Saturday, 23rd November 2024

31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಡಿಟಿಸಿ ಕಂಡಕ್ಟರ್​ ಪರ ತೀರ್ಪು

ನವದೆಹಲಿ: 15 ದಿನ ರಜೆ ಪಡೆದ ಕಾರಣಕ್ಕೆ 31 ವರ್ಷಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಡಿಟಿಸಿ ಕಂಡಕ್ಟರ್ ಪರವಾಗಿ ದೆಹಲಿ ಹೈಕೋರ್ಟ್​ ತೀರ್ಪು ನೀಡಿದೆ.

ಮತ್ತೆ ಕೆಲಸಕ್ಕೆ ಮರಳಲು 30 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ಮಾಡಬೇಕಾಯಿತು. ಬುಧವಾರ ನಿರ್ವಾಹಕರ ಕುಟುಂಬದ ಪರ ತೀರ್ಪು ನೀಡಿದ ದೆಹಲಿ ಹೈಕೋರ್ಟ್, ಅವರ 31 ವರ್ಷಗಳ ಬಾಕಿ ವೇತನ ಮತ್ತು ಇತರ ಬಾಕಿಗಳನ್ನು ಪಾವತಿಸುವಂತೆ ಆದೇಶಿಸಿದೆ.

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠವು ತನ್ನ ತೀರ್ಪಿನಲ್ಲಿ ಕಂಡಕ್ಟರ್ ತನ್ನ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡಿದ್ದಾರೆ ಎಂಬುದನ್ನು ಗಮನಿಸಿತು. ಈ ಸಂಬಂಧ ಹೋರಾಡಿದ್ದ ಕಂಡೆಕ್ಟರ್​ ಈಗ ಜೀವಂತ ವಾಗಿಲ್ಲ. ಆದರೆ ದೂರು ನೀಡಿದ ಕಂಡಕ್ಟರ್​ ಕೆಲಸದ ಸ್ಥಳದಲ್ಲಿ ಸರಿಯಾಗಿದ್ದರು ಎಂದು ದಾಖಲೆಗಳು ಸಾಬೀತುಪಡಿಸುತ್ತವೆ. ಕೇವಲ 15 ದಿನಗಳ ರಜೆ ತೆಗೆದುಕೊಂಡಿದ್ದಕ್ಕಾಗಿ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ, 2003ರಲ್ಲಿ ಲೇಬರ್ ಕೋರ್ಟ್ ದೂರುದಾರರ ಪರವಾಗಿ ನೀಡಿದ್ದ ತೀರ್ಪನ್ನು ಪೀಠ ಎತ್ತಿ ಹಿಡಿದಿದೆ.

1992ರಲ್ಲಿ ಡಿಟಿಸಿ 15 ದಿನಗಳ ರಜೆ ತೆಗೆದುಕೊಂಡಿದ್ದಕ್ಕಾಗಿ ನಿರ್ವಾಹಕರನ್ನು ಕೆಲಸದಿಂದ ವಜಾಗೊಳಿಸಿತ್ತು. ಅವರು 31 ಮಾರ್ಚ್ 1991 ರಿಂದ 14 ಏಪ್ರಿಲ್ 1991 ರವರೆಗೆ ಯಾವುದೇ ಸೂಚನೆ ನೀಡದೆ ರಜೆಯಲ್ಲಿದ್ದರು ಎಂದು ಇಲಾಖೆ ಆರೋಪಿಸಿದೆ. ಕಂಡಕ್ಟರ್ 2007ರಲ್ಲಿ ನಿಧನರಾಗಿದ್ದರು. ಇದರ ನಂತರ ಮೃತರ ವಿಧವೆ ಮತ್ತು ಮಕ್ಕಳು ಕಾನೂನು ಹೋರಾಟ ಮುಂದುವರೆಸಿದರು. 16 ವರ್ಷಗಳ ನಂತರ ಹೈಕೋರ್ಟ್ ಕುಟುಂಬದ ಪರವಾಗಿ ತೀರ್ಪು ನೀಡಿದೆ.