ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಟೀಕಿಸುವ ಪೋಸ್ಟರ್ ಹಾಕಿದ್ದಕ್ಕೆ ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆ ಮಾಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾರ್ ಪೂಲಿಂಗ್‌ಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗೆ ಬರೆದಿರುವ ಪತ್ರ ಮತ್ತು ಹೇಳಿಕೆ ಹಿಂಪೆಯುವಂತೆ ಆಗ್ರಹಿಸಿರುವ ಖಾಸಗಿ ಸಾರಿಗೆ ಸಂಘಟನೆ ಗಳ ಒಕ್ಕೂಟ ಸದಸ್ಯರು ‘ಪೋಸ್ಟರ್ ಅಭಿಯಾನ’ ಆರಂಭಿಸಿದ್ದರು. ಹೀಗಾಗಿ ಬೆಂಗಳೂರಿನ ಆಟೋ ಚಾಲಕರು ತಮ್ಮ ವಾಹನಗಳ ಮೇಲೆ ಪೋಸ್ಟರ್ ಗಳನ್ನು ಪ್ರದರ್ಶಿಸಿದರು.
ಪೋಸ್ಟರ್‌ಗಳನ್ನು ತೆಗೆಯುವಂತೆ ಆಗ್ರಹಿಸಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ವೆಂಕಟೇಶ್ ಬೆಂಬಲಿಗರು ಆಟೋ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ವೆಂಕಟೇಶ್ ಅವರು ತಮ್ಮ ವಾಹನಗಳನ್ನು ಚಲಾಯಿಸದಂತೆ ಪ್ರದೇಶದ ಎಲ್ಲಾ ಆಟೋ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಪೋಸ್ಟರ್‌ಗಳನ್ನು ತೆಗೆದುಹಾಕದಿದ್ದರೆ ಮಾರಣಾಂತಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವೆಂಕಟೇಶ್ ಮತ್ತು ಆತನ ಬೆಂಬಲಿಗರ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಳೆದ ಗುರುವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಸದಸ್ಯರು, ಕಾರ್ ಪೂಲಿಂಗ್ ಮತ್ತು ವೈಟ್ ಬೋರ್ಡ್ ವಾಹನ ಬಾಡಿಗೆಗೆ ಬಳಸಲು ನೀಡಿರುವ ಹೇಳಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ದರು.