Saturday, 23rd November 2024

ಜಿಕೆವಿಕೆಯಲ್ಲಿ ಇಂದಿನಿಂದ ನಾಲ್ಕು ದಿನ ಕೃಷಿ ಮೇಳ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ಮೇಳ ಆರಂಭವಾಗಿದೆ.

ರೈತರಿಗೆ ಬರ ನಿರೋಧಕ ತಳಿಗಳು ಹಾಗೂ ಸಿರಿಧಾನ್ಯಗಳ ಮಹತ್ವ ಕುರಿತು ಮಾಹಿತಿ ನೀಡಲಾಗುತ್ತದೆ.

ಕೃಷಿ ಮೇಳ- 2023 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾದರಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಶರತ್ ಬಚ್ಚೇಗೌಡ, ಕುಲಪತಿ ಡಾ. ಎಸ್.ವಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಮೇಳದಲ್ಲಿ ಸುಮಾರು 625 ಮಳಿಗೆಗಳನ್ನು ತೆರೆಯಲಾಗಿದ್ದು, ಈ ಬಾರಿ 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ಈ ಮೇಳದಲ್ಲಿ ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ, ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ತಾಕುಗಳಲ್ಲಿ ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಗಳ ಎಲ್ಲ ವಿಭಾಗಗಳಲ್ಲಿ ನಡೆದಿರುವ ಸಂಶೋಧನೆ, ಆವಿಷ್ಕಾರದ ಮಾಹಿತಿಯನ್ನು ವಸ್ತುಪ್ರದರ್ಶನದಲ್ಲಿ ತಿಳಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿಯ ಕೃಷಿ ಮೇಳವನ್ನು ಆಹಾರ-ಆರೋಗ್ಯ- ಆದಾಯಕ್ಕಾಗಿ ಸಿರಿಧಾನ್ಯಗಳು ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಎಸ್.ವಿ.ಸುರೇಶ್ ತಿಳಿಸಿದ್ದಾರೆ.

ಬರ ನಿರ್ವಹಣೆ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಲಾಗುವುದು. ಕೃಷಿ ಹಾಗೂ ಅದರ ಪೂರಕ ಕಸುಬುಗಳಲ್ಲಿ ತೊಡಗಿಸಿಕೊಳ್ಳುವ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಲು ವಿವಿ ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು ಸೇರಿ 500ಕ್ಕೂ ಹೆಚ್ಚು ಮಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.