Saturday, 23rd November 2024

ನ್ಯಾಯಾಧೀಶರ ಹುದ್ದೆಯ ಮುಖ್ಯ ಪರೀಕ್ಷೆ ಬರೆಯಲಿದ್ದಾರೆ ಗರ್ಭಿಣಿ ನೇತ್ರಾವತಿ…!

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎಂಟೂವರೆ ತಿಂಗಳ ತುಂಬು ಗರ್ಭಿಣಿ ನೇತ್ರಾವತಿ ನೆರವಿಗೆ ಕರ್ನಾಟಕ ಹೈಕೋರ್ಟ್ ಧಾವಿಸಿದೆ.

ಅವರ ಮನೆ ಸಮೀಪದ ಕೋರ್ಟ್‌ನಲ್ಲೇ ಸಿವಿಲ್‌ ನ್ಯಾಯಾಧೀಶರ ಹುದ್ದೆಯ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಶನಿವಾರ ಮತ್ತು ನಾಳೆ (ನ.18 ಮತ್ತು19)ಸಿವಿಲ್‌ ನ್ಯಾಯಾಧೀಶರ ನೇಮಕದ ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ. ಆದರೆ ನೇತ್ರಾವತಿ ತುಂಬು ಗರ್ಭಿಣಿಯಾಗಿರುವುದರಿಂದ ಬೆಂಗಳೂರಿಗೆ ಪ್ರಯಾಣಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತು ಹೈಕೋರ್ಟ್‌ ಮಂಗಳೂರಿನಲ್ಲಿಯೇ ಪರೀಕ್ಷೆಗೆ ಅವಕಾಶ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿರುವ ಅಪರೂಪದ ವಿಶೇಷ ಪ್ರಕರಣ ಇದಾಗಿದೆ.

ಅಭ್ಯರ್ಥಿಯ ಮನೆಯ ಬಳಿಯೇ ಪರೀಕ್ಷೆ ಬರೆಯಲು ಹೈಕೋರ್ಟ್‌ ಅವಕಾಶ ನೀಡಿರುವುದು ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಹೈಕೋರ್ಟ್‌ 57 ಸಿವಿಲ್‌ ನ್ಯಾಯಾಧೀಶರ ಹುದ್ದೆಗಳ ನೇರ ನೇಮಕಕ್ಕೆ 2023ರ ಮಾ.9ರಂದು ಅರ್ಜಿಗಳನ್ನು ಕರೆದಿತ್ತು. ಅದಕ್ಕೆ ಜು.23ರಂದು ನಡೆಸಿದ ಪ್ರಾಥಮಿಕ ಪರೀಕ್ಷೆಗೆ 6 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು ಮತ್ತು 1022 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಆ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೇತ್ರಾವತಿ ಅವರೂ ಸಹ ಇದ್ದರು.

ನ.18.19ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆಗೆ ನೇತ್ರಾವತಿ ಹಾಜರಾಗಬೇಕಿತ್ತು. ಆದರೆ ಎಂಟೂವರೆ ತಿಂಗಳ ಗರ್ಭಿಣಿಯಾಗಿರುವುದರಿಂದ ವೈದ್ಯರ ಸಲಹೆಯಂತೆ ಪ್ರಯಾಣ ಮಾಡಲಾಗದು. ಆದ್ದರಿಂದ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು.