ದಾರೆ.
ಆದರೆ ಈ ರೀತಿ ಟೀಕಿಸುವವರು ವ್ಯಕ್ತಿಪೂಜೆಯನ್ನು ಬಸವಣ್ಣ ಒಪ್ಪಿದ್ದರೇ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರಿಸುವುದಿಲ್ಲ. ಸ್ವತಃ ಬಸವಣ್ಣನವರ ವಚನವೊಂದು ಹೀಗೆ ಆರಂಭ ವಾಗುತ್ತದೆ… ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ, ಪ್ರಥಮ ಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿಯೆನ್ನ ನಿರಿಸಿಕೊಂಡಿರ್ದಿರಯ್ಯಾ, ಹೀಗೆ ಆರಂಭವಾಗಿ ಕೊನೆಯಲ್ಲಿ ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮೊಕ್ಕುದಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆ ನಯ್ಯಾ… ಎಂದು ಮುಗಿಯುತ್ತದೆ. ಸಾಣೇಹಳ್ಳಿ ಶ್ರೀಗಳು ಗಣೇಶನನ್ನು ಪೂಜಿಸಬೇಡಿ ಎನ್ನುವ ಹೇಳಿಕೆ ನೀಡುವ ಮೊದಲು, ತಮ್ಮ ಹೆಸರಿನಲ್ಲಿರುವ ‘ಶಿವ’ನ ಬಗ್ಗೆ ಏಕೆ ಯೋಚಿಸಿಲ್ಲ? ಗಣೇಶನ ಅಸ್ತಿತ್ವದ ಬಗ್ಗೆ ಮಾತನಾಡುವವರು, ಶಿವನನ್ನು ನಂಬಲು ಸಾಧ್ಯವೇ? ಶಿವನನ್ನು ನಂಬುವವರು, ಶಿವನ ಮಗನಾಗಿರುವ ಗಣಪತಿ ಮಾತ್ರ ಸುಳ್ಳು ಎಂದು ಹೇಳುವುದು ಎಷ್ಟು ಸರಿ? ನಿತ್ಯ ಮಠದಲ್ಲಿ ಇಷ್ಟಲಿಂಗ ಪೂಜೆ, ಲಿಂಗಪೂಜೆ, ಶಿವಪೂಜೆ ಎಂದು ಹತ್ತಾರು ಪೂಜೆಗಳನ್ನು ಭಕ್ತರಿಗೆ ಮಾಡಿಸುವುದಿಲ್ಲವೇ? ಅಷ್ಟಕ್ಕೂ ಸಾಣೇಹಳ್ಳಿ ಮಠದಿಂದ ಪ್ರತಿವರ್ಷ ಮಾಡುವ ‘ಶಿವ ಸಂಚಾರ’ದಲ್ಲಿಯೂ ಶಿವನಿದ್ದಾನೆ ಅಲ್ಲವೇ? ೧೨ನೇ ಶತಮಾನದ ವಚನಚಳವಳಿ ಯಲ್ಲಿ ಕೇವಲ ಒಂದು ವಿಷಯದ ಬಗ್ಗೆ ಮಾತನಾಡಿಲ್ಲ.
ಅಷ್ಟಕ್ಕೂ ವಚನಸಾಹಿತ್ಯದಲ್ಲಿ ನಮ್ಮಲ್ಲಿ ಲಭ್ಯವಿರುವುದೇ ೨೨ರಿಂದ ೨೫ಸಾವಿರ ವಚನಗಳು ಮಾತ್ರ ನಮಗೆ ಲಭ್ಯವಾಗಿದೆ. ಬಸವಣ್ಣನವರ ಎರಡು ಸಾವಿರ ವಚನಗಳು ನಮಗೆ ಸಿಕ್ಕಿದ್ದರೆ, ಅದರಲ್ಲಿ ನೂರಾರು ನಕಲಿ ವಚನಗಳನ್ನು ತಮಗೆ ಬೇಕಾದಂತೆ ಕೆಲವರು ರಚಿಸಿ ಕೊಂಡಿದ್ದಾರೆ ಎನ್ನುವುದು ಎರಡನೇ ಮಾತು. ಆದರೆ ಸಂಶೋಧನೆಯೊಂದರೆ ಪ್ರಕಾರ ವಚನ ಸಾಹಿತ್ಯದಲ್ಲಿರುವ ಕನಿಷ್ಠ ಈಗಿರುವ ಹತ್ತು ಪಟ್ಟು ವಚನಗಳಿದ್ದವು. ಆದರೆ
ನಮಗೆ ಸಿಗುತ್ತಿಲ್ಲ.
ಈ ಎಲ್ಲವನ್ನು ಮೀರಿ ಇತ್ತೀಚಿಗೆ ಸನಾತನ ಧರ್ಮವನ್ನು, ಹಿಂದೂ ದೇವರನ್ನು ಬೈಯುವ ಸಂಸ್ಕೃತಿ ಹೆಚ್ಚಾಗುತ್ತಿರುವುದು ಎಲ್ಲರ ಗಮನದಲ್ಲಿದೆ. ಆದರೆ ಈ ರೀತಿ ಟೀಕಿಸುವುದಕ್ಕೆ ಕಾರಣವೇನು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು, ನಾವಿನ್ನೂ ಬದುಕಿದ್ದೇವೆ
ಎನ್ನುವುದನ್ನು ಜನರಿಗೆ ಎಂದು ತೋರಿಸಿಕೊಳ್ಳುವುದಕ್ಕೆ ಸಿಗುವ ಸುಲಭ ಸರಕು ಹಿಂದೂ ಧರ್ಮ. ಏಕೆಂದರೆ ಹಿಂದೂ ಧರ್ಮವಲ್ಲದೇ, ಬೇರೆ ಯಾರ ಬಗ್ಗೆ ಮಾತನಾಡಿದರೂ, ಅದರಿಂದ ಆಗಬಹುದಾದ ಅನಾಹುತದ ಬಗ್ಗೆ ಭಯವಿದೆ.
ಆದರೆ ಹಿಂದೂ ಧರ್ಮೀಯರ ಬಗ್ಗೆ ಯಾರೇ ಮಾತಾಡಿದರೂ ಪ್ರತಿರೋಧ ವ್ಯಕ್ತವಾಗಲ್ಲ. ಒಂದು ವೇಳೆ ವ್ಯಕ್ತವಾದರೂ, ಸ್ವಾಮಿಗಳನ್ನು ಬಚಾವು ಮಾಡಲು ಒಂದು ಸಿದ್ಧ ಪಡೆಯಿದ್ದೇ ಇರುತ್ತದೆ ಎನ್ನುವ ವಿಶ್ವಾಸ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಈ ಎಲ್ಲ ಸೋಕಾಲ್ಡ್ ಪ್ರಗತಿಪರ ಸ್ವಾಮೀಜಿ ಗಳೆಲ್ಲ ಒಮ್ಮೆ ನಿಮ್ಮ ನಿಮ್ಮ ಮಠಗಳಲ್ಲಿ ಮಾಡುವ ಆಚರಣೆಯ ಬಗ್ಗೆ ಯೋಚಿಸಿ ನೋಡಿ, ಒಂದು ಕಡೆ ಹಿಂದೂ ಸಂಪ್ರದಾಯ ಮಾಡಬೇಡಿ ಎನ್ನುವ ನೀವೆಲ್ಲ ನಿಮ್ಮ ಮಠಗಳಲ್ಲಿ ಶಿವನ ಅಥವಾ ಯಾವೆಲ್ಲ ದೇವರ ಪೂಜೆಗಳನ್ನು ಮಾಡುತ್ತೀರಿ ಎಂದು? ಗಣೇಶನನ್ನು ಪೂಜಿಸಬೇಡಿ ಎಂದು ಹೇಳುವ ಶಿವಾಚಾರ್ಯ ಮಾತನ್ನು ತಮ್ಮ ಭಕ್ತಗಣದಲ್ಲಿ ಎಷ್ಟು ಮಂದಿ ಕೇಳಿರಬಹುದು? ಒಂದು ವೇಳೆ ನಿಮ್ಮ ತತ್ವ ಆದರ್ಶವನ್ನು ಭಕ್ತರು ಎಷ್ಟು ‘ಸಿರಿಯಸ್’
ಆಗಿ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಪರೀಕ್ಷಿಸಬೇಕು ಎಂದರೆ, ಒಮ್ಮೆ ‘ಗಣೇಶನನ್ನು ಪೂಜಿಸುವವರು ನಮ್ಮ ಮಠಕ್ಕೆ ಬರಬೇಡಿ’ ಎನ್ನುವ ಮಾತನ್ನು ಹೇಳಿ. ನಂತರದ ದಿನದಲ್ಲಿ ನಿಮ್ಮ ಮಠಕ್ಕೆ ಬರುವವರ ಸಂಖ್ಯೆ ಎಷ್ಟಾಗುತ್ತದೆ ಎಂದು ಸುಮ್ಮನೆ ಯೋಚಿಸಿ.
ಸಾಣೇಹಳ್ಳಿ ಸ್ವಾಮೀಜಿಗಳಿರಬಹುದು, ನಿಜಗುಣಾನಂದ ಸ್ವಾಮೀಜಿಗಳಿರಬಹುದು, ಸಮಾಜದಲ್ಲಿ ಸವಕಲು ನಾಣ್ಯ ವಾಗಬಾರದು ಎನ್ನುವ ಕಾರಣಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವುದರಿಂದ ಸಮಾಜಕ್ಕಾಗಲಿ, ಧರ್ಮಕ್ಕಾಗಲಿ ಯಾವುದೇ ಪೆಟ್ಟು ಬೀಳುವುದಿಲ್ಲ. ಆದರೆ ನಿಮ್ಮ ಎರಡು ಬಗೆಯ ನೀತಿಯನ್ನು ಸಮಾಜದ ಮುಂದೆ ಬಟಾಬಯಲು ಮಾಡಿಕೊಳ್ಳುವ ಮೂಲಕ ನಿಮಗೆ ಕೊಟ್ಟಿರುವ ಸ್ಥಾನವನ್ನು ನೀವೆ ಏಕೆ ಕಳೆದುಕೊಳ್ಳುವಿರಿ? ಸನಾತನ ಧರ್ಮವನ್ನೇ ಟಾರ್ಗೆಟ್ ಮಾಡಿಕೊಂಡು ನಿಮ್ಮ ಮಾತನ್ನು ಮುಂದುವರಿಸು ವುದಿದ್ದರೆ, ಮೊದಲು ನಿಮ್ಮನಿಮ್ಮಲ್ಲಿ, ನಿಮ್ಮ ಮಠಗಳಲ್ಲಿ
‘ನುಡಿದಂತೆ ನಡೆಯಲು’ ಸಾಧ್ಯವೇ? ಭಾಷಣದಲ್ಲಿ ಹೇಳುವ ಮಾತನ್ನು ಮಠದಲ್ಲಿ ಕಟ್ಟುನಿಟ್ಟಾಗಿ ಆಚರಿಸಲು ಮುಂದಾದರೆ ನಿಮ್ಮ ಮಠದಲ್ಲಿ ನೀವೊಬ್ಬರೇ ಕೂತಿರಬೇಕಾಗುತ್ತದೆ.