ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ 15 ನೇ ವಾರ್ಷಿಕೋತ್ಸವದ ಅಂಗವಾಗಿ ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ.
ಎಲ್‌ಇಟಿಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲು ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಇಸ್ರೇಲ್ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಸರ್ಕಾರದಿಂದ ಯಾವುದೇ ಔಪಚಾರಿಕ ವಿನಂತಿಯಿಲ್ಲದೆ ಸ್ವತಂತ್ರವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಮುಂಬೈನ ಚಬಾದ್ ಹೌಸ್ ಎಂದು ಕರೆಯಲ್ಪಡುವ ಚಬಾದ್ ಲುಬಾವಿಚ್ ಯಹೂದಿ ಕೇಂದ್ರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ಆರು ಯಹೂದಿ ಪ್ರಜೆಗಳಲ್ಲಿ ಇಬ್ಬರು ಇಸ್ರೇಲಿ ಪ್ರಜೆಗಳಾದ ಗೇಬ್ರಿಯಲ್ ಹೊಲ್ಟ್ಜ್ಬರ್ಗ್ ಮತ್ತು ರಿವ್ಕಾ ಹೊಲ್ಟ್ಜ್ಬರ್ಗ್ ಸೇರಿದ್ದಾರೆ.
ನೂರಾರು ಭಾರತೀಯರ ಹತ್ಯೆಗೆ ಕಾರಣವಾದ ಎಲ್‌ಇಟಿಯನ್ನು “ಮಾರಣಾಂತಿಕ ಮತ್ತು ಖಂಡನೀಯ ಭಯೋತ್ಪಾದಕ ಸಂಘಟನೆ” ಎಂದು ಬಣ್ಣಿಸಿರುವ ರಾಯಭಾರ ಕಚೇರಿ, “ನವೆಂಬರ್ 26, 2008 ರಂದು ನಡೆದ ಅದರ ಘೋರ ಕೃತ್ಯಗಳು ಶಾಂತಿ ಬಯಸುವ ಎಲ್ಲಾ ರಾಷ್ಟ್ರಗಳು ಮತ್ತು ಸಮಾಜಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿವೆ” ಎಂದು ಹೇಳಿದೆ.