ಬಳ್ಳಾರಿ: ಇದೇ ನ.28ರಂದು ಬಳ್ಳಾರಿ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅಂದು ಪಾಲಿಕೆ ಸುತ್ತ ಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶಿಸಿದ್ದಾರೆ.
ಚುನಾವಣೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಚುನಾವಣೆ ನಡೆಸಲು ಸಿಆರ್ಪಿಸಿ ಕಾಯ್ದೆ 1973 ಕಲಂ 144 ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಮಿಶ್ರಾ ಅವರು ಆದೇಶ ಹೊರಡಿಸಿದ್ದಾರೆ.
ಇಂಕ್ (ಮಸಿ), ನೀರು, ಬೆಂಕಿ ಪೊಟ್ಟಣ, ಲೈಟರ್ ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗುವುದು. ಶಸ್ತ್ರ, ಬಡಿಗೆ, ಬರ್ಚಿಗದೆ, ಬಂದೂಕು, ಚಾಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತು ತೆಗೆದುಕೊಂಡು ಹೋಗುವುದು ನಿಷೇಧಿಸಲಾಗಿದೆ.
ಕಾರು/ಮೋಟರ್ ಬೈಕ್ ಮತ್ತು ಇತರೆ ವಾಹನಗಳಲ್ಲಿ ರ್ಯಾಲಿಯನ್ನು ಆಯೋಜಿಸುವುದು ಸಹ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.